ಸತ್ಯವನ್ನು ಮುಚ್ಚಿಡಲು ಸುಳ್ಳು ಬ್ರಹ್ಮಾಸ್ತ್ರ..??

ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಜನ ನಂಬುತ್ತಾರೆ. ಇದು ಜಗತ್ತಿನ ಕ್ರೂರ ಸರ್ವಾಧಿಕಾರಿ ಹಿಟ್ಲರನ ಆಪ್ತ ಗೋಬೆಲ್ ಹೇಳಿದ ಮಾತು. ಹಾಗಾಗಿ ಸತ್ಯವನ್ನು ಮುಚ್ಚಿಡಲು ಸುಳ್ಳು ಬ್ರಹ್ಮಾಸ್ತ್ರವೂ ಹೌದು. ಕಾಸರಕೋಡು ವಾಣಿಜ್ಯ ಬಂದರು ನಿರ್ಮಾಣ ಪ್ರದೇಶದಲ್ಲಿ ಇತ್ತೀಚೆಗೆ ಕಡಲಾಮೆಗಳ ಮೃತದೇಹಗಳು ಪತ್ತೆಯಾದ ಘಟನೆಗಳಿಗೆ ಸಂಬಂಧಪಟ್ಟಂತೆ ಖಾಸಗಿ ಬಂದರು ನಿರ್ಮಾಣ ಕಾಮಗಾರಿ ಕಂಪನಿಯವರು ಗೋಬೆಲ್ ತಂತ್ರಗಾರಿಕೆಯನ್ನುಪ್ರಯೋಗಿಸುತ್ತಿದ್ದಾರೆ.

ಮೃತ ಪಟ್ಟ ಕಡಲಾಮೆಗಳನ್ನು ಸ್ಥಳೀಯರೇ ಬೇರೆ ಕಡೆಯಿಂದ ತಂದು ಬಂದರು ನಿರ್ಮಾಣ ಕಾಮಗಾರಿ ಪ್ರದೇಶಕ್ಕೆ ಇಟ್ಟಿದ್ದಾರೆ ಎಂಬಅದರ ಮೇಲೆ ಹಸಿಸುಳ್ಳನ್ನು ಪ್ರತಿಪಾದಿಸುತ್ತಿದ್ದಾರೆ. ಕಾಸರಕೋಡು ಟೊಂಕ ಕಡಲತೀರದಲ್ಲಿ ಕಡಲಾಮೆಗಳು ಗೂಡು ಕಟ್ಟುವುದಿಲ್ಲ ಎಂಬ ವಿತಂಡವಾದಕ್ಕೆ ಪೂರಕವಾಗಿ ಇದೆಲ್ಲ ತಂತ್ರಗಾರಿಕೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಕಳೆದ ವರ್ಷ ಇಲಾಖೆಯೊಂದರ ಅಧಿಕಾರಿಗಳು ಮೀನುಗಾರರೇ ಇಲ್ಲಿ ಕಡಲಾಮೆ ಮೊಟ್ಟೆಗಳನ್ನು ತಂದು ಹುದುಗಿಸಿ ಇಟ್ಟಿದ್ದಾರೆ ಎಂಬ ಆರೋಪ ಮಾಡಿದ್ದರು. ಇಲ್ಲಿ ಕಡಲಾಮೆ ಮೊಟ್ಟೆಗಳನ್ನು ತಂದು ಇಡಲು ಅದೇನು ಅಂಗಡಿಯಲ್ಲಿ ಸಿಗುವ ಕೋಳಿ ಮೊಟ್ಟೆಯಲ್ಲ. ಮೃತಪಟ್ಟ ಆಮೆಯನ್ನು ತಂದು ಇಟ್ಟಿದ್ದಾರೆ ಎನ್ನಲು ಅದೇನು ಫಾರಂನಲ್ಲಿ ಸಿಗುವ ಕೋಳಿಯೂ ಅಲ್ಲ.

ಈ ಮತಿಗೇಡಿಗಳಿಗೆ ಇಷ್ಟೊಂದು ಸೂಕ್ಷ್ಮ ಅರ್ಥ ವಾಗುವುದಿಲ್ಲ ಯಾಕೆ? ಕಾಸರಕೋಡು ಬಂದರು ನಿರ್ಮಾಣ ಪ್ರದೇಶ ಅತ್ಯಂತ ಭದ್ರತೆಯಿಂದ ಕೂಡಿದೆ. ಇಲ್ಲಿ ಸಿಸಿಟಿವಿ ಕಣ್ಗಾವಲು ಇದೆ. ಕಡಲಂಚಿನಲ್ಲಿ ರಾತ್ರಿ ಹಗಲು ಭದ್ರತೆ ನೋಡಿಕೊಳ್ಳುವ ಸೆಕ್ಯುರಿಟಿಗಳು ಇದ್ದಾರೆ. ಇಷ್ಟೆಲ್ಲಾ ಇದ್ದ ಮೇಲೆ ಒಂದು ಸೊಳ್ಳೆ ಕೂಡಾ ಈ ಪ್ರದೇಶಕ್ಕೆ ಪ್ರವೇಶಿಸುವ ಹಾಗಿಲ್ಲ. ಅಂದ ಮೇಲೆ ಮೃತಪಟ್ಟ ಭಾರೀ ಗಾತ್ರದ ಕಡಲಾಮೆಗಳನ್ನು ಹೊತ್ತುಕೊಂಡು ಇಲ್ಲಿ ಹಾಕುವುದಾದರೂ ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇವತ್ತು ಕಾಸರಕೋಡು ಕಡಲಿನಲ್ಲಿ ಕಡಲಾಮೆ ಇಲ್ಲ ಅಂದವರು ನಾಳೆ ಕಡಲಿನಲ್ಲಿ ಮೀನುಗಳೇ ಇಲ್ಲ ಎಂದರೂ ಆಶ್ಚರ್ಯವಿಲ್ಲ.

ಈ ಪಟ್ಟಭದ್ರರ ಹೊಲಸು ಹುನ್ನಾರಗಳಿಗೆ ಸರ್ಕಾರಿ ಇಲಾಖೆಗಳು ಉಧೋ ಉಧೋ ಎನ್ನುತ್ತಿರುವುದು ವಿಪರ್ಯಾಸ. ನಿನ್ನೆ ಧಾರೇಶ್ವರ ಕಡಲತೀರದಲ್ಲಿ ಮೃತಪಟ್ಟ ಆಲೀವ್ ರಿಡ್ಲೆ ಪ್ರಭೇದದ ಕಡಲಾಮೆಗೆ ಯುವ ಮೀನುಗಾರ ಮುಖಂಡ ರವಿ ಅಂಬಿಗ ನೇತೃತ್ವದಲ್ಲಿ ಸ್ಥಳೀಯ ಮೀನುಗಾರರು ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಗೌರವಪೂರ್ವಕ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಅಲ್ಲಿ ಎಲ್ಲರ ಕಣ್ಣಾಲಿಗಳು ತೇವಗೊಂಡಿದ್ದವು. ಮೀನುಗಾರರ ಮಿತ್ರನಾದ ಕಡಲಾಮೆಯ ದುರಂತ ಸಾವು ಹೃದಯವಿದ್ರಾಹಕ. ದುಡ್ಡು ಹೊಡೆಯುವ ದೊಡ್ಡ ಪ್ರಾಜೆಕ್ಟ್ ಗಳನ್ನು ಪೃಕೃತಿಯ ಮೇಲೆ ಬಲವಂತವಾಗಿ ಹೇರಿ ಮೀನುಗಾರರನ್ನು ಸರ್ವನಾಶ ಮಾಡಲೊರಟಿರುವವರು ಶತಾಯಗತಾಯ ವಾಣಿಜ್ಯ ಬಂದರು ನಿರ್ಮಾಣ ಮಾಡಲೇಬೇಕೆಂಬ ಧೂರ್ತ ತನದ ವಿಚಾರಗಳಿಂದ ಅಪರೂಪದ ಜೀವವೈವಿಧ್ಯ ವನ್ನು ಕೂಡಾ ನಾಶ ಮಾಡುತ್ತಿದ್ದಾರೆ.

ಕಣ್ಣ ಮುಂದೆ ಹಸಿ ಹಸಿ ಸಾಕ್ಷ್ಯ ಗಳು ಇರುವುದರಿಂದ ಅವರಿಗೆ ಮುಖಕ್ಕೆ ಹೊಡೆದಂತಾಗಿದೆ.ಆದರೂ ಕಾಸರಕೋಡು ಟೊಂಕ ಕಡಲತೀರ ಕಡಲಾಮೆಗಳ ಗೂಡು ಕಟ್ಟುವ ತಾಣವಲ್ಲ ಎರಡು ವಿತಂಡವಾದ ಮಂಡಿಸಲು ಹಲವು ವಿಧದ ಕುಹಕ ತಂತ್ರಗಾರಿಕೆ ತೆರೆಮರೆಯಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.

ಉಮಾಕಾಂತ ಖಾರ್ವಿ ಕುಂದಾಪುರ

One thought on “ಸತ್ಯವನ್ನು ಮುಚ್ಚಿಡಲು ಸುಳ್ಳು ಬ್ರಹ್ಮಾಸ್ತ್ರ..??

Leave a Reply

Your email address will not be published. Required fields are marked *