ಉತ್ತಮ ಪರಿಸರ ಹೊಂದಿರುವ, ಅಪರೂಪದ ಜೀವವೈವಿಧ್ಯತೆಗಳ ತಾಣಗಳಲ್ಲಿ ಒಂದಾದ ಸುಂದರ ಕರಾವಳಿ ಮತ್ತು ಸಮ್ರಧ್ಧಪಶ್ಚಿಮ ಘಟ್ಟ ಪ್ರದೇಶದಿಂದ ಕೂಡಿದ ಹೊನ್ನಾವರ ತಾಲೂಕಿನ ಶುದ್ಧ ಪರಿಸರವನ್ನು ಹಾಳುಗೆಡಹುವ, ಪರಿಸರ ಮಾಲಿನ್ಯ ಮತ್ತು ಜಲಮಾಲಿನ್ಯದೊಂದಿಗೆ ತಾಯಿ ಶರಾವತಿಯ ಕಲುಷಿತತೆಗೆ ಕಾರಣವಾಗುವ ವಾಣಿಜ್ಯ ಬಂದರು ಯೋಜನೆಯನ್ನು ಏಕಾಏಕಿ ನಮ್ಮ ಜನರ ಮೇಲೆ ಹೇರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಯಾರದ್ದೋಲಾಭಕ್ಕಾಗಿ ಅಭಿವೃದ್ಧಿಯ ನೆಪದಲ್ಲಿ ಸಾವಿರಾರು ಸ್ಥಳೀಯರ ಬದುಕಿಗೆ ಕೊಳ್ಳಿ ಇಟ್ಟು ನೂರಾರು ಕುಟುಂಬಗಳನ್ನು ಬೀದಿಗೆ ತಳ್ಳುವ ಮತ್ತು ಮುಂದೆ ಲಕ್ಷಾಂತರ ಜನರ ಕುಡಿಯುವ ನೀರಿಗೂ ಸಂಚಕಾರ ತರುವ ವಾಣಿಜ್ಯ ಬಂದರು ಯೋಜನೆಯನ್ನು ಹೊನ್ನಾವರದ ಕಾಸರಕೋಡಿನಲ್ಲಿ ಅನುಷ್ಠಾನಿಸಿಯೇ ತೀರುವೆನೆಂಬ ಹಠಮಾರಿತನವನ್ನು ಕೆಲವರು ಯಾಕೆ ತೋರುತ್ತಿದ್ದಾರೆ? ಇದು ಯಾವ ಸೀಮೆಯ ನ್ಯಾಯ? ಎನ್ನುವುದೇ ಇಲ್ಲಿನ ಜನರಿಗೆ ಒಂದು ಒಗಟಾಗಿದೆ ಎಂದು ಸಾಮಾಜಿಕ ಹೋರಾಟಗಾರ, ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಇಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ.
ಸಂಸದ ಅನಂತಕುಮಾರ್ ಹೆಗಡೆ ಅವರು ಕಾಸರಕೋಡ ಮತ್ತು ಕಾರವಾರ ಅಂಕೋಲಾಗಳಲ್ಲಿ ವಾಣಿಜ್ಯ ಬಂದರುಗಳನ್ನು ನಿರ್ಮಿಸಿಯೇ ಸಿಧ್ಧ ಎಂದು ಇತ್ತೀಚೆಗೆ ಹೇಳಿದ್ದಾರಲ್ಲ ಎಂದು ಮಾಧ್ಯಮವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ವಾಣಿಜ್ಯ ಬಂದರು ಯೋಜನೆಯನ್ನು ವಿರೋಧಿಸಿದರೆ ತಾನು ಸುಮ್ಮನೆ ಇರುವುದಿಲ್ಲ. ತನ್ನ ಧ್ವನಿ ಬದಲಾಗಬೇಕಾಗುತ್ತದೆ ತನ್ನ ಭಾಷೆಯಲ್ಲಿಯೇ ಉತ್ತರಿಸಬೇಕಾಗುತ್ತದೆ ಎಂದು ಜಿಲ್ಲೆಯ ಮೀನುಗಾರರಿಗೆ ಬೆದರಿಕೆ ಹಾಕಿರುವದನ್ನು ಗಮನಿಸಿದ್ದೇನೆ. ಈ ವಿಚಾರವನ್ನು ಆಲ್ಲಿಯ ಮೀನುಗಾರರು ನೋಡಿಕೊಳ್ಳುತ್ತಾರೆ. ಅವರು ಮುಂದುವರಿದು ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆ ಬರುತ್ತಿದೆ. ವಿಧಾನ ಸಭೆ ಚುನಾವಣೆಗೆ ಕೇವಲ ಒಂದೇ ವರ್ಷಬಾಕಿ ಇದೆ. ಚುನಾವಣೆಗಳು ಸಮೀಪುಸುತ್ತಿದ್ದಂತೆ ಕೆಲವರು ಪ್ರತಿ ಬಾರಿಯೂ ಯಾವುದಾದರೂ ಭಾವನಾತ್ಮಕ ವಿಷಯವನ್ನು ಮುನ್ನಲೆಗೆ ತಂದು ಜನರನ್ನು ಬ್ರಮಾಲೋಕಕ್ಕೆ ತಳ್ಳುವುದು, ಭಾವನಾತ್ಮಕ ವಿಷಯದ ಮೂಲಕ ಜನರಲ್ಲಿ ದ್ವೇಷ ಬಿತ್ತುವದನ್ನು ಮಾಡಿ ಕೆಲವರು ಅಧಿಕಾರ ಪಡೆದಿರುವ ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ಇರುವಾಗ ಮುಂದಿನ ಚುನಾವಣೆಯ ದ್ರಷ್ಠಿಯಿಂದ ಬಹುಶಃ ಈ ಬಾರಿ ಜಿಲ್ಲೆಯ ಜನರಲ್ಲಿ ಅಭಿವೃದ್ಧಿಯ ಭ್ರಮಾಲೋಕವನ್ನು ಸ್ರಷ್ಠಿಸಿ ಆರ್ಥಿಕ ಕ್ರಾಂತಿಯ ಹುಸಿ ಕನಸನ್ನುಬಿತ್ತುವ ಪ್ರಯತ್ನಕ್ಕೆ ಕೆಲವರು ಮುಂದಾಗಿರಬಹುದು ಎಂದು ಅವರು ಯಾರ ಹೆಸರನ್ನೂ ಉಲ್ಲೇಖಿಸದೆ ಬಂದರು ವಿರೋಧಿ ಹೋರಾಟದ ಕುರಿತು ಮಾಧ್ಯಮದವರೊಂದಿಗೆ ಮಾತನಾಡುತ್ತ ತಿಳಿಸಿದರು.
ಅವರು ಮುಂದುವರಿದು ತಾನು ಸೇರಿದಂತೆ ರಾಷ್ಟ್ರೀಯ ಮೀನುಗಾರರ ಸಂಘಟನೆಯ ಪದಾಧಿಕಾರಿಗಳು ಜಿಲ್ಲೆಯ ಮೀನುಗಾರರ ಸಮಗ್ರ ಹಿತದೃಷ್ಟಿಯಿಂದ ಹಾಗೂ ಕರಾವಳಿ ಪ್ರದೇಶದ ಪರಿಸರ ಮತ್ತು ಜೀವವೈವಿಧ್ಯತೆಗಳ ಸುರಕ್ಷತೆಯ ಹಿತದೃಷ್ಟಿಯಿಂದ ಸ್ಥಳೀಯರ ವಾಣಿಜ್ಯ ಬಂದರು ವಿರೋಧಿ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ್ದೇವೆ.ಮುಂದೆಯು ಅವರ ಹೋರಾಟದಲ್ಲಿ ಪಕ್ಷಾತೀತವಾಗಿ ಕೈಜೋಡಿಸುತ್ತೇವೆ. ಕಾಸರಕೋಡ ಸಹಿತ ಜಿಲ್ಲೆಯ ವಿವಿಧ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಗಳ ವಿಚಾರವಾಗಿ ಈಗಾಗಲೇ ಆಡಳಿತ ಸರ್ಕಾರದ ಪ್ರಮುಖರೊಂದಿಗೆ ಮತ್ತು ವಿರೋಧ ಪಕ್ಷಗಳ ನಾಯಕರೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಿದ್ದೇವೆ. ಕಾಸರಕೋಡು ವಾಣಿಜ್ಯ ಬಂದರು ಯೋಜನೆಯ ಸಮಸ್ಯೆ ಅತ್ಯಂತ ಗಂಭೀರ ಹಂತ ತಲುಪಿದೆ. ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸುವ ಸ್ಥಾನದಲ್ಲಿರುವ ನಮ್ಮ ಸಂಸದರು ಬಂದರು ನಿರ್ಮಿಸಿಯೇ ಸಿಧ್ಧ ಎನ್ನುವ ಹಠಕ್ಕೆ ಬಿದ್ದವರಂತೆ ಕಂಡುಬರುತ್ತಿದೆ. ಅವರ ಪ್ರಭಾವ ಮತ್ತು ಒತ್ತಡಕ್ಕೆ ಮಣಿದು ನಮ್ಮ ಜಿಲ್ಲಾಡಳಿತವು ಬೇಲಿಯೇ ಎದ್ದು ಹೊಲ ಮೆಂದಂತೆ ಸ್ಥಳೀಯರ ಹೋರಾಟವನ್ನು ಹತ್ತಿಕ್ಕಲು ಬಲಪ್ರಯೋಗ ಮಾಡಿದ್ದು ನಿರ್ಮಾಣ ಕಂಪನಿಗಾಗಿ ನಿಯಮಮೀರಿದ ಅದರ ನಡವಳಿಕೆಯು ಇತ್ತೀಚೆಗೆ ಅದು ಕಾಸರಕೋಡ ಟೊಂಕದಲ್ಲಿ ಅನುಸರಿಸಿದ ಸರ್ವಾಧಿಕಾರಿ ನಡೆಯೇ ಒಂದು ತಾಜಾ ನಿದರ್ಶನ.
ಇಲ್ಲಿಯ ಉದ್ದೇಶಿತ ವಾಣಿಜ್ಯ ಬಂದರು ಯೋಜನಾ ಪ್ರದೇಶವು ಅಪರೂಪದ ಕಡಲಾಮೆಗಳು ಮೊಟ್ಟೆ ಇಡುವ ತಾಣವೆಂದು ಗುರುತಿಸಲ್ಪಟ್ಟಿದೆ. ಅಲ್ಲಿಯ ನಿಯಮಗಳನ್ನು ಗಾಳಿಗೆ ತೂರಿ ಅಲ್ಲಿಯ ಕಡಲತೀರದಲ್ಲಿ ಅಕ್ರಮವಾಗಿ ಮಣ್ಣು ಸುರಿದು ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದರ ಇನ್ನೊಂದು ಬದಿಯಲ್ಲಿ ಅಂತರರಾಷ್ಟ್ರೀಯ ಬ್ಲೂಫ್ಲಾಗ್ ಮನ್ನಣೆ ಪಡೆದ ಪ್ರವಾಸಿತಾಣವಾದ ಇಕೋ ಬೀಚ್ ಇದೆ ಅದರಾಚೆ ಕಾಂಡ್ಲಾವನ ಇದೆ. ಪಶ್ಚಿಮದಲ್ಲಿ ಕಡಲತೀರ ಮತ್ತು ಪೂರ್ವೋತ್ತರವಾಗಿ ಶರಾವತಿ ನದಿ ಸಮುದ್ರ ಸೇರುವ ಸಂಗಮಪ್ರದೇಶವಿರುತ್ತದೆ. ಇಲ್ಲಿನ ಶರಾವತಿ ನದಿಯಿಂದ ಹೊನ್ನಾವರ ತಾಲ್ಲೂಕಿನ ಗ್ರಾಮೀಣ ಭಾಗಗಳಿಗೆ, ಇಡಗುಂಜಿ ಮತ್ತು ಭಟ್ಕಳ ತಾಲ್ಲೂಕಿನ ಮುರ್ಡೇಶ್ವರ ಯಾತ್ರಾಸ್ಥಳಗಳಿಗೂ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಹೊನ್ನಾವರ ಪಟ್ಟಣ ಸೇರಿದಂತೆ ತಾಲ್ಲೂಕಿನ 9 ಗ್ರಾಮ ಪಂಚಾಯಿತಿಗಳ ಜನರಿಗೆ ಶರಾವತಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಕೊಟ್ಯಂತರ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಒಂದುವೇಳೆ ಈ ಭಾಗದಲ್ಲಿ ವಾಣಿಜ್ಯ ಬಂದರು ನಿರ್ಮಾಣವಾದರೆ ಮುಂದೆ ಅದರ ಕಾರ್ಯ ಚಟುವಟಿಕೆಗಳಿಂದ ಉಂಟಾಗುವ ವಿವಿಧ ರೀತಿಯ ಧೂಳು ಮಿಶ್ರಿತ ರಾಸಾಯನಿಕಗಳ ತ್ಯಾಜ್ಯವು ನದಿ ನೀರಿಗೆ ಸೇರಿ ಕಲುಷಿತಗೊಂಡರೆ ಈ ಭಾಗದ ಜನರ ಪಾಡೇನು? ಎಂದು ಅವರು ಪ್ರಶ್ನಿಸಿದ್ದಾರೆ.ಸಮುದ್ರದ ಉಬ್ಬರವಿಳಿತದ ಸಂದರ್ಭದಲ್ಲಿ ಕಲ್ಲಿದ್ದಲು, ಮ್ಯಾಂಗನೀಸ್ ಧೂಳು ಮತ್ತು ತೈಲ ಸಹಿತ ವಿವಿಧ ರಾಸಾಯನಿಕಗಳ ವಿಷಮಿಶ್ರಿತ ತ್ಯಾಜ್ಯವು ಮುಂದೆ ಆಗಾಗ್ಗೆ ನದಿಗೆ ಸೇರಿದರೆ ಅಂತಹ ವಿಷಕಾರಿ ನೀರನ್ನು ತಾಲೂಕಿನ ಜನರು ಕುಡಿಯಬೇಕೆ.? ಸಾರ್ವಜನಿಕ ಹಿತಾಸಕ್ತಿಯ ಇಂತಹ ವಿಚಾರದಲ್ಲೂ ಉಪೇಕ್ಷೆ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ. ಅವರು ಎತ್ತಿರುವ ಈ ಪ್ರಮುಖ ಜ್ವಲಂತ ಸಮಸ್ಯೆಯು ತಾಲ್ಲೂಕಿನ ಜನರಲ್ಲಿ ಸಂಚಲನ ಮೂಡಿಸಿದ್ದು, ವಾಣಿಜ್ಯ ಬಂದರು ಯೋಜನೆಯ ವಿರುದ್ಧ ಜನಾಂದೋಲನ ಬಲಗೊಳ್ಳುವ ಸಾಧ್ಯತೆ ಕಂಡುಬಂದಿದೆ. ಕಾಸರಕೋಡ ವಾಣಿಜ್ಯ ಬಂದರು ಯೋಜನೆಯಿಂದ ಒಟ್ಟು ಕೇವಲ 74 ಜನರಿಗೆ ಮಾತ್ರ ಉದ್ಯೋಗದ ಲಭ್ಯತೆ ಇರುವದಾಗಿ ನಿರ್ಮಾಣ ಕಂಪೆನಿಯ ತನ್ನ ಯೋಜನಾ ವರದಿಯಲ್ಲಿ ಹೇಳಿದೆ. ಆದರೆ ಇದರಲ್ಲಿ ಸಿಇಒ ಸೇರಿದಂತೆ ಬೇರೆ ಜಿಲ್ಲೆ ಮತ್ತು ಬೇರೆ ರಾಜ್ಯಗಳ ಹಲವರನ್ನು ಕಂಪೆನಿಯ ಪಾಲುಗಾರರ ಬಳಗದ ಹತ್ತಿರದ ವರನ್ನುಮತ್ತು ಸ್ಥಳೀಯರನ್ನು ಒಡೆದು ಆಳಲು ಬಳಕೆಮಾಡಿಕೊಂಡಿರುವ ಬೇರೆ ಬೇರೆ ಗ್ರಾಮದ ಕೆಲವರನ್ನು ಸಹಈಗಾಗಲೇ ನ್ಯೇಮಕಮಾಡಿಕೊಂಡಿಯೂ ಆಗಿದೆ.
ಮುಂದೆ ಕಂಪನಿಗೆ ಬೇಕಾಗಿರೋದು ಯೋಜನೆ ಆರಂಭವಾದ ನಂತರ ಸರಕುಗಳ ಲೋಡಿಂಗ್ ಅನ್ ಲೋಡಿಂಗ್ ಮಾಡಲು ಅಗತ್ಯವಿರುವ ಕಾರ್ಮಿಕರು ಮಾತ್ರ. ಅದನ್ನು ಮುಂದೆ ಟೆಂಡರ್ ಕರೆದು ಗುತ್ತಿಗೆ ನೀಡಿ, ಕಡಿಮೆ ಕೂಲಿಗೆ ಕೆಲಸಮಾಡುವ ಅವಕಾಶವೂ ಸಹ ಬಿಹಾರ-ಓರಿಸ್ಸಾ ದ ಕೂಲಿ ಕಾರ್ಮಿಕರ ಪಾಲಾಗಲಿದೆ. ಇದೇ ಅಲ್ಲವೇ ಈ ಬಂದರು ಯೋಜನೆಯಿಂದ ಜಿಲ್ಲೆಯ ಜನರಿಗೆ ಆಗುವ ಉದ್ಯೋಗ ಲಾಭ. ಇನ್ನು ಜಿಲ್ಲೆಯ ಕಾರವಾರ ಮತ್ತು ಬೇಲೇಕೇರಿಯಲ್ಲಿ ಎರಡು ವಾಣಿಜ್ಯ ಬಂದರುಗಳು ಹಲವು ವರ್ಷಗಳಿಂದ ಕಾರ್ಯಚರಣೆ ಮಾಡುತ್ತಿವೆ. ಸ್ಥಳೀಯರು ಚರ್ಮರೋಗ ಮತ್ತು ಶ್ವಾಸಕೋಶ ಸಂಬಂಧಿ ಖಾಯಿಲೆಯಿಂದ ನರಳುತ್ತ ಪರಿಸ್ಥಿತಿಯೊಂದಿಗೆ ರಾಜಿಮಾಡಿಕೊಂಡು ಬದುಕನ್ನು ಸವೆಸುವದಾಗಿದೆಯೇ ಹೊರತು,ಈ ಭಾಗದಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ, ಆರ್ಥಿಕ ಕ್ರಾಂತಿಯೂ ಸಾಧ್ಯವಾಗಿಲ್ಲ.ಸತ್ಯ ನಮ್ಮ ಕಣ್ಣ ಮುಂದೆಯೇ ಇದೆ. ಅಲ್ಲಿ ಆಗದಿರುವದು ಇಲ್ಲಿ ಹೊನ್ನಾವರದಲ್ಲೀ ಅದು ಹೇಗೆ ಅಗಲು ಸಾಧ್ಯ ಎಂದು ಕೊಚರೇಕರ ಪ್ರತಿಕ್ರಿಯಿಸಿದ್ದುಈ ವಾಸ್ತವ ಸ್ಥಿತಿಯನ್ನು ಜನರು ಅರಿತುಕೊಂಡು ಬಂದರು ವಿರೋಧಿ ಹೋರಾಟವು ತಾಲ್ಲೂಕಿನಲ್ಲಿ ಪ್ರಭಲ ಜನಾಂದೋಲನವಾಗಿ ರೂಪಗೊಳ್ಳುವ ಅಗತ್ಯವಿದೆ ಎಂದು ಅವರು ಅವರು ಪ್ರತಿಪಾದಿಸಿದ್ದಾರೆ.