ಕಂಚುಗೋಡು: ಮೀನುಗಾರಿಕೆಗೆ ತೆರಳಿದ್ದ ಎರಡು ನಾಡದೋಣಿಗಳು ಭಾರಿ ಗಾಳಿ ಮಳೆಯ ರಭಸದ ಪರಿಣಾಮ ಭಾನುವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ಕಂಚುಗೋಡು ಹಾಗೂ ತ್ರಾಸಿ ಹೊಸಪೇಟೆ ಸಮೀಪದ ಕಡಲಿನಲ್ಲಿ ಮಗುಚಿ ಬಿದ್ದಿವೆ. ಎರಡು ದೋಣಿಯಲ್ಲಿದ್ದ ಆರು ಮೀನುಗಾರರನ್ನು ಪಕ್ಕದ ದೋಣಿಯವರು ಬಂದು ರಕ್ಷಿಸಿದ್ದಾರೆ.
ರಾಮ ಖಾರ್ವಿ ಅವರ ಓಂಕಾರ ಪ್ರಸನ್ನ ದೋಣಿಯಲ್ಲಿ ಮೂವರು ಮೀನುಗಾರಿಕೆಗೆ ತೆರಳಿದ್ದರು. ಬೆಳಗ್ಗೆ 8 ಗಂಟೆ ಸುಮಾರಿಗೆ ಭಾರೀ ಗಾಳಿ ಮಳೆ ಮತ್ತು ಅಲೆಗಳ ಹೊಡೆತದಿಂದ ದೋಣಿಯು ಕಂಚುಗೋಡು ಕಿನಾರೆ ಸಮೀಪ ಸಮುದ್ರದಲ್ಲಿ ಮಗುಚಿ ಬಿದ್ದಿದೆ. ದೋಣಿ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು ಸುಮಾರು ಐದಾರು ದೋಣಿಗಳು ಹುಡುಕಾಟದಲ್ಲಿ ನಿರತರಾಗಿದ್ದಾರೂ ಯಾವುದೇ ಸುಳಿವು ಸಿಕ್ಕಿಲ್ಲ, ಮೂವರು ಮೀನುಗಾರರನ್ನು ಬೇರೆ ದೋಣಿಗಳಲ್ಲಿದ್ದ ಮೀನುಗಾರರು ರಕ್ಷಿಸಿ, ದಡ ಸೇರಿಸಿದ್ದಾರೆ. ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ನಿವಾಸಿ ರಾಮ ಖಾರ್ವಿ (65), ನಾಗರಾಜ ಖಾರ್ವಿ (38) ಮತ್ತು ವಿನಯ ಖಾರ್ವಿ (30) ರಕ್ಷಿಸಲ್ಪಟ್ಟ ಮೀನುಗಾರರಾಗಿದ್ದಾರೆ.
ದೋಣಿ ಇಂಜಿನ್ ಬಲೆ ಇನ್ನಿತರ ವಸ್ತುಗಳು ಮತ್ತು ದೋಣಿ ಸಂಪೂರ್ಣ ಮುಳುಗಿ ನೀರಿನೊಳಗೆ ಹೋಗಿರುವುದರಿಂದ ಸರಿ ಸುಮಾರು ಐದಾರು ಲಕ್ಷ ನಷ್ಟ ಆಗಿರಬಹುದೆಂದು ಅಂದಾಜಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ತ್ರಾಸಿ ಹೊಸಪೇಟೆ ಸಮೀಪದ ಕಡಲಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ತ್ರಾಸಿ ಹೊಸಪೇಟೆ ಗ್ರಾಮದ ನಾಗ ಖಾರ್ವಿ ಅವರ ಶ್ರೀ ಯಕ್ಷೇಶ್ವರಿ ಅನುಗ್ರಹ ಎಂಬ ನಾಡದೋಣಿ ಬೆಳಗ್ಗೆ 7.30ರ ಸುಮಾರಿಗೆ ಭಾರಿ ಗಾಳಿ ಮಳೆ ಮತ್ತು ಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿ ಬಿದ್ದಿದೆ. ದೋಣಿಯಲ್ಲಿದ್ದ ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಹೊಸಪೇಟೆ ನಿವಾಸಿ ನಾಗ ಖಾರ್ವಿ (54), ಹೊಸಾಡು ಗ್ರಾಮದ ಭಗತ್ ನಗರ ನಿವಾಸಿ ನಿತ್ಯಾನಂತ ಖಾರ್ವಿ (47) ಮತ್ತು ಗುಜ್ಜಾಡಿ ಗ್ರಾಮದ ರೋಶನ್ (37) ಅವರನ್ನು ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರು ರಕ್ಷಿಸಿದ್ದಾರೆ. ದೋಣಿ, ಇಂಜಿನ್, ಬಲೆ ಹಾಗೂ ಇನ್ನಿತರ ವಸ್ತುಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು ಸುಮಾರು 3 ಲಕ್ಷ ರೂ. ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ.
ವರದಿ: ಹೆಬ್ಬುಲಿ ರಮ್ಮಿ