ಕಾಲಿಲ್ಲದೆ ಎದೆಯ ಮೂಲಕ ಚಲಿಸುವ ಉರಗಗಳಿಂದ ಹಿಡಿದು, ಸಹಸ್ರಪದಿಯ ವರೆಗೆ ಬೇರೆ ಬೇರೆ ಸಂಖ್ಯೆಯ ಕಾಲುಗಳನ್ನು ಹೊಂದಿರುವ ಜೀವಿಗಳನ್ನು ಈ ಭೂಮಿಯ ಮೇಲೆ ಕಾಣಬಹುದು. ನಾಲ್ಕು ಪಾದಗಳನ್ನು ಹೊಂದಿರುವ ಸಾವಿರಾರು ಬಗೆಯ ಪ್ರಾಣಿಗಳು ಭೂಮಿಯಲ್ಲಿವೆ. ಎಂಟು ಪಾದಗಳ ಪ್ರಾಣಿಗಳೂ ಇವೆ. ಆದರೆ ಎಷ್ಟು ಕಾಲುಗಳಿವೆ ಎಂಬುವುದಕ್ಕಿಂತ , ಇರುವ ಕಾಲುಗಳನ್ನು ಸಮರ್ಥವಾಗಿ, ಉಪಯುಕ್ತವಾಗಿ ಹೇಗೆ ಬಳಸಿಕೊಳ್ಳಬೇಕು ಎಂಬುದು ಮುಖ್ಯ. ಮನುಷ್ಯನಿಗೆ ಕೇವಲ ಎರಡು ಕಾಲುಗಳಿದ್ದರೂ ಭೂಮಿಯ ಅಧಿಪತ್ಯವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾನೆ. ಜೀವ ಪ್ರಪಂಚದಲ್ಲಿ ಹತ್ತು ಕಾಲುಗಳಿರುವ ಒಂದು ವಿಭಿನ್ನ ಮತ್ತು ಚಿರಪರಿಚಿತ ಜೀವಿಯ ಬಗ್ಗೆ ನಾವಿಂದು ತಿಳಿದುಕೊಳ್ಳೋಣ. ಏಡಿ, ನಳ್ಳಿ, ಎಸಡಿ, ಕುರ್ಲಿ ಎಂಬಿತ್ಯಾದಿ ಹೆಸರುಗಳನ್ನು ಹೊತ್ತಿರುವ ಈ ಜೀವಿಯನ್ನು ನೋಡದವರಿಲ್ಲ. ಇಂಗ್ಲಿಷ್ನಲ್ಲಿ ಕ್ರ್ಯಾಬ್ ಎಂದು ಕರೆಯಲ್ಪಡುವ ಏಡಿಗೆ ಬ್ರಕಿಯೂರ ಎಂಬ ವೈಜ್ಞಾನಿಕ ಹೆಸರಿದೆ. ಜಲದಲ್ಲಿಯೂ, ನೆಲದಲ್ಲಿಯೂ ಬದುಕುವ ಕಾರಣ ಇದೊಂದು ಉಭಯವಾಸಿ. ನಕ್ಷತ್ರಪುಂಜವೊಂದು ಏಡಿಯಂತೆ ಕಂಡು ಬಂದ ಕಾರಣ ಜಾನ್ ಬೆವಿಸ್ ಎಂಬಾತ 1731ರಲ್ಲಿ ಕರ್ಕಾಟಕ ನಕ್ಷತ್ರಪುಂಜ ಎಂಬ ಹೆಸರನ್ನಿತ್ತ. ನಮ್ಮಲ್ಲಿ ಜ್ಯೋತಿಶಾಸ್ತ್ರದಲ್ಲೂ ಕಟಕ ಅಥವಾ ಕರ್ಕಾಟಕ ರಾಶಿ ಇರುವುದನ್ನು ಗಮನಿಸಬಹುದು. ಹೀಗೆ ಭೂಮಿಯ ಮೇಲೆ ಸಾವಿರಾರು ಪ್ರಬೇಧಗಳಲ್ಲಿ ಕಂಡುಬರುವ ಏಡಿಯೊಂದು ಮಾನವನ ಕಲ್ಪನೆಯ ಕಾರಣದಿಂದ ನಕ್ಷತ್ರಪುಂಜದ ಜೊತೆಗೆ ಸೇರಿಕೊಂಡಿತು. ಏಡಿಗಳು ಜುರಾಸಿಕ್ ಯುಗದಲ್ಲೂ ಇದ್ದಿತ್ತು ಎಂಬುದಕ್ಕೆ ಹಲವು ಸಾಕ್ಷಿಗಳು ದೊರೆತಿವೆ. ಪ್ರಾಚೀನ ಪೆರುವಿನ ಮೊಚೆ ಜನಾಂಗದವರು ತಮ್ಮ ಚಿತ್ರಕಲೆಯಲ್ಲಿ ಏಡಿಯ ಚಿತ್ರವನ್ನೂ ಬಿಡಿಸಿರುವುದನ್ನು ನೋಡಬಹುದು. ಇದಕ್ಕಿಂತಲೂ ಸ್ವಾರಸ್ಯಕರವಾದ ಸಂಗತಿಯೆಂದರೆ ನಾಗರಿಕತೆಯ ಪ್ರಾರಂಭದಲ್ಲಿ ನೀರಿನ ಆಕರಗಳನ್ನು ನೋಡಿ ನೆಲೆನಿಂತ ಮನುಷ್ಯನಿಗೆ ನೀರಿನಲ್ಲಿ ಚಲಿಸುವ ಮೀನುಗಳನ್ನು ಹಿಡಿಯುವ ಮೊದಲೇ ಅತ್ಯಂತ ಸುಲಭವಾಗಿ ಏಡಿಗಳನ್ನು ಹಿಡಿಯುವ ತಂತ್ರಗಳು ಕರಗತವಾಗಿತ್ತು. ಏಡಿಗಳಲ್ಲಿ ಸಿಹಿನೀರಿನ ಏಡಿಗಳೂ ಇವೆ; ಸಮುದ್ರವಾಸಿ ಏಡಿಗಳೂ ಇವೆ. ಆದರೆ ರುಚಿಯ ವಿಚಾರಕ್ಕೆ ಬಂದಾಗ ಸಿಹಿನೀರಿನ ಏಡಿಗೆ ಒಂದೈದು ಅಂಕಗಳು ಹೆಚ್ಚು. ಬಹುಜನರು ಮೆಚ್ಚುವುದು ಸಿಹಿನೀರಿನ ಏಡಿಯನ್ನೇ. ಆದರೆ ಸಮುದ್ರದಲ್ಲಿರುವಷ್ಟು ಏಡಿಗಳ ವೈವಿಧ್ಯತೆ ಸಿಹಿ ನೀರಿನಲ್ಲಿಲ್ಲ.
ನಮ್ಮ ಕರಾವಳಿಯಲ್ಲಿ ಅತ್ಯಂತ ಕಡಿಮೆ ಬೆಲೆಯ ಏಡಿಗಳಿಂದ ಮೊದಲ್ಗೊಂಡು ಸಾವಿರಾರು ರೂಪಾಯಿ ಬೆಲೆ ಬಾಳುವ ಏಡಿಗಳೂ ಸಿಗುತ್ತವೆ. ಇವುಗಳ ಬೆಲೆ ನಿರ್ಧಾರವಾಗುವುದು ಏಡಿಯ ಮಾಂಸದ ರುಚಿಯ ಆಧಾರದ ಮೇಲೆ. ಇಂತಿಪ್ಪ ಏಡಿಯು ಪ್ರಮುಖ ಆಹಾರವಾಗಿಯೂ, ವಿದೇಶಕ್ಕೆ ರವಾನೆಯಾಗುವ ಸರಕಾಗಿಯೂ ಗುರುತಿಸಿಕೊಂಡಿದೆ. ನಮ್ಮ ಕರಾವಳಿಯ ಕೆಲವು ಜಾತಿಯ ಏಡಿಗಳಿಗೆ ಚೀನಾ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿರುವುದರಿಂದ ತಿರಸ್ಕರಿಸಲ್ಪಟ್ಟ ಕೆಲವು ಜಾತಿಯ ಏಡಿಗಳಿಗೂ ಬೇಡಿಕೆ ಬಂತು. ಏಡಿಯ ದೊಡ್ಡದಾದ ಕಾಲುಗಳೆರಡು ಮುರಿಯದೆ ರಫ್ತು ಮಾಡಬೇಕೆಂಬ ಶರ್ತ ವಿಧಿಸಿದ ಕಾರಣ ಬಲೆಯಲ್ಲಿ ಹಿಡಿದ ಏಡಿಯ ಕಾಲನ್ನು ತುಂಡರಿಸದೆ ಬಿಡಿಸಬೇಕಾಗಿ ಬಂತು. ಆರಂಭದಲ್ಲಿ ಮೀನುಗಾರರಿಗೆ ಇದೊಂದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಬಲೆಯಲ್ಲಿ ಸುತ್ತಿಕೊಂಡ ಏಡಿಯನ್ನು ಬಿಡಿಸುವಾಗ ಎಷ್ಟೋ ಬಾರಿ ಕಚ್ಚಿಸಿಕೊಂಡಿದ್ದು ಇದೆ. ಮುಂದೆ ಅದರ ಯಾವ ಕಾಲುಗಳೂ ಮುರಿಯದಂತೆ ಬಲೆಯಿಂದ ಬಿಡಿಸುವ ಕಲೆಯನ್ನು ಮೀನುಗಾರರು ಸಿದ್ಧಿಸಿಕೊಂಡರು.
ಏಡಿಯು ಯಾವುದಾದರೊಂದು ಕಾಲನ್ನು ಕಳೆದುಕೊಂಡರೆ ಆ ಕಾಲು ಪುನಃ ಮೂಡುತ್ತದೆ. ಇದು ಸೃಷ್ಟಿಯ ವಿಶೇಷತೆ. ಈ ವೈಚಿತ್ರ್ಯವನ್ನು ನಾವು ಪಾಠದಲ್ಲಿ ಓದಿರುತ್ತೇವೆ. ಆದರೆ ಮೀನುಗಾರಿಕೆ ಮಾಡುವಾಗ ಇದನ್ನು ನೈಜವಾಗಿ ಗಮನಿಸಲು ಸಾಧ್ಯವಿದೆ. ಕಳೆದುಕೊಂಡ ಕಾಲಿನ ಬದಲಿಗೆ ಹೊಸ ಕಾಲು ಮೂಡುವಾಗ ಆ ಹೊಸ ಕಾಲು ಅತ್ಯಂತ ಮೆದುವಾಗಿರುತ್ತದೆ. ಇಂತಹ ಕಾಲನ್ನು ನಾನು ಹಲವು ಬಾರಿ ನೋಡಿದ್ದೇನೆ. ದೇಹ ಮತ್ತು ಉಳಿದ ಎಲ್ಲಾ ಕಾಲುಗಳು ಗಡುಸಾಗಿದ್ದು ಒಂದು ಒಂದು ಕಾಲು ಮಾತ್ರ ಮೆದು ಇದ್ದರೆ ನಿಸ್ಸಂಶಯವಾಗಿ ಅದನ್ನು ಹೊಸ ಕಾಲೆಂದು ಪರಿಗಣಿಸಬಹುದಿತ್ತು.ಕ್ರಮೇಣ ಈ ಮೆದುವಾದ ಕಾಲು ಗಡುಸಾಗಿ ಸಾಮಾನ್ಯ ಕಾಲಾಗುತ್ತದೆ. ಮನುಷ್ಯನಿಗೂ ಇಂತಹ ಸೌಭಾಗ್ಯ ಇದ್ದಿದ್ದರೆ ಕೈ ಕಾಲು ಇಲ್ಲದ ಅದೆಷ್ಟು ಮಂದಿಗೆ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತಿರಲಿಲ್ಲ.
ಏಡಿಗಳ ಚಲನೆಯನ್ನು ಗಮನಿಸಿದಾಗ ಒಂದು ವಿಶೇಷ ಅಂಶ ಗೋಚರಿಸುತ್ತದೆ. ಅದೇನೆಂದರೆ, ಏಡಿಗಳು ಪಾರ್ಶ್ವ ಭಾಗದಿಂದ ಚಲಿಸುತ್ತದೆ. ಆಕ್ರಮಣ ಮಾಡುವ ಸಂದರ್ಭದಲ್ಲಿ ತನ್ನೆರಡು ಬಲಾಢ್ಯ ಕಾಲುಗಳನ್ನು ಮೇಲಕ್ಕೆ ಎತ್ತಿ ದಾಳಿ ಮಾಡಲು ಮುಂದಾಗುತ್ತದೆ. ಕಣ್ಣು ಗುಡ್ಡೆಗಳನ್ನು ಕಣ್ಣಿರುವ ಜಾಗದಿಂದ ಹೊರಚಾಚಿ ಹೊರಗಿನ ಅಪಾಯವನ್ನು ಗುರುತಿಸುವ ಶಕ್ತಿಯನ್ನು ಹೊಂದಿದೆ. ಸುಮ್ಮನೆ ನಡೆದುಕೊಂಡು ಹೋಗುತ್ತಿದೆ ಎಂದು ಭಾವಿಸಿಕೊಂಡು ಹಿಡಿಯಲು ಹೋದರೆ ಕಚ್ಚಿಸಿಕೊಳ್ಳುವುದಂತೂ ಗ್ಯಾರಂಟಿ. ಅಷ್ಟು ಶೀಘ್ರವಾಗಿ ದಾಳಿ ಮಾಡಬಲ್ಲ ಶಕ್ತಿ ಏಡಿಗಿದೆ. ಏಡಿಯ ಎದುರಿರುವ ಎರಡು ಕೊಂಬಿನಂತಿರುವ ಕಾಲುಗಳು ಎಷ್ಟು ಬಲಶಾಲಿಗಳಾಗಿರುತ್ತವೆ ಎಂದರೆ, ಅದು ಕಚ್ಚಿದರೆ ಬಿಡಿಸಿಕೊಳ್ಳುವುದು ಅಷ್ಟು ಸುಲಭವಿಲ್ಲ. ಕಚ್ಚಿದ ಕಾಲನ್ನು ಮುರಿದರೂ ಅದು ಬಿಡಲಾರದಷ್ಟು ಗಟ್ಟಿಯಾಗಿರುತ್ತದೆ.
ಬೆನ್ನಿನ ಮೇಲೆ ಶಿಲುಬೆಯ ಚಿತ್ರವಿರುವ ಒಂದು ಬಗೆಯ ಏಡಿ ನಮ್ಮ ಸಮುದ್ರದಲ್ಲಿ ಕಂಡು ಬರುತ್ತದೆ. ಆ ಜಾತಿಯ ವಿವಿಧ ಬಣ್ಣಗಳ, ವೈವಿಧ್ಯತೆಯ ಏಡಿಗಳಿದ್ದರೂ ಅವೆಲ್ಲದರ ಮೇಲೆ ಮೂಡಿರುವ ಶಿಲುಬೆಯ ಚಿತ್ರ ಅಷ್ಟು ಕರಾರುವಕ್ಕಾಗಿರುತ್ತದೆ. ಈ ಏಡಿಯನ್ನು ಹಿಂದೆ ತಿನ್ನುವವರ ಸಂಖ್ಯೆ ಕಡಿಮೆಯಿತ್ತು. ತಿಂದರೆ ತಲೆ ತಿರುಗುತ್ತದೆ ಎಂದು ನಂಬಲಾಗಿತ್ತು. ಆದರೆ ಈಗ ಎಲ್ಲರು ತಿನ್ನುತ್ತಾರೆ. ತಲೆ ತಿರುಗಿದ ಬಗ್ಗೆ ಯಾರೂ ಹೇಳಿದ್ದು ಕೇಳಿಲ್ಲ. ಆದರೆ ಏಡಿಯ ಮಾಂಸದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚು. ಮೂಳೆ ದುರ್ಬಲವಿರುವವರು ಏಡಿಯನ್ನು ತಿಂದರೆ ಮುಳೆ ಬಲಗೊಳ್ಳುತ್ತದೆ. ಕೊಂಕಣಿಯಲ್ಲಿ ದೊಮ್ಣೊ ಎಂದೂ, ಕುಂದಗನ್ನಡದಲ್ಲಿ ಚ್ವಾಣ ಎಂದು ಕರೆಯುವ ಏಡಿಯ ಪ್ರಭೇದ ಇದೆ. ಅದು ಮರಳಿನಲ್ಲಿ ಬಿಲ ಕೊರೆದು ವಾಸಿಸುತ್ತದೆ. ಸಣ್ಣ ಮಕ್ಕಳು ಅದರ ಬಿಲದ ಹತ್ತಿರ ಹೊಂಡ ತೋಡಿ ಅದನ್ನು ಹಿಡಿದು ಕಾಲಿಗೆ ದಾರ ಕಟ್ಟಿ ಆಡುವ ಆಟ ಸಾಮಾನ್ಯವಾಗಿತ್ತು. ಈಗಂತೂ ಚ್ವಾಣ ಹಿಡಿಯೋದು ಬಿಡಿ, ಸಮುದ್ರ ದಂಡೆ ಹತ್ತಿರ ಹೆತ್ತವರು ಮಕ್ಕಳನ್ನು ಬಿಡುವುದಿಲ್ಲ.
ಪಾಚಿ ಮತ್ತು ಸಣ್ಣ ಪುಟ್ಟ ಜೀವಿಗಳು ತಿಂದು ಬದುಕುವ ಏಡಿಗಳು ತಮ್ಮ ರಕ್ಷಣೆಗಾಗಿ ಬಂಡೆಗಳ ಸಂಧಿಗಳನ್ನು ಆಯ್ದುಕೊಳ್ಳುತ್ತದೆ. ಎಷ್ಟೋ ಬಾರಿ ಈ ರೀತಿಯ ಸ್ಥಳಗಳೇ ಅವುಗಳಿಗೆ ಮಾರಕವಾಗುವುದು. ಲೋಹದ ಸರಿಗೆಗಳನ್ನು ಬಂಡೆಯ ಸಂಧಿಗಳಲ್ಲಿ ತುರುಕಿ ಮನುಷ್ಯ ಏಡಿಯನ್ನು ಹಿಡಿಯುತ್ತಾನೆ. ಬಂಡೆಗಳ ಮೇಲಿನ ಪಚ್ಚಿಲೆ(ಕಡಲ ಮೊರುವಾಯಿ)ಯನ್ನು ತೆಗೆದು ನಿರ್ನಾಮ ಮಾಡಿದಂತೆ ಏಡಿಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗುತ್ತಿದೆ. ಕೈಗಾರಿಕೆಗಳ ಕಲುಷಿತ ನೀರಿನಿಂದಲೂ ಏಡಿಗಳ ಅಸ್ತಿತ್ವಕ್ಕೆ ಸಂಚಕಾರ ಒಡ್ಡಿದೆ. ಏಡಿಗಳು ಜೈವಿಕ ಪರಿಸರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮನುಷ್ಯ ಇದನ್ನರಿತು, ಜೈವಿಕ ಪರಿಸರದ ಸಂರಕ್ಷಣೆ ಮಾಡಿದರೆ ಮಾತ್ರ ಮುಂದಿನ ಜನಾಂಗಕ್ಕೆ ನಾವು ಇಂತಹ ಜೀವಿಗಳನ್ನು ಕೊಡುಗೆಯಾಗಿ ನೀಡಬಹುದು.
ನಾಗರಾಜ ಖಾರ್ವಿ ಕಂಚುಗೋಡು