ಕೊರೊನಾದಿಂದ ಮರೆಯಾದ ದೀಪಾವಳಿಯ ಕಬಡ್ಡಿ ಸಂಭ್ರಮ

ದೀಪ ಬೆಳಕಿನ ಸಂಕೇತ ಪ್ರತಿಯೊಬ್ಬರಲ್ಲೂ ಅಂತರ್ಗತವಾಗಿರುವ ಈ ಜ್ಞಾನದೀವಿಗೆಯ ಬೆಳಗುವಿಕೆಯನ್ನು ನೆನಪಿಸುವ ಶುಭ ಸಂದರ್ಭದ ಪವಿತ್ರ ಹಬ್ಬವೇ ದೀಪಾವಳಿ. ಜಗತ್ತು ಸೃಷ್ಟಿಯಾದಾಗ ಕಾರ್ಗತ್ತಲಿನ ಆಕಾಶದಲ್ಲಿ ಪ್ರಜ್ವಲಿಸುತ್ತಿದ್ದ ಕೋಟ್ಯಾಂತರ ನಕ್ಷತ್ರಗಳ ಹೊಳಪೇ ಈ ಜಗತ್ತಿನಲ್ಲಿ ಮನುಷ್ಯರು ಆಚರಿಸತೊಡಗಿದ ಮೊದಲ ದೀಪಾವಳಿ ಎಂದು ವೇದ ಉಪನಿಷತ್ತುಗಳ ವೈಜ್ಞಾನಿಕ ಚಿಂತನೆಯ ತಿರುಳಿನಿಂದ ಕಂಡ ಪ್ರಾಚೀನ ಪರಂಪರೆಯ ಪ್ರಾಜ್ಞರು ಪ್ರಸ್ತುತ ಪಡಿಸುವ ವ್ಯಾಖ್ಯಾನ. ಆದರೆ ದೀಪಾವಳಿಯ ಪೌರಾಣಿಕ ಕಥನಗಳು ದೀಪಾವಳಿ ಹಬ್ಬಕ್ಕೆ ಜಗತ್ತಿನ ಸೃಷ್ಟಿಕರ್ತನಾದ ಭಗವಂತನ ಮಹಿಮೆ, ಲೀಲಾವಿನೋದಗಳನ್ನು ಅನಾವರಣಗೊಳಿಸುತ್ತದೆ.

ವಿಭಿನ್ನ ವಿಚಾರಧಾರೆ ಏನೇ ಇರಲಿ ಅವುಗಳು ಪ್ರಸ್ತುತ ಪಡಿಸುವ ಸತ್ಯ, ನೀಡುವ ಸಂದೇಶ ಮಾತ್ರ ಸತ್ಯ ಮತ್ತು ಜ್ಞಾನದ ಬೆಳಕಿನೆಡೆಗೆ ಮನುಷ್ಯ ಸಾಗಲು ಮಾರ್ಗದರ್ಶನ ನೀಡುವುದಾಗಿದೆ. ನವರಾತ್ರಿ ಮುಗಿದ ಬೆನ್ನಲ್ಲೇ ಕಾರ್ತಿಕ ಮಾಸದಲ್ಲಿ ಬರುವ ಹಬ್ಬವೇ ದೀಪಾವಳಿ. ದೀಪಗಳ ಹಬ್ಬವಾದ ದೀಪಾವಳಿ ಸಾಲು ಸಾಲು ದೀಪಗಳೊಂದಿಗೆ ತನ್ನ ಸೊಬಗನ್ನು ಮೆರಗನ್ನು ಹೆಚ್ಚಿಸಿಕೊಳ್ಳುತ್ತದೆ. ದೀಪಾವಳಿ ನಿರಂತರ ಐದು ದಿನಗಳ ಹಬ್ಬ. ನೀರು ತುಂಬುವ ಹಬ್ಬ,ನರಕ ಚತುರ್ದಶಿ, ಲಕ್ಷ್ಮೀಪೂಜೆ,ಬಲಿ ಪಾಡ್ಯಮಿ, ಗೋಪೂಜೆ ಹೀಗೆ ಮನೆ ಮನಗಳಲ್ಲಿ ಸಂಭ್ರಮ ಸಡಗರ. ದೀಪಾವಳಿಯನ್ನು ವಿವಿಧ ಕಡೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ಆದರೆ ಎಲ್ಲರ ಆಚರಣೆಯ ಹಿಂದಿನ ಆಶಯ ಒಂದೇ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವುದು. ಅಸತೋಮಾ ಸದ್ಗಮಯ ಮೃತ್ಯೋರ್ಮಾ ಅಮೃತಂ ಗಮಯ ತಮಸೋಮಾ ಜ್ಯೋತಿರ್ಗಮಯ.

ಬದುಕಿನ ವಿಕಾಸದ ಮೂಲಮಂತ್ರ ಇದರಲ್ಲಿ ಅಡಗಿದೆ. ಶ್ರೀ ಕೃಷ್ಣನು ನರಕಾಸುರನನ್ನು ಕೊಂದು ಶುಚಿರ್ಭೂತನಾಗಲು ಅಭ್ಯಂಜನ ಸ್ನಾನ ಮಾಡುವುದರಿಂದ ಹಿಡಿದು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದ ಘಟನಾವಳಿಗಳ ಕಥೆಗಳು ,ಮಹಿಮೆಗಳು, ವ್ಯಾಖ್ಯಾನಗಳು ಪುರಾಣಗಳಿಂದ ಪ್ರೇರಿತವಾಗಿದೆ. ಅದಕ್ಕೊಂದು ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ನೆಲೆಗಟ್ಟುಗಳಿವೆ. ದೀಪಾವಳಿ ನರಕಚತುರ್ದಶಿ ದಿನ ಪ್ರಾತಃಕಾಲದಲ್ಲಿ ಎದ್ದು ಮಾಡುವ ಅಭ್ಯಂಜನ ಸ್ನಾನದ ನೀರಿನಲ್ಲಿ ಆರೋಗ್ಯವರ್ಧಕ ಗುಣಗಳಿರುತ್ತದೆ. ಎಷ್ಟೋ ಕಡೆ ಅನ್ಯಮತೀಯರು ಈ ಪವಿತ್ರ ಆರೋಗ್ಯ ವರ್ಧಕ ನೀರನ್ನು ಹಿಂದೂಗಳಿಂದ ದೀಪಾವಳಿ ದಿನದಂದು ಸ್ವೀಕರಿಸುತ್ತಾರೆ. ಬಲಿಪಾಡ್ಯಮಿ ಆಚರಣೆಯಲ್ಲಿ ಬಲಿಯ ದೊರೆತನವನ್ನು, ಸದ್ಗುಣಗಳನ್ನು ಬೆಳಕಿನಿಂದಲೇ ನೆನಪಿಸಿಕೊಳ್ಳುತ್ತಾ ಬಲಿಗೆ ಗೌರವ ಸಲ್ಲಿಸುತ್ತೇವೆ. ಇಲ್ಲಿ ಬಲಿಯನ್ನು ವಾಮನ ಬಲಿ ತೆಗೆದುಕೊಂಡ ಎಂದು ಕಂಡುಬಂದರೂ ಆ ಮೂಲಕ ಬಲಿ ಈ ಭರತಭೂಮಿಯ ಜನಮನದಲ್ಲಿ ಅಮರನಾಗಿ ಉಳಿಯಲು ಕಾರಣೀಕರ್ತನಾದ ಎನ್ನುವುದು ಉಲ್ಲೇಖನೀಯ.

ಋತುಚಕ್ರದ ಸೌಂದರ್ಯ ಲಹರಿಯಲ್ಲಿ ವರ್ಷದ ಹನ್ನೆರಡು ಮಾಸಗಳು. ಭಾರತೀಯರಲ್ಲಿ ಅಂತರ್ಯಾಮಿಯಾಗಿರುವ ಖಗೋಳ ಶಾಸ್ತ್ರಜ್ಞ, ವಿಜ್ಞಾನಿ, ಕವಿ ಚಿತ್ರಕಲಾವಿದರು ಈ ಹನ್ನೆರಡು ಮಾಸಗಳಲ್ಲಿ ಆಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿ, ಅದಕ್ಕನುಸಾರವಾಗಿ ನಡೆಯುವ ಪ್ರಾಕೃತಿಕ ಮತ್ತು ಸಾಮಾಜಿಕ ಪ್ರಕ್ರಿಯೆಗಳನ್ನು ಬಲು ಸುಂದರವಾಗಿ ದಾಖಲಿಸಿದ್ದಾರೆ. ಇದನ್ನು ವೇದ ಶಾಸ್ತ್ರಾದಿ, ಪೌರಾಣಿಕ, ವೈಜ್ಞಾನಿಕ ಗ್ರಂಥಗಳಲ್ಲಿ ಬರೆದಿಟ್ಟ ಮಾತ್ರವಲ್ಲದೇ, ಕಾವ್ಯ, ಸಂಗೀತ ನೃತ್ಯ, ಚಿತ್ರಕಲಾದಿ ಲಲಿತಕಲೆಗಳಲ್ಲಿ ಪ್ರಸ್ತುತ ಪಡಿಸಲಾಯಿತು. ಇಲ್ಲಿ ಭಾರತೀಯ ಸಂಸ್ಕೃತಿಯ ಚಿತ್ರಕಲೆಯ ರಾಜಸ್ಥಾನಿ ಶೈಲಿಯ ಚಿಕಣಿ ಚಿತ್ರಕಲೆ ಅನಾವರಣಗೊಂಡಿದ್ದು ಮುಖ್ಯವಾಗಿ ಹದಿನೇಳನೇ ಶತಮಾನದಲ್ಲಿ ನಮ್ಮ ದೇಶದಲ್ಲಿ ದೀಪಾವಳಿಯನ್ನು ಹೇಗೆ ಆಚರಿಸುತ್ತಿದ್ದರು ಎಂಬುದು ಚಿಕಣಿ ಚಿತ್ರಕಲೆಯಲ್ಲಿ ಕಾಣಬಹುದು. ಅದರ ರಂಗುರಂಗಿನ ಚಿತ್ರವನ್ನು ಇಲ್ಲಿ ಕಾಣಬಹುದಾಗಿದೆ.

17 ನೇ ಶತಮಾನದಲ್ಲಿ ಔರಂಗಜೇಬನ ಲಲಿತಕಲಾ ವಿರೋಧಿ ನೀತಿಯಿಂದ ಬೇಸತ್ತ ಹಲವು ಕಲಾವಿದರು ಉತ್ತರದ ಪಹಾಡಿ ರಾಜ್ಯಗಳಿಗೆ ವಲಸೆ ಹೋದರು. ಅಲ್ಲಿನ ಕಲಾ ಶಾಲೆಗಳಲ್ಲಿ ಕಲಿತ ಸುಧಾರಿತ ವಿಧಾನಗಳನ್ನು ಬಳಸಿಕೊಂಡು ಚಿಕಣಿ ಚಿತ್ರಕಲೆಯನ್ನು ದೇಶದೆಲ್ಲೆಡೆ ಜನಪ್ರಿಯಗೊಳಿಸಿದರು. ಇಲ್ಲಿ ಪ್ರಕಟಗೊಂಡಿರುವ ಕಾರ್ತಿಕ ಮಾಸದ ಚಿತ್ರ 17 ನೇ ಶತಮಾನದಾಗಿದ್ದು, ಇದು ರಾಜಸ್ಥಾನಿ ಶೈಲಿಯಲ್ಲಿದೆ. ಈ ಚಿತ್ರದಲ್ಲಿ ಮೇಲುಪ್ಪರಿಗೆಯಲ್ಲಿ ತೂಗುವ ಆಕಾಶ ಗೂಡುಗಳು, ಲಕ್ಷಿಪೂಜೆ, ತೈಲಾಭ್ಯಂಜನ ,ಕೊಳಗಳಲ್ಲಿ ಸ್ನಾನ, ದೀಪ ಬೆಳಗುವಿಕೆಯನ್ನು ಕಾಣಬಹುದಾಗಿದೆ. ಕಾರ್ತಿಕ ಮಾಸದಲ್ಲಿ ಭೂಮಿ ಸೂರ್ಯನಿಂದ ದೂರ ಹೋಗುವುದರಿಂದ ಹಗಲು ಕಿರಿದಾಗಿ ಕತ್ತಲೆ ಬೇಗ ಆವರಿಸಿಕೊಳ್ಳುತ್ತದೆ. ಆಗಸದ ಕತ್ತಲೆಯನ್ನು ಓಡಿಸಲು ಆಕಾಶ ಗೂಡುಗಳು ಉರಿಯುತ್ತದೆ. ನಮ್ಮ ಮನೆಯೊಳಗಿನ ಕತ್ತಲೆಯನ್ನು ಹೋಗಲಾಡಿಸಲು ದೀಪಗಳು ಬೆಳಗುತ್ತದೆ ಮತ್ತು ಮನದೊಳಗಿನ ಕತ್ತಲೆಯನ್ನು ಓಡಿಸಲು ಭಗವಂತನ ಸ್ಮರಣೆ ಮಾಡಬೇಕು ಎಂದು ಈ ರಾಜಸ್ಥಾನಿ ಶೈಲಿಯ ಚಿಕಣಿ ಕಲಾಕೃತಿ ರಚಿಸಿದ ಚಿತ್ರ ಕಲಾವಿದ ಸಂದೇಶ ನೀಡುತ್ತಾನೆ.

ಆಡಳಿತ ದೃಷ್ಟಿಯಿಂದ ಕಾಲಗಣನೆಗೆ ಇಂದು ನಾವು ಪಾಶ್ಚಿಮಾತ್ಯ ಜನವರಿ ಡಿಸೆಂಬರ್ ತಿಂಗಳ ಕ್ಯಾಲೆಂಡರನ್ನು ಉಪಯೋಗಿಸಿದರೂ ಅದು ಭಾರತದ ಭೌಗೋಳಿಕ ಹಾಗೂ ಪ್ರಾಕೃತಿಕ ಬದಲಾವಣೆಗಳಿಗೆ ಹೊಂದಿ ಬರುವುದಿಲ್ಲ. ನಮ್ಮ ದೇಶದ ಆಯಾ ಪ್ರದೇಶದಲ್ಲಿ ಕಂಡು ಬರುವ ಖಗೋಳಿಕ ವ್ಯತ್ಯಾಸಗಳು ಭೌಗೋಳಿಕ ಬದಲಾವಣೆಗಳು, ಹವಾಮಾನ ಮತ್ತು ಪ್ರಾಕೃತಿಕ ವಿಭಿನ್ನತೆಗಳನ್ನು ಆಯಾ ಪ್ರದೇಶದಲ್ಲಿ ಚಾಲ್ತಿಯಿರುವ ಕ್ಯಾಲೆಂಡರ್ ಅಥವಾ ಪಂಚಾಂಗಗಳಲ್ಲಿ ಕಾಣಬಹುದಾಗಿದೆ. ಪ್ರಾಚೀನ ಕಾಲದವರು ಪೃಕೃತಿಯೊಂದಿಗೆ ತಾದ್ಯಾತ್ಮ ಹೊಂದಿದ್ದರಿಂದ ಅವರ ದೃಷ್ಟಿಕೋನ ಪರಿಪೂರ್ಣತೆ ಪಡೆದಿತ್ತು. ಪ್ರಾಚೀನ ಕಾಲದಲ್ಲಿ ಕಾರ್ತಿಕ ಮಾಸದಲ್ಲಿ ನಿರಂತರ ಒಂದು ತಿಂಗಳು ದೀಪಾವಳಿ ಹಬ್ಬ ಆಚರಿಸುತ್ತಿದ್ದರು. ಕ್ರಮೇಣ ಕಾಲ ಸರಿದಂತೆ ಒಂಬತ್ತು ದಿನಗಳಿಗೆ ಸೀಮಿತವಾಗಿ ಇಂದು ಮೂರು ಅಥವಾ ಐದು ದಿನ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ನಮ್ಮ ಧರ್ಮವೃಕ್ಷವನ್ನು ಪರಕೀಯರು ಹಲವಾರು ವಿಧಗಳಲ್ಲಿ ತುಂಡರಿಸಿದರೂ ಅದು ಮತ್ತೆ ಮತ್ತೆ ಚಿಗುರೊಡೆಯುತ್ತ ಬಂದು ವಿಶಾಲವಾಗಿ ಜಗತ್ತಿನಾದ್ಯಂತ ಹರಡಿಕೊಂಡಿತ್ತು.

ದೇಶದ ವಿವಿಧೆಡೆಗಳಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಕುಂದಾಪುರ ಖಾರ್ವಿಕೇರಿಯಲ್ಲಿ ಕಳೆದ 46 ವರ್ಷಗಳಿಂದ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳು ದೀಪಾವಳಿ ಸಂದರ್ಭದಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದವರಿಗಾಗಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸುತ್ತಿದ್ದವು. ದೀಪಾವಳಿ ಹಬ್ಬವನ್ನು ಸ್ಮರಣೀಯಗೊಳಿಸಲು ಈ ಕಬಡ್ಡಿ ಪಂದ್ಯಾಟಗಳು ನಡೆಸಲಾಗುತ್ತಿತ್ತು. ಇಡೀ ಕುಂದಾಪುರ ನಗರವೇ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿತ್ತು. ದೀಪಾವಳಿ ಪ್ರಯುಕ್ತ ನಡೆಯುತ್ತಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಕ್ಕೆ pro kabbadi ಯಂತೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿತ್ತು. ಕೊಂಕಣಿ ಖಾರ್ವಿ ಸಮಾಜ ಭಾಂಧವರಿಗಾಗಿ ಆಯೋಜಿಸಲ್ಪಡುತ್ತಿದ್ದ ಈ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಮುಂಬೈ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಂಗಳೂರಿನಿಂದ 50 ಕ್ಕೂ ಹೆಚ್ಚು ಕಬಡ್ಡಿ ತಂಡಗಳು ಭಾಗವಹಿಸಿ ಸಂಭ್ರಮಕ್ಕೆ ಮೆರಗು ತಂದು ಕೊಡುತ್ತಿದ್ದವು. ಹೊರರಾಜ್ಯ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಂದಲೂ ಕೊಂಕಣಿ ಖಾರ್ವಿ ಸಮಾಜ ಭಾಂಧವರು ಅಪಾರ ಸಂಖ್ಯೆಯಲ್ಲಿ ಈ ಸಂಭ್ರಮದಲ್ಲಿ ಭಾಗವಹಿಸಿ ದೀಪಾವಳಿ ಹಬ್ಬವನ್ನು ಸ್ಮರಣೀಯಗೊಳಿಸುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಕೊರಾನಾ ಕಾರಣದಿಂದಾಗಿ ಕಬಡ್ಡಿ ಪಂದ್ಯಾಟಗಳು ನಿಂತು ಹೋಗಿವೆ. ಕಬಡ್ಡಿಯಿಂದ ಕಳೆಗಟ್ಟುತ್ತಿದ್ದ ದೀಪಾವಳಿ ಹಬ್ಬ ಸ್ವಲ್ಪ ಮಟ್ಟಿಗೆ ಬಿರುಸು ಕಳೆದುಕೊಂಡಿರುವುದು ಸುಳ್ಳಲ್ಲ. ಇನ್ನೂ ಕೂಡಾ ತನ್ನ ಕರಾಳತೆಯನ್ನು ಪ್ರಕಟಿಸುತ್ತಿರುವ ಕೊರಾನಾ ಮಹಾಮಾರಿ ಈ ದೇಶದಿಂದ ಸಂಪೂರ್ಣವಾಗಿ ತೊಲಗಿ ವಿವಿಧ ಹಬ್ಬ ಹರಿದಿನ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳು ನಿತ್ಯ ನಿರಂತರವಾಗಿ ನಡೆಯಲಿ ಎಂದು ಆಶಿಸುತ್ತೇನೆ.

ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿಯ ಪ್ರತೀಕ. ಹಬ್ಬ ಹರಿದಿನಗಳು ನಮ್ಮನ್ನು ಶುದ್ಧೀಕರಣಗೊಳಿಸಿ ದೈವತ್ವದತ್ತ ಕೊಂಡೊಯ್ಯುತ್ತದೆ. ಬೆಳಕು ಜ್ಞಾನದ ಕಡೆಗೆ ನಮ್ಮನ್ನು ಪ್ರೇರೇಪಿಸುತ್ತದೆ. ದೀಪಾವಳಿ ಹಬ್ಬದ ಶುಭಾಶಯಗಳು.ಖಾರ್ವಿ ಆನ್ಲೈನ್ ವತಿಯಿಂದ ಕೊಂಕಣಿ ಖಾರ್ವಿ ಸಮಾಜ ಭಾಂಧವರೆಲ್ಲರಿಗೂ ಶುಭಾಶಯಗಳು.ಬೆಳಕಿನ ಹಬ್ಬ ಎಲ್ಲರಿಗೂ ಶುಭದಾಯಕವಾಗಲಿ ಎಂದು ಹಾರೈಸುತ್ತೇನೆ

ಸುಧಾಕರ್ ಖಾರ್ವಿ
Editor
www.kharvionline.com

Leave a Reply

Your email address will not be published. Required fields are marked *