ಕಾಸರಕೋಡ ಟೊಂಕ ಪ್ರದೇಶದಲ್ಲಿ ಹೊರಗಿನ ಬಾಡಿಗೆ ಜನರನ್ನು ಬಳಸಿ ಸ್ಥಳೀಯರ ವಿರುದ್ಧ ಷಡ್ಯಂತ್ರ: ಚಂದ್ರಕಾಂತ ಕೊಚರೇಕರ

ಕಾಸರಕೋಡ ಟೊಂಕ ಪ್ರದೇಶದಲ್ಲಿ ಹೊರಗಿನ ಬಾಡಿಗೆ ಜನರನ್ನು ಬಳಸಿ ಸ್ಥಳೀಯರ ವಿರುದ್ಧ ಷಡ್ಯಂತ್ರ: ಚಂದ್ರಕಾಂತ ಕೊಚರೇಕರ

ಕಾಸರಕೋಡ ಟೊಂಕ ಪ್ರದೇಶದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಮಾಡಿದರೆ, ಸ್ಥಳೀಯವಾಗಿ ಮತ್ತು ಸುತ್ತಮುತ್ತಲಿನ 8ಕೀ.ಮೀ ವ್ಯಾಪ್ತಿ ಪ್ರದೇಶದಲ್ಲಿ ಪರಿಸರ ಮತ್ತು ಜಲಮಾಲಿನ್ಯ ಉಂಟಾಗುತ್ತದೆ. ಮುಂದೆ ಈ ಭಾಗದ ಲಕ್ಷಾಂತರ ಜನರು ಶುದ್ಧ ಪರಿಸರದಿಂದ ವಂಚಿತರಾಗಬೇಕಾಗುತ್ತದೆ. ಸಾವಿರಾರು ಸ್ಥಳೀಯ ಮೀನುಗಾರರ ಬದುಕು ಬೀದಿಗೆ ಬರುತ್ತದೆ. ಆದ್ದರಿಂದ ಕಾಸರಕೋಡ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಸುತ್ತ ಮುತ್ತಲಿನ ಪ್ರದೇಶಗಳ ನಾವೆಲ್ಲರೂ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯನ್ನು ವಿರೋಧಿಸಬೇಕು ಎಂದು ಸಾಮಾಜಿಕ ಹೋರಾಟಗಾರ, ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಹೇಳಿದರು.

ವಾಣಿಜ್ಯ ಬಂದರು ಕಾಮಗಾರಿಯನ್ನು ಆರಂಭಿಸುವ ನೆಪದಲ್ಲಿ ಜನವರಿ 24ರಿಂದ ಮೂರು ದಿವಸ ಕಾಸರಕೋಡ ಟೊಂಕ ಪ್ರದೇಶದಲ್ಲಿ ನಿಷೇದಾಜ್ಞೆ ವಿಧಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಇಂದು ತುರ್ತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು ಉದ್ದೇಶಿತ ವಾಣಿಜ್ಯ ಬಂದರಿಗಾಗಿ ದಿ ಹೊನ್ನಾವರ ಪೋರ್ಟ ಪ್ರೈವೇಟ್ ಲಿಮಿಟೆಡ್ ಕಂಪೆನಿಯವರಿಗೆ ಸರ್ಕಾರ ಹಸ್ತಾಂತರ ಮಾಡಿರುವ ಸ. ನಂ. 305ರ ಹೊರಗೆ ಸಿಆರ್ ಝೆಡ್ ನಿಯಮಗಳನ್ನು ಉಲ್ಲಂಘಿಸಿ ವಾಣಿಜ್ಯ ಬಂದರು ನಿರ್ಮಾಣ ಕಂಪೆನಿ ಮತ್ತು ಬಂದರು ಅಧಿಕಾರಿ ಸಹಿತ ಗುತ್ತಿಗೆದಾರರು ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿಯನ್ನು ನಡೆಸಿದರೆ ಸ್ಥಳೀಯರು ತೀವ್ರವಾಗಿ ವಿರೋದಿಸುವರು ಮತ್ತು ಅಂದು ಸ್ಥಳೀಯ ಸಂಘ ಸಂಸ್ಥೆಗಳವರ ನೇತೃತ್ವದಲ್ಲಿ ಸ್ಥಳೀಯರು ಶಾಂತಿಯುತ ಪ್ರತಿಭಟನೆ ನಡೆಸುವರೆಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಾಣಿಜ್ಯ ಬಂದರಿನ ಕಾರ್ಯಚಟುವಟಿಕೆಗೆ ಚತುಷ್ಪಥ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣ ಮಾಡುವ ರಹಸ್ಯ ಕಾರ್ಯಸೂಚಿಯನ್ನು ಬಂದರು ಇಲಾಖೆ ಮತ್ತು ಬಂದರು ನಿರ್ಮಾಣ ಕಂಪನಿ ಹೊಂದಿರುವುದು ಬಹಿರಂಗ ಗೊಂಡಿದೆ.

ಇದಕ್ಕೂ ಪೂರ್ವದಲ್ಲಿ ಕಂಪೆನಿಯು ಉದ್ದೇಶಿತ ವಾಣಿಜ್ಯ ಬಂದರು ಯೋಜನಾ ಪ್ರದೇಶದವರೆಗೆ ಹೊಸದಾಗಿ ಸರ್ವಿಸ್ ರಸ್ತೆ ನಿರ್ಮಿಸಲು ಹವಣಿಸುತ್ತಿದೆ. ಈ ಕಾಮಗಾರಿ ನಡೆಸಲು ರಾಷ್ಟ್ರೀಯ ಹೆದ್ದಾರಿಯಿಂದ ಉದ್ದೇಶಿತ ವಾಣಿಜ್ಯ ಬಂದರು ಯೋಜನಾಪ್ರದೇಶದವರೆಗೆ ವಾಸವಾಗಿರುವ ಮೀನುಗಾರರ ಕುಟುಂಬಗಳನ್ನು ಹಂತ ಹಂತವಾಗಿ ಒಕ್ಕಲೆಬ್ಬಿಸಲು ತೆರೆಮರೆಯ ಪ್ರಯತ್ನ ನಡೆಯುತ್ತಿರುವ ಮಾಹಿತಿ ಇದೆ. ಇದಕ್ಕಾಗಿ ಪೋಲೀಸ್ ಬಂದೋಬಸ್ತ್ ನಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕೆಲವು ಪ್ರಮಾಣದ ತೆರವು ಕಾರ್ಯಾಚರಣೆ ಸಹಿತ ರಸ್ತೆ ನಿರ್ಮಾಣ ಇತ್ಯಾದಿ ಕೆಲವು ಕಾಮಗಾರಿ ನಡೆಸುವ ಹುನ್ನಾರ ನಡೆಯುತ್ತಿದೆ. ಒಂದು ವೇಳೆ ವಾಣಿಜ್ಯ ಬಂದರು ಯೋಜನೆ ಅನುಷ್ಠಾನ ಮಾಡಿದ್ದೇ ಆದಲ್ಲಿ, ಮುಂದೆ ತೈಲ ಮತ್ತು ಮೆಂಗ್ನೀಸ್ ಅದಿರಿನಂತಹ ಧೂಳು ಮಿಶ್ರಿತ ಸರಕುಗಳ ಆಮದು ರಪ್ತು ಚಟುವಟಿಕೆಗಳಿಂದ ಯೋಜನಾಪ್ರದೇಶದ ಸುತ್ತ ಮುತ್ತಲ ಪ್ರದೇಶದ 8ಕೀ.ಮೀ ವ್ಯಾಪ್ತಿಯಲ್ಲಿ ಪರಿಸರ ಮಾಲಿನ್ಯ ಮತ್ತು ಜಲಮಾಲಿನ್ಯ ಉಂಟಾಗುವುದನ್ನು ತಪ್ಪಿಸಲು ಯಾವುದೇ ತಂತ್ರಜ್ಞಾನದಿಂದಲೂ ಸಾಧ್ಯವಿಲ್ಲ ಎನ್ನುವುದನ್ನು ಸ್ಥಳೀಯರು ಅರಿತುಕೊಂಡಿದ್ದಾರೆ.

ಈ ಯೋಜನೆಯಿಂದ ಮುಂದೆ ಈ ಭಾಗದಲ್ಲಿ ಅನೇಕ ಬಗೆಯ ಸಮಸ್ಯೆಗಳು ಉಂಟಾಗಿ ಜಲಚರಗಳು, ಜೀವವೈವಿಧ್ಯತೆಗಳು ನಾಶವಾಗುತ್ತದೆ.ಮತ್ತು ಪರಿಸರ ಮಾಲಿನ್ಯದಿಂದ ಲಕ್ಷಾಂತರ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಆದ್ದರಿಂದ ಇಲ್ಲಿನ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯನ್ನು ಕೈಬಿಟ್ಟು, ಅದರ ಬದಲಿಗೆ ಮೀನುಗಾರಿಕೆಗೆ ತೊಡಕಾಗಿರುವ ಇಲ್ಲಿನ ನದಿ-ಸಮುದ್ರಸೇರುವ ಸಂಗಮ ಪ್ರದೇಶದಲ್ಲಿನ ಬ್ರೇಕ್ ವಾಟರ್ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಈ ಭಾಗದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕು ಎಂದು ಕೊಚರೇಕರ ಹೇಳಿದರು.

ಕ್ರಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಪ್ರವಾಸೋದ್ಯಮದೊಂದಿಗೆ, ಈಗಿನ ಸ್ವಚ್ಛಪರಿಸರದಲ್ಲಿ ಬದುಕುವ ಹಕ್ಕು ನಮ್ಮ ಜನರಿಗಿದೆ ಕಾಸರಕೋಡ ಟೊಂಕದ ಕಡಲತೀರಪ್ರದೇಶವು ಅಳಿವಿನ ಅಂಚಿನಲ್ಲಿರುವ ಅಪರೂಪದ ರಿಡ್ಲೆ ಜಾತಿಯ ಆಮೆಗಳು ಮೊಟ್ಟೆಇಡುವ ಸಂರಕ್ಷಿತ ತಾಣವೆಂದು ಗುರುತಿಸಲ್ಪಟ್ಟಿದೆ. ಇದಕ್ಕೆ ಹೊಂದಿಕೊಂಡಂತೆ ಅಂತರರಾಷ್ಟ್ರೀಯ ಮನ್ನಣೆ ಪಡೆದ ಇಕೋ ಬೀಚ್ ಕೂಡ ಇದ್ದು ಪ್ರವಾಸಿಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಹೀಗಿರುವಾಗ ಜಲಮಾಲಿನ್ಯ ಮತ್ತು ಪರಿಸರ ಮಾಲಿನ್ಯ ಉಂಟುಮಾಡುವ, ಜಲಚರ ಸಹಿತ ಜೀವವೈವಿಧ್ಯತೆಗಳ ವಿನಾಶಕ್ಕೆ ಕಾರಣವಾಗಬಲ್ಲ, ಹಾಗೂ ಸಾವಿರಾರು ಕುಟುಂಬಗಳ ಬದುಕನ್ನು ಹಾಳುಗೆಡಹುವ ವಾಣಿಜ್ಯ ಬಂದರು ಯೋಜನೆ – ನಮಗೆ ಬೇಕಿಲ್ಲ ಎಂದು ಅಬಿಪ್ರಾಯ ಪಟ್ಟಿರುವ ಅವರು, ಕಾಸರಕೋಡ ಮತ್ತು ಸುತ್ತಮುತ್ತಲಿನ ನಾವೆಲ್ಲರೂ ಕಾಸರಕೋಡ ಟೊಂಕದ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯನ್ನು ವಿರೋಧಿಸಬೇಕು ಎಂದಿದ್ದಾರೆ.

ವಾಣಿಜ್ಯ ಬಂದರು ನಿರ್ಮಿಸುವುದರಿಂದ ಕೆಲ ಗುತ್ತಿಗೆದಾರರಿಗೆ ಮಾತ್ರ ಅನುಕೂಲವಾಗುತ್ತದೆ. ಜನರಿಗೆ ಈ ಯೋಜನೆಯಿಂದ ಯಾವ ಅನುಕೂಲವೂ ಇಲ್ಲ. ಈಗಿನ ಉತ್ತಮ ಪರಿಸರ ಉಳಿದರೆ ಲಕ್ಷಾಂತರ ಜನರಿಗೆ ಅನುಕೂಲ ವಾಗುತ್ತದೆ. ಜನರು ಸಹ ಆರೋಗ್ಯವಾಗಿರುತ್ತಾರೆ ಎಂದರು. ನಾವು ಹೋರಾಟ ಮಾಡಿ, ಪರಿಸರ- ಜೀವ ವೈವಿಧ್ಯತೆ ಸಹಿತ ಸಾಂಪ್ರದಾಯಿಕ ಮೀನುಗಾರಿಕೆಗೆ ಪ್ರಶಸ್ತವಾಗಿರುವ ಕಾಸರಕೋಡ ಟೊಂಕದ ಕಡಲತೀರಪ್ರದೇಶವನ್ನು ಉಳಿಸಿಕೊಳ್ಳಬೇಕಿದೆ.ಈ ಹೋರಾಟ ಕೇವಲ ಕಾಸರಕೋಡ ಟೊಂಕ ಭಾಗದ ಜನರಿಗೆ ಮಾತ್ರ ಸೀಮಿತವಾಗಬಾರದು,ಪರಿಸರದ ಹಿತದೃಷ್ಟಿಯಿಂದ ಕಾಸರಕೋಡ ಗ್ರಾಮದ ಮತ್ತು ಅಕ್ಕಪಕ್ಕದ ನಾವೆಲ್ಲರೂ ಸೇರಿ ವಾಣಿಜ್ಯ ಬಂದರು ಯೋಜನೆಯನ್ನು ವಿರೋಧಿಸಬೇಕಿದೆ. ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣದ ಹೊಣೆ ಹೊತ್ತಿರುವ ದಿ ಹೊನ್ನಾವರ ಪೋರ್ಟ ಪ್ರೈವೇಟ್ ಲಿಮಿಟೆಡ್ ಕಂಪೆನಿಯವರು, ಹೇಗಾದರೂ ಮಾಡಿ ವಾಣಿಜ್ಯ ಬಂದರು ಯೋಜನೆಯನ್ನು ಅನುಷ್ಠಾನಿಸುವ ಹಠಕ್ಕೆ ಬಿದ್ದು, ಸ್ಥಳೀಯರನ್ನು ಒಡೆದು ಆಳುವ ತಂತ್ರಗಾರಿಕೆ ನಡೆಸುತ್ತಿರುವುದನ್ನು ಜನ ಗಮನಿಸಿದ್ದಾರೆ.

ಹೊರಗಿನ ಬಾಡಿಗೆ ಜನರನ್ನು ಬಳಸಿ ಸ್ಥಳೀಯರ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಜನರನ್ನು ಹಂತ ಹಂತವಾಗಿ ಒಕ್ಕಲೆಬ್ಬಿಸಿ ವಾಣಿಜ್ಯ ಬಂದರು ಯೋಜನೆಗಾಗಿ ರಾಷ್ಟ್ರೀಯ ಹೆದ್ದಾರಿಯಿಂದ ಟೊಂಕದ ವರೆಗೆ ಚತುಷ್ಪಥ ರಸ್ತೆ ಮತ್ತು ಹೊಸಪಟ್ಟಣದಿಂದ ಹೀರೆಮಠದಮೂಲಕ ಟೊಂಕದವರೆಗೆ ರೈಲು ಮಾರ್ಗವನ್ನು ನಿರ್ಮೀಸುವ ರಹಸ್ಯ ಕಾರ್ಯಸೂಚಿಯನ್ನು ಹೊಂದಿರುವ ಬಗ್ಗೆ ಮಾಹಿತಿ ಇದೆ. ಯಾರದೋ ಒಬ್ಬಿಬ್ಬರ ಲಾಭಕ್ಕಾಗಿ, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ, ಪರಿಸರ ಮತ್ತು ಜನಸಾಮಾನ್ಯರಿಗೆ ತೊಂದರೆಯಾಗುವಂತ ಇಂತಹ ಯೋಜನೆಯನ್ನು ಜನರು ಒಕ್ಕೊರಲಿನಿಂದ ಬೇಡ ಎನ್ನಬೇಕು ಎಂದು ಅವರು ಪ್ರತಿಪಾದಿಸಿದರು. ಸ್ಥಳೀಯರ ನೀಯೋಗದಿಂದ ತಹಸೀಲ್ದಾರರಿಗೆ ಮನವಿ ಇಂದು ಕಾಸರಕೋಡ ಟೊಂಕದ ವಿವಿಧ ಸಂಘಟನೆಗಳ ಪ್ರಮುಖರ ನಿಯೋಗವು ಹೊನ್ನಾವರ ತಹಸೀಲ್ದಾರ್ ರವರನ್ನು ಭೇಟಿ ಮಾಡಿ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪೋಲೀಸ್ ಬಂದೋಬಸ್ತದಲ್ಲಿ ಸಿಆರ್ ಝೆಡ್ ನಿಯಮಗಳನ್ನು ಮೀರಿ ಮತ್ತು ಸ್ಥಳೀಯ ಜನರ ವಿರೋಧದ ನಡುವೆಯೂ ಅಗತ್ಯ ಪರವಾನಗಿಗಳನ್ನು ಪಡೆಯದೇ ರಸ್ತೆ ಮತ್ತು ವಾಣಿಜ್ಯ ಬಂದರು ನಿರ್ಮಾಣ ಕಂಪನಿಗಾಗಿ ಪೋಲೀಸ್ ಬಂದೋಬಸ್ತ್ ಒದಗಿಸದಂತೆ ಮತ್ತು ಅಂತಹ ಕೆಲಸಗಳಿಗೆ ತಾಲ್ಲೂಕು ಆಡಳಿತ ಬೆಂಬಲ ನೀಡುವುದನ್ನು ತಡೆಹಿಡಿಯಬೇಕೆಂದು ದಿನಾಂಕ 24/11/2021ರ ಉಚ್ಛ ನ್ಯಾಯಾಲಯದ ತೀರ್ಪು ಮತ್ತು ನಿರ್ದೇಶನವನ್ನು ಉಲ್ಲೇಖಿಸಿ ಇಂದು ತಹಶೀಲ್ದಾರ ಶ್ರೀ ನಾಯ್ಕಡ್ ರವರಿಗೆ ಮನವಿ ನೀಡಿದರು. ನೀಯೋಗದಲ್ಲಿ ವಿವಿಧ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಗಣಪತಿ ತಾಂಡೇಲ, ಮೀನುಗಾರರ ಕಾರ್ಮಿಕರ ಸಂಘದ ಅಧ್ಯಕ್ಷ ರಾಜು ತಾಂಡೇಲ್, ರಮೇಶ್ ಎಂ. ತಾಂಡೇಲ, ಚಿದಂಬರ ಎಚ್ ತಾಂಡೇಲ್. ಮಹಮ್ಮದ್ ಕೋಯಾ, ಆಯೂಬ ಸಾಬ್ ಟೊಂಕ ಇತರರು ಇದ್ದರು.

Leave a Reply

Your email address will not be published. Required fields are marked *