ಸಕಲ ವರದಾಯಕ ಉದ್ಬವ ಗಣಪತಿ ದೇವಸ್ಥಾನ ನುಕ್ಯಾಡಿ ಅಂಪಾರು ಕುಂದಾಪುರ

ಕುಂದಾಪುರ ಹತ್ತು ಹಲವು ಪುಣ್ಯ ಕ್ಷೇತ್ರಗಳ ತವರೂರು. ಪುಣ್ಯ ಪ್ರದವಾದ ಪವಿತ್ರ ಧಾರ್ಮಿಕ ಕ್ಷೇತ್ರಗಳು ಕುಂದಾಪುರದ ಕೀರ್ತಿಯನ್ನು ಶ್ರೇಷ್ಠತೆಯಲ್ಲಿ ಸಂಪನ್ನಗೊಳಿಸಿದೆ. ಕುಂದಾಪುರ ತಾಲೂಕಿನಲ್ಲಿ ಮುಖ್ಯ ವಾಗಿ ಆನೆಗುಡ್ಡೆ ಕುಂಭಾಶಿ ಗಣಪತಿ ದೇಗುಲ, ಹಟ್ಟಿಯಂಗಡಿ ಗಣಪತಿ ದೇಗುಲಗಳು ನಮ್ಮ ಕಣ್ಣೆದುರು ವಿರಾಜಮಾನರಾಗಿ ಕಂಗೊಳಿಸುತ್ತದೆ. ಆದರೆ ತೆರೆಮರೆಯಲ್ಲಿರುವ ಕೆಲವು ದೇಗುಲಗಳು ಈಗಷ್ಟೇ ಪ್ರಚಾರಕ್ಕೆ ಬರುತ್ತದೆ. ಇವುಗಳ ಪೈಕಿ ಬೆಟ್ಟದ ಮೇಲೆ ವಿಶಿಷ್ಟವಾಗಿ ಕಂಗೊಳಿಸುವ ಅಂಪಾರು ಗ್ರಾಮದ ನುಕ್ಯಾಡಿ ಗಣಪತಿ ದೇವಸ್ಥಾನ ಇತ್ತೀಚಿನ ದಿನಗಳಲ್ಲಿ ಕಾರಣಿಕ ಮಹಿಮೆಯಿಂದ ಹೆಚ್ಚು ಪ್ರಚಾರಕ್ಕೆ ಬರುತ್ತಿದೆ.

ಹಸಿರು ಕಾನನದ ಮಧ್ಯೆ ಎತ್ತರದ ಸ್ಥಳದಲ್ಲಿರುವ ನುಕ್ಯಾಡಿ ಗಣಪತಿ ಆಕರ್ಷಣೀಯ ಬಿಂದುವಾಗಿದ್ದಾನೆ. ಸ್ಥಳೀಯರ ಭಾಷೆಯಲ್ಲಿ ಗುಡ್ಡೆ ಗಣಪತಿ ದೇವಸ್ಥಾನವೆಂದು ಕರೆಯಲ್ಪಡುವ ಈ ದೇವಸ್ಥಾನವನ್ನು ನುಕ್ಯಾಡಿ ಉದ್ಬವ ಗಣಪತಿ ದೇವಸ್ಥಾನವೆಂದು ಸ್ಥಳ ನಾಮದೊಂದಿಗೆ ಕರೆಯುತ್ತಾರೆ. ಜನಜಂಗುಳಿಯಿಂದ ದೂರವಾಗಿ ಹಸಿರು ಕಾನನದ ಮಧ್ಯೆ ಸಮುದ್ರ ಮಟ್ಟದಿಂದ ಸುಮಾರು ಸಾವಿರದ ಇನ್ನೂರು ಅಡಿಗಳಷ್ಟು ಎತ್ತರದಲ್ಲಿ ಇರುವ ಈ ದೇಗುಲಕ್ಕೆ ತಲುಪಲು ಬೆಟ್ಟದಿಂದ ಅರ್ಧ ಕೀಮೀ ಹಿಂದೆ ಅಂಪಾರು ಕೊಂಡಳ್ಳಿ ಮಾರ್ಗವಾಗಿ ಉತ್ತಮ ರಸ್ತೆಯಿದ್ದು ಉಳಿದಂತೆ ಅರ್ಧ ಕೀಮಿ ಮಣ್ಣಿನ ರಸ್ತೆಯಿದ್ದು ವಾಹನಗಳಲ್ಲಿ ದೇಗುಲದ ತನಕ ಹೋಗಲು ಅಷ್ಟೇನು ಕಷ್ಟ ವಾಗುವುದಿಲ್ಲ.ಬಹುತೇಕ ಜನರು ಮಣ್ಣಿನ ರಸ್ತೆಯಲ್ಲಿ ಏರುಮುಖವಾಗಿರುವ ದಾರಿಯಲ್ಲಿ ದೇಗುಲಕ್ಕೆ ಸಾಗುತ್ತಾರೆ. ಈ ಮಣ್ಣಿನ ರಸ್ತೆಗೆ ತಾಗಿಕೊಂಡಂತೆ ಎಡಗಡೆಯಲ್ಲಿ ಬಂಡೆಕಲ್ಲಿನ ಹಾಸಿನ ನುಣುಪಾದ short cut ದಾರಿಯೂ ಚೆನ್ನಾಗಿದೆ.ಈ ಮೂಲಕ ನಡೆದುಕೊಂಡು ಹೋದರೆ ಪ್ರಯಾಸವಾಗದೇ ಬೇಗ ತಲುಪುವ ಅಂತರವೂ ಕಡಿಮೆಯಾಗುತ್ತದೆ.

ಕಾಲುದಾರಿಯಲ್ಲಿ ಕ್ರಮಿಸಿದರೆ ಖಂಡಿತವಾಗಿಯೂ ಚಾರಣದ ಅನುಭವವಾಗುತ್ತದೆ. ಬೆಟ್ಟವನ್ನೇರುತ್ತಾ ದೇಗುಲದ ಪರಿಸರಕ್ಕೆ ಬಂದಾಗ ಪ್ರಕೃತಿ ಮಾತೆ ಮೈಮನಗಳಿಗೆ ಚೈತನ್ಯ ತುಂಬಿ ಅಲ್ಲಿಯವರೆಗಿನ ಆಯಾಸ ಕಡಿಮೆ ಮಾಡುತ್ತಾಳೆ. ಬೆಟ್ಟದ ಮೇಲಿನಿಂದ ಪೂರ್ವ ದಿಕ್ಕಿನಲ್ಲಿ ಕಣ್ಣು ಹಾಯಿಸಿದರೆ ಬಾಳೆಬರೆ ಘಾಟಿ, ಕೊಡಚಾದ್ರಿ ಶಿಖರ ಕಣ್ಣಿಗೆ ರಾಚುತ್ತದೆ. ಇತ್ತ ಪಶ್ಚಿಮದಲ್ಲಿ ಕುಂದಾಪುರದವರೆಗಿನ ರಮಣೀಯ ದೃಶ್ಯ ಗಳು ಕಣ್ಮನ ಸೆಳೆಯುತ್ತದೆ. ಪೃಕೃತಿ ಮಾತೆ ಹಸಿರು ಚಾದರ ಹೊತ್ತು ಮಲಗಿದಂತೆ ಭಾಸವಾಗುತ್ತದೆ. ಸುತ್ತ ಮುತ್ತಲಿನ ಊರಿನ ಸೊಬಗು ವಿಹಂಗಮವಾಗಿರುತ್ತದೆ. ದೇಗುಲ ಪ್ರವೇಶಿಸುತ್ತಿದ್ದಂತೆ ಅಗಾಧ ಮೌನ ಗಂಟೆಯ ನಿನಾದ ಆಧ್ಯಾತ್ಮಿಕ ಪ್ರಪಂಚಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ.

ಈ ಪವಿತ್ರ ಸ್ಥಳಕ್ಕೆ ಹತ್ತಿರದಲ್ಲಿ ಪುರಾತನವಾದ ಗುಹೆಯಿದ್ದು, ಸುಮಾರು ಎಂಟು ನೂರು ವರ್ಷಗಳ ಹಿಂದೆ ಮತಂಗ ಮುನಿಯು ಈ ಗುಹೆಯಲ್ಲಿ ತಪಸ್ಸು ಮಾಡುತ್ತಿದ್ದರು. ಅವರು ಸಿದ್ದಿ ವಿನಾಯಕನ ಉದ್ಬವ ಮೂರ್ತಿ ಯನ್ನು ಪೂಜೆ ಮಾಡುತ್ತ ಬಂದರೆಂದೂ, ಅವರ ತಪಸ್ಸಿಗೆ ಒಲಿದ ವಿನಾಯಕ ಇಂದಿಗೂ ಭಕ್ತರನ್ನು ಪೊರೆಯುತ್ತಿದ್ದಾನೆ ಎಂಬ ಐತಿಹ್ಯ ವಿದೆ. ವಿನಾಯಕ ಮೂರ್ತಿಯ ಪಕ್ಕದಲ್ಲೇ ಎಂದಿಗೂ ಬತ್ತದ ಬಾವಿಯಿದೆ. ಅದರ ತೀರ್ಥದಿಂದಲೇ ಗಣಪತಿಗೆ ಪ್ರತಿನಿತ್ಯ ಅಭಿಷೇಕ ನಡೆಯುತ್ತದೆ. ಮದುವೆ, ಸಂತಾನ ಭಾಗ್ಯ, ಕರುಣಿಸುವ ದೇವರಾಗಿರುವ ಗಣಪತಿ ಸನ್ನಿಧಿಯಲ್ಲಿ ತ್ರಿಕಾಲ ಪೂಜೆ, ಗಣಹೋಮ,ಸಂಕ್ರಮಣ, ಸಂಕಷ್ಟ ಹರ ಚತುರ್ಥಿ ಸಹಿತ ಎಲ್ಲಾ ಸೇವೆಗಳು ಜರುಗುತ್ತದೆ. ಚೌತಿಯ ದಿನದಂದು ಸಹಸ್ರಾರು ಭಕ್ತಾದಿಗಳು ದೇವರ ದರ್ಶನ ಮಾಡಿ ಪುನೀತರಾಗುತ್ತಾರೆ.

ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಮಂಗಳಾರತಿ, ಹರಿವಾಣ ನೈವೇದ್ಯ, ಒಂದು ಮುಡಿ ಅಕ್ಕಿ ಕೊಟ್ಟೆ ಕಡುಬಿನ ಸೇವೆ ಇತ್ಯಾದಿ ಹರಕೆ ಸೇವೆಗಳನ್ನು ನೇರವೇರಿಸುತ್ತಾರೆ. ಶ್ರಾವಣ ಮಾಸದಲ್ಲಿ ವಿಶೇಷವಾಗಿ ಸೋಣೆ ಆರತಿ ನಡೆಯುತ್ತದೆ. ಈ ಪರಮ ಪವಿತ್ರ ಗಣಪತಿ ದೇಗುಲಕ್ಕೆ 2004 ರಲ್ಲಿ ನವಗರ್ಭಗುಡಿಯ ರಚನೆಯೊಂದಿಗೆ ಪುನರ್ ಪ್ರತಿಷ್ಠೆ ನಡೆದಿದೆ. ದೇಗುಲ ಸಂಪರ್ಕ ಕಲ್ಪಿಸುವ ಮಣ್ಣಿನ ಏರು ರಸ್ತೆಯು ಮಳೆಯ ದೆಸೆಯಿಂದ ಸ್ವಲ್ಪ ಮಟ್ಟಿಗೆ ಹಾನಿಗೊಳಗಾಗಿದ್ದುವಾಹನದಲ್ಲಿ ಮೇಲೆ ಏರಲು ಜಾಗ್ರತೆ ವಹಿಸಬೇಕು. ದೇವಸ್ಥಾನದ ಅಭಿವೃದ್ಧಿ ಕಾರ್ಯ ಗಳು ಬಹಳಷ್ಟು ಆಗಬೇಕಾಗಿದೆ. ರಸ್ತೆ ಸಂಪರ್ಕ ಸಹಿತ ಕೆಲವೊಂದು ವ್ಯವಸ್ಥೆಗಳು ಸಮರ್ಪಕವಾಗಿ ನಡೆದು ಅಭಿವೃದ್ಧಿ ಹೊಂದಿದರೆ ಉದ್ಬವ ಗಣಪತಿಯ ಈ ಪುಣ್ಯ ಸನ್ನಿಧಾನ ಕುಂದಾಪುರದ ಉಳಿದ ಗಣಪತಿ ದೇಗುಲಗಳಂತೆ ಪ್ರಸಿದ್ದಗೊಳ್ಳುತ್ತದೆ.

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *