ಕಡಲಕೊರೆತ ತಡೆಗಟ್ಟುವ ನೈಸರ್ಗಿಕ ತಡೆಗೋಡೆ ಬಂಗಡೆ ವಾಲಿ

ಬಂಗುಡೆ ಬಳ್ಳಿ ಕರಾವಳಿ ಕಡಲ ತೀರದಲ್ಲಿ ಬೆಳೆಯುವ ವಿಶಿಷ್ಟ ಪ್ರಭೇಧದ ಸಸ್ಯ ಈ ಬಂಗುಡೆ ಬಳ್ಳಿ ಕಡಲ ಕೊರೆತ ತಡೆಯುವ ನೈಸರ್ಗಿಕ ತಡೆಗೋಡೆಯಾಗಿರುತ್ತದೆ ಇಂಗ್ಲೀಷ್ ನಲ್ಲಿ ಸ್ಯಾಂಡ್ ಬೈಂಡರ್ ಎಂದು ಕರೆಯಲ್ಪಡುವ ಇದರ ವೈಜ್ಞಾನಿಕ ಹೆಸರು ಕ್ರೆಲೆಂಡ್ರೀಯ. ಸಾಮಾನ್ಯವಾಗಿ ಶ್ರಾವಣ ತಿಂಗಳಲ್ಲಿ ಬಂಗುಡೆ ಬಳ್ಳಿಗೆ ನೇರಳೆ ಪಿಂಕ್ ಬಣ್ಣದ ಹೂವು ಅರಳಲು ಆರಂಭವಾಗುತ್ತದೆ ಈ ಸಮಯದಲ್ಲಿ ಇದರ ಚೆಲುವು ಚಿತ್ತಾಕರ್ಷಕ ನೋಟ ಸೃಷ್ಟಿಸುತ್ತದೆ ಬಂಗುಡೆ ಬಳ್ಳಿ ಕಡಲ ತೀರದ ಮರಳಿನ ರಾಶಿಯಲ್ಲಿ ಬಲು ಆಳದವರೆಗೂ ತನ್ನ ಬೇರುಗಳನ್ನು ಚಾಚಿಕೊಂಡಿರುತ್ತದೆ ಕಡಲತೀರದಲ್ಲಿ ಇದು ಸಮೃದ್ಧವಾಗಿ ಬೆಳೆದರೆ ಬಂಗುಡೆ ಮೀನುಗಳ ಸಂತತಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಮೀನುಗಾರರಲ್ಲಿ ಇರುವುದರಿಂದ ಈ ಸಸ್ಯ ಕ್ಕೆ ಕರ್ನಾಟಕ ಕರಾವಳಿಯಲ್ಲಿ ಬಂಗುಡೆ ಬಳ್ಳಿ ಎಂಬ ಹೆಸರು ಬಂತು.

ಎಂತಹಾ ಪ್ರವಾಹ ಬರಲೀ, ಪ್ರಚಂಡ ಸುನಾಮಿ ಬೇಕಾದರೂ ಬರಲಿ ಬಂಗುಡೆ ಬಳ್ಳಿ ನಾಶವಾಗದೇ ಸಮುದ್ರ ತೀರದ ಮರಳನ್ನು ಭಧ್ರವಾಗಿ ಹಿಡಿದುಕೊಂಡು ಬಿಡುತ್ತದೆ. 2017 ರಲ್ಲಿ ಉತ್ತರ ಕನ್ನಡ ಕಡಲತೀರದ ಸ್ವಚ್ಛತೆಯ ಅಂಗವಾಗಿ ಕಾರವಾರ ಕಡಲ ತೀರಗಳಲ್ಲಿ ವ್ಯಾಪಕವಾಗಿ ಬೆಳೆದಿದ್ದ ಬಂಗುಡೆ ಬಳ್ಳಿಗಳನ್ನು ಲೋಡುಗಟ್ಟಲೆ ಕಿತ್ತು ಎಡವಟ್ಟು ಮಾಡಿಕೊಂಡಿತ್ತು. ಮೀನುಗಾರರು ಇದರ ಮಹತ್ವದ ಬಗ್ಗೆ ತಿಳಿಸಿದ ಬಳಿಕ ಬಂಗುಡೆ ಬಳ್ಳಿಗಳ ಕೀಳುವಿಕೆಗೆ ಬ್ರೇಕ್ ಬಿತ್ತು. ಈ ಬಳ್ಳಿ ಗಳ ಮಹತ್ವದ ಬಗ್ಗೆ ಅಧಿಕಾರಿಗಳಿಗೆ ಕಿಂಚಿತ್ತೂ ಮಾಹಿತಿ ಇರಲಿಲ್ಲ ವಿಪರ್ಯಾಸ ವೆಂದರೆ ಅಧಿಕಾರಿಗಳೇ ಜಿಲ್ಲಾ ಕಡಲ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ರಾಗಿದ್ದರು ಕಡಲತಡಿಯ ತಲೆಬುಡ ಗೊತ್ತಿಲ್ಲದವರು ಅಧ್ಯಕ್ಷರಾದರೆ ಮೀನುಗಾರರ ಮತ್ತು ಕಡಲತಡಿಯ ಕಥೆ ಗೋವಿಂದ.

ಮುಂಗಾರು ಸಮಯದಲ್ಲಿ ಕರಾವಳಿಯಲ್ಲಿ ಕಡಲಕೊರೆತ ಆರಂಭವಾಗುತ್ತಿದ್ದಂತೆ ಕಡಲ ತಡೆಗೋಡೆ ನೆಪದಲ್ಲಿ ಕಲ್ಲು ಹಾಕಿ ಬಿಲ್ಲು ಪಾಸ್ ಮಾಡಿಕೊಳ್ಳುವ ಫಿಫ್ಟಿ ಫಿಪ್ಟಿ ವ್ಯವಹಾರದ ನಾಟಕ ಆರಂಭವಾಗುತ್ತದೆ. ಉಳ್ಳಾಲದ ಸೋಮೇಶ್ವರದಿಂದ ಹಿಡಿದು ಕಾರವಾರದ ತನಕವೂ ಕಡಲಕೊರೆತ ಆರಂಭವಾಗುತ್ತದೆ ಸಂತ್ರಸ್ತರು ಶಾಶ್ವತ ಪರಿಹಾರಕ್ಕಾಗಿ ಗೋಗೆರೆಯುತ್ತಾರೆ. ಆಳುವ ಪ್ರಭುಗಳು ಅಧಿಕಾರಿಗಳು ಹತ್ತಾರು ವರ್ಷಗಳಿಂದ ಕಡತಗಳಲ್ಲಿ ಕೊಳೆಯುತ್ತ ಬಿದ್ದಿರುವ ಶಾಶ್ವತ ತಡೆಗೋಡೆ ಯೋಜನೆಯ ಬಗ್ಗೆ ಬಣ್ಣದ ಕನಸು ಬಿತ್ತುತ್ತಾರೆ.

ಪ್ರತಿ ವರ್ಷವೂ ಕಡಲಿಗೆ ಕಲ್ಲು ಹಾಕಿ ಬಿಲ್ಲು ಪಾಸ್ ಮಾಡಿಕೊಳ್ಳುವ ಮಹಾನಾಟಕ ಮುಂದುವರಿಯುತ್ತದೆ ಶಾಶ್ವತ ಪರಿಹಾರದ ಬದಲು ತಾತ್ಕಾಲಿಕ ಮತ್ತು ತುರ್ತು ನಿವಾರಣೋಪಾಯಗಳೇ ಇಲ್ಲಿ ವಿಜೃಂಭಿಸುತ್ತದೆ. ಇದು ಕಡಲಕೊರೆತ ಸಂತ್ರಸ್ತರನ್ನು ಬಿಟ್ಟು ಉಳಿದವರೆಲ್ಲರಿಗೂ ಸಮೃದ್ಧ ಭೋಜನವಾಗಿ ಸಲ್ಲುತ್ತದೆ ಮಳೆಗಾಲ ಮುಗಿದು ಕಡಲು ಶಾಂತವಾಗುವ ತನಕವೂ ಈ ಪ್ರಹಸನ ನಡೆಯುತ್ತಲೇ ಇರುತ್ತದೆ ಕಡಲತಡಿಯಲ್ಲಿ ಭಯಾನಕ ಮಳೆಗಾಲವನ್ನು ಕಳೆದು ಮೀನುಗಾರರು ಹೊಟ್ಟೆಪಾಡಿಗಾಗಿ ಮಳೆಗಾಲ ಮುಗಿಯುತ್ತಿದ್ದಂತೆ ಮತ್ತೆ ಕಡಲಿಗೆ ಇಳಿಯುತ್ತಾರೆ, ಸಂಬಂಧಪಟ್ಟವರು ತಮ್ಮಹೊಟ್ಟೆ ಭರ್ತಿ ಮಾಡಿಕೊಂಡು ಯೋಜನೆಗಳ ಕಡತಗಳನ್ನು ಬದಿಗಿಡುತ್ತಾರೆ.

ಮುಂದಿನ ಮಳೆಗಾಲದಲ್ಲಿ ಮತ್ತೆ ಕಡಲಕೊರೆತ ಉಂಟಾಗಲಿ ಎಂದು ಹಾರೈಸುತ್ತಾರೆಹೀಗೆ ಪ್ರತಿವರ್ಷ ವೂ ಕಡಲಕೊರೆತ ತಡೆಗಟ್ಟುವ ಯೋಜನೆಗಳು ನವೀಕರಣಗೊಳ್ಳುತ್ತಲೇ ಇರುತ್ತದೆ ಶಾಶ್ವತ ಪರಿಹಾರವೆಂಬುದು ಮರೀಚಿಕೆಯಾಗಿದೆ ಕಾರವಾರ ಕಡಲತೀರಗಳಲ್ಲಿ ಅಧಿಕಾರಿಗಳು ಸ್ವಚ್ಛತೆಯ ನೆಪದಲ್ಲಿ ಬಂಗುಡೆ ಬಳ್ಳಿಗಳನ್ನು ಕಿತ್ತು ನಾಶಪಡಿಸಿದ ಪರಿಣಾಮವಾಗಿ ಅಲ್ಲಿನ ಕಡಲಕಿನಾರೆಯಲ್ಲಿ ಕಳೆದ ಮೂರು ವರ್ಷಗಳಿಂದ ಕಡಲಕೊರೆತ ಹೆಚ್ಚಾಗಿದ್ದು ಕಡಲತಡಿಯಲ್ಲಿ ಹೆಚ್ಚೆಚ್ಚು ಬಂಗುಡೆ ಬಳ್ಳಿ ಗಳನ್ನು ಬೆಳೆಸುವ ಅನಿವಾರ್ಯತೆ ಉಂಟಾಗಿದೆ. ಕಡಲಕೊರೆತ ತಡೆಗಟ್ಟಲು ಬಂಗುಡೆ ಬಳ್ಳಿ ಗಳು ನೈಸರ್ಗಿಕ ತಡೆಗೋಡೆಯಾಗಿ ಕೆಲಸ ಮಾಡುತ್ತದೆ ಇವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ.

ಸಸ್ಯ ಕೂಟಗಳು ವಿವಿಧ ರೀತಿಯಲ್ಲಿ ರೂಪುಗೊಳ್ಳಲು ಆಯಾ ಭೌಗೋಳಿಕ ನೆಲೆಗಳಲ್ಲಿನ ಮೇಲ್ಮೈ ಲಕ್ಷಣ, ಹವಾಗುಣ, ಭೂಗುಣ ಸ್ಥಳಗುಣದೊಂದಿಗೆ ಅಲ್ಲಿನ Biotic Factors ಪ್ರಭಾವವೂ ಪಾಲ್ಗೊಂಡಿರುತ್ತದೆ ಕಡಲತೀರದ ಮಣ್ಣಿನ ಪೋಷ್ಟಿಕಾಂಶಗಳನ್ನು ಬಳಸಿಕೊಂಡು ವಿಶಿಷ್ಟವಾಗಿ ಬೆಳೆಯುವ ಬಂಗುಡೆ ಬಳ್ಳಿ ಸಸ್ಯ ಲೋಕಕ್ಕೆ ಮೆರಗು ತಂದುಕೊಟ್ಟಿದೆ ಜೀವಿಸಂಕೀರ್ಣದ ಮತ್ತು ಪರಿಸರದ ನಿಕಟ ಸಂಬಂಧಗಳ ಬೆಳವಣಿಗೆಗೆ ಬಂಗುಡೆ ಬಳ್ಳಿ ಶ್ರೇಷ್ಠ ಉದಾಹರಣೆಯಾಗಿದೆ.

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *