ಮರವಂತೆಯ ಕರಾವಳಿ ಮಾರ್ಗ ತಾತ್ಕಾಲಿಕ ದುರಸ್ತಿ

ಉಪ್ಪುಂದ, : ಚಂಡ ಮಾರುತದ ಪರಿಣಾಮ ಕಡಲ್ಕೊರೆತ ಉಂಟಾಗಿ ಸಂಪರ್ಕ ಕಡಿತಗೊಂಡ ಮರವಂತೆ ಕರಾವಳಿ ಮಾರ್ಗದ ತಾತ್ಕಾಲಿಕ ದುರಸ್ತಿ ಕಾಮಗಾರಿ ಈಗ ಭರದಿಂದ ಸಾಗಿದೆ. ಇನ್ನು ಒಂದು ವಾರದಲ್ಲಿ ಕೆಲಸ ಮುಗಿದು, ಜನ, ವಾಹನ ಸಂಚಾರ ಸುಗಮವಾಗಲಿದೆ.

ಮರವಂತೆಯಲ್ಲಿ ಅರ್ಧದಲ್ಲಿ ಸ್ಥಗಿತವಾಗಿರುವ ಮೀನುಗಾರಿಕಾ ಹೊರಬಂದರಿನ ಉತ್ತರ ತಡೆಗೋಡೆಯ ಉತ್ತರ ದಿಕ್ಕಿನ ತೀರದಲ್ಲಿ ಕಡಲ್ಕೊರೆತ ಸಂಭವಿಸಿತ್ತು. ಅದರ ಬೆನ್ನಲ್ಲಿ, ಕಳೆದ ವಾರ ಅಪ್ಪಳಿಸಿದ ಚಂಡಮಾರುತದ ಪರಿಣಾಮವಾಗಿ ಸುಮಾರು 350 ಮೀ. ಉದ್ದ, 50 ಮೀ. ಅಗಲದ ಭೂಭಾಗ, ನೂರಾರು ತೆಂಗಿನ ಮರಗಳು, ಹತ್ತಾರು ಮೀನುಗಾರಿಕಾ ಶೆಡ್‌ಗಳು ಕಡಲ ಪಾಲಾದುವು. ಅಷ್ಟೇ ಉದ್ದದ ಕಾಂಕ್ರೀಟ್‌ ರಸ್ತೆಯೂ ಛಿದ್ರಗೊಂಡಿತು. ಅದರೊಂದಿಗೆ ಮೀನುಗಾರರ ವಸತಿ ಪ್ರದೇಶದ ಏಕೈಕ ಸಂಪರ್ಕದ ಕೊಂಡಿ ಕಡಿತಗೊಂಡಿತು. ತೆರೆಗಳಿಗೆ ಒಂದು ಹಂತದ ತಡೆಯಾಗಿದ್ದ ರಸ್ತೆ ಕುಸಿದ ಕಾರಣ ತೆರೆಗಳು ತೀರದ ಮನೆಗಳಿಗೆ ನುಗ್ಗಲಾರಂಭಿಸಿತ್ತು. ದಿಕ್ಕು ತೋಚದಂತಾದ ಮೀನುಗಾರರು ತಾವೇ ಶ್ರಮ ವಹಿಸಿ, ಕಲ್ಲು, ಮರಳಿನ ಚೀಲಗಳ ತಡೆ ನಿರ್ಮಿಸಿ ಮನೆಗಳಿಗೆ ಹಾನಿಯಾಗುವುದನ್ನು ದೂರ ಮಾಡಿದರು.ಶಾಸಕ ಬಿ. ಎಂ. ಸುಕುಮಾರ್‌ ಶೆಟ್ಟಿ ಮತ್ತು ಕಂದಾಯ ಸಚಿವ ಆರ್‌. ಅಶೋಕ ಭೇಟಿ ನೀಡಿದ ಮರುದಿನದಿಂದಲೇ ರಸ್ತೆ ಸಂಪರ್ಕ ಮರುಸ್ಥಾಪಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ಅದರಂತೆ ಈಗ ಇಲ್ಲಿ ಕುಸಿದು ಹೋದ ರಸ್ತೆಯ ಪಶ್ಚಿಮ ಮಗ್ಗುಲನ್ನು ಕಲ್ಲುಗಳಿಂದ ರಕ್ಷಿಸಿ, ಒಳಭಾಗದಲ್ಲಿ ಮರಳು ಮತ್ತು ಮಣ್ಣು ಸುರಿದು ಕಚ್ಚಾ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಈ ಪ್ರದೇಶದ ಸಮೀಪದ ಮಾರಸ್ವಾಮಿ ಎಂಬಲ್ಲಿ ಹೆದ್ದಾರಿ ರಕ್ಷಣೆಗೆ ರಚಿಸಿದ ಸುಸ್ಥಿರ ಕಡಲತೀರ ನಿರ್ವಹಣ ಯೋಜನೆ ಮಾದರಿಯ ಅಲೆ ತಡೆಗೋಡೆಗಳನ್ನು ನಿರ್ಮಿಸಬೇಕು ಎಂದು ಮೀನುಗಾರರು ಸಚಿವರು ಮತ್ತು ಶಾಸಕರಲ್ಲಿ ಆಗ್ರ ಹಿಸಿದ್ದಾರೆ.

ಶೀಘ್ರ ಶಾಶ್ವತ ಕಾಮಗಾರಿ

ಮರವಂತೆ ಕರಾವಳಿಯಲ್ಲಿ ಕಡಿತಗೊಂಡ ಸಂಪರ್ಕ ಮರುಸ್ಥಾಪನೆಗೆ ತತ್‌ಕ್ಷಣ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗಿದೆ. ಬೈಂದೂರು ಕ್ಷೇತ್ರದ ವಿವಿಧೆಡೆ ಸಂಭವಿಸಿದ ಕಡಲ್ಕೊರೆತ ತಡೆಗೂ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಎಲ್ಲ ಕಡೆಗಳಲ್ಲಿ ಮಳೆಗಾಲದ ಬಳಿಕ ಶಾಶ್ವತ ಕಾಮಗಾರಿ ನಡೆಸಲಾಗುವುದು.

Leave a Reply

Your email address will not be published. Required fields are marked *