ಹೇ ಸುನಾಮಿ! ನೀನೆಂಥ ಹರಾಮಿ?

ಸಾಗರತಳದಲ್ಲಿ ಸಂಭವಿಸುವ ಭೂಕಂಪನ ಅಥವಾ ಜ್ವಾಲಾಮುಖಿ ಸ್ಪೋಟದಿಂದ ಉಂಟಾಗುವ ವಿದ್ವಂಸಕಾರಿ ಅಲೆಯೇ ಸುನಾಮಿ. ಅಂದು ಡಿಸೆಂಬರ್ 26 2004 ರಂದು ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಪಶ್ಚಿಮ ಕಡಲಿನಲ್ಲಿ ಸಂಭವಿಸಿದ ಸುನಾಮಿಯ ಪರಿಣಾಮದಿಂದಾಗಿ ಇಂಡೋನೇಷ್ಯಾ, ಮಲೇಷ್ಯಾ, ಥ್ಯಾಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ, ಮಾಲ್ದೀವ್ಸ್, ಸಿಂಗಾಪುರ ಮತ್ತು ಭಾರತದ ಕಡಲತೀರಗಳಿಗೆ ಪ್ರಳಯರೂಪಿ ಸುನಾಮಿ ಅಪ್ಪಳಿಸಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿ ಸುಮಾರು 3 ಲಕ್ಷಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡರು. ಇತಿಹಾಸದ ಕಾಲಗರ್ಭದಲ್ಲಿ ಸೇರಿಹೋದ ಈ ಮಹಾದುರಂತ ಸಂಭವಿಸಿ ಇಂದಿಗೆ ಹದಿನೇಳು ವರ್ಷವಾಗುತ್ತದೆ.

ಆದರೆ ಗತಿಸಿಹೋದ ದುರ್ಘಟನೆಯ ಕಹಿ ನೆನಪುಗಳು ಚರಮಗೀತೆಯಾಗಿ ಕಾಲಾನುಗತಿಯಲ್ಲಿ ಹೃದಯಕ್ಕೆ ಕಿಚ್ಚು ಹಚ್ಚಿಸುತ್ತದೆ. ಈ ಪ್ರಚಂಡ ಸುನಾಮಿಯ ತೀವ್ರತೆ ಸುಮಾರು 5000 ಕಿ.ಮೀ ದೂರದ ಆಫ್ರಿಕಾದಲ್ಲೂ ಕಾಣಿಸಿಕೊಂಡಿತ್ತು. ನಮ್ಮ ದೇಶದಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಕರಾವಳಿಯಲ್ಲಿ ಅಪಾರ ಹಾನಿ ಸಂಭವಿಸಿತು. ಆದರೆ ಕರ್ನಾಟಕ ಕರಾವಳಿಯಲ್ಲಿ ಮಾತ್ರ ತೀವ್ರತೆ ಕಂಡುಬರಲಿಲ್ಲ. ನದಿ ಮತ್ತು ಸಮುದ್ರಗಳ ನೀರು ಸ್ವಲ್ಪ ಮಟ್ಟಿಗೆ ಏರಿಕೆಯಾಗಿತ್ತು.ಬಂದರುಗಳಲ್ಲಿ ಲಂಗರು ಹಾಕಿದ್ದ ದೋಣಿಗಳು ಪರಸ್ಪರ ತಾಗಿಕೊಂಡು ಹಾನಿ ಸಂಭವಿಸಿದ್ದನ್ನು ಬಿಟ್ಟರೆ ಜೀವಹಾನಿ ಸಂಭವಿಸರಿರಲಿಲ್ಲ. ಅಂದಿನ ಘಟನೆ ನನಗೆ ಸರಿಯಾಗಿ ನೆನಪುಂಟು. ನಮ್ಮ ಮನೆಯ ಎದುರು ಪಂಚಗಂಗಾವಳಿ ನದಿಯಲ್ಲಿ ನದಿನೀರು ಒಮ್ಮೆ ಏರಿಕೆ, ಮಗದೊಮ್ಮೆ ಇಳಿಕೆ ಕಾಣುತ್ತಿದ್ದವು. ಈ ಪ್ರಕ್ರಿಯೆ ಸುಮಾರು ಒಂದು ಗಂಟೆಯ ತನಕ ನಡೆದ ಬಳಿಕ ನದಿನೀರಿನ ಹರಿಯುವಿಕೆ ಸಹಜ ಸ್ಥಿತಿಗೆ ಬಂದ್ದಿತ್ತು. ರಾತ್ರಿ ವೇಳೆ ಸ್ಥಳೀಯರೆಲ್ಲರೂ ಎಚ್ಚರದಿಂದ ಇದ್ದರು.

.

ತಾಲೂಕು ಆಡಳಿತ ಮತ್ತು ಪೋಲಿಸ್ ಇಲಾಖೆ ಗಂಗೊಳ್ಳಿ ಕಂಚಗೋಡು ತ್ರಾಸಿ ಪರಿಸರದಲ್ಲಿ ಸಮುದ್ರ ತೀರದ ಜನರಿಗೆ ಸುನಾಮಿ ಸಂಭವಿಸುವ ಅಪಾಯವಿರುವುದರಿಂದ ಸುರಕ್ಷಿತ ಜಾಗ ಸೇರಿಕೊಳ್ಳಿ ಎಂದು ಮೈಕ್ ನಲ್ಲಿ ಎಚ್ಚರಿಕೆ ಸಂದೇಶ ನೀಡಿದ್ದರು. ಗಂಗೊಳ್ಳಿ ಪೇಟೆ ಪ್ರದೇಶದ ಜನರು ಈ ಸಂದರ್ಭದಲ್ಲಿ ಸುರಕ್ಷಿತರಾಗಲು ಕುಂದಾಪುರ ಸೇರಿದಂತೆ ಹಲವು ಒಳನಾಡಿನ ಪ್ರದೇಶಗಳಿಗೆ ಹೋದರು. ಆದರೆ ಸಮುದ್ರ ತೀರದ ಮೀನುಗಾರರು ಮಾತ್ರ ಸ್ಥಳ ಬಿಟ್ಟು ಕದಲಲಿಲ್ಲ.ಅವರಲ್ಲಿ ದೃಡ ನಿರ್ಧಾರವಿತ್ತು. ಅಚಲವಾದ ಧೈರ್ಯ ಮತ್ತು ನಂಬಿಕೆ ಇತ್ತು. ಕಡಲಲೆಗಳ ಮೊರೆತದಲ್ಲಿ ಮಾಮೂಲಿ ದಿನಗಳಿಕ್ಕಿಂತ ತೀವ್ರತೆ ಹೆಚ್ಚಾಗಿದ್ದರೂ ಹೊಟ್ಟೆಗೆ ಅನ್ನ ನೀಡಿ ಕಾಯುವ ಕಡಲು ಅಪಾಯ ಉಂಟು ಮಾಡದು ಎಂಬ ದೃಡವಾದ ವಿಶ್ವಾಸ ಮನೆಮಾಡಿತ್ತು. ಮೀನುಗಾರರ ನಂಬಿಕೆ ವಿಶ್ವಾಸ ಸುಳ್ಳಾಗಲಿಲ್ಲ. ಕಡಲಿನ ತೀವ್ರತೆ ಕಡಿಮೆಯಾಯಿತು.ಸುನಾಮಿ ಭಯ ದೂರವಾಯಿತು. ಅಂದು ಸಂಭವಿಸಿದ ಸುನಾಮಿಯ ತೀವ್ರತೆ ಎಷ್ಟಿತ್ತೆಂದರೆ ಅಮೆರಿಕ ದೇಶವು ಜಪಾನ್ ದೇಶದ ಮೇಲೆ ಹಾಕಿದ ಅಣುಬಾಂಬಿನ 23000 ಪಟ್ಟು ಹೆಚ್ಚಾಗಿತ್ತು ಎಂದು ಸಂಶೋಧನೆಯಲ್ಲಿ ತಿಳಿದುಬಂತು.

ನೆರೆಯ ಶ್ರೀಲಂಕಾದಲ್ಲಿ ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಎಕ್ಸ್ ಪ್ರೆಸ್ ರೈಲೊಂದು ಸುನಾಮಿಯ ಹೊಡೆತಕ್ಕೆ ಸಿಲುಕಿ ಒಂದು ಕೀ ಮೀ ದೂರಕ್ಕೆ ಎಸೆಯಲ್ಪಟ್ಟಿತ್ತು. ಸುನಾಮಿಯ ಹೊಡೆತಕ್ಕೆ ಸಿಲುಕಿ ದ್ವಂಸಗೊಂಡ ಬಹುಮಹಡಿಯ ಕಟ್ಟಡಗಳಿಗೆ ಲೆಕ್ಕವೇ ಇಲ್ಲ. ಸುನಾಮಿ ಸಂಭವಿಸುವ ಕೆಲವೇ ನಿಮಿಷಗಳ ಮೊದಲು ಅಂಡಮಾನಿನ ನಿಗೂಢ ದ್ವೀಪ ಸೆಂಟಿನೆಲ್ ನ ಅದಿವಾಸಿಗಳು ಕಡಲಿನಲ್ಲಿ ಸಂಭವಿಸುತ್ತಿರುವ ಬದಲಾವಣೆಗಳನ್ನು ಗಮನಿಸಿ ಕ್ಷಣಮಾತ್ರದಲ್ಲಿ ಸುರಕ್ಷಿತ ಪ್ರದೇಶವನ್ನು ಸೇರಿಕೊಂಡು ಬಚಾವಾದರು. ಇಂದಿಗೂ ಈ ದ್ವೀಪದ ಜನರು ನಾಗರಿಕ ಪ್ರಪಂಚದಿಂದ ದೂರವೇ ಉಳಿದಿದ್ದಾರೆ.ಭಾರತ ಸರ್ಕಾರ ಕೂಡಾ ಈ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಿದೆ.ಇಲ್ಲಿ ಹೊರಗಿನ ಯಾರಿಗೂ ಪ್ರವೇಶವಿಲ್ಲ. ಪೃಕೃತಿಯಲ್ಲಿ ಸಂಭವಿಸುವ ಅಪಾಯದ ಮೂನ್ಸೂಚನೆ ಮೊದಲು ಪ್ರಾಣಿಪಕ್ಷಿಗಳಿಗೆ ತಿಳಿಯುತ್ತದೆ ಎಂಬ ವೈಜ್ಞಾನಿಕ ಸತ್ಯ ಸುನಾಮಿ ಸಂದರ್ಭದಲ್ಲಿ ನಿರೂಪಿತವಾಯಿತು. ಅಂಡಮಾನ್ ನೀಕೋಬಾರ್ ಸಮುದ್ರದ ಮಿಲ್ಕ್ ಫಿಶ್ ಗಳು ಸಾಗರತಳದಲ್ಲಿ ಸಂಭವಿಸುತ್ತಿರುವ ವಿಲಕ್ಷಣ ಪ್ರಕ್ರಿಯೆಗಳನ್ನು ಗ್ರಹಿಸಿ ಆಳ ಸಮುದ್ರದಿಂದ ಮೇಲೆದ್ದು ಬಂದು ಸುರಕ್ಷಿತ ಸ್ಥಳದಲ್ಲಿ ನೆಲೆಗೊಂಡವು. ಹೀಗೆ ಸುನಾಮಿಯಿಂದ ಬಚಾವಾದ ಮಿಲ್ಕ್ ಫಿಶ್ ಗಳು ಸುನಾಮಿ ಮೀನು ಎಂದು ಮೀನುಗಾರರಿಂದ ಮರು ನಾಮಕರಣಗೊಂಡವು.

ಈ ವಿನಾಶಕಾರಿ ಸುನಾಮಿ ಸಂಭವಿಸಿದ ಬಳಿಕ 2011 ರಲ್ಲಿ ಜಪಾನ್ ದೇಶದ ಕಡಲತೀರದಲ್ಲಿ ಸುನಾಮಿ ಅಪ್ಪಳಿಸಿ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು.ಇಲ್ಲಿನ ಅಣುಸ್ಥಾವರಕ್ಕೂ ಹಾನಿ ಸಂಭವಿಸಿ ಅಣು ವಿಕಿರಣ ಫೆಸಿಫಿಕ್ ಸಾಗರದಲ್ಲಿ ಹರಡಿಕೊಂಡಿತ್ತು. ಇದಾದ ನಂತರವೂ ಇಂಡೋನೇಷ್ಯಾ, ಥ್ಯಾಲೆಂಡ್ ಪ್ರದೇಶದಲ್ಲಿ ಸುನಾಮಿ ಲಕ್ಷಣಗಳು ಕಂಡು ಬಂದರೂ ಯಾವುದೇ ಅಪಾಯ ಸಂಭವಿಸಲಿಲ್ಲ. ಸುನಾಮಿಯ ಭಯಾನಕ ಹಂತವಾದ ಡಿಪ್ ಸ್ಲಿಪ್ ಪ್ರಕ್ರಿಯೆಯಲ್ಲಿ ಶಿಲಾಸರಿತದಿಂದ ಸಾಗರತಳ ಇದ್ದಕ್ಕಿದ್ದಂತೆ ಮೇಲೇಳುತ್ತದೆ. ಅದು ತೀರಪ್ರದೇಶದತ್ತ ಮುನ್ನುಗ್ಗಿ ಕಡಿಮೆ ಆಳವಿರುವ ತೀರದಲ್ಲಿ ತೀವ್ರತೆ ಪಡೆದುಕೊಂಡು 30 ಮೀಟರ್ ಗಳಿಕ್ಕಿಂತ ಹೆಚ್ಚು ಎತ್ತರದಲ್ಲಿ ಅಲೆಗಳನ್ನು ಸೃಷ್ಟಿಸುತ್ತದೆ. ತೀರ ಪ್ರದೇಶದಲ್ಲಿ ಎಷ್ಟು ಕಡಿಮೆ ಆಳ ಇದೆಯೋ ಅದರ ಹತ್ತು ಪಟ್ಟು ಅಲೆಗಳು ಹೆಚ್ಚಾಗಿ ಅಪಾರ ಶಕ್ತಿಯುತವಾಗಿ ಕಡಲಲೆಗಳು ಎತ್ತರಕ್ಕೆ ಹಾರುತ್ತದೆ. ಭಾರತದಲ್ಲಿ ತಮಿಳುನಾಡಿನ ನಾಗಪಟ್ಪಣಂ, ಕಡಲೂರಿನಲ್ಲಿ ಸುನಾಮಿ ಸೃಷ್ಟಿಸಿದ ಆವಾಂತರ ಭಯಾನಕ. ಇಲ್ಲಿ ಕಡಲಂಚಿನಲ್ಲಿ ಕ್ರಿಸ್ಮಸ್ ಮರುದಿನ ಆಟವಾಡುತ್ತಿದ್ದ ಬಹುತೇಕ ಮಕ್ಕಳು ಸುನಾಮಿಗೆ ಬಲಿಯಾದರು.ಅದೇಷ್ಟೋ ಕುಟುಂಬಗಳು ನಿರ್ವಂಶವಾದವು. ಈ ಕಹಿನೆನಪು ಈ ಪ್ರದೇಶದ ಜನರ ಜೀವ ಹಿಂಡುತ್ತಿದೆ. ಸುನಾಮಿ ಸಂಭವಿಸಿದ ಡಿಸೆಂಬರ್ 26 ರ ಪ್ರತಿವರ್ಷ ಈ ಪ್ರದೇಶದ ಜನರು ಸಮುದ್ರಕ್ಕೆ ಸಾಮಾಜಿಕ ಪೂಜೆ ಸಲ್ಲಿಸಿ ಪ್ರಾರ್ಥಸುತ್ತಾರೆ. ಆ ಕಹಿ ನೆನಪುಗಳೊಂದಿಗೆ ಅದೇ ಪ್ರದೇಶದಲ್ಲಿ ಮನೆಬದುಕು ಕಟ್ಟಿಕೊಂಡಿದ್ದಾರೆ.

ಲಕ್ಷೋಪಲಕ್ಷ ಜೀವಗಳನ್ನು ತನ್ನೊಡಲೊಳಗೆ ಸೇರಿಸಿಕೊಂಡ ಕಡಲಿನ ಸುನಾಮಿ ಸೃಷ್ಟಿಸಿದ ಪರಿಣಾಮ ದೂರಗಾಮಿಯಾಗಿ ಸಮಸ್ಥಿತಿಗೆ ಬಂದು ಎರಡು ದಶಕಗಳ ಹತ್ತಿರವಾದರೂ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ನೋವು ಸಂಕಟಗಳು ಅವರ್ಣನೀಯ. ಹಿಂದಿನ ರಾತ್ರಿ ತಮ್ಮ ತಾಯಂದಿರ ಮಡಿಲಲ್ಲಿ ಹಾಯಾಗಿ ನಿದ್ರಿಸುತ್ತಿದ್ದ ಹಸುಗೂಸುಗಳು ಮರುದಿನ ಬೆಳಿಗ್ಗೆ ಸುನಾಮಿಯ ಅಬ್ಬರದ ಅಲೆಗಳ ಹೊಡೆತಕ್ಕೆ ಸಿಲುಕಿ ಶವವಾಗಿ ತೇಲಿ ಬರುತ್ತಿದ್ದ ಘನಘೋರ ದೃಶ್ಯಗಳು ಎಂತಹಾ ಕಲ್ಲೆದೆಯವರನ್ನೂ ಕರಗಿಸದೇ ಇರಲಿಲ್ಲ. ಈ ವಿದ್ವಂಸಕಾರಿ ಸುನಾಮಿಯ ಘೋರವೂ, ಅನುಹ್ಯವೂ ಆದ ಮಹಾದುರಂತ ಜಗತ್ತಿನ ಚರಿತ್ರೆಯ ಪುಟಗಳಲ್ಲಿ ಕರಾಳ ಅಧ್ಯಾಯವಾಗಿ ದಾಖಲುಗೊಂಡಿದೆ. ಇಂತಹ ಘೋರ ದುರಂತಗಳು ಮತ್ತೆ ಎಂದಿಗೂ ಘಟಿಸದಿರಲಿ ಎಂದು ಭಗವಂತನಲ್ಲಿ , ಪೃಕತಿ ಮಾತೆಯಲ್ಲಿ ಪ್ರಾರ್ಥಸಿಕೊಳ್ಳೊಣ. ಹೊಸ ವರುಷ ಎಲ್ಲರಿಗೂ ಸುಖಶಾಂತಿ ನೆಮ್ಮದಿ ತರಲಿ.

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *