ಸಮುದ್ರಯಾನವೆಂದ ಕೂಡಲೆ ನಮ್ಮ ಮನಸ್ಸಿಗೆ ಬರುವುದು ಬೃಹದಾಕಾರದ ಹಡಗುಗಳು, ಹಾಯಿದೋಣಿಗಳು, ದೊಡ್ಡ ಗಾತ್ರದ ಬೋಟ್ಗಳು. ಇವುಗಳೆಲ್ಲ ಸಮುದ್ರದ ರಾಜಮಾರ್ಗಗಳಲ್ಲಿ ಸಂಚರಿಸುವ ಐರಾವತಗಳಂತೆ. ಆದರೆ ಸಮುದ್ರದಲ್ಲಿ ಅತ್ಯಂತ ಚಿಕ್ಕದಾದ ದೋಣಿಯೊಂದಿದೆ. ಅದೇ ಮರ್ಗಿ. ಕರಾವಳಿಯ ಜನರಿಗೆ ಈ ಪದ ಮತ್ತು ಈ ರೀತಿಯ ದೋಣಿ ಚಿರಪರಿಚಿತವಾದರೂ ಉಳಿದವರಿಗೆ ಏನೆಂದು ಗೊತ್ತಿಲ್ಲ. ಸರಳವಾಗಿ ಹೇಳುವುದಾದರೆ ಇದು ಒಬ್ಬನೇ ಒಬ್ಬ ಮೀನುಗಾರ ಮೀನುಗಾರಿಕೆ ಮಾಡಲು ಬಳಸುವ ಅತ್ಯಂತ ಪುಟ್ಟ ದೋಣಿ. ಬೇರೆಲ್ಲ ರೀತಿಯ ದೋಣಿಗಳಲ್ಲಿ ಕೂತು ಕೆಲಸ ಮಾಡುತ್ತಾ, ದಣಿವಾದರೆ ನಿಲ್ಲಬಹುದು. ಆದರೆ ಈ ದೋಣಿಯಲ್ಲಿ ನಿಲ್ಲಲಾಗದು; ಅತ್ತಿತ್ತ ಚಲಿಸಲಾಗದು. ಬಲೆ ಬಿಡುವುದರಿಂದ ಹಿಡಿದು ಮೀನು ತಂದು ದಡಕ್ಕೆ ಮುಟ್ಟಿಸುವವರೆಗೆ ಕುಳಿತುಕೊಂಡೇ ಕೆಲಸ ಮಾಡಬೇಕು.
ಸಮುದ್ರದ ಮೀನುಗಾರಿಕೆಯಲ್ಲಿ ಸಾಂಪ್ರದಾಯಿಕ ಶೈಲಿಯನ್ನು ಇನ್ನೂ ನೋಡಬಹುದಾದ ಒಂದೇ ಒಂದು ವಿಭಾಗವಿದು. ಬೇರೆಲ್ಲ ಮೀನುಗಾರಿಕೆಗಳಲ್ಲಿ ಯಂತ್ರಗಳು ಲಗ್ಗೆಯಿಟ್ಟಿವೆ; ಆಧುನಿಕತೆಯ ಗಾಳಿ ಬೀಸಿದೆ. ಮರದ ಮರ್ಗಿಯ ಬದಲಿಗೆ ಫೈಬರ್ ಮರ್ಗಿ ಬಂದಿದ್ದು ಬಿಟ್ಟರೆ, ಬೇರೆಲ್ಲ ವಿಷಯದಲ್ಲಿ ಇಂದಿಗೂ ಹಳೆಯ ಕಾಲದ ಶೈಲಿಯಲ್ಲಿಯೇ ಮೀನುಗಾರಿಕೆ ನಡೆಸಲಾಗುತ್ತದೆ.
ಮರ್ಗಿಗೆ ಬಳಸುವ ಮರ ಅನನ್ಯವಾಗಿರಬೇಕು. ಒಂದೇ ಮರದಿಂದ ತಯಾರಿಸಿದ್ದಾದರೆ ಅದಕ್ಕೆ ಹೆಚ್ಚು ಬೆಲೆ, ಹೆಚ್ಚು ಬಾಳಿಕೆ ಬರುವುದು. ಮರದ ಆಯ್ಕೆಯೂ ಉತ್ತಮವಾಗಿರಬೇಕು. ದೀರ್ಘಕಾಲ ಬಾಳ್ವಿಕೆ ಬರುವ ಮರವನ್ನು ಬಳಸುವುದರ ಜೊತೆ ಜೊತೆಗೆ ಅತ್ಯಂತ ತೆಳ್ಳಗೆ ತಯಾರಿಸಲಾಗುತ್ತದೆ. ಕೇವಲ ಒಂದೆರಡು ಇಂಚಿನಷ್ಟು ದಪ್ಪ ಮೈ ಹೊಂದಿದ್ದರೂ ಯಾವುದೇ ಮಳೆ ಗಾಳಿಗೆ, ಅಲೆಗಳ ಉಬ್ಬರಕ್ಕೆ ಛಿದ್ರವಾಗುವಂತಿರಬಾರದು. ಅಷ್ಟು ಕಠಿಣ ಮರವನ್ನೇ ಉಪಯೋಗಿಸಬೇಕು. ಜೊತೆಯಲ್ಲಿ ಮರ್ಗಿಯ ಉದ್ದ ಕೇವಲ ಎರಡು ಮೀಟರ್ನಷ್ಟಿರಬೇಕು. ನೀರಿರುವ ಜಾಗಕ್ಕೆ ಒಬ್ಬನೇ ಒಬ್ಬ ಎಳೆದುಕೊಂಡು ಹೋಗುವಷ್ಟು ಹಗುರ ಇರಬೇಕು. ಇದೊಂದು ಏಕ ವ್ಯಕ್ತಿಯ ಸೈನ್ಯವಿದ್ದಂತೆ. ಇಲ್ಲಿ ಯಾರ ಅವಲಂಬನೆಯೂ ಇಲ್ಲ. ಒಬ್ಬನೇ ಬಲೆ ತುಂಬಬೇಕು, ನೆಲದಿಂದ ನೀರಿನ ವರೆಗೆ ಮರ್ಗಿಯನ್ನು ಎಳೆದುಕೊಂಡು ಹೋಗಬೇಕು, ಬಲೆಬೀಸಬೇಕು, ಎಳೆದುಕೊಳ್ಳಬೇಕು. ಇನ್ನೊಂದು ಸ್ವಾರಸ್ಯವೆಂದರೆ ಕಿಲೋಮೀಟರ್ಗಟ್ಟಲೆ ದೂರ ಹೋಗುವಾಗ ಒಬ್ಬನೇ ಹುಟ್ಟು ಹಾಕಬೇಕು. ಗುಂಪಿನಲ್ಲಿ ಹೋಗುವ ಮೀನುಗಾರಿಕೆಯಲ್ಲಿ ಒಬ್ಬರ ನೋವಿಗೆ ಸ್ಪಂದಿಸಿ, ಇನ್ನೊಬ್ಬರು ಪರಸ್ಪರ ಸಹಕಾರದಿಂದ ಕೆಲಸ ಮಾಡುತ್ತಾರೆ. ಆದರೆ ಮರ್ಗಿ ದೋಣಿ ಕಸುಬು ಹಾಗಲ್ಲ. ಸಮುದ್ರಕ್ಕೆ ಹೋದ ನಂತರ ದೇಹ ಸೋತರೂ ಏಕಾಂಗಿಯಾಗಿಯೇ ಕೆಲಸ ಮಾಡಬೇಕು. ಎಷ್ಟೇ ದಣಿವಾದರೂ ತನ್ನ ಕೆಲಸವನ್ನು ಯಾರಿಗೂ ಹಂಚಿಕೊಡಲಾಗದು.
ಮರ್ಗಿ ಮೀನುಗಾರಿಕೆ ಮಾಡುವವರ ಸಾಹಸವನ್ನು ಮೆಚ್ಚಲೇಬೇಕು. ಕಿ.ಮೀ.ಗಟ್ಟಲೆ ಹುಟ್ಟು ಹಾಕುತ್ತಾ ಸಾಗುತ್ತಾರೆ. ಒಂದಿಡೀ ದಿನ ಕೈಯಿಂದ ಹುಟ್ಟು ಹಾಕುತ್ತಾ ಸಾಗಬೇಕೆಂದರೆ ಕೈಗಳಿಗೆ ಎಷ್ಟು ಬಲವಿರಬೇಕು; ಮನಸ್ಸು ಎಷ್ಟು ದೃಢವಿರಬೇಕು, ಯೋಚಿಸಿ. ಮಳೆಗಾಲದ ಕಸುಬೆಂದರೆ ಯಾವ ಸಮಯದಲ್ಲೂ ಗಾಳಿ, ಮಳೆಯ ಆರ್ಭಟ ಪ್ರಾರಂಭವಾಗಬಹುದು. ಮಳೆಗಾಲದ ತೆರೆಗೆ ಎಂತೆಂತಹ ಹಡಗುಗಳು ಮುಳುಗಿದ ಉದಾಹರಣೆಗಳಿವೆ. ಮಂಗಳೂರಿನಲ್ಲಿ ಡೆನ್ಡೆನ್ ಹಡಗು ಮುಳುಗಿದ್ದು ಮಳೆಗಾಲದ ಕಡಲಿನಬ್ಬರದಲ್ಲಿಯೇ. ಈ ಸಮಯದಲ್ಲಿ ಮರ್ಗಿಯಲ್ಲಿ ಮೀನುಗಾರಿಕೆ ಮಾಡುವ ಸಾಹಸಿಗಳಿದ್ದಾರೆ. ಸಮದ್ರದ ಮಧ್ಯಕ್ಕೆ ಹೋದಾಗ, ಗಾಳಿ ಮತ್ತು ಮಳೆಯ ಆರ್ಭಟ ಪ್ರಾರಂಭವಾದ ಕೂಡಲೆ ಚೀಲದಂತಹ ಒಂದು ಬಲೆಯಲ್ಲಿ ಮೀನುಗಾರಿಕೆಯ ಬಲೆಯನ್ನು ತುಂಬಿ, ಇನ್ನೊಂದು ಚೀಲದಂತಹ ಬಲೆಯಲ್ಲಿ ಮೀನನ್ನು ತುಂಬಿ ಮರ್ಗಿಗೆ ಕಟ್ಟಿ ಹಾಕುತ್ತಾರೆ. ಆಮೇಲೆ ಮರ್ಗಿಯನ್ನು ಮಗುಚಿ ಹಾಕುತ್ತಾರೆ. ಮುಳುಗಿದ ಮರ್ಗಿ, ಮತ್ತೆ ಮುಳುಗುವ ಭೀತಿ ಇಲ್ಲ. ಗಾಳಿ ಮಳೆಯ ಆರ್ಭಟ ಕಡಿಮೆಯಾಗುವವರೆಗೆ ಕಾಯುತ್ತಾರೆ. ಮೀನುಗಾರ ಅಲ್ಲಿಯವರೆಗೆ ಮರ್ಗಿ ಹಿಡಿದುಕೊಂಡು ಈಜುತ್ತಾ ಇರುತ್ತಾನೆ. ಆದರೆ ಈ ಸಮಯದಲ್ಲಿ ಯಾವುದೇ ಬಂಡೆಯ ಬಳಿ ಮರ್ಗಿ ಹೋಗದಂತೆ ಎಚ್ಚರ ವಹಿಸಬೇಕು. ಏಕೆಂದರೆ ಬಂಡೆಗೆ ಅಪ್ಪಳಿಸಿದರೆ ಮರ್ಗಿಯು ಪುಡಿ ಪುಡಿಯಾಗಿ ಹೋಗಬಹುದು. ಜೀವವೂ ಕೂಡ. ಮಳೆ ಮತ್ತು ಗಾಳಿಯ ಅಬ್ಬರ ಕಡಿಮೆಯಾದ ಕೂಡಲೇ ಮರ್ಗಿಯನ್ನು ಸಮಸ್ಥಿತಿಗೆ ತರುತ್ತಾರೆ. ಅದರೊಳಗಿರುವ ನೀರನ್ನೆಲ್ಲ ಖಾಲಿ ಮಾಡಿ, ಮರ್ಗಿಯ ಒಳಗೆ ಸೇರಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಸಮಸ್ಯೆಯಿದೆ. ನೆಲದ ಮೇಲೆ ಇಟ್ಟಿರುವ ಯಾವುದೇ ದೋಣಿ ಅಥವಾ ಮರ್ಗಿಯನ್ನು ಹತ್ತುವುದು ಸುಲಭ. ಕಾಲಿಗೆ ಯಾವುದೇ ಆಧಾರ ಸಿಗದ ಸಮುದ್ರದಲ್ಲಿ ದೋಣಿ ಅಥವಾ ಮರ್ಗಿಯ ಒಳಗೆ ಸೇರಿಕೊಳ್ಳಲು ಹರಸಾಹಸ ಪಡಬೇಕು. ಈ ವಿದ್ಯೆ ಎಲ್ಲರಿಗೆ ಸಿದ್ಧಿಸದು. ಅದಕ್ಕಾಗಿ ಕಠಿಣ ಅಭ್ಯಾಸ ಮಾಡಿರಬೇಕು. ಅನುಭವವೂ ಜೊತೆಯಾಗಬೇಕು. ಗಾಳಿ ಬೀಸಿದ ಸಮಯದಲ್ಲಿ ಈ ವಿದ್ಯೆ ಕಲಿಯಲು ಸಾಹಸಕ್ಕೆ ಕೈ ಹಾಕಬಾರದು.
ಮೀನುಗಾರರನ್ನು ಕಡಲ ಸೈನಿಕರು ಎಂದೇ ಕೆಲವರು ಕರೆಯುತ್ತಾರೆ. ಸೈನಿಕರು ಒಮ್ಮೊಮ್ಮೆ ಏಕಾಂಗಿಯಾಗಿ ಗಡಿಯಲ್ಲಿ ನಿಂತು ವಾರಗಟ್ಟಲೆ ಯುದ್ಧ ಮಾಡಬೇಕಾದ ಪ್ರಸಂಗ ಒದಗಿ ಬರುವುದುಂಟು. ಮರ್ಗಿ ಮೀನುಗಾರಿಕೆಯು ಸಹ ಹಾಗೆಯೆ, ಯಾವುದೇ ಸಮಯದಲ್ಲಿ ಮುಖಾಮುಖಿಯಾಗಬಲ್ಲ ಸಾವಿನ ಎದುರು ಸೆಣಸಾಡಬೇಕಾದ ಅನಿವಾರ್ಯತೆ ಇರುತ್ತದೆ. ಏಕಾಂಗಿಯಾಗಿ ದಿನಗಟ್ಟಲೆ ಕೆಲಸ ಮಾಡುತ್ತಲೇ ಏಕತಾನತೆಯನ್ನು ಮರೆಯಬೇಕು. ಕಷ್ಟ ಸುಖ ಹೇಳಿಕೊಳ್ಳಲು, ಮಾತನಾಡಿ ಕೆಲಸ ಹಗುರ ಮಾಡಿಕೊಳ್ಳಲು ಕೇಳುವ ಯಾವುದೇ ಕಿವಿಗಳು ಸಮುದ್ರದ ಮಧ್ಯಭಾಗದಲ್ಲಿ ಸಿಗಲಾರದು. ದಿನವಿಡೀ ಕೂತು ಕೈ ಕಾಲು ಸೊಂಟ ಹಿಡಿದುಕೊಂಡ ಹಾಗೆ ಅನ್ನಿಸಿದರೂ ನಿಂತುಕೊಳ್ಳುವ ಹಾಗಿಲ್ಲ. ನಿಂತರೆ ಮಗುಚಿ ಬೀಳುತ್ತದೆ. ಮೂತ್ರ ಬಂದರೂ ಮಾಡಲಾಗದ ಸ್ಥಿತಿ.
ಒಲ್ಲದ ಮನಸ್ಸಿನವನಾದರೆ ಒಂದು ರೀತಿಯ ಸೆರೆಮನೆವಾಸದ ಅನುಭವ. ಬಂಧನವೆಂದರೆ ಏನೆಂದು ದರ್ಶನ ಮಾಡಿಸುವ ಕಸುಬು ಎನ್ನಬಹುದು. ಆದರೆ ನೀವೇನಾದರು ನಮ್ಮ ಕರಾವಳಿಯಲ್ಲಿ ಮರ್ಗಿ ಮೀನುಗಾರನೊಬ್ಬ ಮಾತಿಗೆ ಸಿಕ್ಕರೆ ಮಾತನಾಡಿಸಿ ನೋಡಿ. ಈ ಕಸುಬಿನಷ್ಟು ಸುಖದ ಕಸುಬು ಯಾವುದೂ ಇಲ್ಲ ಅಂತಾನೆ. ಬೇರೆ ಕಸುಬಿನಲ್ಲಿ, ಸಿಕ್ಕರೆ ಗಂಟು, ಸಿಗದಿದ್ದರೆ ಖಾಲಿ ಕೈ. ಆದರೆ ಮರ್ಗಿಯಲ್ಲಿ ಹೋಗುವ ಮೊದಲು ಒಲೆ ಮೇಲೆ ಅನ್ನಕ್ಕೆ ನೀರು ಇಟ್ಟು ಹೋಗಬಹುದು ಅನ್ನುತ್ತಾನೆ. ಅಂದರೆ ಒಂದು ಹೊತ್ತಿನ ಊಟಕ್ಕೆ ಚಿಂತಿಸಬೇಕಾಗಿಲ್ಲ. ತುಂಬಾ ಕಷ್ಟದ ಕೆಲಸವಲ್ಲವೇ? ಎಂದು ಕೇಳಿದರೆ ” ಕಷ್ಟವಿಲ್ಲದ ಕೆಲಸ ಯಾವುದಿದೆ? ಇಷ್ಟ ಪಟ್ಟು ಕೆಲಸ ಮಾಡಿದರೆ, ಕಷ್ಟದಲ್ಲೂ ಸುಖ ಕಾಣಬಹುದು” ಎಂಬ ತಾತ್ತ್ವಿಕ ಉತ್ತರವನ್ನು ನೀಡುತ್ತಾನೆ. ಹೌದು ಸ್ನೇಹಿತರೆ, ನಾವು ನಮಗಿಂತ ಮೇಲಿನ ಕೆಲಸದಲ್ಲಿರುವವನ್ನು, ಹೆಚ್ಚು ಸಂಬಳ ಪಡೆಯುವವನನ್ನು ನೋಡಿ, ನನಗೆ ಇಂತಹ ಕೆಲಸ ಸಿಗಲಿಲ್ಲ ಎಂದು ಹಲುಬುತ್ತೇವೆ. ಮರ್ಗಿ ಕಸುಬಿನಂತಹ ಸಾಹಸಮಯ ಕೆಲಸ ಮಾಡುವ ಎಷ್ಟೋ ಜನರು ತಮ್ಮ ಕೆಲಸದ ಬಗ್ಗೆ ಹೊಂದಿರುವ ಪ್ರೀತಿ, ಸಿಕ್ಕಿದ್ದನ್ನೇ ಪರಮ ಪ್ರಸಾದವೆಂದು ಭಾವಿಸಿ ದುಡಿಯುವ ಅದೆಷ್ಟೋ ಮಂದಿ, ನಮಗೆಲ್ಲ ಮಾದರಿಯಲ್ಲವೇ?
ನಾಗರಾಜ ಖಾರ್ವಿ ಕಂಚುಗೋಡು