ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ ಇದು ಪುರಂದರದಾಸರ ತತ್ವಪದ. ಇದರಲ್ಲಿ ಸಮಾಜಸೇವೆಯ ಮಹತ್ವ ಮತ್ತು ಶ್ರೇಷ್ಠತೆಯನ್ನು ಬಹಳ ಸುಂದರ ಪದ ಲಾಲಿತ್ಯದಲ್ಲಿ ಬಣ್ಣಿಸಲಾಗಿದೆ. ಸಮಾಜದ ಒಳಿತಿಗಾಗಿ ಪ್ರತಿಯೊಬ್ಬರೂ ಸಮರ್ಪಣಾ ಮನೋಭಾವದಿಂದ ದುಡಿಯಬೇಕು ಎಂಬುದೇ ಈ ದಾಸರ ಪದದ ತಾತ್ಪರ್ಯ.
ಈ ಸಮಾಜ ಸೇವೆಯ ಶ್ರೇಷ್ಠತೆಯನ್ನು ಮೇಲ್ಪಂಕ್ತಿಯಲ್ಲಿ ಇಟ್ಟು ನೋಡುವುದಾದರೆ ನಮ್ಮೆದುರು ಬೆಂಗಳೂರಿನ ಕೊಂಕಣಿ ಖಾರ್ವಿ ಸಮಾಜದ ಹೆಮ್ಮೆಯ ಸಂಸ್ಥೆಯಾದ ಕೊಂಕಣಿ ಖಾರ್ವಿ ವಿದ್ಯಾ ವೇದಿಕೆಯ ಅಭೂತಪೂರ್ವ ಸಮಾಜ ಸೇವೆ ಕಾರ್ಯಗಳು ವೈಶಿಷ್ಟ್ಯ ಪೂರ್ಣ ವಾಗಿ ಅನಾವರಣಗೊಳ್ಳುತ್ತದೆ. ಬೆಂಗಳೂರಿನಲ್ಲಿ ನೆಲೆಗೊಂಡಿರುವ ನಮ್ಮ ಸಮಾಜ ಬಂಧುಗಳ ಬಹುಕಾಲದ ಹಂಬಲದೊಂದಿಗೆ ಇಪ್ಪತ್ತೆರಡು ವರ್ಷಗಳ ಹಿಂದೆ ಕೊಂಕಣಿ ಖಾರ್ವಿ ವಿದ್ಯಾ ವೇದಿಕೆ ಶುಭಾರಂಭಗೊಂಡಿತ್ತು. ಬಸ್ರೂರು ರಾಮ ಖಾರ್ವಿ (Secretary General, All India EPF Staff Federation)ಯವರ ನೇತೃತ್ವದಲ್ಲಿ ದೂರಗಾಮಿತ್ವ ಧೀಶಕ್ತಿಯಿಂದ ಪ್ರಾರಂಭಗೊಂಡ ಕೊಂಕಣಿ ಖಾರ್ವಿ ವಿದ್ಯಾ ವೇದಿಕೆ ಇಂದು ಹೆಮ್ಮರವಾಗಿ ಬೆಳೆದಿದೆ.
ಹಲವು ಕ್ಷಿತಿಜದೆಡೆಗಳಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿದೆ. ಸಮಸ್ತ ಖಾರ್ವಿ ಸಮಾಜದ ಹೆಮ್ಮೆಯ ಪ್ರತೀಕವಾಗಿ ಪ್ರಕಾಶಿಸುತ್ತಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ತತ್ವದಡಿಯಲ್ಲಿ ಬೆಂಗಳೂರಿನಲ್ಲಿ ನೆಲೆಯಾಗಿರುವ ನಮ್ಮ ಸಮಾಜದ ಮಂದಿಯನ್ನು ಒಗ್ಗೂಡಿಸಿಕೊಂಡು ವಿದ್ಯಾ ವೇದಿಕೆ ಸಮಾಜದ ಸರ್ವೋತಮುಖ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಮೂಲ ಉದ್ದೇಶವನ್ನಿಟ್ಟುಕೊಂಡು ರಚನೆಯಾದ ವಿದ್ಯಾ ವೇದಿಕೆ ಕಳೆದ 22 ವರ್ಷಗಳಿಂದ ಸಮಾಜದ ವಿದ್ಯಾರ್ಥಿಗಳಿಗೆ ನಿರಂತರವಾಗಿ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದೆ.
ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿರುತ್ತಾರೆ. ಪ್ರತಿವರ್ಷವೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಉನ್ನತ ಶಿಕ್ಷಣ ಪಡೆಯುವ ಪ್ರಮುಖ ಘಟ್ಟವಾದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪೈಕಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವೇದಿಕೆಯ ವಾರ್ಷಿಕೋತ್ಸವ ದಿನದಂದು ಪರಿಚಯಿಸಿ ಸನ್ಮಾನಿಸಲಾಗುತ್ತದೆ. ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸಾಧನೆಗೈದ ಸಮಾಜದ ಹಲವು ಸಾಧಕರನ್ನು ಗುರುತಿಸಿ ಗೌರವಿಸಿ ವೇದಿಕೆಯ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಗಿದೆ. ಉನ್ನತ ಶಿಕ್ಷಣ ಪಡೆಯುವ ಹಂಬಲವಿರುವ ಸಮಾಜದ ಹಲವಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಮಾಹಿತಿ, ಉದ್ಯೋಗ ಸಂದರ್ಶನಕ್ಕೆ ತಯಾರಿ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ನಿಟ್ಟಿನಲ್ಲಿ ನುರಿತ ತಜ್ಞರಿಂದ ಉತ್ತಮ ಮಾರ್ಗದರ್ಶನ ನೀಡಲು ಮುತುವರ್ಜಿಯಿಂದ ಕೆಲಸ ಮಾಡಲಾಗಿದೆ.
ಪರವೂರಿನಿಂದ ಉದ್ಯೋಗ ಅರಸಿ ಮತ್ತು ತುರ್ತು ಸಂದರ್ಭದಲ್ಲಿ ವೈದ್ಯಕೀಯ ಶೂಶ್ರೂಷೆಗಾಗಿ ಬೆಂಗಳೂರಿಗೆ ಆಗಮಿಸುವ ಸಮಾಜ ಭಾಂಧವರಿಗೆ ವೇದಿಕೆಯ ಕಾರ್ಯಾಲಯದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಾವಿರಾರು ಸಮಾಜ ಭಾಂಧವರು ಇದರ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ. ಉದ್ಯೋಗ ಅರಸಿ ಬರುವ ಸಮಾಜ ಭಾಂಧವರಿಗೆ ವೇದಿಕೆ ದಿಕ್ಸೂಚಿಯಂತೆ ಮಾರ್ಗದರ್ಶನ ಮಾಡುತ್ತಿದ್ದು, Job opportunities ಎಂಬ whatsApp ಗ್ರೂಪ್ ರಚಿಸಿ ಕಾಲಕಾಲಕ್ಕೆ ಉದ್ಯೋಗ ಮಾಹಿತಿ ನೀಡುತ್ತಾ ಬಂದಿದೆ. ಇದರಂತೆ ಹಲವಾರು ಸಮಾಜ ಭಾಂಧವರು ಉದ್ಯೋಗ ಗಿಟ್ಟಿಸಿಕೊಂಡ ನಿದರ್ಶನಗಳಿವೆ. ಖಾರ್ವಿ ಸಮಾಜದ ಅಭಿವೃದ್ಧಿಯ ಪಥದಲ್ಲಿ ವಿದ್ಯಾ ವೇದಿಕೆ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಶಿಕ್ಷಣ ಉದ್ಯೋಗ ವಿಭಾಗದಲ್ಲಿ ನಿರಂತರವಾಗಿ ವಿದ್ಯಾ ವೇದಿಕೆಯ ಕಾರ್ಯಕರ್ತರು ತಮ್ಮನ್ನು ಕ್ರೀಯಾಶೀಲರಾಗಿ ತೊಡಗಿಸಿಕೊಂಡು ಮಾರ್ಗ ದರ್ಶನ ಮಾಡುತ್ತಿದ್ದಾರೆ.
ಸಮಾಜ ಸೇವೆಯ ಕೈಂಕರ್ಯ ದಲ್ಲಿ ನಿರತವಾಗಿರುವ ಕೊಂಕಣಿ ಖಾರ್ವಿ ವಿದ್ಯಾ ವೇದಿಕೆಗೆ ವಿಶ್ವ ಕೊಂಕಣಿ ಸೆಂಟರ್ ಅಭೂತಪೂರ್ವ ಸಹಕಾರ ನೀಡುತ್ತಾ ಬಂದಿದೆ. ವಿಶ್ವ ಕೊಂಕಣಿ ಸೆಂಟರ್ ಕೊಂಕಣಿ ಖಾರ್ವಿ ಸಮಾಜದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಹಲವು ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿ ವೇತನದ ಜೊತೆಯಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಕೊಟ್ಟು ಅಪಾರವಾದ ಪ್ರೋತ್ಸಾಹ, ಬೆಂಬಲ ನೀಡುತ್ತಾ ಬಂದಿದ್ದು ಕೊಂಕಣಿ ಖಾರ್ವಿ ಸಮಾಜಕ್ಕೆ ಅತ್ಯುತ್ತಮ ಕೊಡುಗೆ ನೀಡಿರುವುದನ್ನು ಪ್ರಜ್ಞಾಪೂರ್ವಕವಾಗಿ ಸ್ಮರಿಸಿಕೊಳ್ಳಬಹುದಾಗಿದೆ.
ಶೈಕ್ಷಣಿಕವಾಗಿ , ಆರ್ಥಿಕ ವಾಗಿ, ಸಾಮಾಜಿಕವಾಗಿ ಕೊಂಕಣಿ ಖಾರ್ವಿ ಸಮಾಜ ಅಭಿವೃದ್ಧಿ ಹೊಂದಬೇಕಾಗಿದ್ದು ಈ ನಿಟ್ಟಿನಲ್ಲಿ ವಿದ್ಯಾ ವೇದಿಕೆ ಗುರಿಯನ್ನು ಇಟ್ಟುಕೊಂಡಿದೆ. ಮುಂದಿನ ಐದು ವರ್ಷಗಳಲ್ಲಿ ನಮ್ಮ ಸಮಾಜದ ಕಡಿಮೆ ಪಕ್ಷ ನೂರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ (ಇಂಜಿನಿಯರಿಂಗ್, ಡಾಕ್ಟರ್, CA Advocate, MBA, MS, MTech IIM,etc) ಮುಂತಾದ ಶೈಕ್ಷಣಿಕ ಅರ್ಹತೆ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರ ಪ್ರೋತ್ಸಾಹ ನೀಡಲು ಕಟಿಬದ್ದವಾಗಿದೆ. ಈ ಗುರಿ ತಲುಪಲು ಹಲವಾರು ಸಂಘ ಸಂಸ್ಥೆಗಳು, ಉದ್ಯಮಿಗಳು, ತಜ್ಞರು, ಸಮಾಜ ಸೇವಕರು ಮುಂದೆ ಬಂದಿದ್ದುಗುರಿ ತಲುಪುವ ಸಂಕಲ್ಪ ಸಿದ್ದಿಸುವ ಪೂರಕ ವಾತಾವರಣ ಸೃಷ್ಟಿ ಯಾಗಿರುವುದು ಸಂತಸದ ವಿಷಯ.
ಕೊಂಕಣಿ ಖಾರ್ವಿ ವಿದ್ಯಾ ವೇದಿಕೆಯ ಉತ್ಕರ್ಷದಲ್ಲಿ ಹಲವಾರು ಸಹೃದಯಿಗಳ ಪಾತ್ರವಿದೆ. ವೇದಿಕೆಯ ಅಧ್ಯಕ್ಷರಾಗಿ ಅನುಕ್ರಮದಂತೆ ಬಾಬು A ಖಾರ್ವಿ, S K.Naik, PK ಕೋಡಿ, ಸುರೇಶ್ ಖಾರ್ವಿ ಗಂಗೊಳ್ಳಿ, ಗೋಪಾಲ್ ಕೋಟಾನ್ ಮುಂತಾದವರು ಅನುಪಮ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಶ್ರೀ ಸುರೇಶ್ ಖಾರ್ವಿ ಯವರು ಅಧ್ಯಕ್ಷರಾಗಿ ವೇದಿಕೆಯನ್ನು ಮುನ್ನಡೆಸುತ್ತಿದ್ದಾರೆ, ಉಪಾಧ್ಯಕ್ಷರಾಗಿ ಶ್ರೀ ರವಿ ರಾಮ್ ಖಾರ್ವಿ, ಕಾರ್ಯದರ್ಶಿಯಾಗಿ ಹರೀಶ್ . ಬಿ. ನಾಯಕ್ ಹಾಗೂ ಸಂಘದ ಎಲ್ಲಾ ಸದಸ್ಯರು ವಿದ್ಯಾ ವೇದಿಕೆಯ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾರೆ.
ಸಮಾಜ ಭಾಂಧವರ ಸುಖದುಖಃಗಳಲ್ಲಿ ವೇದಿಕೆ ತನ್ನನ್ನು ವಿಧೇಯಿಸಿಕೊಂಡಿದೆ. ಪ್ರತಿವರ್ಷ ವೇದಿಕೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು, ಗಣೇಶೋತ್ಸವ ಕಾರ್ಯ ಕ್ರಮ ಗಳನ್ನು ವಿದ್ಯಾ ವೇದಿಕೆಯ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳುತ್ತದೆ. ನಮ್ಮ ಸಮಾಜದ ಆಸ್ಮಿತೆಯ ಹಬ್ಬವಾದ ಹೋಳಿಹಬ್ಬವನ್ನು ಬೆಂಗಳೂರಿನ ಹೊರವಲಯದ ದೇಗುಲದ ಸುತ್ತ ಆಚರಿಸಲಾಗುತ್ತದೆ. ವೇದಿಕೆ ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಾ ಬಂದಿರುತ್ತದೆ. ಶಿಕ್ಷಣವು ವರ್ತಮಾನ ಮತ್ತು ಭವಿಷ್ಯಗಳ ದೃಷ್ಟಿಯಿಂದ ಒಂದು ವಿಶಿಷ್ಟವಾದ ಬಂಡವಾಳ ಹೂಡಿಕೆಯಾಗಿದೆ. ಅದು ವಿವಿಧ ಹಂತಗಳ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಮಾನವ ಶಕ್ತಿಯನ್ನು ಅಭಿವೃದ್ಧಿ ಪಡಿಸುತ್ತದೆ. ಕೈಗಾರಿಕೆ,ತಂತ್ರಜ್ಞಾನ, ಉದ್ಯೋಗ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಇದ್ದು ಬೆಂಗಳೂರು ಮಹಾನಗರ ಅವಕಾಶಗಳನ್ನು ತೆರೆದುಕೊಂಡಿದೆ. ಇಲ್ಲಿ ನಮ್ಮ ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗೆ ಪೂರಕವಾದ ಉತ್ತಮ ವಾತಾವರಣವಿದೆ.
ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣ, ಉದ್ಯೋಗ ಮತ್ತಿತರ ಉದ್ದೇಶಗಳಿಗಾಗಿ ಬೆಂಗಳೂರಿಗೆ ಕಳುಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕೊಂಕಣಿ ಖಾರ್ವಿ ವಿದ್ಯಾ ವೇದಿಕೆಯ ಸಂಘಟನೆ ಮತ್ತು ಸುರಕ್ಷಿತ ವಾತಾವರಣ ಇದಕ್ಕೆ ಮುಖ್ಯ ಕಾರಣವಾಗಿದೆ. ಸಮಾಜದ ಸರ್ವರ ಸಹಕಾರ ಪ್ರೋತ್ಸಾಹಗಳಿಂದ ಇಂದು ಕೊಂಕಣಿ ಖಾರ್ವಿ ವಿದ್ಯಾ ವೇದಿಕೆ ಹೆಮ್ಮರವಾಗಿ ಬೆಳೆದಿದೆ. ಗಟ್ಟಿ ನೆಲಗಟ್ಟಿನ ಮೇಲೆ ಭವ್ಯವಾಗಿ ರೂಪುಗೊಂಡಿದೆ. ಈ ಬುನಾದಿಯ ಮೇಲೆ ಸಮಾಜದ ಸರ್ವೋತಮುಖ ಅಭಿವೃದ್ಧಿಯ ಹೆಜ್ಜೆ ಗುರುತುಗಳನ್ನು ಪಡಿಮೂಡಿಸಲು ಕೊಂಕಣಿ ಖಾರ್ವಿ ವಿದ್ಯಾ ವೇದಿಕೆ ದಿಟ್ಟ ಹೆಜ್ಜೆ ಇಟ್ಟಿದೆ. ದೃಡಸಂಕಲ್ಪದ ದೀಕ್ಷೆಯನ್ನು ತೊಟ್ಟಿದೆ. ವೇದಿಕೆಯ ಅಭೂತಪೂರ್ವ ಕಾರ್ಯಗಳು ಸಂಘ ಸಂಸ್ಥೆಗಳಿಗೆ ಮಾದರಿಯಾಗಿದ್ದು,ಆದರ್ಶ ಪ್ರಾಯವಾಗಿದೆ.
ಖಾರ್ವಿ ಆನ್ಲೈನ್ ಬೆಂಗಳೂರಿನ ನಮ್ಮ ಸಮಾಜದ ಹೆಮ್ಮೆಯ ಕೊಂಕಣಿ ಖಾರ್ವಿ ವಿದ್ಯಾ ವೇದಿಕೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಕೊಂಕಣಿ ಖಾರ್ವಿ ವಿದ್ಯಾ ವೇದಿಕೆ ಸರ್ವೋತ್ಕರ್ಷತೆಯ ಮೇರು ಶಿಖರದ ಕೀರ್ತಿ ಹೊಂದಲಿ ಎಂದು ಹೃದಯಸ್ಪರ್ಶಿ ಶುಭಾಶಯ ಕೋರುತ್ತದೆ.
ಸುಧಾಕರ್ ಖಾರ್ವಿ
Team Kharvionline
ಸಿಲಿಕಾನ್ ಸಿಟಿ ಬೆಂಗಳೂರು ಮಹಾನಗರದಲ್ಲಿ ಕೊಂಕಣಿ ಖಾರ್ವಿ ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಕೊಂಕಣಿ ಖಾರ್ವಿ ವಿದ್ಯಾ ವೇದಿಕೆಯ ಪದಾಧಿಕಾರಿಗಳಿಗೆ ಹೃತ್ಪೂರ್ವಕ ವಂದನೆಗಳು ಮತ್ತು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿರುವ ಸಮಾಜ ಭಾಂಧವರಿಗೆ ಹೃದಯಸ್ಪರ್ಶಿ ಶುಭಾಶಯಗಳು👌👍👍👌🙏🙏🙏🙏💐💐💐💐💐👋👋👋👋👋🙏🙏🙏🙏🙏
ಬೆಂಗಳೂರಿನ ಕೊಂಕಣಿ ಖಾರ್ವಿ ವಿದ್ಯಾ ವೇದಿಕೆ (KKVV) ಬಗ್ಗೆ ಈ ಲೇಖನವನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ, ಅವರು ಕರಾವಳಿಯಲ್ಲಿರುವ ಖಾರ್ವಿ ಸಮುದಾಯದ ಮಾನ್ಯತೆ ಮತ್ತು ಮೆಚ್ಚುಗೆಗೆ ಅರ್ಹರು.
ಏಕೆಂದರೆ ಇತರ ಸಮುದಾಯಗಳಿಗೆ ಹೋಲಿಸಿದರೆ ನಾವು ಸಣ್ಣ ಸಮುದಾಯ, ಹಾಗಾಗಿ ಒಂದು ಸಂಘಟನೆಯನ್ನು ಆರಂಭಿಸಿ ಮತ್ತು 20 ವರ್ಷಗಳ ಕಾಲ ಬೆಂಗಳೂರಿನಂತಹ ನಗರದಲ್ಲಿ ನಡೆಸುವುದು ಸುಲಭದ ಕೆಲಸವಲ್ಲ ಆದರೆ ಅವರು ಅದನ್ನು ನಿರಂತರವಾಗಿ ಸದ್ದು ಇಲ್ಲದೆ ನೆಡೆಸುತ್ತ ಬಂದಿದಾರೆ.
ಅವರು ಈ ಸಂಸ್ಥೆಯನ್ನು ನಿರ್ಮಿಸುವುದನ್ನು ನಾನು ಅಕ್ಷರಶಃ ನೋಡಿದ್ದೇನೆ ಮತ್ತು ಮತ್ತು ಅದನ್ನು ದೀರ್ಘಕಾಲದವರೆಗೆ ಸ್ಥಿರವಾಗಿಡಲು ಎಲ್ಲ ಸದಸ್ಯರ ಸಮರ್ಪಣೆ ಅತ್ಯಂತ ಶ್ಲಾಘನೀಯವಾಗಿದೆ.
KKVV ವಿಶೇಷತೆ ತನ್ನನ್ನು ಒಂದು ನಿರ್ದಿಷ್ಟ ಸ್ಥಳಕ್ಕೆ ಸೀಮಿತಗೊಳಿಸದೆ ಸಮುದಾಯವನ್ನು ಸಂಘಟನೆ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಂದ ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಸಮಾಜದಲ್ಲಿ ಸಾವು, ಆಸ್ಪತ್ರೆಗೆ ದಾಖಲಾಗುವುದು ಅಥವಾ ಸಮುದಾಯದ ಸದಸ್ಯರು ಎದುರಿಸುತ್ತಿರುವ ಯಾವುದೇ ಇತರ ತುರ್ತು ಸಂದರ್ಭಗಳಲ್ಲಿ ಅವರು ಬೆಂಬಲವಾಗಿರುವುದನ್ನು ನಾನು ನೋಡಿದ್ದೇನೆ. ಅವರು ಕುಟುಂಬದ ಸದಸ್ಯರಿಗಿಂತ ಹೆಚ್ಚಾಗಿ ಕುಟುಂಬದ ಕಾರ್ಯಗಳ ಭಾಗವಾಗಿರುತ್ತಾರೆ.
ಅವರ ಪ್ರಮುಖ ಕೊಡುಗೆ ಸಮುದಾಯದ ಶಿಕ್ಷಣ ಕ್ಷೇತ್ರದಲ್ಲಿದೆ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಉದ್ಯೋಗ ಅವಕಾಶಗಳಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅವರ ನಾಯಕತ್ವವು ಉತ್ತಮ ದೃಷ್ಟಿಕೋನವನ್ನು ಹೊಂದಿದೆ ಮತ್ತು ನಮ್ಮ ಸಮುದಾಯದ ಭವಿಷ್ಯದ ಪೀಳಿಗೆಯ ಸಂಪೂರ್ಣ ದಿಕ್ಕನ್ನು ಧನಾತ್ಮಕವಾಗಿ ಬದಲಾಯಿಸುತ್ತದೆ ನಾನು ಭಾವಿಸುತ್ತೇನೆ.
ಕೆಕೆವಿವಿಯ ಹೆಮ್ಮೆಯ ಸದಸ್ಯನಾದ ನಾನು ಅವರ ಎಲ್ಲಾ ಭವಿಷ್ಯದ ಎಲ್ಲ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ.