ನವರಾತ್ರಿಯ ಪರ್ವಕಾಲದಲ್ಲಿ ಸಂಪನ್ನಗೊಳ್ಳುವ ಹುಲಿವೇಷದ ಜಾನಪದ ನೃತ್ಯ ಕಲೆಗೂ, ನವರಾತ್ರಿಯ ಧಾರ್ಮಿಕ ಪರಂಪರೆ ಕಥನಗಳಿಗೂ ಅವಿನಾಭಾವ ಸಂಬಂಧ ಬೆಸೆದುಕೊಂಡಿದೆ. ಶ್ರೀ ದೇವಿ ರಾಕ್ಷಸರನ್ನು ಸಂಹರಿಸಿಕೊಂಡು ಬರುವಾಗ ವಾಹನವಾದ ಹುಲಿ ರಾಕ್ಷಸರ ರುಂಡದೊಂದಿಗೆ ಆಟವಾಡುತ್ತಿರುತ್ತದೆ. ಇದರ ಪ್ರತೀಕವಾಗಿ ನವರಾತ್ರಿಯಲ್ಲಿ ಹುಲಿವೇಷ ನೃತ್ಯ ಪ್ರದರ್ಶನ ಸಾಕಾರಗೊಳ್ಳುತ್ತದೆ. ರಾಕ್ಷಸರ ಸಂಹಾರದ ಸಂಭ್ರಮ ಹುಲಿವೇಷ ರೂಪದಲ್ಲಿ ಅನಾವರಣಗೊಳ್ಳುತ್ತಿದ್ದು ಕರಾವಳಿಯಲ್ಲಿ ನವರಾತ್ರಿ ಹುಲಿವೇಷದ ಅಬ್ಬರ ಜೋರಾಗಿರುತ್ತದೆ.
ಕೊಂಕಣಿ ಖಾರ್ವಿ ಸಮಾಜ ಪ್ರತಿಭೆಗಳ ಕಣಜ. ಬಹುತೇಕ ಎಲ್ಲಾ ಕ್ಷೇತ್ರದಲ್ಲೂ ನಮ್ಮ ಸಮಾಜದ ಪ್ರತಿಭೆಗಳು ಪಾದಾರ್ಪಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದು ಸಮಾಜ ಉನ್ನತಿಯ ಶುಭ ಸೂಚನೆಯೂ ಹೌದು. ಕುಂದಾಪುರ ಖಾರ್ವಿ ಕೇರಿಯ ಚಿಕ್ಕ ಮಕ್ಕಳು ಪ್ರಸ್ತುತ ಹುಲಿವೇಷಧಾರಿಯಾಗಿ ಮಿಂಚುತ್ತಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ಹುಲಿವೇಷ ಕಟ್ಟುವ ಆಚರಣೆಗೆ ನಾಂದಿ ಹಾಡಿದ್ದರೂ ಕೆಲವು ಕಾರಣಗಳಿಂದಾಗಿ ಒಂದು ವರ್ಷಕ್ಕೆ ಈ ಹುಲಿವೇಷದ ಸಂಭ್ರಮ ಸೀಮಿತವಾಯಿತು. ಆದರೆ ಇದೀಗ ಮಕ್ಕಳ ಅತೀವವಾದ ಬಯಕೆಯಂತೆ ಹುಲಿವೇಷ ಕಟ್ಟಲಾಗುತ್ತಿದೆ. ಮಕ್ಕಳಲ್ಲಿ ಹುದುಗಿರುವ ಅಪಾರವಾದ ಉತ್ಕಟವಾದ ಆಸೆ, ಆಸಕ್ತಿ ಹಂಬಲ ಕಲಾಫ್ರೌಡಿಮೆ ಹುಲಿವೇಷದ ನೃತ್ಯ ಪ್ರದರ್ಶನವಾಗಿ ಸಂಪನ್ನಗೊಂಡಿದೆ.
ಈ ಹುಲಿವೇಷಧಾರಿ ಏಳು ಮಕ್ಕಳು ಮನೆ ಮನೆಗೆ ತೆರಳಿ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ. ನವರಾತ್ರಿ ಸಂಭ್ರಮ ಈ ಮರಿಹುಲಿಗಳಿಂದ ಕಳೆಗಟ್ಟುತ್ತಿದೆ. ಸಾಮಾನ್ಯವಾಗಿ ದೊಡ್ಡವರ ಜೊತೆಗೆ ಮರಿವೇಷಧಾರಿಗಳು ಹುಲಿವೇಷ ಹಾಕಿಕೊಳ್ಳುವುದು ರೂಡಿ. ಇಲ್ಲಿ ಮಕ್ಕಳೇ ಮರಿಹುಲಿಗಳಾಗಿ ಮಂಚೂಣಿಯಲ್ಲಿ ವಿಜೃಂಭಿಸುತ್ತಿದ್ದಾರೆ. ಇದೊಂದು ವಿಶೇಷ ಸಂಗತಿಯಾಗಿದೆ. ಖಾರ್ವಿಕೇರಿ ಪರಿಸರದ 13 ರಿಂದ 14 ವರ್ಷದೊಳಗಿನ ಏಳರಿಂದ ಒಂಬತ್ತನೇ ತರಗತಿ ಓದುತ್ತಿರುವ ಮಕ್ಕಳು ಹುಲಿವೇಷವನ್ನು ಹಾಕಿಕೊಂಡು ಮಿಂಚುತ್ತಿದ್ದಾರೆ. ಖಾರ್ವಿ ಕೇರಿಯ ಮಣಿ ಖಾರ್ವಿ ಯವರು ಹುಲಿವೇಷಧಾರಿ ಮಕ್ಕಳಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ವಿಶ್ವಾಸ್ ಖಾರ್ವಿ, ವಿಶಾಲ್ ಖಾರ್ವಿ, ಶರಣ್ ಖಾರ್ವಿ, ರೀತೇಶ್ ಖಾರ್ವಿ, ಸುರಂಜನ್ ಖಾರ್ವಿ, ಆಕಾಶ್ ಖಾರ್ವಿ, ರೋಶನ್ ಖಾರ್ವಿ ಎಂಬ ಏಳು ಮಕ್ಕಳು ಬಣ್ಣ ಬಳಿದುಕೊಂಡು, ಹುಲಿವೇಷ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ.
ಮಕ್ಕಳ ನೃತ್ಯ ಪ್ರದರ್ಶನ ಕುಂದಾಪುರದಲ್ಲಿ ಬಹು ಜನಪ್ರಿಯವಾಗಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಹುಲಿವೇಷದ ಸಾಂಪ್ರದಾಯಿಕ ಪರಂಪರೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವಲ್ಲಿ ಈ ಮಕ್ಕಳು ದಿಟ್ಟ ಹೆಜ್ಜೆ ಇಟ್ಟಿರುವುದು ಪ್ರಶಂಸೆಗೆ ಪಾತ್ರವಾಗಿದೆ. ಎಳೆಯ ಮಕ್ಕಳ ಈ ಕಲಾಫ್ರೌಡಿಮೆಗೆ ಸೂಕ್ತ ಬೆಂಬಲ ಮತ್ತು ಹೆಚ್ಚಿನ ಪ್ರೋತ್ಸಾಹ ದೊರಕುವುದು ಅಗತ್ಯವೆಂದು ಮಣಿ ಖಾರ್ವಿ ಅಭಿಪ್ರಾಯ ಪಡುತ್ತಾರೆ. ಕೆಲವರು ಮಕ್ಕಳ ಈ ಹುಲಿವೇಷವನ್ನು ವಿಭಿನ್ನ ದೃಷ್ಟಿ ಕೋನದಿಂದ ನೋಡುತ್ತಾರೆ ಎಂಬ ಮಾತನ್ನು ಈ ಸಂದರ್ಭದಲ್ಲಿ ಅವರು ನುಡಿಯುತ್ತಾರೆ. ಮಕ್ಕಳಿಗೆ ಚರ್ಮ ಕ್ಕೆ ಹಾನಿಕಾರಕವಲ್ಲದ ಬಣ್ಣಗಳನ್ನು ಬಳಿಯಲಾಗಿದೆ. ಪ್ರತಿನಿತ್ಯ ಪ್ರದರ್ಶನ ಮುಗಿದ ಬಳಿಕ ಬಣ್ಣವನ್ನು ಬದಲಾಯಿಸಿ ಬೇರೆ ಬಣ್ಣ ಹಾಕುತ್ತಾರೆ.
ಖಾರ್ವಿಕೇರಿಯ ವಿದ್ಯಾರಂಗ ಮಿತ್ರ ಮಂಡಳಿಯಲ್ಲಿ ಈ ಏಳೂ ಜನ ಮರಿಹುಲಿ ವೇಷಧಾರಿ ಮಕ್ಕಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ನವರಾತ್ರಿಯ ಒಂಬತ್ತು ದಿನವೂ ಈ ಮಕ್ಕಳು ತಮ್ಮ ಹೆತ್ತವರನ್ನು ಬಿಟ್ಟು ಇಲ್ಲಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಹುಲಿವೇಷದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಪ್ರಸ್ತುತ ಹೆಚ್ಚಿನ ಕಡೆ ಹುಲಿವೇಷಧಾರಿಗಳಿಗೆ ಹಾಕುವ ಬಣ್ಣಗಳು ರಾಸಾಯನಿಕದಿಂದ ಕೂಡಿರುತ್ತದೆ. ಹೈಡ್ರೋಕಾರ್ಬನ್ ದ್ರಾವಣ ಮತ್ತು ಸೀಸದ ದ್ರಾವಣವನ್ನು ಬಣ್ಣ ಬಳಿಯಲು ಬಳಸಲಾಗುತ್ತದೆ. ಈ ಹಿಂದೆ ನೈಸರ್ಗಿಕವಾದ ಅರಶಿನ ಕುಂಕುಮ ಇತ್ಯಾದಿ ಬಣ್ಣಗಳನ್ನು ವೇಷಧಾರಿಗಳಿಗೆ ಬಳಿಯಲಾಗುತ್ತಿತ್ತು.
ನವರಾತ್ರಿಯ ಹುಲಿವೇಷ ಕಟ್ಟುವ ಈ ಸಂದರ್ಭದಲ್ಲಿ ಕುಂದಾಪುರದ ಪ್ರಖ್ಯಾತ ಹುಲಿ ನಾಗೇಶಣ್ಣರವರನ್ನು ಸ್ಮರಿಸಿಕೊಳ್ಳುವುದು ಉಚಿತ. ಕುಂದಾಪುರದ ಹುಲಿ ಎಂದೇ ಜನಪ್ರಿಯತೆ ಗಳಿಸಿದ ನಾಗೇಶಣ್ಣ ಕುಂದಾಪುರ ಪರಿಸರದಲ್ಲಿ ಹುಲಿವೇಷದ ಪರಂಪರೆ ಯನ್ನು ಉಳಿಸಿ ಬೆಳೆಸುವಲ್ಲಿ ಅಮೋಘ ಕೊಡುಗೆ ನೀಡಿದ್ದರು. 2018 ರಲ್ಲಿ ವಿಧಿವಶರಾದ ನಾಗೇಶಣ್ಣರವರ ಹುಲಿವೇಷಧಾರಿಗಳಿಗೆ ಆದರ್ಶ ಪ್ರಾಯರಾಗಿದ್ದಾರೆ. ಕುಂದಾಪುರ ಪರಿಸರದ ಹುಲಿವೇಷದ ಜನಪದ ನೃತ್ಯ ಪರಂಪರೆಗೆ ವೈಭವಪೂರ್ಣ ಇತಿಹಾಸವಿದೆ.
ನವರಾತ್ರಿಯ ಸಂದರ್ಭದಲ್ಲಿ ಕುಂದಾಪುರ ಪರಿಸರದಲ್ಲಿ ಹುಲಿವೇಷ ವೈಶಿಷ್ಟ್ಯತೆ ಸಂಭ್ರಮಗಳು ತಾರಕಕ್ಕೇರುತ್ತದೆ. ಧಾರ್ಮಿಕ ಪರಂಪರೆಯ ಹಿನ್ನಲೆಯ ಜನಪದ ನೃತ್ಯ ಪ್ರಕಾರವಾದ ಹುಲಿವೇಷವನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಈ ನಿಟ್ಟಿನಲ್ಲಿ ಮರಿಹುಲಿ ವೇಷಧಾರಿ ಮಕ್ಕಳ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ. ಮಕ್ಕಳಲ್ಲಿ ಹುದುಗಿರುವ ಅಪೂರ್ವ ಕಲೆಯನ್ನು ಹೊರ ಜಗತ್ತಿಗೆ ಪರಿಚಯಿಸಲು ಹುಲಿವೇಷ ಸಹಕಾರಿಯಾಗಿದ್ದು, ಇದಕ್ಕೆ ಮುಖ್ಯವಾಗಿ ಸಾರ್ವಜನಿಕರ ಸಹಕಾರ ಸಹಭಾಗಿತ್ವದ ಅಗತ್ಯವಿದೆ. ಸ್ವಯಂ ಆಸಕ್ತಿ, ಕಲಾಪ್ರೇರಣೆಯಿಂದ ಹುಲಿವೇಷ ಕಟ್ಟಿಕೊಂಡು ಹುಲಿವೇಷ ಪರಂಪರೆಯನ್ನು ಬೆಳೆಸುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಖಾರ್ವಿಕೇರಿಯ ಈ ಹುಲಿವೇಷದ ಮರಿಹುಲಿಗಳಿಗೆ ಖಾರ್ವಿ ಆನ್ಲೈನ್ ಸಂಭ್ರಮದ ಶುಭ ಹಾರೈಸುತ್ತದೆ.
ಸುಧಾಕರ್ ಖಾರ್ವಿ
Editor
www.kharvionline.com
ಕುಂದಾಪುರ ಖಾರ್ವಿ ಕೇರಿಯ ಮರಿಹುಲಿಗಳ ಆರ್ಭಟ ಜೋರಾಗಿದೆ. ಚಿತ್ತಾಕರ್ಷಕ ನೋಟ. ಕಣ್ಮನ ಸೆಳೆಯುವ ನೃತ್ಯ ಪ್ರದರ್ಶನ. ಬಾಲಪ್ರತಿಭೆಗಳ ಕಲಾಪ್ರತಿಭೆಯ ವಿಸ್ತ್ತ್ರತ ಅನಾವರಣ.👌👌👍👍👋👋👋👋👋🙏🙏🙏🙏🙏🌳👍👌🎉💐💐🎉
These young talents need lot of encouragement, really appreciate their talent and wish them all the best. Hope they become one of the best “ಹುಲಿವೇಷ” in Karavali.