ಬೆಂಕಿಯಲ್ಲಿ ಅರಳಿದ ಹೂವುಗಳು: ಖಾರ್ವಿ ಮೀನುಗಾರ ಮಹಿಳೆಯರು

ಮೀನು ಮಾರಾಟ ಮಾಡುವ ಮಹಿಳೆಯರ ತಲಸ್ಪರ್ಶಿ ಅನುಭವ ಕಥನಗಳು ಆಲಿಸುತ್ತಾ ಹೋದರೆ ಕಣ್ಣು ತೇವಗೊಳ್ಳುತ್ತದೆ. ಸುಮಾರು ನಲವತ್ತು ವರ್ಷಗಳಿಂದ ಈ ಫೀಲ್ಡ್ ನಲ್ಲಿ ತಮ್ಮ ಬದುಕನ್ನು ಸವೆಸುತ್ತಾ ಬಂದವರು ಇದ್ದಾರೆ. ಅಂದು ಮೀನು ಒಣಗಿಸುವ ಕಮಾನುಗಳು ಇದ್ದಾಗ ಬೋಟ್ ನಿಂದ ತಲೆಹೊರೆಯಲ್ಲಿ ಮೀನುಗಳನ್ನು ತೆಗೆದುಕೊಂಡು ಹೋಗಬೇಕಾಗಿತ್ತು. ರಣರಣ ಬಿಸಿಲು, ಕಾಲನ್ನು ಸುಡುವ ಉರಿಯಲ್ಲಿ ಸಾಗಬೇಕಾಗಿತ್ತು. ಬುಟ್ಟಿಯಿಂದ ಮೀನುಗಳನ್ನು ಹಾರಿಸಿಕೊಂಡು ಹೋಗಲು ತಲೆ ಮೇಲೆ ಸುತ್ತುತ್ತಿದ್ದ ಹದ್ದು ಕಾಗೆಗಳ ಉಪಟಳಗಳ ನಡುವೆ ಕಮಾನಿಗೆ ಮೀನು ಹಾಕಬೇಕಾಗಿತ್ತು. ಕ್ರಮೇಣ ಕಮಾನುಗಳು ಬಂದ್ ಆದವು. ಈ ಮೀನು ಮಾರಾಟ ಮಾಡುವ ಮಹಿಳೆಯರ ನೋವನ್ನು ಆಲಿಸುವ ಕಿವಿಗಳು, ನೋಡುವ ಕಣ್ಣುಗಳು, ಸ್ಪಂದಿಸುವ ಹೃದಯಗಳು ಇದ್ದರೆ ಅವರಿಗೆ ಸ್ವಲ್ಪವಾದರೂ ಸಮಾಧಾನವಾಗಬಹುದು. ತಮ್ಮನೋವಿನಲ್ಲಿ ಸಮಾಜದ ಸ್ಪಂದನೆ ಇರಬೇಕೆಂದು ಮೀನು ಮಾರಾಟ ಮಾಡುವ ಮಹಿಳೆಯರು ಬಯಸುತ್ತಾರೆ.

ಕಠಿಣ ಪರಿಶ್ರಮದ ಜೀವನ ನಿರ್ವಹಣೆಯ ವಿಷಯದಲ್ಲಿ ಮೀನುಗಾರ ಮಹಿಳೆಯರ ಬದುಕು ಇತರರಿಕ್ಕಿಂತ ಸಂಪೂರ್ಣ ವಿಭಿನ್ನವಾಗಿದೆ. ಕರಾವಳಿಯಲ್ಲಿ ಮಹಿಳೆಯರು ಹಲವು ದಶಕಗಳಿಂದ ಮೀನುಗಾರಿಕೆ ಕಸುಬಿನಲ್ಲಿ ತೊಡಗಿಸಿಕೊಂಡಿದ್ದು, ಅವರ ಬದುಕು ಸಂಘರ್ಷ ಮಯವಾಗಿದೆ ಮತ್ತು ಬವಣೆಯಿಂದ ಕೂಡಿದೆ. ಶಿಕ್ಷಣ, ಆರೋಗ್ಯ, ಉದ್ಯಮಗಳಲ್ಲಿ ಸಮಾಜ ಪ್ರಗತಿ ಕಂಡರೂ ಮೀನು ಮಾರಾಟ ಮಾಡುವ ಮಹಿಳೆಯರ ಪರಿಸ್ಥಿತಿ ಇನ್ನೂ ಸುಧಾರಣೆ ಕಂಡಿಲ್ಲ. ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೀನು ವ್ಯಾಪಾರಿ ಮಹಿಳೆ ತನ್ನ ಕುಟುಂಬಕ್ಕೆ ಆಧಾರಸ್ಥಂಭವಾಗಿ ಕಾರ್ಯ ನಿರ್ವಹಿಸುತ್ತಾ ಜೀವ ಸವೆಯುತ್ತಾಳೆ.

ಬೆಂಕಿಯಲ್ಲಿ ಅರಳಿದ ಹೂವಾಗಿ ತನ್ನನ್ನು ತಾನೇ ಕುಟುಂಬದ ಒಳಿತಿಗಾಗಿ ಸಮರ್ಪಿಸುವ ಅವಳ ತ್ಯಾಗಕ್ಕೆ ಬೆಲೆ ಕಟ್ಟಲು ಖಂಡಿತಾ ಸಾಧ್ಯವಿಲ್ಲ. ಅವಳ ಕೊಡುಗೆ ಅನನ್ಯ ಅದ್ಯಮ್ಯ. ಹೀಗೆ ತನ್ನ ಕುಟುಂಬಕ್ಕಾಗಿ ಜೀವ ಸವೆಸುವ ಮೀನುಗಾರ ಮಹಿಳೆಯರ ದೇಹಾರೋಗ್ಯ ಅಂತಿಮವಾಗಿ ವಿಲಕ್ಷಣ ಪರಿಸ್ಥಿತಿ ಪಡೆದುಕೊಳ್ಳುತ್ತದೆ. ವ್ಯಾಪಾರ ಮಾಡಲು ದಿನವಿಡೀ ನಿಂತುಕೊಂಡೇ ಇರುವ ಪರಿಸ್ಥಿತಿ, ಹೊತ್ತು ದಾಟಿದ ಮೇಲೆ ಊಟ, ಬಿಸಿಲು ಮಳೆ ಗಾಳಿಗಳಿಗೆ ಮೈಯ್ಯೊಡ್ಡಿ ಕೆಲಸ ಮಾಡುವುದರಿಂದ ದೇಹಾರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಇದರಿಂದ ಮುಖ್ಯ ವಾಗಿ ಕೈಕಾಲು ಗಂಟು ನೋವು, ಸೊಂಟ ನೋವು, ಅಲರ್ಜಿ, ಆಯಾಸ ಮತ್ತಿತರ ಕಾಯಿಲೆಗಳು ಆವರಿಸಿಕೊಂಡು ಧೀರ್ಘ ಕಾಲೀನ ಯಾತನೆಗೆ ತುತ್ತಾಗಬೇಕಾಗುತ್ತದೆ. ತನ್ನ ಬಗ್ಗೆ ಕಿಂಚಿತ್ತೂ ಚಿಂತಿಸದೇ ಮಕ್ಕಳು ಕುಟುಂಬದ ನಿರ್ವಹಣೆಗೆ ದುಡಿಯುವ ಮೀನುಗಾರ ಮಹಿಳೆಯರು ನಿಜವಾಗಿಯೂ ತ್ಯಾಗಮಯಿಗಳು.

ಸೋತು ಸುಣ್ಣವಾಗುವ ಅವರ ಬದುಕು ಪಲ್ಲಟಗೊಳ್ಳುತ್ತಲೇ ಸಾಗುತ್ತದೆ. ಮಕ್ಕಳ ಲಾಲನೆ ಪಾಲನೆ ವಿದ್ಯಾಭ್ಯಾಸಕ್ಕಾಗಿ ತನ್ನ ದುಡಿಮೆಯ ಬಹುಭಾಗವನ್ನು ವಿನಿಯೋಗಿಸುವ ಅವರ ಬದುಕಿನ ಪ್ರತಿಕ್ಷಣವೂ ಹೋರಾಟವಾಗಿ ಸಲ್ಲಲ್ಪಡುತ್ತದೆ. ಮೀನು ಮಾರಾಟ ಮುಗಿಸಿ ಬಂದ ಬಳಿಕವೂ ಅವರಿಗೆ ವಿಶ್ರಾಂತಿವೆಂಬುದಿಲ್ಲ. ಮನೆಯ ಚಾಕರಿ, ಗಂಡ ಮತ್ತು ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವುದು ಹೀಗೆ ಅವರ ಬದುಕು ಹೈರಾಣಾಗಿ ಹೋಗುತ್ತದೆ. ಮಕ್ಕಳಿಗೆ ಅಮ್ಮ ಪೇಟೆಯಿಂದ ಬರುವಾಗ ಏನಾದರೂ ತಿಂಡಿ ತಂದುಕೊಟ್ಟರೆ ಭಾರೀ ಖುಷಿ. ಮಕ್ಕಳ ಕಾತರ ಕಣ್ಣುಗಳು ಅಮ್ಮನ ಬರುವಿಕೆಯ ನಿರೀಕ್ಷೆಯಲ್ಲಿರುತ್ತದೆ.

ಮೀನುಗಾರಿಕೆ ಕ್ಷೇತ್ರದ ಅವಿಭಾಜ್ಯ ಅಂಗವಾಗಿರುವ ಮಹಿಳೆಯರು ಮೀನು ಖರೀದಿ, ಒಣಗಿಸುವುದು, ಸಾಗಿಸುವುದು, ಸಂಗ್ರಹಿಸುವುದು, ಕತ್ತರಿಸುವುದು, ಸ್ವಚ್ಛಗೊಳಿಸುವುದು ಹೀಗೆ ಬಹುತೇಕ ಎಲ್ಲಾ ವಿಭಾಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೊರಾನಾ ಮೊದಲನೇ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಮುಖ್ಯವಾಗಿ ಮೀನುಗಾರ ಮಹಿಳೆಯರು ಪಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಸರಿಯಾಗಿ ಮೀನು ಮಾರಾಟ ಮಾಡಲಾಗದೇ ಕುಟುಂಬ ನಿರ್ವಹಣೆ ಮಾಡಲು ಸಂಕಟಪಟ್ಟಿದ್ದರು. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೀನುಗಾರಿಕೆ ಮಹಿಳೆಯರ ಬದುಕು ಬವಣೆಯ ಬಗ್ಗೆ ಅಧ್ಯಯನ ನಡೆಸಲು 2014 ರಲ್ಲಿ ಬಿಜಾಪುರ ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳು ಬಂದಿದ್ದರು. ಸರ್ಕಾರ ಈ ಅಧ್ಯಯನಕ್ಕೆ 3.70 ಲಕ್ಷ ಮಂಜೂರು ಮಾಡಿತ್ತು. ವಿದ್ಯಾರ್ಥಿಗಳು ಮೀನುಗಾರ ಮಹಿಳೆಯರ ಬದುಕು ಬವಣೆಗಳ ಬಗ್ಗೆ ಎಷ್ಟರಮಟ್ಟಿಗೆ ಆಧ್ಯಯನ ನಡೆಸಿತ್ತು ಗೊತ್ತಿಲ್ಲ. ಆದರೆ ಅಧ್ಯಯನದ ನೆಪದಲ್ಲಿ ವಿದ್ಯಾರ್ಥಿಗಳಿಗೆ ಉಡುಪಿ ಮತ್ತು ಮಂಗಳೂರು ಪಿಕ್ನಿಕ್ ಮಾಡುವ ಭಾಗ್ಯ ಒದಗಿ ಬಂದಿದ್ದು ಸುಳ್ಳಲ್ಲ.

ಮೀನುಗಾರಿಕೆ ಇಲಾಖೆ ಮೀನುಗಾರ ಮಹಿಳೆಯರಿಗೆ ಸಾಲಸೌಲಭ್ಯ ಕೊಡಿಸುವಲ್ಲಿ ಬ್ಯಾಂಕ್ ಮತ್ತು ಮೀನುಗಾರಿಕೆ ಮಹಿಳೆಯರ ನಡುವಿನ ಸಂಪರ್ಕಕೊಂಡಿಯಾಗಬೇಕು ಎಂದು ಅಂದಿನ ಮೀನುಗಾರಿಕೆ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರು ಹೇಳಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದ್ದು, ಸರ್ಕಾರದ ಯೋಜನೆಗಳು ಮೀನುಗಾರ ಮಹಿಳೆಯರನ್ನು ತಲುಪಬೇಕಾಗಿದೆ. ಅಗಾಧ ಪರಿಶ್ರಮ, ಕುಟುಂಬ ನಿರ್ವಹಣೆಯ ಜೀವನ್ಮುಖಿ ಪಯಣದ ಅನನ್ಯ ಸಂಕೇತವಾಗಿರುವ ಮೀನುಗಾರಿಕೆ ಮಹಿಳೆಯರ ಸಮರ್ಪಣಾ ಮನೋಭಾವವನ್ನು ಪ್ರತಿಯೊಬ್ಬರು ಗೌರವಿಸಬೇಕಾಗಿದೆ. ಅವರ ಪರಿಶ್ರಮ ತ್ಯಾಗದ ಫಲದಿಂದ ಸುಂದರ ಬದುಕು ಕಟ್ಟಿಕೊಂಡವರು ಸದಾ ಸ್ಮರಿಸಿಕೊಳ್ಳಬೇಕು. ಹೆಣ್ಣನ್ನು ಗೌರವಿಸುವ ಸಮಾಜ ಎಂದೆಂದಿಗೂ ನಳನಳಿಸುತ್ತದೆ.

ಸುಧಾಕರ್ ಖಾರ್ವಿ
Editor
www.kharvionline.com

One thought on “ಬೆಂಕಿಯಲ್ಲಿ ಅರಳಿದ ಹೂವುಗಳು: ಖಾರ್ವಿ ಮೀನುಗಾರ ಮಹಿಳೆಯರು

  1. ನಮ್ಮ ಸಮುದಾಯದ ಸ್ತ್ರೀ ಶಕ್ತಿಯ ಬಗ್ಗೆ ಮತ್ತು ನವರಾತ್ರಿಯ ಸಮಯದಲ್ಲಿ ಅರ್ಹವಾದ ಲೇಖನ. ನೀವು ಹೇಳಿದ್ದು ಸರಿಯಾಗಿದೆ… ನಗರದ ಮಹಿಳೆಯರು ಮಾತ್ರ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುವ ಹಾಗೆ ಪ್ರಸ್ತುತಪಡಿಸುವ ಇಂದಿನ ಮಾಧ್ಯಮಗಳು … ಆದರೆ ನಮ್ಮ ಮೀನುಗಾರ ಮಹಿಳೆಯರು ಯಾವುದೇ ಐಶೋಆರಾಮಿ ಸೌಲತ್ತುಗಳಿಲ್ಲದೆ ಕೂಡ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ … infact ಕೆಲವೊಮ್ಮೆ ವಿದ್ಯಾವಂತ ವರ್ಗಕ್ಕಿಂತ ಉತ್ತಮವಾಗಿ ನಿಭಾಯಸುತಾರೆ. ದಿನವಿಡೀ ಬಿಸುಲು ಮಳೆ ಎನ್ನದೆ ಅನುಭವಿಸಿದ ದೈಹಿಕ ಒತ್ತಡವಿದ್ದರೂ ಅವಳು ಮನೆಗೆ ಹಿಂದಿರುಗುವಾಗ ಕಾಳಜಿಯುಳ್ಳ ತಾಯಿ, ಸೊಸೆ ಅಥವಾ ಮಡದಿಯ ಪಾತ್ರ ವಹಿಸುತ್ತಾಳೆ … ನಮ್ಮ ಮೀನುಗಾರ ಮಹಿಳೆಯರ ರೂಪದಲ್ಲಿ ಸ್ತ್ರೀ ಶಕ್ತಿಗೆ ಕೋಟಿ ನಮನಗಳು.

Leave a Reply

Your email address will not be published. Required fields are marked *