ಆಮೆ ತನ್ನ ವಂಶವಳಿಯ ಬೆಳವಣಿಗೆಗೆ ಪೂರಕ ಎಂಬಂತೆ ಮೊಟ್ಟೆಯನ್ನು ಇಡುವ ಒಡಲಿನ ಕುಡಿಯ ತವರು ಹೆಸರು ಪಡೆದ ಧಾರೇಶ್ವರ ಕಡಲ ತೀರದಲ್ಲಿ ಸತ್ತ ಆಮೆ ಪತ್ತೆ...
ಹೊನ್ನಾವರ ತಾಲೂಕಿನ ಕಡಲತೀರಗಳಲ್ಲಿ ಸಂಭವಿಸುತ್ತಿರುವ ಕಡಲಾಮೆಗಳ ಸರಣಿ ಸಾವು ಪರಿಸರ ಪ್ರಿಯರ ಆತಂಕ, ಕಳವಳಕ್ಕೆ ಕಾರಣವಾಗಿದೆ. ಕಡಲಾಮೆಗಳು ತಮ್ಮ ವಂಶಾಭಿವೃದ್ದಿಯ ತವರಿನ ಆಸ್ತಿತ್ವವನ್ನು ಬಲಿದಾನಗಳ ಮೂಲಕ ಸಾಬೀತು ಪಡಿಸುತ್ತಿದೆ. ಕಾಸರಕೋಡಿನಲ್ಲಿ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತ ಬಳಿಕ ವ್ಯನ್ಯಜೀವಿಗಳ ಮತ್ತು ಜೀವವೈವಿಧ್ಯಗಳ ಸಂರಕ್ಷಣೆಯ ಹೊಣೆ ಹೊತ್ತ ಸಂಬಂಧಪಟ್ಟ ಇಲಾಖೆಯ ವರ್ತನೆ ಮತ್ತು ಕಾರ್ಯವೈಖರಿಯಲ್ಲಿ ಗಮನಾರ್ಹ ಬದಲಾವಣೆಗಳು ಕಂಡು ಬಂತು.
ಕಳೆದ ಹದಿನೈದು ವರ್ಷಗಳಿಂದ ಜೀವವೈವಿಧ್ಯತೆಯ ಸಂರಕ್ಷಣೆ ಕಾರ್ಯ ಸೂಚಿಯಂತೆ ಹೊನ್ನಾವರದ ತಾಲೂಕಿನ ಕಡಲತೀರದೂದ್ದಕ್ಕೂ ಜತನದಿಂದ ಆಮೆ ಸಂರಕ್ಷಣೆ ಮಾಡುತ್ತಾ ಬಂದ ಇಲಾಖೆಯ ಅಧಿಕಾರಿಗಳ ವರ್ತನೆಗಳು ಏಕಾಏಕಿ ಬದಲಾವಣೆಯಾಯಿತು. ಪ್ರತಿಬಾರಿಯೂ ಜೀವಂತ ಆಮೆಗಳ ಮೊಟ್ಟೆ ದೊರಕಿದಾಗ ಮತ್ತು ಮೃತಪಟ್ಟ ಸ್ಥಿತಿಯಲ್ಲಿ ಕಡಲಾಮೆಗಳು ಪತ್ತೆಯಾದಾಗ ಬೋರ್ ಹೊಡೆಸುವ ಗೊಣಗಾಟದಿಂದ ಕೂಡಿದ ತಳಬುಡವಿಲ್ಲದ ಮಾತುಗಳು ಕೇಳಿಬಂತು.
ಕಳೆದ ಬಾರಿ ಕಾಸರಕೋಡು ಟೊಂಕದಲ್ಲಿ ಕಡಲಾಮೆ ಮೊಟ್ಟೆಗಳು ಪತ್ತೆಯಾದಾಗ ವಸ್ತು ನಿಷ್ಠ ವರದಿ ಪ್ರಕಟಿಸಿದ ಪತ್ರಕರ್ತ ರೊಬ್ಬರ ಮೇಲೆ ಹರಿಹಾಯ್ದು ಕೊನೆಗೆ ಕ್ಷಮೆ ಕೇಳಿದ ಪ್ರಸಂಗವೂ ನಡೆದಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಪ್ರತಿನಿತ್ಯವೆಂಬಂತೆ ಕಡಲಾಮೆಗಳ ಮೃತಶರೀರ ಕಡಲಂಚಿನಲ್ಲಿ ಪತ್ತೆಯಾಗುತ್ತಿದೆ. ಹಾಗಾದ್ರೆ ಈ ಕಡಲಾಮೆಗಳು ಆಕಾಶದಿಂದ ಕೆಳಕ್ಕೆ ಬಿದ್ದಿರಬಹುದೇ? ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಕಾಡುತ್ತಿದೆ. ಏಲಿಯನ್ಸ್ ಗಳೇನಾದರೂ ಕಡಲಾಮೆಗಳನ್ನು ತಮ್ಮ ಲೋಕಕ್ಕೆ ಅಪಹರಿಸಿಕೊಂಡು ಹೋಗುವ ಭರದಲ್ಲಿ ಕಡಲಂಚಿನಲ್ಲಿ ಬಿದ್ದಿರಬಹುದೇ ಎಂಬ ಪ್ರಶ್ನೆಯೂ ಉದ್ಬವವಾಗುತ್ತದೆ.
ಇಲ್ಲಿಯೂ ನಮಗೆ ಕಡಲಾಮೆಗಳು ಏಕೆ ಸಾಯುತ್ತಿದೆ ಎಂಬ ಪ್ರಶ್ನೆಗೆ ಬೋರ್ ಹೊಡೆಸುವ ಗೊಣಗಾಟ ಮತ್ತು ಬೇಜವಾಬ್ದಾರಿ ಉತ್ತರಗಳೇ ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷರು ಉತ್ತರ ಕನ್ನಡ ಜಿಲ್ಲೆಯವರೇ ಇಷ್ಟೆಲ್ಲಾ ಜೀವವೈವಿಧ್ಯಗಳಿಗೆ ಹಾನಿಯಾಗುತ್ತಿರುವ ವಿದ್ಯಮಾನಗಳು ಸರಣಿಯಂತೆ ನಡೆಯುತ್ತಿದ್ದರೂ ಆ ಮಹಾನುಭಾವರು ಇತ್ತ ತಲೆಹಾಕಿಲ್ಲ ಎಂಬುದು ತುಂಬಾ ಬೇಸರದ ಸಂಗತಿ.
ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಜೀವವೈವಿಧ್ಯತೆಯ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವ ಶ್ರೀಯುತರನ್ನು ಕಾಸರಕೋಡು ಟೊಂಕಕ್ಕೆ ಬಾರದಂತೆ ತಡೆದ ಶಕ್ತಿ ಯಾವುದು? ತೆರೆಮರೆಯಲ್ಲಿ ಜಬ್ರ್ ದಸ್ತ್ ಆಟ ಆಟವಾಡುತ್ತಿರುವ ಆ ಶಕ್ತಿ ಗಳು ಒಂದಲ್ಲ ಒಂದು ದಿನ ಜನರ ಮುಂದೆ ಬೆತ್ತಲಾಗಲೇಬೇಕು. ಮಾನವರಾಗಿ ನಾವು ಜೀವವೈವಿಧ್ಯತೆಯ ಭಾಗವಾಗಿರುತ್ತೇವೆ. ಅದನ್ನು ಕಾಪಾಡಿಕೊಳ್ಳುವ ನಮ್ಮ ಜವಾಬ್ದಾರಿಯನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಾಗುತ್ತದೆ. ಜೀವವೈವಿಧ್ಯ ಗಳ ಸಂರಕ್ಷಣೆಯ ಸಾಂವಿಧಾನಿಕ ಹೊಣೆ ಹೊತ್ತವರು ಇದನ್ನು ಅರ್ಥ ಮಾಡಿಕೊಳ್ಳಬೇಕು.
ಉಮಾಕಾಂತ ಖಾರ್ವಿ
ಕುಂದಾಪುರ