ಕಾಸರಕೋಡು ಟೊಂಕದಲ್ಲಿ ಕಪ್ಪು ದೈತ್ಯರ ಅಟ್ಟಹಾಸ

ಸಹೃದಯಿ ಬಂಧುಗಳೇ ಕಳೆದ ಜುಲೈ ತಿಂಗಳಲ್ಲಿ ಖಾರ್ವಿ ಆನ್ಲೈನ್ ಅಂಕಣದಲ್ಲಿ ನಾನು ಕರಾವಳಿ ಕಡಲತೀರಗಳಿಗೆ ಕಪ್ಪು ದೈತ್ಯರ ಆಕ್ರಮಣ ಎಂಬ ಲೇಖನ ಬರೆದಿದ್ದೆ. ತನ್ನ ಕಕ್ಷೆಗೆ ಬರುವ ಎಲ್ಲಾ ವಸ್ತುಗಳನ್ನು ಗುಳುಂ ಮಾಡಬಲ್ಲ ಆಕಾಶದ ಅಪಾಯಕಾರಿ ಕಾಯವೇ ಕಪ್ಪುದೈತ್ಯ. ಈ ಕಪ್ಪು ದೈತ್ಯರು ಈಗ ಕಾಸರಕೋಡು ಟೊಂಕದಲ್ಲಿ ಖಾಸಗಿ ಬಂದರು ನಿರ್ಮಾಣ ಕಾಮಗಾರಿಯಲ್ಲಿ ಅಪರವಾತರವೆತ್ತಿದ್ದಾರೆ.

ಜನ ವಿರೋಧಿ ಬಂದರು ನಿರ್ಮಾಣ ಯೋಜನೆಯನ್ನು ಪ್ರತಿಭಟಿಸಿ ಹಲವಾರು ಹೋರಾಟ ಪ್ರತಿರೋಧಗಳು ನಡೆದ ಬಳಿಕ ಕಪ್ಪು ದೈತ್ಯರು ತಮ್ಮ ಅಕ್ರಮ ಅನಧಿಕೃತ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದು, ಕಾಸರಕೋಡು ಬಡ ಮೀನುಗಾರರು ಮಹಿಳೆಯರು ಮತ್ತು ಮಕ್ಕಳ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿದ್ದಾರೆ. ತಮ್ಮ ಮಹಾದಂಡನಾಯಕನ ಅಣತಿಯಂತೆ ಬ್ರಿಟಿಷ್ ಸಾಮ್ರಾಜ್ಯದ ಒಡೆದು ಆಳುವ ಕುಹಕ ತಂತ್ರಗಾರಿಕೆಯನ್ನು ಪ್ರಯೋಗಿಸಿ ಕೆಲವು ಸೋಂಬೇರಿಗಳನ್ನು ಬಂದರು ನಿರ್ಮಾಣ ಕಾಮಗಾರಿಗೆ ಬಳಸಿಕೊಂಡಿದ್ದಾರೆ. ಮೀನುಗಾರರು ಪರಸ್ಪರ ಕಚ್ಚಾಟ ನಡೆಸಿದರೆ ತಮ್ಮ ಬೇಳೆಕಾಳು ಬೇಗ ಬೇಯುತ್ತದೆ ಎಂಬ ದುರುದ್ದೇಶ ಇದರಲ್ಲಿ ಅಡಗಿದ್ದು ಪ್ರತಿನಿತ್ಯ ವೆಂಬಂತೆ ಕಾಲುಕೆರೆದು ಜಗಳ ಮಾಡುವ ಕಾಸರಕೋಡು ಟೊಂಕ ಪ್ರದೇಶವನ್ನು ಅಶಾಂತಿಯ ತಾಣವಾಗಿಸಿದ್ದಾರೆ. ಇಡೀ ಕಾಸರಕೋಡು ತಮ್ಮದೆಂದು ಭಾವಿಸಿಕೊಂಡಿರುವ ಈ ಕಪ್ಪು ದೈತ್ಯರು ಇಲ್ಲಿ ರಸ್ತೆ ನಿರ್ಮಾಣದ ಅನಧಿಕೃತ ಉಸ್ತುವಾರಿ ವಹಿಸಿಕೊಂಡು ಬಡ ಮೀನುಗಾರರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ವಾಸ್ತವವಾಗಿ ಈ ರಸ್ತೆ ನಿರ್ಮಾಣಕ್ಕೆ ಯಾವುದೇ ತರದ ಕಾನೂನಿನ ಮಾನ್ಯತೆ ಇಲ್ಲ. ಉಸ್ತುವಾರಿ ವಹಿಸಿಕೊಂಡ ಕಪ್ಪು ದೈತ್ಯರ ನಾಯಕನಿಗೂ ಯಾವುದೇ ಕಂಟ್ರಾಕ್ಟರ್ ಪರವಾನಿಗೆ ಇಲ್ಲ.

ಕೆಲವೊಮ್ಮೆ ಐಷಾರಾಮಿ ಕಾರುಗಳಲ್ಲಿ ಆಗಮಿಸುವ ಈ ಕಪ್ಪು ದೈತ್ಯರು ಮಾರಕಾಯುಧಗಳನ್ನೂ ತೆಗೆದುಕೊಂಡು ಬರುವ ಬಗ್ಗೆ ಕೂಡಾ ವರ್ತಮಾನವಿದೆ. ಶತಾಯಗತಾಯ ಏನಾದರೂ ಸರಿ ವಾಣಿಜ್ಯ ಬಂದರು ನಿರ್ಮಾಣ ಮಾಡಲೇಬೇಕೆಂಬ ಹಠ ತೊಟ್ಟಿರುವ ಈ ಕಪ್ಪು ದೈತ್ಯರ ಬಿಗ್ ಬಾಸ್ ಇಲ್ಲಿ ದಾದಾಗಿರಿ ಮಾಡಿಸುತ್ತಿದ್ದಾನೆ. ಬಡ ಮೀನುಗಾರರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು ರಕ್ಷಣೆಗಾಗಿ ಕಾನೂನು ಪಾಲಕರ ಬಳಿ ಹೋದರೆ ನ್ಯಾಯ ಸಿಗುವ ಬದಲು ಸಂತ್ರಸ್ತರ ಮೇಲೇಯೇ ಕೇಸು ದಾಖಲಿಸಿ ಬಂಧಿಸುವ ಬೆದರಿಕೆ ಒಡ್ಡಲಾಗುತ್ತಿದೆ. ಮೀನುಗಾರರ ಕೂಗು ಅರಣ್ಯ ರೋಧನವಾಗಿದೆ. ಜನಹಿತ ಕಾಪಾಡಬೇಕಾದ ಜನಪ್ರತಿನಿಧಿ ನಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿರುವುದು ಜನರನ್ನುಧಿಗ್ಬ್ರಮೆಗೊಳಿಸಿದೆ.

ಈ ಕಪ್ಪು ದೈತ್ಯರೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿರುವ ಮೀರ್ ಸಾಧಿಕ್ ಗಳು ಮೀನುಗಾರರ ಹೋರಾಟವನ್ನು ದುರ್ಬಲಗೊಳಿಸುವ ಹವಣಿಕೆಯಲ್ಲಿದ್ದು,ಕಪ್ಪು ದೈತ್ಯರು ನೀಡಿದ ಮೃಷ್ಟಾನ್ನ ಭೋಜನದಿಂದ ಸಂತೃಪ್ತರಾಗಿ ಆತ್ಮವಂಚನೆಯ, ಸಮಾಜದ್ರೋಹದ ಕೆಲಸ ಮಾಡುತ್ತಿರುವ ವಿಷಯ ಜನ ಸಮೂಹದಲ್ಲಿ ಕೇಳಿ ಬಂದಿರುವುದು ಸುಳ್ಳಲ್ಲ. ಅಂದ ಹಾಗೆ ಕರಾವಳಿ ಕಡಲತೀರಕ್ಕೆ ಈ ಕಪ್ಪು ದೈತ್ಯರ ಹಾವಳಿ ಇಲ್ಲಿಗೇ ಸೀಮಿತವಾಗುವುದಿಲ್ಲ.ಕಾಸರಕೋಡು ಟೊಂಕ ಈ ಕಪ್ಪು ದೈತ್ಯರ ಪ್ರಯೋಗ ಶಾಲೆಯಾಗಿದ್ದು ದೇಶದ ಬಹುತೇಕ ಕಿರು ಬಂದರುಗಳ ಮೇಲೂ ಇವರ ವಕ್ರದೃಷ್ಟಿ ಬಿದ್ದಿದೆ.

ಖಾಸಗೀಕರಣದ ಬಿರುಗಾಳಿ ಜೋರಾಗಿ ಬೀಸುತ್ತಿರುವ ಈ ಸಂದರ್ಭದಲ್ಲಿ ಜನಸಮುದಾಯದ ಹಿತಾಸಕ್ತಿ ನಗಣ್ಯ ವಾಗುತ್ತದೆ. ಬದುಕಿನ ಎಲ್ಲ ನೆಲೆಯಲ್ಲಿ ರೂಪುಗೊಳ್ಳುತ್ತಿರುವ ಖಾಸಗೀಕರಣ ಅತ್ಯಂತ ಅಪಾಯಕಾರಿ ಯಾಗಿ ಪರಿಣಮಿಸುತ್ತಿದೆ. ಇಂತಹ ಸಂದರ್ಭವನ್ನೇ ಕಪ್ಪು ದೈತ್ಯರು ಹೊಂಚು ಹಾಕಿ ಕಾಯುತ್ತಿದ್ದಾರೆ.

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *