ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಅಭಿಯಾನದಲ್ಲಿ ಸಾವಿರಾರು ದಾರ್ಶನಿಕರ, ಚಿಂತಕರ, ವಚನಕಾರರ, ಸಾಧಕರ ಹೆಜ್ಜೆ ಗುರುತುಗಳನ್ನು ಅರಸುವ ಕೆಲಸ ನಿಜಕ್ಕೂ ಸವಾಲಿನದು ಒಬ್ಬೊಬ್ಬರದೂ ಬೇರೆ ಬೇರೆ ಸ್ವರೂಪದ ನಡೆ ನುಡಿ ನೋಟ ವಿವಿಧ ಪುಷ್ಪಗಳ ಮಕರಂದಗಳು ಜೇನುತೊಟ್ಟಿಯಲ್ಲಿ ಒಂದಾಗಿ ಸವಿಸೊಬಗಿನ ರಸಾಯನವಾಗಿ ದಕ್ಕುವಂತೆ ಈ ಆಧಾತ್ಮಿಕ ಸಾಧಕರ, ಸಮಾಜ ಸುಧಾರಕರ ಜೀವನದ ಆದರ್ಶ ಗಳು ನಮ್ಮ ಬದುಕಿನ ಉತ್ಕರ್ಷಕ್ಕೆ ಪ್ರತ್ಯಕ್ಷ ಪರೋಕ್ಷ ದೇಣಿಗೆಗಳನ್ನು ನೀಡುತ್ತಾ ಬಂದಿದೆ. ಇಲ್ಲಿ ನಮಗೆ ಪ್ರಾತಿನಿಧಿಕವಾಗಿ ಮೇಲ್ಪಂಕ್ತಿಯಲ್ಲಿ ಪ್ರಕಾಶಮಾನವಾಗಿ ಬೆಳಗುವ ಉತ್ತರ ಕರ್ನಾಟಕದ ಹಾವೇರಿಯ ನಿಜಶರಣ ಅಂಬಿಗರ ಚೌಡಯ್ಯ ರವರ ಜೀವನ ಚರಿತ್ರೆ, ಮುಕ್ತೇಶ್ವರ ದೇಗುಲ ಮತ್ತು ಪ್ರಸ್ತುತ ಚೌಡಯ್ಯ ಪೀಠಾಧಿಪತಿಗಳಾಗಿ ಮೀನುಗಾರ ಸಮುದಾಯಗಳ ಆಶಾಕಿರಣವಾಗಿ ಹಕ್ಕೊತ್ತಾಯಗಳಿಗಾಗಿ ಸಾಮಾಜಿಕ ಹೋರಾಟ ನಡೆಸುತ್ತಿರುವ ನಿಜಶರಣ ಅಂಬಿಗರ ಚೌಡಯ್ಯ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಪರಮಪೂಜ್ಯ ಶಾಂತವೀರ ಭೀಷ್ಮ ಚೌಡಯ್ಯ ಮಹಾಸ್ವಾಮಿಯವರ ಬಗ್ಗೆ ವಿವಿಧ ದರ್ಶನಗಳು ಅನಾವರಣಗೊಂಡಿದೆ.
ನಾನು ಉತ್ತರ ಕರ್ನಾಟಕದ ಉದ್ಯೋಗ ಕಾರ್ಯ ನಿಮಿತ್ತ ಪ್ರಯಾಣದಲ್ಲಿದ್ದಾಗ ಪೂರ್ವ ಸಂಕಲ್ಪದಂತೆ ಕಾಸರಕೋಡು ಟೊಂಕ ಪ್ರದೇಶದ ಮೀನುಗಾರರ ಹೋರಾಟದ ಬಗ್ಗೆ ಬೆಂಬಲ ಸಹಕಾರ ಮಾರ್ಗದರ್ಶನಕ್ಕಾಗಿ ಪರಮಪೂಜ್ಯ ಶ್ರೀ ಶಾಂತವೀರ ಭೀಷ್ಮ ಚೌಡಯ್ಯ ಮಹಾಸ್ವಾಮಿಯವರನ್ನು ಹಾವೇರಿಯ ರಾಣಿಬೆನ್ನೂರು ತಾಲೂಕಿನ ಸುಕ್ಷೇತ್ರ ನರಸೀಪುರದ ಗುರುಪೀಠದಲ್ಲಿ ಭೇಟಿಯಾಗುವ ಪರಮ ಸೌಭಾಗ್ಯ ಒದಗಿ ಬಂತು.
ಈ ಸಂದರ್ಭದಲ್ಲಿ ಶ್ರೀ ಗಳಿಂದ ನನಗೆ ಹೃದಯಪೂರ್ವಕ ಸ್ವಾಗತ ಲಭಿಸಿತು ಕಾಕತಾಳೀಯವೆಂಬಂತೆ ಶ್ರೀ ಗಳ ಜನ್ಮ ದಿನದಂದೇ ನನಗೆ ಅಂಬಿಗರ ಚೌಡಯ್ಯ ಗುರುಪೀಠ ಸಂದರ್ಶನದ ಸದಾವಕಾಶ ಲಭಿಸಿದ್ದು ಪೂರ್ವ ಜನ್ಮದ ಪುಣ್ಯ ಫಲವೆಂದರೆ ಅತಿಶಯೋಕ್ತಿಯಲ್ಲ. ಶ್ರೀ ಗಳಲ್ಲಿ ಮನೆ ಬದುಕು ಕಳೆದುಕೊಳ್ಳುವ ಆತಂಕದಲ್ಲಿರುವ ಕಾಸರಕೋಡು ಟೊಂಕದ ಮೀನುಗಾರರ ದಯನೀಯ ಸ್ಥಿತಿಯ ಬಗ್ಗೆ ನಿವೇದನೆ ಮಾಡಿಕೊಂಡಾಗ ನನ್ನ ಮನವಿಯನ್ನು ವಿನಯಪೂರ್ವಕವಾಗಿ ತದೇಕಚಿತ್ತದಿಂದ ಆಲಿಸಿ ಮೀನುಗಾರರ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿ, ಈ ಹೋರಾಟದಲ್ಲಿ ಮಂಚೂಣಿಯಲ್ಲಿ ನಿಂತು ನ್ಯಾಯ ದೊರಕಿಸಿಕೊಡುವ ಬಗ್ಗೆ ಆಶೀರ್ವಚನಪೂರ್ವಕ ಭರವಸೆಯನ್ನು ನೀಡಿದ್ದಾರೆ.
ಶ್ರೀ ಗಳ ಮಾತುಗಳು ಮೀನುಗಾರರ ಹೋರಾಟಕ್ಕೆ ಮತ್ತಷ್ಟು ಬಲ ತಂದುಕೊಡುವುದರಲ್ಲಿ ಸಂಶಯವಿಲ್ಲವಾಗಿದ್ದು,ಕಾಸರಕೋಡು ಮೀನುಗಾರರ ಹೋರಾಟ ತಾರ್ಕಿಕ ಪಥದತ್ತ ಸಾಗುವ ನಿರೀಕ್ಷೆ ಇದೆ. ಶ್ರೀ ಗಳು ಈ ಹಿಂದೆ ಕಾರವಾರದ ಮೀನುಗಾರರ ಪರವಾಗಿ, ಸಮುದ್ರದಲ್ಲಿ ಕಾಣೆಯಾದ ಮಲ್ಪೆ ಮೀನುಗಾರರ ಪರವಾಗಿ ಸಾಕಷ್ಟು ಹೋರಾಟ ನಡೆಸಿದ್ದಾರೆ ಮೀನುಗಾರ ಸಮುದಾಯಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಶ್ರೀ ಗಳು ದೊಡ್ಡ ಮಟ್ಟದಲ್ಲಿ ದ್ವನಿ ಎತ್ತಿದ್ದಾರೆ. ಮೀನುಗಾರರ ಹಕ್ಕೊತ್ತಾಯಗಳಿಗಾಗಿ ಪ್ರಬಲ ಹೋರಾಟ ಸಂಘಟಿಸಿದ್ದಾರೆ.
ಖಾರ್ವಿ ಸಮಾಜದ ಪ್ರಥಮ ಸುದ್ದಿ ಮಾಧ್ಯಮವಾದ ಖಾರ್ವಿ ಆನ್ಲೈನ್ ಬಗ್ಗೆ ಅವರು ಮೆಚ್ಚುಗೆಯ ಮಾತನಾಡಿದ್ದು, ಖಾರ್ವಿ ಆನ್ಲೈನ್ ಸಾಮಾಜಿಕ ಬದ್ಧತೆ, ಕಳಕಳಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವುದು ಸಂಗತಿಯಾಗಿದೆ.
ಗುರುವರ್ಯರು ಕರ್ನಾಟಕದ 39 ಮೀನುಗಾರರ ಸಮುದಾಯಗಳನ್ನು ಒಂದೇ ಸೂರಿನಡಿಯಲ್ಲಿ ಒಗ್ಗೂಡಿಸುವ ಪ್ರಯತ್ನ ಮಾಡಿದ್ದು ಇಂತಹ ಅಭೂತಪೂರ್ವ ಕಾರ್ಯಕ್ರಮವೊಂದು ಗುರುಪೀಠದಲ್ಲಿ ನಡೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಗುರುಪೀಠದ ಅನತಿದೂರದಲ್ಲಿ ಎರಡು ಕೀಮೀ ಅಂತರದಲ್ಲಿ ಗಂಗಾಮತಸ್ಥ ಸಮಾಜದ ಆರಾಧ್ಯ ದೈವ ನಿಜಶರಣ ಅಂಬಿಗರ ಚೌಡಯ್ಯನ ಐಕ್ಯ ಮಂಟಪವಿದ್ದು, ಅದರ ಪಕ್ಕದಲ್ಲಿ ತುಂಗಾಭದ್ರ ನದಿ ತೀರದಲ್ಲಿ ಶ್ರೀ ಮುಕ್ತೇಶ್ವರ ದೇಗುಲವಿದೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿರುವ ಮುಕ್ತೇಶ್ವರ ದೇಗುಲ ಅಭೂತಪೂರ್ವ ಶಿಲ್ಪಕಲೆಯ ತಾಣವಾಗಿದ್ದು, ಸಾವಿರಾರು ಪ್ರವಾಸಿಗರು ಇಲ್ಲಿ ಭೇಟಿ ನೀಡಿ ನಿಜ ಶರಣ ಅಂಬಿಗರ ಚೌಡಯ್ಯ ನವರ ಐಕ್ಯ ಸ್ಥಳ ಸಂದರ್ಶಿಸಿ ಭಕ್ತಿ ಪೂರ್ವಕ ಗೌರವ ಸಲ್ಲಿಸುತ್ತಾರೆ.
ನಿಜ ಶರಣ ಅಂಬಿಗರ ಚೌಡಯ್ಯ ವೃತಿಯಲ್ಲಿ ದೋಣಿ ನಡೆಸುವ ಅಂಬಿಗನಾಗಿದ್ದು, ಪ್ರವೃತಿಯಲ್ಲಿ ಅನುಭಾವಿ ಸಂತನಾಗಿ ತನ್ನ ವಚನಗಳ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಕೈಂಕರ್ಯ ಮಾಡಿದರು. ತೀರಾ ಸರಳ ಭಾಷೆಯಲ್ಲಿ ಆದರೆ ಕಾವ್ಯಾತ್ಮಕವಾಗಿ ಅವರು ವಚನಗಳ ಮೂಲಕ ಭೋಧನೆಗೆ ತೊಡಗಿದರು. ಭಕ್ತಿ ಭಂಡಾರಿ ಶ್ರೀ ಬಸವಣ್ಣನವರ ಅನುಭವ ಮಂಟಪದ ಕೇಂದ್ರ ಬಿಂದುವಾದ ಅಂಬಿಗರ ಚೌಡಯ್ಯ ನವರ ವಚನಗಳಲ್ಲಿ ಬರುವ ಕೆಲವು ರೂಪಕಗಳು metaphor ಗಳು ಇಂದಿಗೂ ಸಾಹಿತ್ಯ ಪ್ರಿಯರ ಗಮನ ಸೆಳೆದಿದೆ.
ದೇಗುಲದೊಳಗೆ ಸೀಮಿತವಾಗಿದ್ದ ದೇವರ ಆಸ್ತಿತ್ವವನ್ನು ವಿಕೇಂದ್ರೀಕರಣಗೊಳಿಸಿ ವ್ಯಕ್ತಿ ವ್ಯಕ್ತಿ ಗಳಲ್ಲಿ ದೇವರನ್ನು ಕಂಡರು. ತಾನು ಪ್ರತಿನಿತ್ಯದ ಬದುಕಿನಲ್ಲಿ ಕಂಡ ಸತ್ಯವನ್ನು ತನ್ನದೇ ಸರಳ ನಡೆಯಲ್ಲಿ ,ನುಡಿಯಲ್ಲಿ ಕಂಡರಿಸಿದರು ಚೌಡಯ್ಯ ದಾನಪುರಕ್ಕೆ ಈ ಹೆಸರು ಬರಲು ಮುಖ್ಯ ಕಾರಣವಿದೆ. ಈ ಪ್ರಾಂತ್ಯದಲ್ಲಿ ಹನ್ನೆರಡನೇ ಶತಮಾನದಲ್ಲಿ ಗುತ್ತಲ ವಂಶದ ಆಳ್ವಿಕೆಯಿತ್ತು ಗುತ್ತಲ ರಾಜನ ಮಗನಿಗೆ ವಿಷಕಾರಿ ಹಾವು ಕಡಿದಾಗ ರಾಜವೈದ್ಯರು ಪರಿಪರಿಯ ಔಷಧಿ ನೀಡಿ ಬದುಕಿಸಲು ಪ್ರಯತ್ನ ಪಟ್ಟರೂ ಪ್ರಯೋಜನವಾಗುವುದಿಲ್ಲ. ಮಂತ್ರಿಯ ಸಲಹೆಯಂತೆ ರಾಜ ನಿಜಶರಣ ಅಂಬಿಗರ ಚೌಡಯ್ಯ ರವರನ್ನು ಕರೆಸಿಕೊಳ್ಳುತ್ತಾನೆ ಚೌಡಯ್ಯ ರವರ ಅಭೂತಪೂರ್ವ ಪವಾಡ ಚಮತ್ಕಾರದಿಂದ ರಾಜನ ಪುತ್ರ ಮರಣಶ್ಯಯೆಯಿಂದ ಬದುಕುತ್ತಾನೆ. ಇದರಿಂದ ಪ್ರಸನ್ನಗೊಂಡ ರಾಜ ಚೌಡಯ್ಯ ರವರಿಗೆ ತುಂಗಭದ್ರಾ ನದಿಯ ಪೂರ್ವ ಪಶ್ಚಿಮ 14 ಮೈಲು ಉತ್ತರ ದಕ್ಷಿಣ 7 ಮೈಲು ಭೂಮಿಯನ್ನು ದಾನವಾಗಿ ನೀಡುತ್ತಾನೆ. ಆದರೆ ಚೌಡಯ್ಯ ಈ ಭೂಮಿಯನ್ನು ತನ್ನ ಬಳಿ ಇಟ್ಟು ಕೊಳ್ಳದೇ ತನ್ನ ಗುರುಗಳಾದ ಶಿವದೇವ ಮುನಿಗಳಿಗೆ ಸಮರ್ಪಿಸುತ್ತಾರೆ. ಶಿಷ್ಯ ನ ಉದಾತ್ತ ನಡವಳಿಕೆಗೆ ಸಂತೋಷಗೊಂಡ ಶಿವದೇವ ಮುನಿಗಳು ಅದುವರೆಗೂ ಶಿವಪುರ ಎಂದು ಕರೆಯಲ್ಪಡುತ್ತಿದ್ದ ಆ ಊರಿಗೆ ಚೌಡಯ್ಯ ದಾನಪುರ ಎಂದು ನಾಮಾಂಕಿತಗೊಳಿಸುತ್ತಾರೆ.
ಹೀಗೆ ನಿಜಶರಣ ಅಂಬಿಗರ ಚೌಡಯ್ಯ ನವರ ಹೆಸರು ಜನಮಾನಸದಲ್ಲಿ ಅಜರಾಮರವಾಯಿತು. ಜನವಾಣಿ ಕನ್ನಡವನ್ನು ಶಿವವಾಣಿಯನ್ನಾಗಿ ಮಾಡಿದ ವಚನಕಾರರು ಹರಿದಾಸ ಸಾಹಿತ್ಯ ಹುಟ್ಟುವ ಮೊದಲೇ ಹನ್ನೆರಡನೇ ಶತಮಾನದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ನಿಖರವಾಗಿ ಮೂಡಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಚೌಡಯ್ಯ ದಾನಪುರದಲ್ಲಿ ಪ್ರತಿವರ್ಷ ಮಕರಸಂಕ್ರಮಣದಂದು ನಿಜಶರಣ ಅಂಬಿಗರ ಚೌಡಯ್ಯ ರವರ ಜಯಂತಿ ಯನ್ನು ಶ್ರದ್ಧೆ ಭಕ್ತಿ ಯಿಂದ ಆಚರಿಸುತ್ತಾರೆ. ಈ ಉತ್ಸವವನ್ನು ಜನರ ಹೊಟ್ಟೆ ತಣಿಸುವ ರೊಟ್ಟಿ ಜಾತ್ರೆಯ ರೂಪದಲ್ಲಿ ವಿಧೇಯಿಸಿದ ಹೆಗ್ಗಳಿಕೆಗೆ ಶ್ರೀ ಪರಮಪೂಜ್ಯ ನಿಜ ಶರಣ ಅಂಬಿಗರ ಚೌಡಯ್ಯ ಪೀಠದ ಜಗದ್ಗುರು ಶಾಂತವೀರ ಭೀಷ್ಮ ಚೌಡಯ್ಯ ಮಹಾಸ್ವಾಮಿಜಿಯವರಿಗೆ ಸಲ್ಲುತ್ತದೆ.
ಪರಮಪೂಜ್ಯರ ಸಮಾಜಮುಖಿ ಕಾರ್ಯ ಗಳಿಗೆ ಖಾರ್ವಿ ಆನ್ಲೈನ್ ಅಭಿನಂದನೆಗಳನ್ನು ಸಲ್ಲಿಸುತ್ತದೆ. ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದಲ್ಲಿ ಶ್ರೀ ಗಳ ಚರಣಕಮಲಗಳಿಗೆ ವಂದಿಸುತ್ತಾ ಕಾಸರಕೋಡಿನ ಮೀನುಗಾರರ ಬದುಕು ಬವಣೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದೇನೆ.
ಶ್ರೀ ಗಳು ನನ್ನ ಮನವಿಗೆ ಸಕರಾತ್ಮಕವಾಗಿಯೇ ಸ್ಪಂದಿಸಿದ್ದು, ಮೀನುಗಾರರ ಜೊತೆಯಲ್ಲಿ ಹೋರಾಟದ ಮಂಚೂಣಿಯಲ್ಲಿರುವ ಬಗ್ಗೆ ಆಶಿರ್ವಚನದ ರೂಪದಲ್ಲಿ ಭರವಸೆಯ ವಚನಾಕ್ಷತೆ ನೀಡಿದ್ದಾರೆ. ಸಮಾಜಮುಖಿ ಕೈಂಕರ್ಯಗಳ ಸಾಮಾಜಿಕ ಹೋರಾಟದಲ್ಲಿ ಸದಾಕಾಲ ತನ್ನನ್ನು ತೊಡಗಿಸಿಕೊಳ್ಳುವ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಾಂತವೀರ ಭೀಷ್ಮ ಚೌಡಯ್ಯ ಮಹಾಸ್ವಾಮಿಜಿಯವರ ಚರಣಾರವಿಂದಗಳಿಗೆ ಗೌರವದ ನಮನಗಳನ್ನು ಸಲ್ಲಿಸುತ್ತೇನೆ. ನನ್ನ ಉತ್ತರ ಕರ್ನಾಟಕದ ಉದ್ಯೋಗ ಯಾತ್ರೆ ಪರಮ ಸೌಭಾಗ್ಯದ ಸಾರ್ಥಕತೆ ಪಡೆದುಕೊಂಡಿರುವುದು ಅತೀವ ಸಂತೋಷ ಸಂಭ್ರಮ ಉಂಟು ಮಾಡಿ ಧನ್ಯತೆಯ ಭಾವ ಮೂಡಿಸಿದೆ.
ಸುಧಾಕರ್ ಖಾರ್ವಿ
Editor
www.kharvionline.com
ಪರಮಪೂಜ್ಯ ಶ್ರೀ ಶಾಂತವೀರ ಭೀಷ್ಮ ಚೌಡಯ್ಯ ಮಹಾಸ್ವಾಮೀಜಿಯವರ ಚರಣಾರವಿಂದಗಳಿಗೆ ಶತಕೋಟಿ ನಮನಗಳು. ಪರಮಪೂಜ್ಯರು ಮೀನುಗಾರರಿಗೆ ಅನ್ಯಾಯವಾದ ಸಂದರ್ಭದಲ್ಲಿ ದ್ವನಿಯೆತ್ತುತ್ತಾ ಬಂದಿರುತ್ತಾರೆ. ಪ್ರಸ್ತುತ ಹೊನ್ನಾವರ ಕಾಸರಕೋಡು ಬಡ ಮೀನುಗಾರರ ಪರವಾಗಿ ಪರಮಪೂಜ್ಯರು ದ್ವನಿಯೆತ್ತಿರುವುದು ಮೀನುಗಾರರ ಹೋರಾಟಕ್ಕೆ ಸಾವಿರ ಆನೆಗಳ ಬಲೆ ಬಂದಂತಾಗಿದೆ. ಸ್ವಾಮೀಜಿಗಳು ಕೇವಲ ಮಠಕ್ಕೆ ಸೀಮಿತರಾಗದೇ ಸಮಾಜದ ನೋವುಗಳಿಗೆ ದ್ವನಿಯಾಗಬೇಕು ಎಂಬುದನ್ನು ತಮ್ಮ ಸಮಾಜಮುಖಿ ಚಿಂತನೆಯ ಕೈಂಕರ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ. ಭಕ್ತಿಪೂರ್ವಕ ನಮನಗಳು. ಈ ಸಮಾಜಮುಖಿ ಚಿಂತನೆಯ ಕೈಂಕರ್ಯ ಗಳಿಗೆ ಮೂಲ ಪ್ರೇರಣೆ ಯಾದ ಖಾರ್ವಿ ಆನ್ಲೈನ್ ಗೆ ವಂದನೆಗಳು.👍👌👍👌👍👌👍👌👋👋👋🙏🙏🙏🙏🙏🙏🙏🙏🙏
ಶ್ರೀಯುತ ಸುಧಾಕರ ಕೋಟಾನ್ ರವರ ಲೇಖನ ತುಂಬಾ ಉತ್ತಮವಾಗಿ ಮೂಡಿ ಬಂದಿದೆ. ಖಾರ್ವಿ ಸಮಾಜದ ಪ್ರತಿಯೊಬ್ಬರೂ ಓದಲೇ ಬೇಕಾದ ಲೇಖನ.
ಕಾಸರಗೋಡು ಮೀನುಗಾರರ ಹೋರಾಟಕ್ಕೆ ನಿಜಶರಣ ಅಂಬಿಗರ ಚೌಡಯ್ಯ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಪರಮಪೂಜ್ಯ ಶಾಂತವೀರ ಭೀಷ್ಮ ಚೌಡಯ್ಯ ಮಹಾಸ್ವಾಮಿ ಯವರ ಆಶೀರ್ವಾದದೊಂದಿಗೆ ಬೆಂಬಲ ವ್ಯಕ್ತಪಡಿಸಿರುವುದು ಮೀನುಗಾರ ಸಮುದಾಯಕ್ಕೆ ಇದು ದಿವ್ಯ ಶಕ್ತಿ.
ತಮ್ಮ ಬಿಡುವಿಲ್ಲದ ಸಮಯದಲ್ಲಿಯೂ ಸಮಾಜದ ಹಿತದೃಷ್ಟಿಯಿಂದ ಸುಧಾಕರ ರವರು ಸ್ವಾಮೀಜಿಯವರನ್ನು ಬೇಟಿ ನೀಡಿ ಮೀನುಗಾರರ ಹೋರಾಟಕ್ಕೆ ಬೆಂಬಲ ಪಡೆದಿರುವುದು ಇವರಿಗೆ ತಮ್ಮ ಸಮಾಜದ ಮೇಲೆ ಇರುವ ಪ್ರೀತಿ ಗೌರವ ಸೂಚಿಸುತ್ತದೆ.
ತಮ್ಮನ್ನು ತಾವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಯುತ ಸುಧಾಕರ ಕೋಟಾನ್ ರವರಿಗೆ ಖಾರ್ವಿ ಸಮಾಜದ ಪರವಾಗಿ ಹೃದಯಪೂರ್ವಕ ಧನ್ಯವಾದಗಳು.