ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ ಅಭಿಯಾನ

ಮರವಂತೆ ಕಡಲತೀರ ವಿಶ್ವ ವಿಖ್ಯಾತ ತಾಣವಾಗಿದ್ದು ಕರ್ನಾಟಕ ಕರಾವಳಿಯ ಸೌಂದರ್ಯದ ಖಣಿಯಾಗಿದೆ. ತ್ರಾಸಿ ಮರವಂತೆ ಗ್ರಾಮಕ್ಕೆ ಹೊಂದಿಕೊಂಡು ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನದಿ ಸಮುದ್ರಗಳ ನಡುವಿನ ಅಂತರ ಕೇವಲ ನೂರೈವತ್ತು ಮೀಟರ್ ಮಾತ್ರ. ಮರವಂತೆ ತ್ರಾಸಿ ಬೀಚಿನ ಉದ್ದ ಮೂರು ಕೀ ಮೀ ಆಗಿರುತ್ತದೆ. ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ಸೇತುವಾದ ಈ ರಸ್ತೆ ಅತ್ಯಂತ ಪ್ರಮುಖವಾಗಿರುತ್ತದೆ. ಇಲ್ಲಿ ಪ್ರತಿ ವರ್ಷ ಕಡಲಕೊರೆತ ಸಂಭವಿಸುತ್ತಿತ್ತು. ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರದ ಪೈಲೆಟ್ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲಾಯಿತು.

ಸುಸ್ಥಿರ ಕಡಲ ನಿರ್ವಹಣಾ ಯೋಜನೆಯಂತೆ ಕಡಲತೀರದ ಉದ್ದಕ್ಕೂ ಫ್ರಾನ್ಸ್ ಮಾದರಿಯ ಗ್ರಾಯಿನ್ ಟೆಟ್ರಾಪಾಡ್ ಮಾದರಿಯನ್ನು ರಚಿಸಲಾಯಿತು. ಇಲ್ಲಿ ಪ್ರತಿ 120 ಮೀಟರ್ ಅಂತರದಲ್ಲಿ 24 ಗ್ರಾಯಿನ್ ತಡೆಗೋಡೆ ನಿರ್ಮಿಸಲಾಗಿದೆ. ಸಮುದ್ರವು ಹೆದ್ದಾರಿಗೆ ನಿಕಟವಾಗಿರುವಲ್ಲಿ T ಮಾದರಿಯಲ್ಲಿ 9 ಗ್ರಾಯಿನ್ ತಡೆಗೋಡೆ ನಿರ್ಮಿಸಲಾಗಿದೆ. ಉಳಿದೆಡೆ I ಮಾದರಿಯಲ್ಲಿ ಗ್ರಾಯಿನ್ ತಡೆಗೋಡೆ ನಿರ್ಮಿಸಲಾಗಿದೆ. 9 ತಡೆಗೋಡೆಗಳ ಹೊರಭಾಗದಲ್ಲಿ ಟೆಟ್ರಾಪಾಡ್ ಗಳನ್ನು ರಕ್ಷಾ ಕವಚವನ್ನಾಗಿ ಬಳಸಿಕೊಳ್ಳಲಾಗಿದೆ. ನಕ್ಷತ್ರ ಮೀನುಗಳ ಆಕೃತಿಯಲ್ಲಿರುವ ಈ ಟೆಟ್ರಾಪಾಡ್ ಗಳು ಕಡಲ ಅಲೆಗಳ ವೇಗವನ್ನು ನಿಯಂತ್ರಿಸಿ ಕಡಲಕೊರೆತವನ್ನು ತಡೆಗಟ್ಟುತ್ತದೆ. ಇದರ ಪರಿಣಾಮವಾಗಿ ಇಂದು ಮರವಂತೆ ಕಡಲತೀರದಲ್ಲಿ ಕಡಲಕೊರೆತ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಪ್ರಪಂಚದ ಜನಸಂಖ್ಯೆಯ ಮೂರನೇ ಒಂದರಷ್ಟು ಕರಾವಳಿಗೆ ತೀರಾ ಹತ್ತಿರವಾಗಿ ವಾಸಿಸಿಕೊಂಡು ಬಂದಿರುತ್ತದೆ. ಮೀನುಗಾರರು ಸಮುದ್ರತೀರದ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದು ತಮಗೆ ಅನ್ನ ನೀಡುವ ಕಡಲಿನೊಂದಿಗೆ ಬದುಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಮತ್ತು ಇತರ ಮಾನವ ಚಟುವಟಿಕೆಗಳು ತಮ್ಮ ಸೂಕ್ತವಲ್ಲದ ತಾಂತ್ರಿಕತೆ ಮತ್ತು ತಾವುಂಟು ಮಾಡುವ ಮಾಲಿನ್ಯ ಗಳ ಮೂಲಕ ಸಾಗರ ಪರಿಸರ ವ್ಯವಸ್ಥೆಗಳನ್ನು ತೀವ್ರ ರೂಪದಲ್ಲಿ ಮಲಿನಗೊಳಿಸಿದೆ. ಅಪಾರ ಪ್ರಮಾಣದಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ವಸ್ತುಗಳು ಅಪಾರ ಪ್ರಮಾಣದಲ್ಲಿ ಕಡಲ ಒಡಲಲ್ಲಿ ಶೇಖರಣೆಗೊಳ್ಳುತ್ತಿದೆ. ಕಡಲ ಚಲಚರಗಳಲ್ಲಿ ಮುಖ್ಯ ವಾಗಿ ಆಮೆಗಳು ಈ ಪ್ಲಾಸ್ಟಿಕ್ ಗಳು ,ಬಾಟಲಿ ಗಳು, ಮತ್ತಿತರ ತ್ಯಾಜ್ಯ ವಸ್ತುಗಳನ್ನು ತಿಂದು ಸಾವಿಗೀಡಾಗುತ್ತದೆ. ಕಡಲದಂಡೆಯಲ್ಲಿ ಬಿಸಾಡುವ ಮಲಿನಕಾರಗಳು ಜಲಚರಗಳ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದ್ದು ಕಳೆದ ಎರಡು ವಾರಗಳ ಅಂತರದಲ್ಲಿ ಕಾರವಾರ ಕಡಲ ಕಿನಾರೆಯಲ್ಲಿ ಎರಡು ವಿಶಿಷ್ಟ ಪ್ರಭೇದದ ಬೃಹತ್ ಗಾತ್ರದ ಆಮೆಗಳ ಪ್ಲಾಸ್ಟಿಕ್ ತ್ಯಾಜ್ಯ ತಿಂದು ಸಾವೀಗೀಡಾಗಿದೆ. ವಿಷಕಾರಿ ಜಲ್ಲಿ ಫಿಶ್ ಗಳನ್ನು ಕಂಡ ಕಂಡಲ್ಲಿ ತಿಂದು ಅರಗಿಸಿಕೊಳ್ಳುವ ಆಮೆಗಳಿಗೆ ಮಾನವ ನಿರ್ಮಿತ ಪ್ಲಾಸ್ಟಿಕ್ ತ್ಯಾಜ್ಯ ಗಳು ಮೃತ್ಯು ಸ್ವರೂಪವಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ.

ಬೀಚ್ ಗಳಲ್ಲಿ ವಿಹರಿಸಲು ಬರುವವರು ತಿಂದು ಕುಡಿದು ಬಿಸಾಡುವ ಪ್ಲಾಸ್ಟಿಕ್ ತ್ಯಾಜ್ಯ ಗಳಿಂದ ಸಮುದ್ರ ಮಾಲಿನ್ಯ ಉಂಟಾಗುತ್ತಿದ್ದು ಮೀನುಗಾರರ ಬಲೆಗಳಿಗೆ ಮುಖ್ಯವಾಗಿ ಕೈರಂಪಣಿ ಬಲೆಗಳಲ್ಲಿ ಗುಟ್ಕಾ ಪ್ಯಾಕೇಟ್, ಪ್ಲಾಸ್ಟಿಕ್ ಬ್ಯಾಗ್ ಗಳು, ಬಾಟಲಿಗಳು ಮುಂತಾದ ತ್ಯಾಜ್ಯ ವಸ್ತು ಗಳೇ ಮೀನಿಗಿಂತ ಅಧಿಕ ಪ್ರಮಾಣದಲ್ಲಿ ರಾಶಿ ಬೀಳುತ್ತದೆ. ಇದು ಮೀನುಗಾರರ ಬದುಕಿಗೆ ತೀವ್ರ ಪೆಟ್ಟು ಕೊಟ್ಟಿದೆ. ಪ್ರತಿಯೊಂದು ಮಲಿನಕಾರಕ ವಸ್ತುವೂ ತನ್ನದೇ ಆದ ಮೂಲ, ನಿರ್ದಿಷ್ಟ ಪಥ ಮತ್ತು ಪರಿಣಾಮಗಳನ್ನು ಹೊಂದಿರುತ್ತದೆ. ಅವುಗಳು ಜಲದ ಮೂಲಕ ಜೀವಗೋಳ ವ್ಯಾಪಿಸುವ ಪರಿಣಾಮ ತೀವ್ರ ವಾಗಿರುತ್ತದೆ. ವಿದೇಶಗಳಲ್ಲಿ ಕಡಲತೀರದ ಸ್ವಚ್ಛತೆ ಅತ್ಯುತ್ತಮ ಮಟ್ಟದಲ್ಲಿದೆ. ಕಡಲತೀರದ ನಿರ್ವಹಣೆ ಮತ್ತು ಕಡಲಿನ ಸಂರಕ್ಷಣಾ ಕಾನೂನುಗಳು ಅಲ್ಲಿ ತುಂಬಾ ಕಠಿಣವಾಗಿದೆ. ಸಮುದ್ರ ಗಳು ಮನುಷ್ಯರ ಬದುಕಿನ ಜೀವ ಸಂಜೀವಿನಿ. ಮೊತ್ತ ಮೊದಲು ಜೀವಿ ಸೃಷ್ಟಿ ಯಾದ್ದು ಕೂಡಾ ಸಮುದ್ರ ದಲ್ಲೇ. ಸಮುದ್ರ ದಂಡೆಗಳನ್ನು ಸ್ವಚ್ಛ ವಾಗಿ ಕಾಪಾಡಲು ನಾವೆಲ್ಲರೂ ಕಂಕಣಬದ್ದರಾಗಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ.

ಇದೇ 18 ನೇ ತಾರೀಕು ಶನಿವಾರ ಬೆಳಿಗ್ಗೆ 8 ಗಂಟೆಗೆ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ಅಂಗವಾಗಿ ಕರಾವಳಿ ಕಾವಲು ಪೋಲೀಸ್ ಠಾಣೆ ಗಂಗೊಳ್ಳಿ, ಮೀನುಗಾರಿಕಾ ಇಲಾಖೆ ಗಂಗೊಳ್ಳಿ, Kharvionline.com, ಸಾಯಿ ಖುಷಿ ಸಂಸ್ಥೆ, Clean ತ್ರಾC-ಮರವಂತೆ Project ಹಾಗೂ ಲಯನ್ಸ್ ಕ್ಲಬ್ ತ್ರಾಸಿ-ಗಂಗೊಳ್ಳಿ

ಸಹಯೋಗದಲ್ಲಿ ಮರವಂತೆ ಬೀಚ್ ಸ್ವಚ್ಛತಾ ಕಾರ್ಯಕ್ರಮ ನಡೆಯಲ್ಲಿದ್ದು ಸರ್ವರೂ ಈ ಸಮಾಜಮುಖಿ ಸೇವಾ ಕೈಂಕರ್ಯ ದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೇಂದು ಕಳಕಳಿಯಿಂದ ಭಿನ್ನವಿಸಿಕೊಳ್ಳುತ್ತೇನೆ.

ಸುಧಾಕರ್ ಖಾರ್ವಿ
www.kharvionline.com

“ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ”

One thought on “ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ ಅಭಿಯಾನ

  1. Pls consider trasi maravanthe clean project team to your clean up drive. They also clean our beaches on every weekend.
    Thank you

Leave a Reply

Your email address will not be published. Required fields are marked *