ತವರಿಗೆ ಬಂದ ಕಡಲಾಮೆಗಳ ರಕ್ಷಣೆಯಾಗಲಿ

ಅಳಿವಿನ ಅಂಚಿನಲ್ಲಿರುವ ಕಡಲಾಮೆಗಳು ಮೊಟ್ಟೆ ಇಡುವ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಕಾಸರಕೋಡ ಟೊಂಕದ ಕಡಲತೀರದ ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶದ ಹತ್ತಿರ 200ಕ್ಕೂ ಹೆಚ್ಚು ಸಂಖ್ಯೆಯಲ್ಲಿ ರಿಡ್ಲೆ ಜಾತಿಯ ಆಮೆಗಳ ಮೊಟ್ಟೆಗಳು ರಸ್ತೆ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಪತ್ತೆಯಾಗಿದೆ.

ಸ್ಥಳದಲ್ಲಿ ತಾಲ್ಲೂಕು ಆಡಳಿತ ನಿಷೇದಾಜ್ಞೆ ವಿಧಿಸಿ ಬಿಗಿ ಪೋಲೀಸ್ ಬಂದೋಬಸ್ತಿನಲ್ಲಿ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಗಾಗಿ ಖುದ್ದು ಜಿಲ್ಲಾ ಆಡಳಿತದ ಉಸ್ತುವಾರಿಯಲ್ಲಿ ಸಿಆರ್ ಝೆಡ್ ಸಹಿತ ಹಲವು ನಿಯಮಗಳನ್ನು ಉಲ್ಲಂಘಿಸಿ ಕಡಲಾಮೆಗಳು ಮೊಟ್ಟೆ ಇಡುವ ಕಾಸರಕೋಡ ಟೊಂಕದ ಕಡಲತೀರದಿಂದ ವಾಣಿಜ್ಯ ಬಂದರು ಯೋಜನಾಪ್ರದೇಶದವರೆಗೆ ಬ್ರಹತ್ ಜೆಸಿಬಿ ಯಂತ್ರಗಳನ್ನು ಬಳಸಿ ರಸ್ತೆ ಕಾಮಗಾರಿ ನಿರ್ವಹಿಸುತ್ತಿರುವ ಬಗ್ಗೆ ಸ್ಥಳೀಯರು ಹಾಗೂ ಕಡಲವಿಜ್ಞಾನಿಗಳು ಈಗಾಗಲೇ ರಾಜ್ಯ, ಕೇಂದ್ರ ಮತ್ತು ಅಂತರರಾಷ್ಟ್ರೀಯ ಜೀವವೈವಿಧ್ಯಮಂಡಳಿಗಳ ಗಮನಸೆಳೆದಿದ್ದರು.ಮತ್ತು ಇಂದು ಕಡಲಾಮೆಗಳು ಮೊಟ್ಟೆ ಇಟ್ಟಿರುವ ಪ್ರದೇಶದ ತೀರಸನಿಹದಲ್ಲಿ ಬ್ರಹತ್ ಜೆಸಿಬಿ ಯಂತ್ರಗಳು ಓಡಾಟ ನಡೆಸಿದ ಕುರುಹುಗಳು ಸ್ಥಳದಲ್ಲಿ ಕಂಡುಬಂದು ಸ್ಥಳೀಯ ಮೀನುಗಾರರು ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಘಟನೆ ನಡೆದಿದ್ದು ಕಾಸರಕೋಡ ಟೊಂಕದ ಕಡಲತೀರವು ಕಡಲಾಮೆಗಳು ಮೊಟ್ಟೆ ಇಡುವ ಪ್ರದೇಶವಾಗಿದ್ದು ಇಲ್ಲಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸುತ್ತ ಬಂದಿರುವ ಕಡಲವಿಜ್ಞಾನಿ ಡಾ. ಪ್ರಕಾಶ ಮೇಸ್ತ ಮತ್ತು ಸ್ಥಳೀಯರ ಅಭಿಪ್ರಾಯಕ್ಕೆ ಇನ್ನಷ್ಟು ಪುರಾವೆ ಸಿಕ್ಕಂತಾಗಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ .

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಸಹಾಯ ಪಡೆದು ಆಮೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳುತ್ತಿರುವದು ಕಂಡು ಬಂತಾದರೂ ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ನಾಳೆ ಸ್ಥಳದಲ್ಲಿ ಮೊಟ್ಟೆಗಳ ಗೂಡಿಗೆ ಪಂಜರನಿರ್ಮಿಸಲಾಗುವುದಾಗಿ ತಿಳಿಸಿದ್ದಾರೆ.ಆದರೆ ಈ ಘಟನೆಯಿಂದ ಗಲಿಬಿಲಿಗೊಂಡಂತೆಕಂಡುಬಂದಿರುವ ಕೆಲವು ಪೋಲೀಸ್ ಅಧಿಕಾರಿಗಳು ಉನ್ನತ ಅಧಿಕಾರಿಗಳಿಗೆ ವಿಷಯ ತಿಳಿಸಿದಪ್ರಕಾರ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಶ್ರೀಧರ್ ಎಸ್ ಆರ್ ಮತ್ತು ಪಿಎಸ್ಐ ಆನಂದಮೂರ್ತಿ ಸೂಕ್ತ ರಕ್ಷಣೆ ಒದಗಿಸಲಾಗುವುದೆಂದು ತಮಗೆ ತಿಳಿಸಿ ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *