ಕಥೆ ಹೇಳುವೆ ನನ್ನ ಕಥೆ ಹೇಳುವೆ……..!!?

ನಾನು ನಿಮ್ಮ ಪ್ರೀತಿಯ ಮನೆಮಗಳು ಹೆಸರು ಆಲೀವ್ ರಿಡ್ಲೇ ಕಡಲಾಮೆಗಳ ಸಂತತಿಗಳಲ್ಲೇ ನಮ್ಮ ಸಂತತಿಯನ್ನು ಜಗತ್ತಿನ ಜನರು ವಿಶೇಷವಾಗಿ ಗೌರವಿಸುತ್ತಾರೆ. ಹೊನ್ನಾವರ ಕಾಸರಕೋಡು ಟೊಂಕದ ಕಡಲತೀರ ನನ್ನ ತವರುಮನೆ ನನಗೆ ಜನ್ಮ ನೀಡಿದ ಕಾಸರಕೋಡು ಟೊಂಕದ ಪುಣ್ಯಭೂಮಿಯನ್ನು ಸ್ಮರಿಸುತ್ತಾ ತಮ್ಮೊಂದಿಗೆ ನನ್ನ ಕಥೆಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಮೊತ್ತ ಮೊದಲು ನಾನು ಜನ್ಮ ತಾಳಲು ಹಗಲಿರುಳು ಬಹಳ ಶ್ರಮಪಟ್ಟ ಕಾಸರಕೋಡಿನ ಸಮಸ್ತ ಮೀನುಗಾರ ಭಾಂಧವರಿಗೂ, ಬಲು ಜತನದಿಂದ ನಮ್ಮನ್ನು ಪಂಜರದಲ್ಲಿಟ್ಟು ಪೋಷಿಸಿದ ಹೊನ್ನಾವರ ಅರಣ್ಯ ಇಲಾಖೆಯವರಿಗೂ ತುಂಬು ಹೃದಯದ ವಂದನೆಗಳು. ಇದೀಗ ನಿಮ್ಮ ಮಡಿಲಲ್ಲಿ ನನ್ನ ಮಕ್ಕಳನ್ನು ಬಿಟ್ಟಿದ್ದೇನೆ. ಅದರ ಹೊಣೆಗಾರಿಕೆಯನ್ನು ತಾವುಗಳು ಬಹಳಷ್ಟು ಮುತುವರ್ಜಿ ಮತ್ತು ಕಾಳಜಿಯಿಂದ ತೆಗೆದುಕೊಂಡಿರುವುದನ್ನು ತಿಳಿದು ಹೃದಯ ತುಂಬಿ ಬಂದಿದೆ. ಹೃದಯವಂತರೇ ಈ ನಿಮ್ಮ ಉಪಕಾರವನ್ನು ನಿಮ್ಮ ಮನೆಮಗಳು ಖಂಡಿತಾ ಮರೆಯುವುದಿಲ್ಲ. ಹೆಣ್ಣಿಗೆ ತವರು ಮನೆ ಸ್ವರ್ಗಕ್ಕಿಂತ ಮಿಗಿಲು ಕಾಸರಕೋಡು ಟೊಂಕದ ನನ್ನ ತವರಿನಲ್ಲಿ ನನ್ನ ಅಪಾರವಾದ ನೆನಪುಗಳಿವೆ ಕಾಲವೂ ಕೂಡಾ ಅಳಿಸಲಾಗದ ಹೆಜ್ಜೆಗುರುತುಗಳಿವೆ ಅಗೆದಷ್ಟೂ, ಮೊಗೆದಷ್ಟೂ ಬರಿದಾಗದ ಚಿರಭಾಂಧವ್ಯವಿದೆ.

ಕಡಲತೀರದ ಈ ನನ್ನ ತವರಿನಲ್ಲಿ ಅದ್ಭುತವಾದ ಭಾವನಾತ್ಮಕ ಸೆಳೆತವಿದೆ ಕರುಳುಬಳ್ಳಿಯ ಹೃದಯಸ್ಪರ್ಶಿ ಬಂಧುತ್ವವೇ ಈ ಭಾವನಾತ್ಮಕ ಸೆಳೆತದ ಮೂಲಬಿಂದು ನನ್ನದು ಎಂಬ ಭಾವಗಳು ಇಲ್ಲಿ ಬೆಚ್ಚಗೆ ಕುಳಿತಿವೆ. ಈ ನನ್ನ ತವರಿಗೆ ಬರುವುದೆಂದರೆ ಅದ್ಬುತ ಸಂಭ್ರಮ ಕಡಲಮಕ್ಕಳಾದ ಇಲ್ಲಿನ ಮೀನುಗಾರರು, ಅರಣ್ಯ ಇಲಾಖೆ, ಕಡಲಜೀವಶಾಸ್ತ್ರಜ್ಞರು ಮುಂತಾದವರ ಪ್ರೀತಿಯ ಹಾರೈಕೆಯಲ್ಲಿ ಬೆಳೆದು ನಲವತೈದು ದಿನಗಳ ಕಾಲ ಕಡಲಿನ ಮರಳಿನ ರಾಶಿಯಲ್ಲಿ ಬೆಚ್ಚಗಿನ ಕಾವು ಪಡೆದು ರಕ್ಷಾಚಿಪ್ಪಿನಿಂದ ಹೊರಬಂದು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಕ್ಕುತ್ತಾ ಕಡಲಿಗೆ ನನ್ನ ಒಡಹುಟ್ಟಿದವರೊಂದಿಗೆ ಸೇರಿದ ಸಂಭ್ರಮ ನನ್ನ ಸ್ಮೃತಿಪಟಲದಲ್ಲಿ ಹಚ್ಚಹಸಿರಾಗಿದೆ. ಈಗ ನನ್ನ ಮಕ್ಕಳ ಸರದಿ. ನನ್ನ ಮಕ್ಕಳು ಮೊಟ್ಟೆಯಿಂದ ಹೊರಬಂದು ಕಡಲು ಸೇರುವ ತನಕ ನಾನು ನಲವತೈದು ದಿನಗಳ ಅಸುಪಾಸಿನಲ್ಲಿ ಕಾಯುತ್ತಾ ಇರುತ್ತೇನೆ. ನನ್ನ ಮಕ್ಕಳು ಬಂದ ಮೇಲೆ ಅವರನ್ನು ಕರೆದುಕೊಂಡು ಆಳಸಮುದ್ರಕ್ಕೆ ಹೋಗುತ್ತೇನೆ. ನಮ್ಮ ಕುಲಕ್ಕೆ ಮೊಟ್ಟೆಯನ್ನು ಮರಿ ಮಾಡುವ ಸಾಮರ್ಥ್ಯ ಇಲ್ಲ. ನಾವುಗಳು ಚಳಿಗಾಲದಲ್ಲಿ ಚಂದ್ರನಲ್ಲಿ ವೃತ್ತಾಕಾರವಾಗಿ ಮೂಡುವ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ಆ ದಿನವನ್ನೇ ಮೊಟ್ಟೆ ಇಡಲು ಆಯ್ಕೆ ಮಾಡಿಕೊಳ್ಳುತ್ತೇವೆ. ಚಂದ್ರನ ಮೇಲೆ ವೃತ್ತಾಕಾರದ ಚಿತ್ರ ಮೂಡಿದರೆ ಅದು ಆ ದಿನದಿಂದ ಭೂಮಿಯ ಉಷ್ಣಾಂಶ ಹೆಚ್ಚಾಗುತ್ತದೆ ದೃಡ ನಂಬಿಕೆ ನಮ್ಮದು.

ಕಡಲತಡಿಯ ಮರಳಿನ ರಾಶಿಯ ಉಷ್ಣಾಂಶ ಹೆಚ್ಚಿದಂತೆ ನಮ್ಮ ಸಂತಾನಾಭಿವೃದ್ದಿ ಕಾರ್ಯ ವೇಗ ಪಡೆದುಕೊಳ್ಳುತ್ತದೆ ನಮ್ಮ ಕರುಳಬಳ್ಳಿಗಳು ಚಿಪ್ಪಿನೊಳಗಿಂದ ಹೊರಬಂದು ನಮ್ಮನ್ನು ಸೇರಿಕೊಳ್ಳುತ್ತದೆ ಕಡಲತೀರದಲ್ಲಿ ಮೊಟ್ಟೆ ಇಡುವ ಕೆಲಸ ಅತ್ಯಂತ ಸವಾಲಿನಿಂದ ಕೂಡಿರುತ್ತದೆ. ಈ ಸಂದರ್ಭದಲ್ಲಿ ಸಮುದ್ರತೀರದ ಎಲ್ಲಾ ಚಟುವಟಿಕೆಗಳನ್ನು ನಾವು ತುಂಬಾ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಮುಖ್ಯವಾಗಿ ರಾತ್ರಿ ವೇಳೆಯಲ್ಲಿ ಸಮುದ್ರತೀರದಲ್ಲಿ ಆಹಾರಕ್ಕಾಗಿ ಅಲೆದಾಡುವ ನಾಯಿಗಳ ತೊಂದರೆ ಇರುತ್ತದೆ. ಅವುಗಳು ಸ್ಥಳದಿಂದ ದೂರ ಹೋದ ಮೇಲೆ ನಾವು ಕಡಲಿನ ಮರಳಿನ ರಾಶಿಯಲ್ಲಿ ಶತ್ರುಗಳಿಗೆ ಗೊಂದಲ ಉಂಟು ಮಾಡುವ ದೃಷ್ಟಿಯಿಂದ ಮೂರ್ನಾಲ್ಕು ಕಡೆ ಹೊಂಡ ತೋಡುತ್ತೇವೆ. ಈ ಸಂದರ್ಭದಲ್ಲಿ ಅತ್ಯಂತ ಬಿಸಿ ಇರುವ ಸ್ಥಳವನ್ನು ಆಯ್ಕೆ ಮಾಡಿಕೊಂಡು ಹೊಂಡ ತೋಡಿ ಅಲ್ಲಿ ಮೊಟ್ಟೆ ಇಟ್ಟು ಹೋಗುತ್ತೇವೆ. ನಮಗೆ ಕಾವು ಕೊಟ್ಟು ಮರಿ ಮಾಡುವ ಸೌಭಾಗ್ಯವಿಲ್ಲ ಕಡಲಿನ ಮರಳಿನ ರಾಶಿಯ ಉಷ್ಣಾಂಶಕ್ಕೆ ನಮ್ಮ ಮೊಟ್ಟೆಗಳು ಬಿರಿದು ನಮ್ಮ ಸಂತಾನ ಸೃಷ್ಟಿಯಾಗುತ್ತದೆ. ನಮ್ಮ ಸಂತಾನವನ್ನು ವಿಶೇಷ ಕಾಳಜಿಯಿಂದ ಸಂರಕ್ಷಣೆ ಮಾಡಿ ಕಡಲಿಗೆ ಬಿಡುವ ದಿನ ಹೃದಯವಂತರ ಸಂಭ್ರಮ ನೋಡಿದರೆ ನನ್ನ ಕುಲ ನಿಜಕ್ಕೂ ಭಾಗ್ಯಶಾಲಿ ಎನಿಸುತ್ತದೆ. ಆ ದಿನ ಹೃದಯವಂತರಾದ ಮೀನುಗಾರರ ಸಂತೋಷಕ್ಕೆ ಪಾರವೇ ಇರುವುದಿಲ್ಲ.ಇಲ್ಲಿ ವಿವಿಧ ಮತಧರ್ಮಗಳ ಸಹಭಾಗಿತ್ವದಲ್ಲಿ ನಮ್ಮ ಮರಿಗಳನ್ನು ನಮ್ಮ ವಾಸಸ್ಥಾನಕ್ಕೆ ಬೀಳ್ಕೊಡುಗೆ ಮಾಡುವ ಕಾರ್ಯಕ್ರಮ ನಡೆಯುತ್ತದೆ.

ಈ ಸಂದರ್ಭದಲ್ಲಿ ಅವರ ಸಂಭ್ರಮ ನೋಡಿದರೆ ನಮಗೆ ಹೃದಯ ತುಂಬಿ ಬರುತ್ತದೆ. ನಮ್ಮ ಪೂರ್ವಿಕರ ಮೂಲವನ್ನು ಅನ್ವೇಷಣೆ ಮಾಡಲೊರಟರೆ ಅದೊಂದು ರೋಚಕ ಕಥೆಯಾಗುತ್ತದೆ. ಅಂದು ಪುರಾಣದ ಕಾಲದಲ್ಲಿ ಸಮುದ್ರ ಮಥನ ನಡೆಯುವಾಗ ಮಹಾವಿಷ್ಣುವು ಭೂಮಿಯನ್ನು ಕಾಪಾಡಲು ತನ್ನ ಎರಡನೇ ಅವತಾರವಾಗಿ ಕಾಣಿಸಿಕೊಂಡ ಪರಿ ಕೂರ್ಮಾವತಾರವಾಗಿ ಪ್ರಸಿದ್ದಿಯಾಗಿದೆ. ಲಕ್ಷಗಟ್ಟಲೆ ವರ್ಷಗಳ ಹಿಂದಿನಿಂದ ನಮ್ಮ ತಲೆಮಾರುಗಳು ಭೂಮಿಯಲ್ಲಿ ಕಾಣಿಸಿಕೊಂಡಿವೆ ನಮ್ಮ ಬಂಧುಗಳಲ್ಲಿ ಕೆಲವರು ಮಹಾಸಾಗರ ಸರ್ಪವೆನಿಸಿಕೊಂಡಿದ್ದರು ಅವುಗಳಿಗೆ ಹಾವಿನಂತೆ ತಲೆಯಿದ್ದರೂ ಕೂಡಾ ದೇಹವೆಲ್ಲ ನಮ್ಮಂತೆಯೇ ಇದ್ದವು ಕಾಲಕ್ರಮೇಣ ಈ ದೇಹಪೃಕೃತಿ ಪರಿವರ್ತನೆಗೊಂಡವು. ಬರುಬರುತ್ತಾ ಹಲವು ರೂಪಾಂತರವಾಯಿತು. ಅಂದು ಸುಮಾರು ಹನ್ನೆರಡು ಅಡಿಗಳಷ್ಟು ಉದ್ದದ ನಮ್ಮ ಕುಲಭಾಂಧವರು ಸಮುದ್ರಗಳಲ್ಲಿ ಅಸಂಖ್ಯಾತವಾಗಿದ್ದವು. ನಮ್ಮ ಕುಲಭಾಂಧವರ ದೇಹ ಬೃಹದಾಕರ ರೂಪದಲ್ಲಿದ್ದು ಒಬ್ಬೊಬ್ಬರು ಮೂರು ಟನ್ ತೂಗುತ್ತಿದ್ದರು. ಬೆನ್ನನ್ನು ಆವರಿಸಿಕೊಂಡಿರುವ ಬಲು ಗಟ್ಟಿಯಾದ ಕವಚದಿಂದಾಗಿ ನಮ್ಮ ಕುಲಭಾಂಧವರನ್ನು ತಿನ್ನಲು ಬೇರೆ ಚಲಚರಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಸಮುದ್ರದೊಳಗೆ ನಮ್ಮ ಕುಲಭಾಂಧವರಿಗೆ ಅಂದು ಶತ್ರುಗಳೇ ಇರಲಿಲ್ಲ.

ಕಡಲಂಚಿನ ಮರಳಿನ ರಾಶಿಯಲ್ಲಿ ಜೀವಸ್ವರೂಪ ಪಡೆದುಕೊಳ್ಳುವ ನಾವು ಸಮುದ್ರದಲ್ಲಿ ನಮ್ಮ ಜೀವನ ಪ್ರಾರಂಭಿಸುತ್ತೇವೆ. ಲೋಳೆಮೀನು ಅಥವಾ ಜೆಲ್ಲಿ ಫಿಶ್ ನಮ್ಮ ಅಚ್ಚುಮೆಚ್ಚಿನ ಆಹಾರ. ಮೀನು ಮುಂತಾದ ಇತರ ಜಲಚರಗಳಿಗೆ ಈ ಜೆಲ್ಲಿ ಫಿಶ್ ಗಳು ಭಯಕಾರಕವಾಗಿದ್ದು, ಇವುಗಳನ್ನು ಕಂಡರೆ ಸಾಕು ಮೀನುಗಳು ದೂರ ಓಡುತ್ತವೆ. ಆದರೆ ನನ್ನನ್ನು ಕಂಡ ಕೂಡಲೇ ಈ ಲೋಳೇಮೀನುಗಳು ದೂರಕ್ಕೆ ಓಡಿ ಹೋಗುತ್ತದೆ‌ ಹೀಗೆ ಜೀವನ ಸಾಗಿ ನಾವು ಹದಿನಾರನೇ ವರ್ಷಕ್ಕೆ ಪ್ರೌಢಾವಸ್ಥೆಗೆ ಬರುತ್ತೇವೆ. ನಾವು ಸಾವಿರ ಕೀಮೀ ದೂರದಲ್ಲಿದ್ದರೂ ಜನ್ಮ ತಾಳಿದ ಮಾತೃಭೂಮಿಯನ್ನು ಮರೆಯುವುದಿಲ್ಲ. ಅದು ಸಾವಿರಾರು ಕೀಮೀ ದೂರದಲ್ಲಿ ಬೇಕಾದರೂ ಇರಲಿ, ಅದೇ ಸ್ಥಳದಲ್ಲೇ ನಿಖರವಾಗಿ ಹುಡುಕಿಕೊಂಡು ಬಂದು ಮೊಟ್ಟೆ ಇಡುವುದು ನಮ್ಮ ಜಾಯಮಾನ. ಇದು ತಲೆತಲಾಂತರದಿಂದ, ಶತಶತಮಾನಗಳಿಂದ ನಡೆದುಕೊಂಡು ಬಂದಿರುತ್ತದೆ. ಪರಂಪರಾನುಗತವಾದ ನಮ್ಮ ತವರಿಗೆ ಬಂದು ಸಂತಾನಾಭಿವೃದ್ದಿ ಪ್ರಕ್ರಿಯೆ ನಡೆಸುವುದು ನಮಗೆ ಎಲ್ಲಿಲ್ಲದ ಸಂತೋಷ,ಸಂಭ್ರಮ.

ನಮ್ಮ ಪೂರ್ವಿಕರ ಕಾಲದಿಂದಲೂ ಅಪೂರ್ವ ಕಡಲತೀರವಾಗಿರುವ ಕಾಸರಕೋಡು ಟೊಂಕ ಕಡಲತೀರ ನಮ್ಮ ಸಂತಾನಾಭಿವೃದ್ದಿಯ ತಾಣವಾಗಿತ್ತು. ಮೀನುಗಾರ ಬಂಧುಗಳ ಅಭೂತಪೂರ್ವ ಸಹಕಾರದಿಂದ ಮತ್ತು ಅರಣ್ಯ ಇಲಾಖೆಯ ಕೃಪೆಯಿಂದ ಕಾಸರಕೋಡು ಕಡಲತೀರ ನಮ್ಮೆಲ್ಲರ ಪಾಲಿಗೆ ಸ್ವರ್ಗಕ್ಕಿಂತ ಮಿಗಿಲಾಗಿತ್ತು. ಆದರೆ ಯಾವಾಗ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯ ಗೃದ್ದದೃಷ್ಟಿ ನಮ್ಮ ತವರಿನ ಮೇಲೆ ಬಿತ್ತೊ ಅವಾಗಿಂದ ಪರಿಸ್ಥಿತಿ ಬಿಗಡಾಯಿಸುತ್ತಾ ಹೋಯಿತು. ರಾತ್ರಿ ವೇಳೆ ನನ್ನ ತವರಿಗೆ ಬಂದು ಮೊಟ್ಟೆ ಇಡುವ ಪ್ರಕ್ರಿಯೆಗೆ ತೊಂದರೆ ಕಾಣಿಸಿಕೊಳ್ಳಲು ಆರಂಭವಾದವು. ಸ್ವಚ್ಚಂದವಾಗಿ ಹರಿಯುತ್ತಿದ್ದ ಶರಾವತಿ ನದಿ ಹರಿಯುವ ದಿಕ್ಕನ್ನೇ ಬದಲಾಯಿಸಲಾಯಿತು. ಇದೇ ಸಂದರ್ಭದಲ್ಲಿ ಆಹಾರ ಅರಸಿ ಬಂದ ನನ್ನ ಸೋದರ ಸಂಬಂಧಿಗಳು ದೈತ್ಯಾಕಾರದ ಯಂತ್ರಗಳಿಗೆ ಸಿಲುಕಿ ತಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು.

ಖಾಸಗಿ ಬಂದರು ನಿರ್ಮಾಣ ಮಾಡಲೇಬೇಕು ಎಂಬ ಹಠದಿಂದ ಅನಾದಿಕಾಲದಿಂದಲೂ ಈ ಪ್ರದೇಶದಲ್ಲಿ ನೆಲೆನಿಂತು ಮೀನುಗಾರಿಕೆ ವೃತ್ತಿಯಲ್ಲಿ ಬದುಕು ಕಟ್ಟಿಕೊಂಡಿರುವ ಸಾವಿರಾರು ಮೀನುಗಾರರನ್ನು ನಿರ್ದಯವಾಗಿ ಒಕ್ಕಲೆಬ್ಬಿಸುವ ಕುಟಿಲ ಕಾರ್ಯತಂತ್ರಗಳು ವ್ಯವಸ್ಥಿತವಾಗಿ ನಡೆಯುತ್ತಿದೆ ನಮ್ಮ ಸಂತತಿಯನ್ನು ನಿರಂತರವಾಗಿ ಸಂರಕ್ಷಣೆ ಮಾಡುವ ಈ ಅಮಾಯಕ ಬಡ ಮೀನುಗಾರರನ್ನು ಬೀದಿಪಾಲು ಮಾಡುವುದರ ಜೊತೆಗೆ ನಮ್ಮನ್ನೂ ಕೂಡಾ ನಿರ್ವಸಿತರನ್ನಾಗಿ ಮಾಡುವಾ ಲಜ್ಜೆಗೇಡಿ ಕುಟಿಲ ತಂತ್ರಗಾರಿಕೆಗಳು ಜೋರಾಗಿ ನಡೆಯುತ್ತಿದೆ. ನಮ್ಮನ್ನು ಸಂರಕ್ಷಣೆ ಮಾಡಬೇಕಾದ ಆಡಳಿತ ವ್ಯವಸ್ಥೆ ನಮ್ಮ ಸಮಾಧಿ ಕಟ್ಟುತ್ತಿದೆ. ಇದಕ್ಕಾಗಿ ಹಲವು ಕುಟಿಲ ತಂತ್ರಗಾರಿಕೆಗಳು ನಡೆದವು ಮತ್ತು ನಡೆಯುತ್ತಲೇ ಇದೆ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ನಾವುಗಳು ಇಲ್ಲಿ ಗೂಡು ಕಟ್ಟುವುದಿಲ್ಲ, ಮೊಟ್ಟೆಗಳನ್ನು ಇಡುವುದಿಲ್ಲ ಎಂಬ ಹಸಿ ಹಸಿ ಸುಳ್ಳನ್ನು ಪ್ರತಿಪಾದಿಸಲಾಯಿತು ಇದಕ್ಕೆ ಉತ್ತರವಾಗಿ ನಾನು ಮತ್ತು ನನ್ನ ಸಹೋದರಿಯರು ಇಲ್ಲಿ ಸಂತಾನಾಭಿವೃದ್ದಿಗಾಗಿ ಮೊಟ್ಟೆ ಇಟ್ಟು ಲಜ್ಜೆಗೇಡಿಗಳ ಪ್ರತಿಪಾಧನೆಯನ್ನು ಸುಳ್ಳು ಎಂದು ಜಗತ್ತಿನ ಮುಂದೆ ತೋರಿಸಿಕೊಟ್ಟೆವು.

ಕಾಸರಕೋಡು ಟೊಂಕ ಕಡಲತೀರದ ನನ್ನ ತವರಿನಲ್ಲಿ ನಾನು ಮೊಟ್ಟೆ ಇಡಲು ಪಟ್ಟ ಶ್ರಮ ಅಷ್ಟಿಷ್ಟಲ್ಲ ಆ ದಿನ ಕಾರಿರುಳಿನಲ್ಲಿ ಕಪ್ಪುದೈತರ ಪ್ರತಿನಿಧಿಗಳು ಕಡಲಂಚಿನಲ್ಲಿ ಅಲೆಗಳಿಗೆ ನೇರವಾಗಿ ಪ್ರಖರ ಬೆಳಕನ್ನು ನಿರಂತರವಾಗಿ ಹರಿಯಬಿಡುತ್ತಿದ್ದರು ಅವರ ಕಣ್ಣು ತಪ್ಪಿಸಿ ಸೂಕ್ತ ಸ್ಥಳದಲ್ಲಿ ಮೊಟ್ಟೆ ಇಟ್ಟು ಬಂದೆ ಬಹುಶಃ ನಾನು ಅವರ ಕಣ್ಣಿಗೆ ಬಿದ್ದಿದ್ದರೆ ಖಂಡಿತವಾಗಿಯೂ ಹೆಣವಾಗುತ್ತಿದ್ದೆ ಕೇವಲ ಎರಡು ವಾರಗಳ ಅಂತರದಲ್ಲಿ ನಾನು ಮತ್ತು ನನ್ನ ಸಹೋದರಿಯರು ಕಪ್ಪು ದೈತ್ಯರ ಕಣ್ಗಾವಲಿನ ನಡುವೆ ಮೊಟ್ಟೆ ಇಟ್ಟು ಹೋಗಿದ್ದೇವೆ ನನ್ನ ಮತ್ತು ನನ್ನ ಮಕ್ಕಳ ರಕ್ಷಣೆಯ ಜವಾಬ್ದಾರಿ ನಿಮ್ಮದು ಇದುವರೆಗೂ ತಾವು ಕಾಸರಕೋಡು ಟೊಂಕದ ಮನೆಮಗಳಾದ ನನ್ನ ಕಥೆಯನ್ನು ಕೇಳಿದ್ದೀರಿ ತಮ್ಮೆಲ್ಲರಲ್ಲಿ ನಾನು ಭಿನ್ನವಿಸಿಕೊಳ್ಳುವುದೇನೆಂದರೆ ದಯವಿಟ್ಟು ನನಗೊಂದು ಶಾಶ್ವತ ನೆಲೆ ಕಲ್ಪಿಸಿಕೊಡಲು ಹೋರಾಟ ನಡೆಸುತ್ತಿರುವ ಕಾಸರಕೋಡು ಟೊಂಕದ ಮೀನುಗಾರರಿಗೆ, ಕಡಲಜೀವಶಾಸ್ತ್ರಜ್ಞರ ಪ್ರಯತ್ನವನ್ನು ಬೆಂಬಲಿಸಬೇಕಾಗಿ ಕೈಮುಗಿದು ಬೇಡಿಕೊಳ್ಳುತ್ತೇನೆ. ನಮ್ಮ ಕಂದಮ್ಮಗಳನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ದಯವಿಟ್ಟು ಕಾಸರಕೋಡಿನ ಮಗಳಾದ ನನ್ನನ್ನು ನನ್ನ ಕುಟುಂಬವನ್ನು ಕಪ್ಪುದೈತ್ಯರಿಂದ ರಕ್ಷಿಸಬೇಕೇಂದು ನಿಮಗೆ ಕೈಮುಗಿದು ಬೇಡಿಕೊಳ್ಳುತ್ತೇನೆ. ಎಲ್ಲರಿಗೂ ಧನ್ಯವಾದಗಳು ನನ್ನ ಮಕ್ಕಳನ್ನು ಜೊತೆಗೆ ಕರೆದೊಯ್ಯಲು ಮತ್ತೆ ನನ್ನ ಪ್ರೀತಿಯ ತವರಾದ ಕಾಸರಕೋಡು ಟೊಂಕಕ್ಕೆ ಬರುತ್ತೇನೆ ದೈನ್ಯದಿಂದ ಪ್ರಾರ್ಥನೆ ಮಾಡಿಕೊಳ್ಳುವ ಈ ಮನೆಮಗಳ ಮೇಲೆ ನಿಮ್ಮಲ್ಲೆರ ಆಶೀರ್ವಾದವಿರಲಿ.

ಕಥೆ ನಿರೂಪಣೆ. ಉಮಾಕಾಂತ ಖಾರ್ವಿ ಕುಂದಾಪುರ.

4 thoughts on “ಕಥೆ ಹೇಳುವೆ ನನ್ನ ಕಥೆ ಹೇಳುವೆ……..!!?

  1. ಸುಂದರ ನಿರೂಪಣೆ… ಉಪಯುಕ್ತ ಮಾಹಿತಿ… ಮನಸ್ಸೂ ಬೇಸರಗೊಂಡಿತು. ಆಮೆಗಳು ನಮ್ಮ ಜೈವಿಕ ಪರಿಸರದ ಸಮತೋಲನ ಕಾಪಾಡುವ ಒಂದು ಜೀವಿ ಎಂಬುದನ್ನು ನಾವು ಮರೆತಿರುವುದು ದುರಂತ.

  2. ಸುಂದರ ನಿರೂಪಣೆ… ಉಪಯುಕ್ತ ಮಾಹಿತಿ… ಮನಸ್ಸೂ ಬೇಸರಗೊಂಡಿತು. ಆಮೆಗಳು ನಮ್ಮ ಜೈವಿಕ ಪರಿಸರದ ಸಮತೋಲನ ಕಾಪಾಡುವ ಒಂದು ಜೀವಿ ಎಂಬುದನ್ನು ನಾವು ಮರೆತಿರುವುದು ದುರಂತ.

  3. ನಮ್ಮ ಸಂಪ್ರದಾಯವು ಪ್ರಕೃತಿಯೊಂದಿಗೆ ತುಂಬಾ ಆಳವಾಗಿ ಹೆಣೆದುಕೊಂಡಿದೆ, ಇದು ಕೇವಲ ಕುರುಡು ನಂಬಿಕೆಯಲ್ಲ ಅದರ ಹಿಂದೆ ಆಳವಾದ ವೈಜ್ಞಾನಿಕ ಕಾರಣಗಳಿವೆ. ಅಂತಹ ನೈಸರ್ಗಿಕ ವಿಜ್ಞಾನದ ಬಗ್ಗೆ ತುಂಬಾ ಕಲಾತ್ಮಕವಾಗಿ ಬರೆಯಲ್ಪಟ್ಟ ಮತ್ತೊಂದು ಒಂದು ಸುಂದರವಾದ ಅರ್ಥಪೂರ್ಣವಾದ ಲೇಖನವಾಗಿದೆ. ನಿಜವಾಗಿಯೂ ಆಮೆಯು ನಮ್ಮ ಹೊನ್ನಾವರ ಕಾಸರಗೋಡು ಟೊಂಕ ಭೂಮಿಯೊಂದಿಗೆ ಯಾವುದೋ ರೀತಿಯ ಭಾವನಾತ್ಮಕ ಸಂಪರ್ಕವನ್ನು ಹೊಂದಿರಬೇಕು. ಯಾಕೆಂದರೆ ಅದು ತನ್ನ ಸಂತತಿಯ ರಕ್ಷಣೆ ಹಾಗೂ ಮರಿಗಳ ಬೆಳವಣಿಗೆ ಇಲ್ಲಿ ಸಿಗುತ್ತದೆ ಎಂಬ ನಂಬಿಕೆಯೊಂದಿಗೆ ಈ ಸ್ಥಳಕ್ಕೆ ಭೇಟಿ ನೀಡುತ್ತದೆ. ಇದು ಟೊಂಕ ಕಾಸರಗೋಡಿನ ಪ್ರತಿಯೊಬ್ಬರ ಮೇಲೂ ಪ್ರಕೃತಿ ಮಾತೆ ಇಟ್ಟಿರುವ ನಂಬಿಕೆ ಮತ್ತು ಒಪ್ಪಿಸಿರುವ ಜವಬ್ದಾರಿ… ನಾವೆಲ್ಲರೂ ಅವಳ ನಂಬಿಕೆಯನ್ನು ಉಳಿಸಿಕೊಳ್ಳೋಣ.

  4. ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದೀರಿ.ಮಾನವ ತನ್ನ ಆಸೆಗಾಗಿ ಇತರ ಜೀವಿಗಳ ನಾಶಕ್ಕೆ ಕಾರಣನಾಗುತ್ತಾನೆ.ಆಮೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ .

Leave a Reply

Your email address will not be published. Required fields are marked *