ದೀಪಾವಳಿ ಮತ್ತು ಹಿಂಡ್ಲ್ ಕಾಯಿ

ನಿರಂತರ ಐದು ದಿನಗಳ ಕಾಲ ಸಂಭ್ರಮ ಸಡಗರದಿಂದ ಆಚರಿಸುವ ದೀಪಾವಳಿ ಹಬ್ಬದ ಆಚರಣೆಯಲ್ಲಿ ಕೇವಲ ಅಧ್ಯಾತ್ಮಿಕ ಅಂಶಗಳಲ್ಲದೇ ಸಸ್ಯ ಸಂಬಂಧವಾದ ವೈಜ್ಞಾನಿಕ ಅಂಶಗಳು ಅಡಕವಾಗಿರುತ್ತದೆ. ದೀಪಾವಳಿ ಹಬ್ಬದ ಮೊದಲ ದಿನ ನೀರು ತುಂಬುವ ಹಬ್ಬವನ್ನು ಆಚರಿಸಲಾಗುತ್ತದೆ. ಆ ದಿನ ಮುಸ್ಸಂಜೆಯಲ್ಲಿ ನೀರು ತುಂಬುವ ಹಂಡೆ,ಕೊಡಪಾನಗಳಿಗೆ ಮುಖ್ಯವಾಗಿ ಹಿಂಡ್ಲ್ ಕಾಯಿ ಅಥವಾ ಶಿಂಡ್ಲೆಕಾಯಿ ಬಳ್ಳಿಯನ್ನು ಸುತ್ತುತ್ತಾರೆ. ಬಳ್ಳಿಯಲ್ಲಿ ಹುಟ್ಟುವ ಈ ಹಿಂಡ್ಲ್ ಕಾಯಿ ತೊಂಡೆಕಾಯಿ ಅಥವಾ ಸಣ್ಣ ಸೌತೆಕಾಯಿ ಆಕಾರದಲ್ಲಿ ಇರುತ್ತದೆ. ಅತ್ಯಂತ ಕಹಿಯಾಗಿರುತ್ತದೆ ಇದರ ಒಳತಿರುಳು ಸೌತೆಕಾಯಿ ಮತ್ತು ತೊಂಡೆಕಾಯಿಗಳ ಮಾದರಿಯಲ್ಲಿರುತ್ತದೆ.

ಈ ಹಿಂಡ್ಲ್ ಕಾಯಿ ಬಳ್ಳಿ ಸಸ್ಯದ ಆಯುಷ್ಯ ಕೇವಲ ಐದರಿಂದ ಆರು ತಿಂಗಳು. ಜೂನ್ ಕೊನೆಯ ವಾರದಲ್ಲಿ ಹುಟ್ಟುವ ಈ ಹಿಂಡ್ಲ್ ಕಾಯಿ ಬಳ್ಳಿ ಸಸ್ಯನವೆಂಬರ್ ತಿಂಗಳಲ್ಲಿ ತನ್ನ ಜೀವಿತಾವಧಿ ಕೊನೆಗಾಣಿಸುತ್ತದೆ.ಆಯಾ ಋತುಮಾನಗಳಿಗೆ ಹೊಂದಿಕೊಳ್ಳುವಂತೆ ಪೃಕೃತಿಯ ವ್ಯವಸ್ಥೆಗಳು ಹೇಗೆ ತಮ್ಮಜೀವನ ಚಕ್ರ ನಡೆಸುತ್ತದೆ ಎಂಬುದಕ್ಕೆ ಇದೊಂದು ಅತ್ಯುತ್ತಮ ನಿದರ್ಶನವಾಗಿದೆ. ದೀಪಾವಳಿ ಅಭ್ಯಂಜನ ಸ್ನಾನ ಮುಗಿದ ಬಳಿಕ ಮನೆಯ ಮಹಿಳೆಯರು ದೀಪಾರತಿ ತೋರಿಸಿದ ಬಳಿಕ ಸಾಲಾಗಿ ಇಟ್ಟ ಈ ಹಿಂಡ್ಲ್ ಕಾಯಿಗಳನ್ನು ಮೆಟ್ಟುವ ಸಂಪ್ರದಾಯವಿದೆ. ಈ ಆಚರಣೆಯಲ್ಲಿ ವಿಶಿಷ್ಟ ಅರ್ಥವಿದ್ದು ಈ ಹಿಂಡ್ಲ್ ಕಾಯಿಯಲ್ಲಿ ಸೋಂಕು ನಿರೋಧಕ ಗುಣಾಂಶಗಳು ಇದ್ದು, ಕಾಲಿನಲ್ಲಿ ಹಿಂಡ್ಲ್ ಕಾಯಿ ಮೆಟ್ಟುವಾಗ ಕಾಲಿನಲ್ಲಿ ಇರುವ ಸೋಂಕುಗಳು ಸ್ವಲ್ಪ ಮಟ್ಟಿಗೆ ಗುಣವಾಗುತ್ತದೆ ಎಂಬ ಹಿರಿಯರ ನಂಬಿಕೆ ಇದೆ.ಇದರೊಂದಿಗೆ ನಾವು ಜೀವನದಲ್ಲಿ ಎಂತಹ ಕಹಿ ಘಟನೆಗಳನ್ನಾಗಲಿ ಮೆಟ್ಟಿ ನಿಲ್ಲಬೇಕು ಎಂಬ ಉದಾತ್ತ ಸಂದೇಶವೂ ಅಡಗಿದೆ.

ಇದೇ ಸಂದರ್ಭದಲ್ಲಿ ಹಿಂಡ್ಲ್ ಕಾಯಿಯನ್ನು ಎರಡು ಭಾಗ ಮಾಡಿ ಒಂದರಲ್ಲಿ ಅದರ ತಿರುಳನ್ನು ತೆಗೆದು ಎಣ್ಣೆಹಾಕಿ ದೀಪ ಉರಿಸುತ್ತಾರೆ ಮತ್ತು ಇನ್ನೊಂದು ಭಾಗದ ತಿರುಳಿನ ರಸವನ್ನು ಮನೆಯ ಸದಸ್ಯರು ಕೈಬೆರಳಿನಿಂದ ನೆಕ್ಕಬೇಕು. ಇದು ಅತ್ಯಂತ ಕಹಿಯಾಗಿರುತ್ತದೆ. ಸಿಹಿ ತಿನ್ನುವ ಮೊದಲು ಕಹಿಯ ರುಚಿ ಕೂಡಾ ಆಗಬೇಕು ಎಂಬುದು ಇದರ ಉದ್ದೇಶ ಎಂದು ಹಿರಿಯರು ಹೇಳುತ್ತಾರೆ. ಶತಶತಮಾನಗಳಿಂದಲೂ ದೀಪಾವಳಿ ಹಬ್ಬವನ್ನು ಬೇರೆ ಬೇರೆ ಕಡೆ ಭಿನ್ನ ಭಿನ್ನವಾಗಿ ಆಚರಿಸಿದರೂ ಆಚರಣೆಗಳಲ್ಲಿ ಆಧ್ಯಾತ್ಮಿಕತೆಯೊಂದಿಗೆ ಉದಾತ್ತ ಚಿಂತನೆಯ, ವಿಚಾರಶೀಲತೆಯ ವೈಜ್ಞಾನಿಕ ಅಂಶಗಳು ಬಹುಮುಖ್ಯವಾಗಿ ಅಡಕಕೊಂಡಿದೆ. ಕೇವಲ ಆರು ತಿಂಗಳು ಬದುಕಿದರೂ ಹಿಂಡ್ಲ್ ಕಾಯಿ ಬಳ್ಳಿ ಸಸ್ಯ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗೌರವಿಸಲ್ಪಟ್ಟು ಸಾರ್ಥಕತೆ ಪಡೆದುಕೊಳ್ಳುತ್ತದೆ.

ದೇವರಿಗೆ ದೀಪವಾಗಿ ಬೆಳಗುವ ಹಿಂಡ್ಲ್ ಕಾಯಿ ಸಸ್ಯ ಕಾರ್ತಿಕ ಮಾಸ ಮುಗಿದ ಬಳಿಕ ತನ್ನ ಜೀವನ ಯಾತ್ರೆಗೆ ಚರಮಗೀತೆ ಹಾಡುತ್ತದೆ.ನಮ್ಮ ಹಿರಿಯರು ತಲೆತಲಾಂತರದಿಂದ ಆಚರಿಸಿಕೊಂಡು ಬಂದಿರುವ ಹಬ್ಬ ಹರಿದಿನಗಳ ಆಚರಣೆಗಳು ಆಧುನಿಕತೆಯ ಈ ಕಾಲಘಟ್ಟದಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸಗೊಂಡರೂ,ಕೆಲವೊಂದು ಆಚರಣೆಗಳು ಗಟ್ಟಿಯಾಗಿ ತಮ್ಮ ತಳಹದಿಗಳನ್ನು ರೂಪಿಸಿಕೊಂಡಿವೆ ಎನ್ನುವುದಕ್ಕೆ ಸಾಕ್ಷಿಯಾಗಿ ಹಿಂಡ್ಲ್ ಕಾಯಿ ಬಳ್ಳಿ ಸಸ್ಯದ ವೈಶಿಷ್ಟ್ಯಮಯ ಸದ್ಬಳಕೆ ಹಸಿರಾಗಿ ನಿಲ್ಲುತ್ತದೆ.

ಈ ಭೂಮಿಯ ಮೇಲೆ ಯಾವುದೂ ಶಾಶ್ವತವಲ್ಲ.ಬದುಕಿ ಇದ್ದಷ್ಟು ದಿನ ಸಮಾಜಕ್ಕೆ ಉಪಕಾರಿಯಾಗಿ ಬದುಕಬೇಕು ಎಂಬ ಹೃದಯಸ್ಪರ್ಶಿ ಪಾಠ ಹಿಂಡ್ಲ್ ಕಾಯಿ ಸಸ್ಯ ಬಳ್ಳಿಯ ಜೀವನ ಚಕ್ರದಲ್ಲಿ ಅಡಕವಾಗಿದೆ.

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *