ಹೊಸತನದ ಸ್ವಾಗತಕ್ಕೆ ಹೊಸ್ತು ಹಬ್ಬ: `ನೆವ್ವೆ ಜೈತಾ’

ನವರಾತ್ರಿಯ ಪರ್ವಕಾಲದಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲ್ಪಡುವ ವೈಶಿಷ್ಟ್ಯಪೂರ್ಣ ಆಚರಣೆಯೇ ಹೊಸ್ತ್ ಹಬ್ಬ. ಅನ್ನ ಕೊಟ್ಟ ಭೂಮಿತಾಯಿಯನ್ನು ಮತ್ತು ಅನ್ನಪೂರ್ಣೇಶ್ವರಿಯನ್ನು ವಿಶೇಷವಾಗಿ ಆರಾಧಿಸುವ ಸಲುವಾಗಿ ಆಚರಿಸುವ ಹೊಸ್ತು ಹಬ್ಬ ನೆಲದ ಮಣ್ಣಿನ ಪ್ರಾಚೀನ ಪರಂಪರೆಯ ಹಬ್ಬ.

ಹೊಸ್ತು ದಿನದಂದು ಮುಂಜಾನೆ ಹರಿವಾಣದಲ್ಲಿ ಪೂಜಾ ಸಾಮಾಗ್ರಿಗಳನ್ನು ಗದ್ದೆಗೆ ತೆಗೆದುಕೊಂಡು ಹೋಗುತ್ತಾರೆ. ಭತ್ತದ ತೆನೆಗಳಿಗೆ ಪೂಜೆ ಸಲ್ಲಿಸಿ ಒಂದೊಂದಾಗಿ ಕತ್ತರಿಸಿ ಹರಿವಾಣದಲ್ಲಿ ತಲೆಯ ಮೇಲೆ ಹೊತ್ತುಕೊಂಡು ಬರುತ್ತಾರೆ. ಮನೆಯ ಒಳಗಡೆ ಕದಿರಿನ ಹರಿವಾಣವನ್ನು ಕೊಂಡೊಯ್ಯುವ ಮೊದಲು ತುಳಸಿಕಟ್ಟೆಯಲ್ಲಿ ಇಡಲಾಗುತ್ತದೆ. ತದ ನಂತರ ಮನೆಯ ಒಳಗೆ ತರುವ ಮೊದಲು ಮನೆಯ ಹೆಣ್ಣು ಮಕ್ಕಳು ಕದಿರಿನ ಹರಿವಾಣ ಹೊತ್ತ ವ್ಯಕ್ತಿಯ ಕಾಲು ತೊಳೆದು ನಮಸ್ಕರಿಸುತ್ತಾಳೆ. ಇದು ಭೂಮಿ ತಾಯಿಗೆ ಸಲ್ಲಿಸುವ ಗೌರವ ಸಮರ್ಪಣೆ.

ಮನೆಯ ಮುಖ್ಯ ಪ್ರವೇಶ ದ್ವಾರದ ಮೂಲಕ ಕದಿರನ್ನು ಕೊಂಡೊಯ್ದು ದೇವರ ಕೋಣೆಯಲ್ಲಿ ರಂಗೋಲಿಯಿಂದ ಅಲಂಕೃತಗೊಂಡ ಮಣೆ ಮೇಲೆ ಇರಿಸಿ ಧೂಪವನ್ನು ಹಾಕಿ ಪೂಜೆ ಮಾಡುತ್ತಾರೆ. ಭತ್ತದ ತೆನೆಗಳನ್ನು ಬಳ್ಳಿಯಲ್ಲಿ ಮಾವಿನ ಎಲೆಯೊಂದಿಗೆ ಸೇರಿಸಿ ಕಟ್ಟಲಾಗುತ್ತದೆ. ಇದನ್ನು ಮನೆಯ ಪ್ರತಿಯೊಂದು ವಸ್ತುಗಳಿಗೆ ಪಾವಿತ್ರ್ಯತೆಯ ಸಂಕೇತವಾಗಿ ಕಟ್ಟುತ್ತಾರೆ. ಕುಂದಾಪುರ ಪರಿಸರದಲ್ಲಿ ಇದನ್ನು ಕದಿರು ಕಟ್ಟುವುದು ಎಂದು ಕರೆಯುತ್ತಾರೆ. ಹಾಗೇ ಈ ಕದಿರಿನಲ್ಲಿರುವ ಭತ್ತಗಳನ್ನು ಸುಲಿದು ಅಕ್ಕಿಯ ಕಾಳುಗಳಿನಿಂದ ಹೊಸ್ತು ಎಂಬ ಖಾದ್ಯ ತಯಾರಿಸುತ್ತಾರೆ.

ಹೊಸತು ಊಟ: ಹೊಸ್ತು ಹಬ್ಬದಂದು ಅನ್ನದ ಪಾತ್ರೆಯಲ್ಲಿ ಬೇಯುತ್ತಿರುವ ಹಳೇ ಅಕ್ಕಿಯೊಂದಿಗೆ ಹೊಸ ಭತ್ತದ ಕಾಳುಗಳನ್ನು ಸುಲಿದು ಹಾಕುವುದು ಹಿಂದಿನಿಂದಲೂ ಇದೆ. ನಾನಾ ತರಕಾರಿಗಳ ಹಲವು ಬಗೆಯ ಸಾಂಬಾರು ಪಲ್ಯ ಹಾಗೂ ಪಾಯಸ, ಸಿಹಿ ಊಟ ಸಿಹೊಸ್ತು ಹಬ್ಬದ ಸ್ಪೇಶಲ್ ಆಗಿರುತ್ತೆ. ಊಟ ಮಾಡುವ ಮೊದಲು ಎಲ್ಲರ ಬಳಿ `ನೆವ್ವೆ ಜೈತಾ’ (ಹೊಸ್ತು ಊಟ ಮಾಡುವೆ) ಎನ್ನುವ ಸಂಪ್ರದಾಯವಿದೆ.

ಒಂದೇ ಹಬ್ಬವಾದರೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ವಿಧಿವಿಧಾನಗಳ ಮೂಲಕ ಆಚರಿಸುತ್ತಾರೆ. ಏಕೆಂದರೆ ಒಂದು ಅಧ್ಯಯನದ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ಹನ್ನೆರಡು ಕಿಮೀ ಗಳಿಗೆ ಆಯಾ ಪ್ರದೇಶದ ಭಾಷೆ, ಆಚರಣೆ ವಿಧಿವಿಧಾನಗಳು ಭಿನ್ನವಾಗಿರುತ್ತದೆ ಎಂದು ತಿಳಿದು ಬಂದಿದೆ. ಕಾಲ ಬದಲಾಗಿದೆ. ಭತ್ತದ ಗದ್ದೆಗಳು ಮನೆ ಸೈಟುಗಳಾಗಿ ಪರಿವರ್ತನೆಯಾಗುತ್ತಿದ್ದು, ರೈತರು ಕೃಷಿಕಾಯಕದಿಂದ ವಿಮುಖರಾಗುತ್ತಿದ್ದಾರೆ. ಗದ್ದೆಯಿಂದ ಹೊಸ್ತು ಆಚರಣೆಗೆ ಭತ್ತದ ಕದಿರನ್ನು ತರಲು ಗದ್ದೆಗಳೇ ಇಲ್ಲ. ಆಯಾ ದೇವಸ್ಥಾನದವರು ದೂರದ ಹಳ್ಳಿ ಪ್ರದೇಶದ ರೈತರಿಗೆ ನಿರ್ದಿಷ್ಟ ಮೊತ್ತವನ್ನು ನೀಡಿ ಕದಿರನ್ನು ಖರೀದಿಸಿ ಜನರಿಗೆ ಹಂಚುವ ಪರಿಸ್ಥಿತಿ ಬಂದಿದೆ. ಕಾಲಕ್ರಮೇಣ ಈ ಪರಿಸ್ಥಿತಿ ಮತ್ತಷ್ಟೂ ಬದಲಾವಣೆ ಆಗಿ ಅಂಗಡಿಗಳಿಂದ ಕದಿರನ್ನು ಜನರು ಖರೀದಿಸುವ ಪರಿಸ್ಥಿತಿ ಬಂದರೂ ಬರಬಹುದು.

ನಮ್ಮ ಹಬ್ಬ ಗಳು ಸಂಕೀರ್ಣಗೊಳ್ಳುತ್ತಿರುವ ಸಂಬಂಧಗಳನ್ನು ಬೆಸೆಯುವ ನೆಲೆಯಲ್ಲಿ ಅರ್ಥ ಪೂರ್ಣವಾಗಿದೆ. ಹೊಸ್ತು ಹಬ್ಬದ ಆಚರಣೆಯ ಹಿಂದೆ ನಮ್ಮ ದಿವ್ಯ ಪರಂಪರೆಯ ಚೈತನ್ಯ ವಿದೆ. ನವರಾತ್ರಿಯ ಒಂಬತ್ತು ದಿನವೂ ಹೊಸ್ತು ಹಬ್ಬ ಆಚರಣೆಗೆ ಅವಕಾಶವಿರುತ್ತದೆ. ಆದರಲ್ಲೂ ಶ್ರೀ ಅಮ್ಮನವರಿಗೆ ಪ್ರಿಯವಾದ ಸ್ವಾತಿ ನಕ್ಷತ್ರದಲ್ಲಿ ಹೊಸ್ತು ಆಚರಿಸಿದರೆ ಶ್ರೇಯಸ್ಕರ ಎಂಬ ನಂಬಿಕೆಯೂ ಇದೆ. ನಮ್ಮ ಸಂಸ್ಕೃತಿ ಸಂಪ್ರದಾಯಗಳು ಕಾಲಗತಿಯಲ್ಲಿ ಹಲವು ಬದಲಾವಣೆಗಳನ್ನು ಕಂಡಿವೆ. ಕಾಲಾಯ ತಸ್ಮೈ ನಮಹಾ ಎಂಬಂತೆ ಅದರೊಂದಿಗೆ ವಿಧೇಯಿಸಿಕೊಳ್ಳಬೇಕಾದ ಅನಿವಾರ್ಯತೆಯ ಕಾಲಘಟ್ಟದಲ್ಲಿ ನಾವಿದ್ದೇವೆ. ಅದು ಇಂದಿನ ಪರಿಸ್ಥಿತಿಗೆ ಅನಿವಾರ್ಯವೂ ಹೌದು. ಏಕೆಂದರೆ ಪರಿವರ್ತನೆ ಜಗದ ನಿಯಮ.

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *