ಕುಂದಾಪುರ: ಕೋವಿಡ್ ಪೀಡಿತರಲ್ಲದ ಸಾಮಾನ್ಯ ರೋಗಿಗಳನ್ನೇ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಮತ್ತು ಚಿಕಿತ್ಸೆ ನೀಡಲು ಹಿಂಜರಿಯುವ ಸ್ಥಿತಿ ಇದೆ. ಆದರೆ ಕುಂದಾಪುರ ಉಪ ವಿಭಾಗದ ಕೋವಿಡ್ ಆಸ್ಪತ್ರೆಯು ಉಡುಪಿ ಜಿಲ್ಲೆಯ ಕೊರೊನಾ ದೃಢಪಟ್ಟ ಮಹಿಳೆಯರ ಜೀವ ಮತ್ತು ಆರೋಗ್ಯ ರಕ್ಷಣೆಗೆ ಪಣ ತೊಟ್ಟಿದೆ, ಗರ್ಭಿಣಿಯರ ಪಾಲಿಗಂತೂ ಸಂಜೀವಿನಿಯೇ ಆಗಿದೆ.
ಕೋವಿಡ್-19ರ ಮಹಾಮಾರಿಯ ಎದುರು ಆಡಳಿತ, ವೈದ್ಯಲೋಕ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಪೀಡಿತರ ಚಿಕಿತ್ಸೆಗಾಗಿ ಸಿದ್ಧಪಡಿಸುವ ನಿರ್ಧಾರ ಕೈಗೊಂಡಾಗ ಇತರ ರೋಗಿ ಗಳ ಪಾಡೇನು ಎಂಬ ಪ್ರಶ್ನೆ ಉದ್ಭವಿಸಿತು. ಜಿಲ್ಲೆಯ ಹಲವು ಖಾಸಗಿ, ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕೊರೊನಾ ಪೀಡಿತರಿಗಾಗಿ ಮೀಸಲಿಡಲಾಯಿತು. ಇದರಿಂದ ಇತರ ಚಿಕಿತ್ಸೆಗಳಿಗಾಗಿ ದಾಖಲಾಗುತ್ತಿದ್ದ ರೋಗಿಗಳಿಗೆ ಹಾಸಿಗೆ ಕೊರತೆ ಎದುರಾಗಿತ್ತು. ಕುಂದಾಪುರದ ಸರಕಾರಿ ಹೆರಿಗೆ ಆಸ್ಪತ್ರೆಯನ್ನು ಕೋಟ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ನಮ್ಮಲ್ಲಿದೆ ಚಿಕಿತ್ಸೆ
ಸೋಂಕು ವಿಸ್ತರಣೆಯಾಗುತ್ತಿದ್ದಂತೆ ಹೆಚ್ಚು ಸಮಸ್ಯೆಗೆ ಒಳ ಗಾದವರು ಗರ್ಭಿಣಿಯರು. ಇವರಿಗೆ ಕೊರೊನಾ ಉಂಟಾದರೆ ಇನ್ನೂ ಕಳವಳ. ಸರಕಾರಿ ಆಸ್ಪತ್ರೆಗಳನ್ನೇ ನಂಬಿದ್ದ ಬಡ ಮತ್ತು ಸಾಮಾನ್ಯ, ಮಧ್ಯಮ ವರ್ಗದವರಿಗೆ ದಿಕ್ಕು ತೋಚದಂತಾಗಿತ್ತು. ಇಂಥ ಸಂದರ್ಭದಲ್ಲಿ ಎಷ್ಟೇ ಮಹಿಳೆಯರು ಬಂದರೂ ಆರೈಕೆಗೆ ಸಿದ್ಧ ಎಂದು ಮುಂದಡಿ ಇರಿಸಿದ್ದು ಕುಂದಾಪುರದ ಕೋವಿಡ್ ಆಸ್ಪತ್ರೆಯ ನೋಡಲ್ ವೈದ್ಯಾಧಿಕಾರಿ ಡಾ| ನಾಗೇಶ್ ನೇತೃತ್ವದ ತಂಡ.
ಇದೆ ಸುಸಜ್ಜಿತ ತಂಡ
ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ಪೈಕಿ ಗರ್ಭಿಣಿಯರಿಗೆ ಉತ್ತಮ ಚಿಕಿತ್ಸೆ ನೀಡುವ ಆಸ್ಪತ್ರೆ ಎನ್ನುವ ಹೆಗ್ಗಳಿಕೆ ಹೊಂದಿದ ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಹೆರಿಗೆ ವಿಭಾಗದಲ್ಲಿ ಸೋಂಕು ಪೀಡಿತ ಗರ್ಭಿಣಿಯರಿಗಾಗಿ ಚಿಕಿತ್ಸೆ ನೀಡಲು ಡಾ| ನಾಗೇಶ್, ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞ ಡಾ| ಚಂದ್ರ ಮರಕಾಲ, ಅರಿವಳಿಕೆ ತಜ್ಞ ಡಾ| ವಿಜಯಶಂಕರ, ಮಕ್ಕಳ ತಜ್ಞೆ ಡಾ| ನಮಿತಾ, ರೇಡಿಯಾಲಜಿ ತಜ್ಞ ಡಾ| ವಿಪುಲ್ ಮತ್ತು ಲಸಿಕೆ ತಜ್ಞೆ ಡಾ| ಶ್ರಾವ್ಯಾ ಹಾಗೂ ಸಿಬಂದಿಯ ತಂಡ ರಚನೆಯಾಗಿದ್ದು, ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ.
171 ಮಹಿಳೆಯರಿಗೆ ಚಿಕಿತ್ಸೆ
ಜಿಲ್ಲೆಯ ಎಲ್ಲ ತಾಲೂಕುಗಳಿಂದಲೂ ಕೊರೊನಾ ಪೀಡಿತ ಗರ್ಭಿಣಿಯರು ಈ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋವಿಡ್ ಆಸ್ಪತ್ರೆ ಆರಂಭವಾದ ಬಳಿಕ ಪ್ರಥಮ ಅಲೆಯ ವೇಳೆ 77 ಮತ್ತು ಎರಡನೆಯ ಅಲೆಯ ವೇಳೆ 94- ಹೀಗೆ ಈವರೆಗೆ ಒಟ್ಟು 171 ಸೋಂಕು ಪೀಡಿತ ಮಹಿಳೆಯರನ್ನು ಇಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಗುಣಮುಖರಾಗಿರುವವರಲ್ಲಿ 119 ಮಂದಿಗೆ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಲಾಗಿದೆ. 52 ಮಂದಿಗೆ ಕೊರೊನಾ ಚಿಕಿತ್ಸೆಯೊಂದಿಗೆ ಹೆರಿಗೆ ಮಾಡಿಸಲಾಗಿದೆ. ಇದರಲ್ಲಿ 9 ಸಾಮಾನ್ಯ, 43 ಸಿಸೇರಿಯನ್ ಹೆರಿಗೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಎಲ್ಲರೂ ಗುಣಮುಖರಾಗಿದ್ದಾರೆ ಎನ್ನುವ ಸಂತೃಪ್ತ ಭಾವನೆ ಇಲ್ಲಿನ ವೈದ್ಯರದು.
ಕುಂದಾಪುರದ ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಪೀಡಿತರ ರಕ್ಷಣೆಗಾಗಿ ಪಣ ತೊಟ್ಟಿರುವ ಎಲ್ಲ ವೈದ್ಯರು ಮತ್ತು ವೈದ್ಯಕೀಯ ಸಿಬಂದಿ ಅಭಿನಂದನಾರ್ಹರು. ಜೀವ ರಕ್ಷಕರಾದ ಅವರ ಇಚ್ಛಾ ಶಕ್ತಿ ಮತ್ತು ಕರ್ತವ್ಯ ದಕ್ಷತೆ ಮಾದರಿ. ಯಾವುದೇ ಕಠಿನ ಸಂದರ್ಭದಲ್ಲಿಯೂ ರೋಗಿಗಳು ಆತಂಕಕ್ಕೆ ಒಳಗಾಗಬೇಕಿಲ್ಲ.
– ಜಿ. ಜಗದೀಶ್, ಉಡುಪಿ ಜಿಲ್ಲಾಧಿಕಾರಿ