ಪ್ರತಿಯೊಂದು ಕ್ಷೇತ್ರದಲ್ಲೂ , ಪ್ರತಿಯೊಂದು ಉದ್ಯೋಗದಲ್ಲೂ ರಿಸ್ಕ್ ಇದೆ, ಒತ್ತಡವೂ ಇದೆ. ಆದರೆ ಆ ರಿಸ್ಕ್, ಒತ್ತಡಗಳನ್ನೆಲ್ಲಾ ತಮ್ಮ ಮನೋಬಲ ಕಾರ್ಯ ತತ್ಪರತೆಯಿಂದ ಮೆಟ್ಟಿ ನಿಂತು ಯಶಸ್ವಿಯಾಗಿ ಜನಮನ್ನಣೆ ಗಳಿಸುತ್ತಾರೆ. ಅಂತವರ ಜೀವನದ ಸಾಧನೆಗಳು, ಕರ್ತವ್ಯ ತತ್ಪರತೆ ಇತರರಿಗೂ ಮಾದರಿಯಾಗುತ್ತದೆ. ಸಾರ್ವಜನಿಕ ಕ್ಷೇತ್ರಕ್ಕೆ ಅತಿ ಹತ್ತಿರವಾದ ಸದಾಕಾಲ ಒತ್ತಡದಲ್ಲೇ ಕಾರ್ಯ ನಿರ್ವಹಣೆ ಮಾಡುವ ಪೋಲೀಸ್ ಉದ್ಯೋಗದಲ್ಲಿ ಸರ್ವರಿಂದಲೂ ಸೈ ಎನಿಸಿಕೊಂಡ ಗೋಪಾಲ ಖಾರ್ವಿ ಎಂಬ ಎನರ್ಜೆಟಿಕ್ ಯಶಸ್ವಿ ವ್ಯಕ್ತಿತ್ವವೊಂದು ಕರ್ತವ್ಯ ನಿಷ್ಠೆಯ ಪ್ರತೀಕವಾಗಿ ನಮ್ಮೆದುರು ಹೀಗೆ ತೆರೆದುಕೊಳ್ಳುತ್ತದೆ.
ಕುಂದಾಪುರ ಖಾರ್ವಿಕೇರಿಯ ಬುದ್ಧ ಖಾರ್ವಿ ಮತ್ತು ಗಿರಿಜಾ ಖಾರ್ವಿ ಯವರ ಪುತ್ರನಾದ ಗೋಪಾಲ್ ಖಾರ್ವಿ ಯವರು 1997 ರಲ್ಲಿ ಪೋಲಿಸ್ ಕೆಲಸಕ್ಕೆ ನೇಮಕಗೊಂಡರು. ಗಂಗೊಳ್ಳಿ, ಕೊಲ್ಲೂರು, ಉಡುಪಿ ಕಾರ್ಕಳದ ಪೋಲೀಸ್ ಠಾಣೆಯಲ್ಲಿ ಟ್ರಾಫಿಕ್ ಪೋಲೀಸ್ ಆಗಿ ಕರ್ತವ್ಯ ನಿರ್ವಹಿಸಿದ ಗೋಪಾಲ್ ಖಾರ್ವಿ ಕಳೆದ 6 ವರ್ಷಗಳಿಂದ ಕುಂದಾಪುರ ಟ್ರಾಫಿಕ್ ಪೋಲಿಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೃಹತ್ ರೂಪದಲ್ಲಿ ಬೆಳೆಯುತ್ತಿರುವ ಕುಂದಾಪುರ ನಗರದ ಪ್ರಮುಖ ಪ್ರದೇಶಗಳಾದ ಶಾಸ್ತ್ರಿ ಪಾರ್ಕ್, ಹಳೆ ಬಸ್ ಸ್ಟ್ಯಾಂಡ್ ಪ್ರದೇಶದಲ್ಲಿ ಹೆಚ್ಚಾಗಿ ಟ್ರಾಫಿಕ್ ಪೋಲೀಸ್ ಆಗಿ ಕರ್ತವ್ಯ ನಿರ್ವಹಿಸುವ ಗೋಪಾಲ್ ಶಿಸ್ತಿನ ಸಿಪಾಯಿಯಾಗಿ ಮಾತ್ರವಲ್ಲ ಮಾನವೀಯ ಮೌಲ್ಯಗಳ ಸೇವಾಮನೋಭಾವದ ಕಾರಣದಿಂದ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಜನದಟ್ಟಣೆಯ ಕುಂದಾಪುರ ನಗರದ ಪ್ರಮುಖ ಪ್ರದೇಶಗಳಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳಿಗೆ ಸಾವಾಕಾಶವಾಗಿ ಸಾಗಲು ಅವಕಾಶ ಮಾಡಿಕೊಟ್ಟು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಾರೆ. ವಯೋವೃದ್ದರು ವಿಶೇಷ ಚೇತನರು, ಮಹಿಳೆಯರು ಮಕ್ಕಳು, ಅನಾರೋಗ್ಯ ಪೀಡಿತರು ಹೀಗೆ ಎಲ್ಲರನ್ನು ಜಾಗೂರಕತೆಯಿಂದ ರಸ್ತೆ ದಾಟಿಸುತ್ತಾರೆ.ಇವರ ಸೇವಾಮನೋಭಾವದ ಕರ್ತವ್ಯ ನಿಷ್ಠೆ ಗೆ ಕುಂದಾಪುರದ ನಾಗರಿಕರು ವಿಶೇಷ ಪ್ರೀತಿ ಗೌರವ ವ್ಯಕ್ತಪಡಿಸುತ್ತಾರೆ. ಒತ್ತಡದ ನಡುವೆಯೂ ನಗುಮೊಗದಿಂದ ಸಂಚಾರಿ ವ್ಯವಸ್ಥೆಯ ನಿಯಂತ್ರಣ ಮಾಡುವ ಗೋಪಾಲ ಖಾರ್ವಿಯವರಿಗೆ ಜನರು ಅಕ್ಕರೆಯಿಂದ ಸೆಲ್ಯೂಟ್ ಮಾಡುತ್ತಾರೆ. ಶಿಸ್ತಿನ ಸಿಪಾಯಿಯಾಗಿರುವ ಗೋಪಾಲ್ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ಪ್ರತಿಯೊಬ್ಬರಿಗೆ ಸಂಚಾರಿ ನಿಯಮದಂತೆ ದಂಡ ವಿಧಿಸಿ ಕ್ರಮ ಕೈಗೊಳ್ಳುತ್ತಾರೆ. ಇವರ ನಗುಮೊಗದ ಸೇವೆಯನ್ನು ಪುರಸ್ಕರಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನ ಮಾಡಿ ಗೌರವಿಸಿದೆ.
ಗೋಪಾಲ್ ಖಾರ್ವಿ ಯವರ ಪ್ರಾಮಾಣಿಕ, ದಕ್ಷ ಸೇವೆಗೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತದೆ. ಇದು ಕೊಂಕಣಿ ಖಾರ್ವಿ ಸಮಾಜ ಹೆಮ್ಮೆ ಪಡುವಂತಹ ಸಂತೋಷದ ಸಂಗತಿ. ಯಾವುದೇ ಕ್ಷೇತ್ರವಿರಲಿ ಶ್ರದ್ಧೆ ಪ್ರಾಮಾಣಿಕತೆ, ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದರೆ ಯಶಸ್ಸು, ಜನಪ್ರೀತಿ ಕಟ್ಟಿಟ್ಟ ಬುತ್ತಿ ಎನ್ನುವ ಮಾತಿಗೆ ಗೋಪಾಲ್ ಖಾರ್ವಿ ಯವರು ಉತ್ತಮ ನಿದರ್ಶನವಾಗುತ್ತಾರೆ. ಅತ್ಯಂತ ಒತ್ತಡದ ಟ್ರಾಫಿಕ್ ಪೋಲೀಸ್ ವೃತ್ತಿಯಲ್ಲಿ ಅಪರೂಪದ ಶ್ರೇಷ್ಠ ಸಾಧನೆ ಮಾಡಿರುವ ಗೋಪಾಲ್ ಖಾರ್ವಿ ಯವರಿಗೆ ಖಾರ್ವಿ ಆನ್ಲೈನ್ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಅವರು ಮತ್ತಷ್ಟು ಸಾಧನೆಯ ಉತ್ತುಂಗಕ್ಕೆ ಏರಲಿ ಎಂದು ಶುಭ ಹಾರೈಸುತ್ತೇನೆ.
ಸುಧಾಕರ್ ಖಾರ್ವಿ
Editor
www.kharvionline.com
ಜನಸ್ನೇಹಿ ಟ್ರಾಫಿಕ್ ಪೋಲೀಸ್ ಗೋಪಾಲ್ ಖಾರ್ವಿ ಯವರಿಗೆ ಪ್ರೀತಿಯ ವಂದನೆಗಳು. ಸಾವಿರಾರು ವಾಹನಗಳ ಸಂಚಾರ ನಿಯಂತ್ರಣದೊಂದಿಗೆ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ನಿಮ್ಮ ಚಾಕಚಕ್ಯತೆಯ ಕಾರ್ಯ ಶೀಲತೆಗೆ ಸಾವಿರದ ನಮನಗಳು. ಜನಮೆಚ್ಚುಗೆಯ ಸಾಧನೆಯ ಈ ಪಯಣ ಸಾಂಗವಾಗಿ ಮುನ್ನಡೆಯಲಿ ಎಂದು ಹಾರೈಸುತ್ತೇನೆ🙏🙏🙏🙏👌👌👌👋👋👋👋👋👋👋👍👍👍👍👌👍👋👋👌👍👋👋👋💐💐💐💐💐💐