ಮಳೆಗಾಲದ ನಿರ್ಬಂಧ ಮುಗಿದು ದೋಣಿಗಳು ಕಡಲಿಗೆ ಇಳಿದಿವೆ. ಬಹುದಿನಗಳ ಕಾಲ ಮೀನುಗಾರಿಕೆಯಿಲ್ಲದೆ ದಿನ ದೂಡುತ್ತಿದ್ದವರಿಗೆ ಈಗ ಮುಖದಲ್ಲಿ ಸಂತೋಷದ ರೇಖೆಗಳು ಮೂಡುತ್ತಿವೆ, ಅನ್ನುವಾಗಲೇ ಇನ್ನೊಂದು ಸಮಸ್ಯೆ ದೊಪ್ಪೆಂದು ಹೆಗಲೇರಿಕೊಂಡಿತು. ಯಾವ ಮೀನುಗಾರರಲ್ಲಿ ಕೇಳಿದರೂ “ಎಂತ ಮರ್ರೆ, ಸಮುದ್ರದಲ್ಲಿ ಬರೀ ಜಲ್ಲಿ ಫಿಶ್ … ಎಲ್ಲಿಂದ ಬಂತು ಮರ್ರೆ” ಎಂಬ ಉತ್ತರ ಸಿಗುತ್ತದೆ. ಫಿಶ್ ಸಿಕ್ರೆ ಖುಷಿ ಪಡಬೇಕು; ಇದೇನು ಇವರು ಬೇಸರ ವ್ಯಕ್ತಪಡಿಸ್ತಾರಲ್ಲ, ಎಂದು ನಿಮಗೆ ಅನ್ನಿಸಬಹುದು. ಜಲ್ಲಿ ಫಿಶ್ ಜೊತೆಗೆ ಫಿಶ್ ಎಂಬ ಪದ ಇದೆ ಎಂದ ಮಾತ್ರಕ್ಕೆ ಇದು ಮೀನಲ್ಲ. ಇದೊಂದು ವಿಭಿನ್ನವಾದ, ವಿಚಿತ್ರವಾದ ಜಲಚರವಂತೂ ಹೌದು. ಮೀನುಗಾರರು ಜಲ್ಲಿ ಫಿಶ್ ವಿಚಾರ ಬಂದಾಗ ಒಮ್ಮೆ ಬೆಚ್ಚಿ ಬೀಳೋದ್ಯಾಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ನಿಮ್ಮೆಲ್ಲ ಸಂದೇಹಗಳನ್ನು ಒಂದೊಂದಾಗಿ ನೋಡುತ್ತಾ ಹೋಗೋಣ.
ಈಗಾಗಲೆ ಹೇಳಿದಂತೆ ಜಲ್ ಫಿಶ್ ಒಂದು ಮೀನಲ್ಲ. ನೀರನ್ನು ಸೀಳಿಕೊಂಡು ಹೋಗಬಲ್ಲ ಮೀನಿನಂತಹ ರಚನೆಯ ದೇಹವೂ ಇಲ್ಲ; ದೇಹದ ಮಾಂಸಖಂಡಗಳು ಮೀನಿನಂತೆ ಗಟ್ಟಿಯಾಗಿ ಇಲ್ಲವೇ ಇಲ್ಲ. ಮಂದವಾಗಿರುವ ಸ್ನಿಗ್ಧ ದ್ರವದಂತೆ ಕಂಡು ಬರುವ ಇದು ಪಾರದರ್ಶನಕ ಜೀವಿ. ನೋಡಲು ಅಣಬೆಯಂತೆ ತಲೆಯ ಭಾಗವನ್ನು ಹೊಂದಿದ್ದು, ಬಾಲ ಉದ್ದ ಇರುತ್ತದೆ. ತಲೆಯ ಭಾಗವನ್ನು ಮುಚ್ಚುತ್ತಾ, ತೆರೆಯುತ್ತಾ ನೀರಿನಲ್ಲಿ ಮುಂದಕ್ಕೆ ಚಲಿಸುತ್ತವೆ. ಈ ತಲೆಯ ಭಾಗ ಅಪಾಯಕಾರಿಯಲ್ಲದಿದ್ದರೂ, ಅದರ ಬಾಲವನ್ನು ನಂಬಲಾಗದು. ದಾರದಂತಹ ಹಲವು ಎಳೆಗಳನ್ನು ಹೊಂದಿರುವ ಅದರ ಬಾಲ ನಮ್ಮ ಬರಿಮೈಗೆ ಒಮ್ಮೆ ಸೋಂಕಿದರೆ ಸಾಕು. ಮೈಯೆಲ್ಲ ಕೆಂಪು ಕೆಂಪಾಗಿ ಊದಿಕೊಂಡು ಬಿಡುತ್ತದೆ. ಬೆಂಕಿಯಲ್ಲಿ ಸುಟ್ಟಕೊಂಡ ಹಾಗೆ ಉರಿ ಉರಿ ಅನುಭವ. ನಮ್ಮ ಸೀ ಸ್ವಿಮ್ಮರ್ಸ್ ಬಳಗದವರು ಮಂಗಳೂರಿನ ತಣ್ಣೀರುಬಾವಿ ಸಮುದ್ರದಲ್ಲಿ ಈಜುವಾಗ ಕೆಲವರು ಇದರ ಬಾಲವನ್ನು ತಾಗಿಸಿಕೊಂಡವರಿದ್ದಾರೆ. ಹಾಗಂತ ಅಟ್ಟಿಸಿಕೊಂಡು ಬಂದು ದಾಳಿ ಮಾಡುವಷ್ಟು ವೇಗ ಇದಕ್ಕಿಲ್ಲ. ಮನುಷ್ಯನೂ ಸೇರಿದಂತೆ ಯಾವುದೇ ಮೀನುಗಳು ಅದರ ಹತ್ತಿರ ಸುಳಿದಾಗ ದಾಳಿ ಮಾಡಲು ಪ್ರಯತ್ನಿಸುತ್ತದೆ. ಸಣ್ಣ ಪುಟ್ಟ ಮೀನುಗಳು ಇವುಗಳ ಬಾಲಕ್ಕೆ ಸಿಕ್ಕಿ ಪ್ರಾಣ ಕಳೆದುಕೊಳ್ಳುತ್ತದೆ. ಕೆಲವೊಂದು ಜಾತಿಯ ಜಲ್ಲಿ ಫಿಶ್ ಗಳಂತೂ ತುಂಬಾ ವಿಷಕಾರಿಯಾಗಿದೆ. ಕೆಲವು ಬಾಲ ಇಲ್ಲದ ಜಲ್ಲಿ ಫಿಶ್ ವಿಷರಹಿತವೂ, ತುರಿಕೆ ರಹಿತವೂ ಆಗಿದೆ.
ಮೀನುಗಾರರು ಇದರ ಹೆಸರು ಕೇಳಿದರೆ ಹೆದರುತ್ತಾರೆ ಎಂದು ಲೇಖನದ ಆರಂಭದಲ್ಲಿ ಹೇಳಿದ್ದೆ. ಮೀನುಗಾರರು ಹೆದರುವುದು ಉರಿ ಊತ ತರಿಸುವ ಅದರ ಬಾಲಕ್ಕಲ್ಲ; ಬದಲಿಗೆ ಅದರ ಅಗಣಿತ ರಾಶಿ ಕಂಡು. ಹೌದು ಮೀನುಗಾರರು ಬಲೆ ಬೀಸಿ ಎಳೆದುಕೊಳ್ಳುವುದು ಅವರ ತೋಳ್ಬಲದಿಂದ. ಬಲೆ ಎಳೆದುಕೊಳ್ಳುವ ಆ ಮೂರ್ನಾಲ್ಕು ಗಂಟೆಗಳ ಕಾಲ ಮೈ ಮೇಲೆ ಭೂತ ಸಂಚಾರವಾದಂತೆ ಬಲ ಪ್ರದರ್ಶನ ಮಾಡಬೇಕು. ಪರಸ್ಪರರನ್ನು ಪ್ರೇರೇಪಿಸುತ್ತಾ, ಜನಪದ ” ಐ ಜೋಸ್” ಪದಗಳನ್ನು ಹೇಳುತ್ತಾ ಎಳೆದುಕೊಳ್ಳುತ್ತಾರೆ. ಜಲ್ಲಿ ಫಿಶ್ ಸಮುದ್ರದಲ್ಲಿ ರಾಶಿ ರಾಶಿ ತುಂಬಿರುವಾಗ, ಒಂದಿಂಚು ಬಲೆ ಎಳೆಯಬೇಕಾದರೂ ಬೆಟ್ಟದಷ್ಟು ಬಲ ಹಾಕಬೇಕಾಗುತ್ತದೆ. ಪ್ರಯೋಜನಕ್ಕೆ ಬಾರದ ಇದನ್ನು ನೋಡಿ, ಇರುವ ಉತ್ಸಾಹ ಕುಗ್ಗಿ ಹೋಗುತ್ತದೆ. ಬಲ ಹಾಕಿದಷ್ಟು ಇದರ ಭಾರ ಹೆಚ್ಚುತ್ತಾ ಹೋಗುತ್ತದೆ. ಬಲೆ ಮಗುಚಿ ಹಾಕಿ ಬಿಟ್ಟು ಬಿಡೋಣವೆಂದರೆ ಸಿಕ್ಕ ಸ್ವಲ್ಪ ಪ್ರಮಾಣದ ಮೀನು ಸಹ ಸಮುದ್ರ ಪಾಲಾಗುತ್ತದೆ. ಅಂತು ಇಂತು ಪೂರ್ತಿ ಬಲೆ ದೋಣಿಯೊಳಗೆ ಬರುವಾಗ ಪೂರ್ತಿಜೀವ ಬಾಯಿಗೆ ಬಂದ ಅನುಭವ. ಹಾಗಂತ ವರ್ಷಪೂರ್ತಿ ಇದರ ಉಪದ್ರವ ಇರುವುದಿಲ್ಲ. ಅರಬ್ಬಿ ಸಮುದ್ರದಲ್ಲಿ ಸುಮಾರು ಇಪ್ಪತ್ತು ಕಿ.ಮೀ.ವರೆಗೆ ಸಿಗುತ್ತವೆ. ಏಳೆಂಟು ಕೆ.ಜಿ. ತೂಗುವ ಈ ಜಲ್ಲಿ ಫಿಶ್ ನ ತಲೆಯ ಭಾಗವನ್ನು ಕೈ ಬೆರಳು ಕಂತುವಂತೆ ಬಲೆಯಿಂದ ಹಿಡಿದು ಅನಾಯಾಸವಾಗಿ ಎತ್ತಿ ಬಿಸಾಡುತ್ತಾರೆ. ಹಾಗೆ ಬಿಸಾಡುವಾಗ ಅದರ ನೀರು ಕಣ್ಣಿಗೆ ಸಿಡಿಯಬಹುದು. ಆಗ ಯಮಯಾತನೆ ಅನುಭವಿಸಬೇಕು. ಕಣ್ಣು ತಿಕ್ಕಿಕೊಳ್ಳಬೇಕೆನ್ನುವಷ್ಟು ಉರಿ. ಅನುಭವಿಸಿದವರಿಗೆ ಅದರ ಊರಿಯ ನೋವು ಗೊತ್ತು. ಈ ಕಾರಣಕ್ಕಾಗಿ ಮೀನುಗಾರರು ಜಲ್ಲಿ ಫಿಶ್ ಕಂಡಾಗ ತುಂಬಾ ಹೆದರುತ್ತಾರೆ.
ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಕಂಡುಬರುವ ಜಲ್ಲಿ ಫಿಶ್ ಗಳು ಆಹಾರಕ್ಕಾಗಿ ಒಮ್ಮೊಮ್ಮೆ ದಡದ ಕಡೆ ಬರುತ್ತವೆ. ತೆರೆಗಳು ಹೆಚ್ಚಿರುವ ದಡದ ಕಡೆ ಬರಲಾರವು. ಏಕೆಂದರೆ ತೆರೆಯ ಹೊಡೆತಕ್ಕೆ ಅದರ ದೇಹ ಛಿದ್ರವಾಗಿ ಹೋಗುವ ಹೆದರಿಕೆ ಅವಕ್ಕೂ ಇದೆ. ಆದರೆ ಈಜುಗಾರರು ಈಜುವ ಸ್ಥಳಗಳಲ್ಲಿ ಒಮ್ಮೊಮ್ಮೆ ಬಂದು ಭಯಭೀತಗೊಳಿಸುತ್ತದೆ. ಒಮ್ಮೆ ಅದರ ಬಾಲವನ್ನು ಸೋಂಕಿಕೊಂಡವರು ಸಮುದ್ರದ ಕಡೆ ತಲೆಹಾಕಿಯೂ ಮಲಗಲಾರರು. ಸಮುದ್ರಕ್ಕೆ ಇಳಿಯುವ ಮುನ್ನ ಮೈಗೆ ತೆಂಗಿನ ಎಣ್ಣೆಯನ್ನು ಲಘುವಾಗಿ ಹಚ್ಚಿಕೊಂಡು ಹೋದರೆ, ಜಲ್ಲಿ ಫಿಶ್ ಸೋಂಕಿದರೂ ಏನೂ ಆಗದು. ಈಜುವಾಗ ಒಂದೋ ಎರಡೋ ಸಮೀಪದಲ್ಲಿದ್ದರೆ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬಹುದು. ಆದರೆ ದೊಡ್ಡ ಗುಂಪಿನ ಮಧ್ಯದಲ್ಲಿ ನಾವು ಸಿಕ್ಕಿ ಹಾಕಿಕೊಂಡರೆ ತುಂಬಾ ಕಷ್ಟ.
ಜಗತ್ತಿನ ಎಲ್ಲಾ ಸಮುದ್ರಗಳಲ್ಲೂ ಜಲ್ಲಿಫಿಶ್ನ್ನು ಕಾಣಬಹುದು. ದ್ರಾಕ್ಷಿಯಷ್ಟು ಚಿಕ್ಕದಾದ, ಬಾಲ ಇಲ್ಲದ, ವಿಷರಹಿತವಾದ, ಗೋಲಾಕಾರದ ಜಲ್ಲಿಫಿಶ್ನಿದ ಹಿಡಿದು, ಮನುಷ್ಯರಷ್ಟು ದೊಡ್ಡ ಗಾತ್ರದ ಜಲ್ಲಿ ಫಿಶ್ಗಳೂ ಇವೆ. ಕೆಲವು ಜಾತಿಯ ವಿಷರಹಿತ ಜಲ್ಲಿಫಿಶ್ಗಳನ್ನು ಚೀನಾದವರು ಒಣಗಿಸಿ ತಿನ್ನುತ್ತಾರೆ. ಅವರು ತಿನ್ನದ ಜೀವಿ ಯಾವುದಿದೆ ಎಂದು ನೀವು ಒಳಗೊಳಗೆ ನಗುತ್ತಿದ್ದೀರೆಂದು ಗೊತ್ತು. ತಿನ್ನಬಾರದನ್ನೆಲ್ಲ ತಿಂದು, ಕೇಳರಿಯದ ರೋಗಗಳನ್ನು ಜಗತ್ತಿಗೆ ಹರಡುತ್ತಿರುವವರು ಇವರೇ ಅಲ್ಲವೆ. ಆದರೆ ಕರ್ನಾಟಕವೂ ಸೇರಿದಂತೆ ಭಾರತದ ಯಾವ ರಾಜ್ಯಗಳಲ್ಲೂ ಇದನ್ನು ಯಾರೂ ಆಹಾರವಾಗಿ ಬಳಸುವುದಿಲ್ಲ.
ಹಿಂದೊಮ್ಮೆ ಪಲ್ಗುಣಿ ನದಿಯಲ್ಲಿ ಜೆಲ್ಲಿಫಿಶ್ ಹೆಚ್ಚಳವಾಗುತ್ತಿದೆ ಎಂಬ ಕೂಗು ಕೇಳಿಬಂದಿತ್ತು. ನದಿಯಲ್ಲಿ ಕಂಡುಬಂದ ಇವುಗಳು ನಿಜವಾಗಿಯೂ ನದಿಯ ಜಲ್ಲಿಫಿಶ್ ಗಳಲ್ಲ. ಆಹಾರ ಹುಡುಕಿಕೊಂಡು ಬಂದವುಗಳು ನೇರವಾಗಿ ಅಳಿವೆಯ ಮೂಲಕ ನದಿಯನ್ನು ಪ್ರವೇಶ ಮಾಡುವವು. ಭರತದ ಉಪ್ಪು ನೀರು ನದಿಯ ಎಷ್ಟು ಕಿಮೀ ದೂರದವರೆಗೆ ಹರಿಯುವುದೋ ಅಷ್ಟು ದೂರದವರೆಗೆ ಅವುಗಳು ಸಂಚರಿಸುತ್ತವೆ. ನೀರು ಉಪ್ಪಿರುವಷ್ಟು ಕಾಲ ಅಲ್ಲೇ ಉಳಿದುಬಿಡಬಹುದು. ಹೀಗೆ ಬಂದ ಜಲ್ಲಿ ಫಿಶ್ ನದಿಯ ಮೀನುಗಾರರ ನಿದ್ದೆಯನ್ನು ಸೆಳೆದಿದ್ದು ಸುಳ್ಳಲ್ಲ.
ಕೆಲವೊಂದು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಜಲ್ಲಿಫಿಶ್ನ ಅರಿವಿಲ್ಲದೆ ಅದರ ಬಾಲ ಮೈಗೆ ತಾಗಿಸಿಕೊಂಡು ಒದ್ದಾಡಿದ್ದೂ ಇದೆ. ಎಲ್ಲಾ ಬೀಚ್ ಗಳಲ್ಲಿ ಇರುವ ಜೀವ ರಕ್ಷಕ ದಳದವರು ಚಳಿಗಾಲದ ಸಮಯದಲ್ಲಿ ಪ್ರವಾಸಿಗರಿಗೆ ಸ್ವಲ್ಪ ಮಟ್ಟಿಗೆ ಮಾಹಿತಿ ನೀಡಿದರೆ, ಅದರ ದಾಳಿಗೆ ಒಳಗಾಗುವವರ ಸಂಖ್ಯೆ ಕಡಿಮೆ ಮಾಡಬಹುದು. ಅದರ ಬಾಲ ನಮ್ಮ ಬರಿಮೈಗೆ ಸೋಂಕಿದಾಗ ಬ್ಲೇಡ್ ನಿಂದ ಗೀರಿದಂತೆ ಗಾಯಗಳು ಬೀಳುತ್ತವೆ. ತತ್ಕ್ಷಣ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆ ಇರಬೇಕು.
ಸಮುದ್ರವೂ ಸೇರಿದಂತೆ ಭೂಮಿಯ ತುಂಬೆಲ್ಲ ಮನುಷ್ಯನ ಕೆಲವು ವಿಕೃತ ಚಟುವಟಿಕೆಗಳು ಜಲಸಂಕುಲ ಮತ್ತು ಪ್ರಾಣಿ-ಪಕ್ಷಿಗಳಿಗೆ ತುಂಬಾ ಸವಾಲುಗಳನ್ನು ಒಡ್ಡಿವೆ. ಅವುಗಳ ಆವಾಸಸ್ಥಾನಗಳಲ್ಲಿ ನಾವು ಹೋಗಿ ನೆಲೆ ನಿಂತಾಗ, ಅವುಗಳು ನಮ್ಮ ವಾಸಸ್ಥಾನಕ್ಕೆ ಬರುತ್ತವೆ. ಅತಿಯಾದ ಮಾಲಿನ್ಯ, ಅತಿಯಾದ ತ್ಯಾಜ್ಯ ಹೊರಹಾಕುವಿಕೆಯಿಂದ ಮುಂದೆ ಇನ್ನಷ್ಟು ಸಮಸ್ಯೆಗಳಿಗೆ ನಾವು ಎದೆಯೊಡ್ಡಲೇ ಬೇಕಾಗುತ್ತದೆ. ಮಾಡಿದುಣ್ಣೋ ಮಹಾರಾಯ…ಎಂಬ ಗಾದೆ ಮನುಷ್ಯನಿಗೇ ಹೇಳಿ ಮಾಡಿಸಿದಂತಿದೆ.
ನಾಗರಾಜ ಖಾರ್ವಿ ಕಂಚುಗೋಡು