ಕಣ್ಮರೆಯಾಗುತ್ತಿವೆ ಕಡಲಕ್ಕಿಗಳು

ಕಣ್ಮರೆಯಾಗಿರುವ ಕಡಲಕ್ಕಿಗಳ ಶೋಧಕ್ಕೆ ಮಂಗಳೂರು ಕಡಲತಡಿಯಿಂದ ಗೋವಾದ ತನಕವೂ ಅತೀ ಉತ್ಸಾಹದಿಂದ ನಿರಂತರವಾಗಿ ಒಂದು ವಾರಗಳ ಕಾಲ ಅಲೆದಾಟ ನಡೆಸಿದೆ. ಮಂಗಳೂರುನಿಂದ ಗೋವಾ ತನಕವೂ ಜನರಿಂದ ಬಂದ ಉತ್ತರ ಒಂದೇ ಕಡಲಕ್ಕಿಗಳು ಇಲ್ಲ ಅಂತ. ಯಾಕೆ ಇಲ್ಲ ಎಂದು ಕೇಳಿದರೆ ಅದೊಂದು ದೊಡ್ಡ ವ್ಯಥೆಯ ಕಥೆ.

ಕಡಲಕ್ಕಿಗಳು ಕಡಲತಡಿಯಿಂದ ಕಣ್ಮರೆಯಾಗಲು ಮೂರು ಮುಖ್ಯ ಕಾರಣಗಳಿವೆ. ಒಂದು ಹವಾಮಾನ ಬದಲಾವಣೆ, ಎರಡನೆಯದು ಆಹಾರ ಅಲಭ್ಯತೆ, ಮೂರನೆಯದು ಅವುಗಳ ಅವ್ಯಾಹತ ಬೇಟೆ. ಮೀನುಗಾರಿಕೆಯಲ್ಲಿ ಆತ್ಯಾಧುನಿಕ ಆವಿಷ್ಕಾರಗಳಿಂದ ಮತ್ಸ್ಯಸಂತತಿ ನಶಿಸುತ್ತಿರುವ ಹಿನ್ನೆಲೆಯಲ್ಲಿ ಕಡಲಕ್ಕಿಗಳಿಗೆ ಸುಲಭವಾಗಿ ಕಡಲಿನಲ್ಲಿ ಸಿಗುತ್ತಿದ್ದ ಮೀನುಗಳು ಸಿಗುವುದಿಲ್ಲ. ಸುನಾಮಿಯ ಬಳಿಕ ಸಾಗರಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿದ್ದು, ಪದೇಪದೇ ಸಾಗರ ಪರಿಸರದಲ್ಲಿ ಪ್ರತಿಕೂಲ ಹವಾಮಾನ, ವಾಯುಭಾರ ಕುಸಿತ, ಚಂಡಮಾರುತದ ಘಟನೆಗಳು ತುಂಬಾ ಜಾಸ್ತಿಯಾಗುತ್ತಿದೆ. ಸಮುದ್ರ ಗಳಲ್ಲಿ ಎಷ್ಟು ಹೊತ್ತಿಗೆ ಏನು ಸಂಭವಿಸುತ್ತದೆ ಎಂದು ಹೇಳಲು ವಿಜ್ಞಾನಿಗಳಿಗೂ ಸಾಧ್ಯವಾಗುತ್ತಿಲ್ಲ.

ಕಡಲಕ್ಕಿಗಳ ಗರಿ ಮತ್ತು ಕೊಕ್ಕುಗಳಲ್ಲಿ ಔಷಧೀಯ ಅಂಶಗಳಿವೆ ಎಂಬ ನಂಬಿಕೆಯಿಂದ ಅವುಗಳನ್ನು ವ್ಯಾಪಕವಾಗಿ ಕೊಲ್ಲಲಾಯಿತು‌. ಇದು ಕೇರಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯಿತು. ಅದರ ಕೊಕ್ಕುಗಳನ್ನು ಕಲ್ಲಿನಲ್ಲಿ ತೇದಿ ರಸವನ್ನು ಬಾಯಿಗೆ ಹಾಕಿದರೆ ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡ ಮೀನಿನ ಮುಳ್ಳುಗಳು ಕರಗಿಹೋಗುತ್ತದೆ ಎಂಬ ನಂಬಿಕೆಯೂ ಇದೆ. ಕಡಲತಡಿಯ ಬಂಡೆಗಳಲ್ಲಿ ಕಡಲಕ್ಕಿಗಳು ಮೊಟ್ಟೆ ಇಡುತ್ತವೆ. ಈ ಮೊಟ್ಟೆಗಳನ್ನು ಹುಡುಕಿ ಹುಡುಕಿ ತೆಗೆದುಕೊಂಡು ಹೋಗುತ್ತಾರೆ. ಈ ಮೊಟ್ಟೆ ಗಳಿಗೆ ಅಪಾರ ಬೇಡಿಕೆ ಉಂಟು. ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಕಡಲಕ್ಕಿಗಳ ಸಂತತಿ ವಿನಾಶದ ಅಂಚಿನಲ್ಲಿದೆ.

ಎಷ್ಟೋ ವರ್ಷಗಳ ತರುವಾಯ ಕಾರವಾರ ಕಡಲತೀರದಲ್ಲಿ 2018 ರಲ್ಲಿ ಒಮ್ಮೆ ಕಡಲಕ್ಕಿಗಳು ಕಾಣಸಿಕ್ಕಿದ್ದು ಬಿಟ್ಟರೆ ಮತ್ತೆ ಎಂದಿಗೂ ಕಂಡು ಬರಲಿಲ್ಲ. ಹಲವು ವರ್ಷಗಳ ಹಿಂದೆ ಕಡಲಕ್ಕಿಗಳನ್ನು ನೋಡಿ ಮೀನುಗಾರರು ಬಲೆ ಹಾಕುತ್ತಿದ್ದರು. ಸಮುದ್ರದ ನಿಗದಿತ ಪ್ರದೇಶದಲ್ಲಿ ಕಡಲಕ್ಕಿಗಳು ಗುಂಪು ಗುಂಪಾಗಿ ಕಂಡು ಬಂದರೆ ಅಲ್ಲಿ ಮೀನುಗಳು ಯಥೇಚ್ಛವಾಗಿ ಸಿಗುತ್ತಿತ್ತು. ಮೀನುಗಳನ್ನು ನಿಖರವಾಗಿ ಕಡಲಕ್ಕಿಗಳು ಗುರುತಿಸಿ ನಿರ್ದಿಷ್ಟ ಪ್ರದೇಶದಲ್ಲಿ ಬೇಟೆಯಾಡುತ್ತಿದ್ದವು. ಕಡಲಕ್ಕಿಗಳು ಮೂಲತಃ ರಷ್ಯಾ ದೇಶದ ನಿವಾಸಿಗಳಾಗಿದ್ದು, ಜಗತ್ತಿನಾದ್ಯಂತ ಅವುಗಳ 25 ಕ್ಕೂ ಹೆಚ್ಚು ಪ್ರಭೇದಗಳಿವೆ. ಇವುಗಳ ಸರಾಸರಿ ಜೀವಿತಾವಧಿ ಗರಿಷ್ಠ 62 ವರ್ಷಗಳು. ಆದರೆ ಮನುಷ್ಯರ ದೆಸೆಯಿಂದ ಅವುಗಳು ಅಲ್ಪಾಯ್ಯುಸಿಗಳಾಗಿವೆ.

ಗಂಗೊಳ್ಳಿ ಕಡಲತಡಿ, ಬಂದರು, ಪಂಚಗಂಗಾವಳಿ ನದಿ ಕಿನಾರೆಯಲ್ಲಿ ಕಡಲಕ್ಕಿಗಳ ಕಲರವ ಕಾಣಸಿಗುತ್ತಿದ್ದವು. ಭರತದ ಸಂದರ್ಭದಲ್ಲಿ ಪಂಚಗಂಗಾವಳಿಯಲ್ಲಿ ತೇಲುತ್ತಾ ಕಡಲಕ್ಕಿಗಳು ವಿಹರಿಸುವ ನೋಟ ಕಣ್ಣಿಗೆ ಹಬ್ಬವಾಗಿತ್ತು. ಇಳಿತದ ಸಂದರ್ಭದಲ್ಲಿ ಮರಳಿನ ರಾಶಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದು ಶ್ವೇತ ವರ್ಣದ ಲೋಕ ಸೃಷ್ಟಿಸುತ್ತಿದ್ದವು. ಈಗ ಆ ಮನಮೋಹಕ ದೃಶ್ಯ ಗಳು ಕೇವಲ ನೆನಪು ಮಾತ್ರ. ಮಾನವನ ಸ್ವಾರ್ಥ ಭರಿತ ಚಟುವಟಿಕೆಗಳಿಂದಾಗಿ ಪೃಕೃತಿಯ ಜೀವವೈವಿಧ್ಯತೆಗಳು ವೇಗವಾಗಿ ಇಳಿಮುಖವಾಗುತ್ತಿದೆ.

ಒಂದು ಕಾಲಕ್ಕೆ ಮೌರಿಷಿಯಸ್ ದ್ವೀಪದಲ್ಲಿ ವಾಸಿಸುತ್ತಿದ್ದ Dodo ಎಂಬ ವಿಶಿಷ್ಟ ಪ್ರಭೇದದ ಬಾತುಕೋಳಿಗಳ ಸಂತತಿ ಮನುಷ್ಯನ ಬೇಟೆ ಹುಚ್ಚಿಗೆ ಬಲಿಯಾಗಿ ನಶಿಸಿ ಹೋಗಿದೆ. ನಮ್ಮ ಕಡಲಿನ ಅಪೂರ್ವ ಜೀವವೈವಿಧ್ಯ ವಾಗಿರುವ ಕಡಲಕ್ಕಿಗಳ ಪರಿಸ್ಥಿತಿಯಯೂ ಅದರತ್ತ ಸಾಗುತ್ತಿದೆ. ಕಾಲಕ್ರಮೇಣ ಕಡಲಕ್ಕಿಗಳನ್ನು ಚಿತ್ರಗಳಲ್ಲಿ ಕಾಣುವ ಪರಿಸ್ಥಿತಿ ಬರಬಹುದು. ಒಂದು ಜೀವವೈವಿಧ್ಯದ ನಶಿಸುವಿಕೆಯನ್ನು ಸದಾ ಗಮನಿಸುತ್ತಿರುವುದು ಅತೀ ಮುಖ್ಯ. ಏಕೆಂದರೆ ಇದರ ಗತಿಯು ನಮ್ಮ ಜೀವಗೋಲದ ಆರೋಗ್ಯ ಮತ್ತು ಸ್ಥಿರತೆಗಳ ಮಾಪಕವಾಗಿರುತ್ತದೆ. ಒಂದು ಪ್ರಭೇದ ನಶಿಸಿ ಹೋದಾಗ ಅದರ ವಿಶಿಷ್ಟ ಗುಣಗಳು ಶಾಶ್ವತವಾಗಿ ನಾಶವಾಗುತ್ತದೆ. ಇದರ ಜತಗೆಯೇ ಮತ್ತೆ ಭರಿಸಲಾರದಂತಹ ಅನುವಂಶೀಯ ಸಂಪನ್ಮೂಲಗಳ ನಾಶವಾಗುತ್ತದೆ. ಅಪೂರ್ವ ಜೀವವೈವಿಧ್ಯ ವಾದ ಕಡಲಕ್ಕಿಗಳು ವಿನಾಶದ ಹಾದಿಯಲ್ಲಿವೆ ಎಂಬ ವಿಷಯದಲ್ಲಿ ನಾವು ವಿಚಾರ ಮಾಡಬೇಕಾದ ಸಂದರ್ಭ ಇಂದು ಬಂದಿದೆ. ಇಲ್ಲಿ ನಾವು ಜೀವವೈವಿಧ್ಯಗಳ ರಕ್ಷಣೆಯ ನೈತಿಕ ಜವಾಬ್ದಾರಿಯನ್ನು ಹೊಂದಿರುತ್ತೇವೆ ಎಂಬ ಮಾತುಗಳು ತುಂಬಾ ನಿಚ್ಚಳವಾಗಿ ಗೋಚರವಾಗುತ್ತದೆ.

ಉಮಾಕಾಂತ ಖಾರ್ವಿ ಕುಂದಾಪುರ

One thought on “ಕಣ್ಮರೆಯಾಗುತ್ತಿವೆ ಕಡಲಕ್ಕಿಗಳು

  1. “ಕಡಲಕ್ಕಿಗಳು ಕಡಲತಡಿಯಿಂದ ಕಣ್ಮರೆಯಾಗಲು ಮೂರು ಮುಖ್ಯ ಕಾರಣಗಳಿವೆ. ಒಂದು ಹವಾಮಾನ ಬದಲಾವಣೆ, ಎರಡನೆಯದು ಆಹಾರ ಅಲಭ್ಯತೆ, ಮೂರನೆಯದು ಅವುಗಳ ಅವ್ಯಾಹತ ಬೇಟೆ”. ….

    Umakanth Sir…ನಿಮ್ಮ ಲೇಖನಗಳು ಯಾವಾಗಲೂ ಚಿಕ್ಕದಾಗಿ, ಸಂಕ್ಷಿಪ್ತವಾಗಿ ಮನಕ್ಕೆ ನಾಟುವಂತೆ ಇರುತ್ತವೆ..

    ಕಡಲಕ್ಕಿಗಳು ಈಗ ಕೇವಲ ಬಲ್ಯದ ನೆನಪುಗಳು ಅಷ್ಟೆ … ಹಾಗೆ ನಿಮ್ಮ ಹಿಂದಿನ ಆಮೆಗಳಿಗೆ ಸಂಬಂಧಿಸಿದ ಲೇಖನಗಳು ನಿಜಕ್ಕೂ ನನ್ನನ್ನು ಚಿಂತೆಗೀಡು ಮಾಡಿದೆ. ನಾವು ಮಾನವರು ನಮ್ಮ ದುರಾಶೆಯನ್ನು ಅರಿತು ಪ್ರಕೃತಿಯ ಬಗ್ಗೆ ನಮ್ಮ ವರ್ತನೆಯನ್ನು ಬದಲಾಯಿಸದಿದ್ದರೆ. ಜೀವನೋಪಾಯಕ್ಕಾಗಿ ಮೀನುಗಾರಿಕೆ ಅಥವಾ ಪ್ರಕೃತಿ ಆಧರಿತ ಯಾವುದಾದರೂ ವೃತ್ತಿ ಒಂದು ದಶಕದ ನಂತರ ಅಸ್ತಿತ್ವದಲ್ಲಿ ಇರುವುದ ಎಂದು ಆಲೋಚಿಸಬೇಕು?

Leave a Reply

Your email address will not be published. Required fields are marked *