ನೆಟ್‌ವರ್ಕ್‌ ಸಮಸ್ಯೆಗೆ ಪರಿಹಾರ ಕಂಡುಕೊಂಡ ಹಳ್ಳಿಹೊಳೆ ಗ್ರಾಮಸ್ಥರು

ಕುಂದಾಪುರ: ನೆಟ್‌ವರ್ಕ್‌ ಸಮಸ್ಯೆಯನ್ನು ಎದುರಿಸುತ್ತಿರುವ ಪ್ರಮುಖ ಊರು ಗಳಲ್ಲಿ ಹಳ್ಳಿಹೊಳೆ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ನೆಟ್‌ವರ್ಕ್‌ಗಾಗಿ ಜನ ಆ ಊರು ಬಿಟ್ಟು, ಬೇರೆ ಊರಿಗೆ ಬರಬೇಕಾದ ಸ್ಥಿತಿಯಿದೆ. ಆನ್‌ಲೈನ್‌ ತರಗತಿ, ವರ್ಕ್‌ ಫ್ರಂ ಹೋಂನವರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದರು. ಆದರೆ ಈಗ ಆ ಸಮಸ್ಯೆಗೆ ಊರವರೇ ಪರಿಹಾರ ಕಂಡುಕೊಂಡಿದ್ದಾರೆ.

ಬಿಎಸ್ಸೆನ್ನೆಲ್‌ನವರ ಸಹ ಕಾರದೊಂದಿಗೆ 10-12 ಮಂದಿ ಉತ್ಸಾಹಿ ಯುವಕರ ತಂಡ ಹಾಗೂ ಊರ ಪ್ರಮುಖರ ನೆರವಿನೊಂದಿಗೆ ಬಿಎಸ್ಸೆನ್ನೆಲ್‌ ಅಧೀನದ ಏರ್‌ ಫೈಬರ್‌ ಸಿಸ್ಟಂ ಅನ್ನು ಅಳವಡಿಸಿಕೊಳ್ಳುವ ಮೂಲಕ ಹಳ್ಳಿಹೊಳೆ ಗ್ರಾಮಸ್ಥರು ನೆಟ್‌ವರ್ಕ್‌ ಸಮಸ್ಯೆಗೆ ಪರಿಹಾರವನ್ನು  ಕಂಡುಕೊಂಡಿದ್ದಾರೆ.  ಇದರಿಂದಾಗಿ  ವರ್ಕ್‌ ಫ್ರಂ ಹೋಂ, ಆನ್‌ಲೈನ್‌ ತರಗತಿಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗುತ್ತಿದೆ.

ಎಲ್ಲೆಲ್ಲ ಅಳವಡಿಕೆ :

ಈಗಾಗಲೇ ಹಳ್ಳಿಹೊಳೆಯ 23 ಮನೆಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಇದರಿಂದ 100ಕ್ಕೂ ಮಿಕ್ಕಿ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರಮುಖವಾಗಿ ಗ್ರಾಮದ ಚಕ್ರಾ ಮೈದಾನ,  ದೇವರಬಾಳು, ಕಮ್ಮರಪಾಲು, ಹಳ್ಳಿಬೈಲು ಊರುಗಳಲ್ಲಿ  ಅಳವಡಿಸಲಾಗಿದೆ. ಅನೇಕ ಮಂದಿ ಬೇಡಿಕೆ ಸಲ್ಲಿಸಿದ್ದು, ಹಂತ-ಹಂತವಾಗಿ ಅಳವಡಿಕೆ ಪ್ರಕ್ರಿಯೆ ನಡೆಯುತ್ತಿದೆ.

ಕಾರ್ಯ ಹೇಗೆ? :

ಕೇಂದ್ರ ಸರಕಾರ ಭಾರತ್‌ ಏರ್‌ ಫೈಬರ್‌ ಮೂಲಕ ಹೈಸ್ಪೀಡ್‌ ನೆಟ್‌ವರ್ಕ್‌ ಸಂಪರ್ಕ ಪಡೆಯುವ ವ್ಯವಸ್ಥೆಯನ್ನು  ಜಾರಿಗೊಳಿಸಿದೆ. ಏರ್‌ನೆಟ್‌ ವರ್ಕ್‌ ಅಂದರೆ ಅದಕ್ಕೆ ಕೇಬಲ್‌, ಬ್ರಾಡ್‌ ಬ್ಯಾಂಡ್‌, ಒಎಫ್‌ಸಿ ಇಲ್ಲದ ಸಂಪರ್ಕ. ಲೈನ್‌ಆಫ್‌ ಸೈಟ್‌ ಕಾನ್ಸೆಫ್ಟ್‌ ಮೂಲಕ ಸಂಪರ್ಕ  ಪಡೆಯುವ ವಿಧಾನವಿದು. ಕರೆಂಟ್‌ ಹೋದರೂ ಯುಪಿಎಸ್‌ನಿಂದಾಗಿ ಸಮಸ್ಯೆಯಾಗುವುದಿಲ್ಲ.

ಅನೇಕರ ಸಹಕಾರ :

ಏರ್‌ಫೈಬರ್‌ ಅಳವಡಿಕೆಗೆ ಬೇಕಾದಷ್ಟು ಗ್ರಾಹಕರಲ್ಲಿ ಹಣಕಾಸಿನ  ಸಮಸ್ಯೆ ಇದ್ದುದರಿಂದ  ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದವರು ಪ್ರಮುಖವಾಗಿ ಆರ್ಥಿಕ ನೆರವು ನೀಡಿದ್ದು, ಇವರಲ್ಲದೆ ಊರ ಪ್ರಮುಖರಾದ ಕೃಷ್ಣಾನಂದ ಚಾತ್ರ, ಹಳ್ಳಿಹೊಳೆ ಗ್ರಾ.ಪಂ. ಮಾಜಿ ಸದಸ್ಯ ದಿನೇಶ್‌ ಯಡಿಯಾಳ, ಶಿವರಾಮ ಪೂಜಾರಿ, ಮುರಳಿ ಎಡಿಯಾಳ, ಟೆಕ್ನೀಶಿಯನ್‌ ಜಗದೀಶ್‌, ಶ್ರೀಹರ್ಷ ಯಡಿಯಾಳ ಏರ್‌ಫೈಬರ್‌ ಅಳವಡಿಕೆಗೆ ಸಹಕರಿಸಿದ್ದಾರೆ.

Leave a Reply

Your email address will not be published. Required fields are marked *