ಆಸ್ಟ್ರೇಲಿಯಾ ಸರ್ಕಾರದ ಸುಪರ್ದಿಯಲ್ಲಿರುವ ಕ್ರಿಸ್ಮಸ್ ಐಲ್ಯಾಂಡಿನ ಕೆಂಪು ಏಡಿಗಳ ಮತ್ತು ಕಾಸರಕೋಡು ಟೊಂಕದ ಕಡಲತೀರದಲ್ಲಿ ಮೊಟ್ಟೆ ಇಡುವ ಆಲೀವ್ ರಿಡ್ಲೇ ಪ್ರಭೇಧದ ಕಡಲಾಮೆಗಳ ಸಂತಾನೋತ್ಪತ್ತಿ ಪ್ರಕ್ರಿಯೆಗೂ ಪರಸ್ಪರ ಹೋಲಿಕೆ ಮತ್ತು ಸಾಮ್ಯತೆ ಇದೆ. ಆದರೆ ವ್ಯತ್ಯಾಸವೆಂದರೆ ಈ ಕೆಂಪು ಏಡಿಗಳು ಕಾಡಿನಿಂದ ಕಡಲತೀರಕ್ಕೆ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಸಲು ಬರುವಾಗ ಆಸ್ಟ್ರೇಲಿಯಾ ಸರ್ಕಾರದ ಸುರ್ಪದಿಯಲ್ಲಿ ಐಲ್ಯಾಂಡಿನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಖಾಸಗಿ ಸಂಸ್ಥೆಯೊಂದು ಈ ಕೆಂಪು ಏಡಿಗಳ ರಕ್ಷಣೆಗೆ ಪ್ಲೈಓವರ್ ಗಳು, ಅಂಡರ್ ಪಾಸ್ ಗಳು, ರಸ್ತೆತಡೆಗೋಡೆಗಳು ಮತ್ತು ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸುತ್ತದೆ. ಆದರೆ ಕಾಸರಕೋಡು ಟೊಂಕದಲ್ಲಿ ಸರ್ಕಾರದ ಸುಪರ್ದಿಯಲ್ಲಿ ಖಾಸಗಿ ಬಂದರು ನಿರ್ಮಾಣ ಸಂಸ್ಥೆಯು ಕಡಲಾಮೆಗಳ ಗೂಡು ಮೊಟ್ಟೆಗಳನ್ನು,ಕಡಲಾಮೆಗಳನ್ನು ಜೀವಂತವಾಗಿ ಕೊಲ್ಲುವ ಅಮಾನವೀಯ ಕಾರ್ಯ ಮಾಡುತ್ತಿದೆ.
ಕಡಲಾಮೆಗಳು ಭಗವಾನ್ ವಿಷ್ಣುವಿನ ಅವತಾರವೆಂದು ಹಿಂದೂಧರ್ಮದಲ್ಲಿ ನಂಬಿಕೆ ಇದೆ.ಬಂದರು ಕಾಮಗಾರಿಗೆ ತೊಂದರೆಯಾಗಬಾರದೆಂದು ಕಡಲಾಮೆಗಳನ್ನು ಕಪ್ಪು ದೈತ್ಯರು ಕಂಡ ಕಂಡಲ್ಲಿ ಕೊಲ್ಲುತ್ತಿದ್ದಾರೆ. ಕಡಲಾಮೆಗಳು ಗೋವಿನಷ್ಟೇ ಪವಿತ್ರ ಗೋವಿನ ಹೆಸರಿನಲ್ಲಿ ರಾಜಕೀಯ ಮಾಡುವವರು ಕಡಲಾಮೆಗಳ ಮಾರಣಹೋಮ ನಡೆಯುತ್ತಿದ್ದರೂ ಮೌನವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಹಿಂದೂ ಮಹಾಸಾಗರದಲ್ಲಿರುವ ಕ್ರಿಸ್ಮಸ್ ಐಲ್ಯಾಂಡ್ ಆಸ್ಟ್ರೇಲಿಯಾ ಸರ್ಕಾರದ ಆಧೀನದಲ್ಲಿದೆ. ಸರ್ಕಾರ ಇದನ್ನು ಖಾಸಗಿಯವರಿಗೆ ಉಸ್ತುವಾರಿ ನೋಡಿಕೊಳ್ಳಲು ನೀಡಿದೆ. ಸರ್ಕಾರದ ಸುರ್ಪದಿಯಲ್ಲಿ ಈ ಖಾಸಗಿ ಸಂಸ್ಥೆ ಕ್ರಿಸ್ಮಸ್ ದ್ವೀಪದ ಉಸ್ತುವಾರಿ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದೆ.1615 ರಲ್ಲಿ ಮೊದಲ ಬಾರಿಗೆ ಥಾಮಸ್ ಮಾಸ್ಟರ್ ರಿಚರ್ಡ್ ರೋವ್ ಈ ದ್ವೀಪವನ್ನು ಕಂಡುಹಿಡಿದರು.1643 ರಲ್ಲಿ ಕ್ರಿಸ್ಮಸ್ ದಿನದಂದು ಬ್ರಿಟಿಷ್ EAST india company ಕ್ಯಾಪ್ಟನ್ ವಿಲಿಯಮ್ ಮೈನೋಸ್ ಈ ದ್ವೀಪಕ್ಕೆ ಕ್ರಿಸ್ಮಸ್ ಐಲ್ಯಾಂಡ್ ಎಂದು ಹೆಸರಿಟ್ಟನು.
1958 ರಲ್ಲಿ ಆಸ್ಟ್ರೇಲಿಯಾದ ಪಾಲಾದ ಈ ಕ್ರಿಸ್ಮಸ್ ದ್ವೀಪದ ಬಹುಮುಖ್ಯ ವಿಶೇಷತೆಯೆಂದರೆ ಇಲ್ಲಿನ ಕಾಡಿನಲ್ಲಿ ವಾಸಿಸುವ ಕೆಂಪು ಏಡಿಗಳು ಇವುಗಳ ಸಂತಾನೋತ್ಪತ್ತಿ ಪ್ರಕ್ರಿಯೆ ಸೃಷ್ಟಿಯ ಅಚ್ಚರಿದಾಯಕ ವಿದ್ಯಮಾನವಾಗಿದೆ ವಿಸ್ಮಯಕಾರಿಯಾದ ಈ ಕೆಂಪು ಏಡಿಗಳ ಸಂತಾನೋತ್ಪತ್ತಿ ಪ್ರಕ್ರಿಯೆ ಸೃಷ್ಟಿ ವಿಕಾಸದ ಮಹಾ ಸೋಜಿಗ ಕ್ರಿಸ್ಮಸ್ ದ್ವೀಪ ಕೇವಲ 135 ಚದರ ಕೀ ಮೀ ವಿಸ್ತೀರ್ಣವನ್ನು ಹೊಂದಿದೆ ಇಲ್ಲಿ ನಡುಮಧ್ಯೆ ಕಾಡಿನಲ್ಲಿ ವಾಸಿಸುವ ಈ ಕೆಂಪು ಏಡಿಗಳು ತಮ್ಮ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಸಲು ಕಾಡಿನಿಂದ ಕಡಲತೀರಕ್ಕೆ ವಲಸೆ ಆರಂಭಿಸುತ್ತದೆ ಇದು ಹದಿನೆಂಟರಿಂದ ಇಪ್ಪತ್ತು ದಿನಗಳ ಪಯಣ ಸಾಮಾನ್ಯವಾಗಿ ಚಂದ್ರನ ಬೆಳಕಿನ ಚಲನೆಯನ್ನು ಗಮನಿಸಿ ಕೆಂಪು ಏಡಿಗಳು ಕಾಡಿನಿಂದ ಕಡಲಿಗೆ ಪಯಣ ಆರಂಭಿಸುತ್ತವೆ ಈ ಸಂದರ್ಭದಲ್ಲಿ ಖಾಸಗಿ ಸಂಸ್ಥೆಯ ಉಸ್ತುವಾರಿಯಲ್ಲಿ ರಾಷ್ಟ್ರೀಯ ಉದ್ಯಾನವನದ ಸಿಬ್ಬಂದಿಗಳು ಕೆಂಪು ಏಡಿಗಳ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸುತ್ತಾರೆ.ಕೆಂಪು ಏಡಿಗಳು ಚಲಿಸುವ ಮಾರ್ಗದಲ್ಲಿ ಪ್ಲೈಓವರ್ ಗಳನ್ನು,ತಾತ್ಕಾಲಿಕ ಸೇತುವೆಗಳನ್ನು ಅಂಡರ್ ಪಾಸ್ ಗಳನ್ನು ಮತ್ತು ರಸ್ತೆಯಂಚಿಗೆ ತಡೆಗೋಡೆಗಳನ್ನು ನಿರ್ಮಾಣ ಮಾಡುತ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ ಇಲ್ಲಿ ವಾಹನ ಸಂಚಾರವನ್ನು ಕೂಡಾ ನಿರ್ಬಂಧಿಸಲಾಗುತ್ತದೆ. ಕೆಂಪು ಏಡಿಗಳ ಈ ಮಹಾವಲಸೆ ಸಾಮಾನ್ಯವಾಗಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕರಾರುವಕ್ಕಾಗಿ ಜರುಗುತ್ತದೆ. ಕ್ರಿಸ್ಮಸ್ ದ್ವೀಪದ ಜನರ ಪಾಲಿಗೆ ಈ ಕೆಂಪು ಏಡಿಗಳು ದೈವಿಸ್ವರೂಪಿಗಳು.ಇತರ ಜಾತಿಯ ಏಡಿಗಳನ್ನು ತಿನ್ನುವ ಈ ದ್ವೀಪವಾಸಿಗಳು ಈ ಕೆಂಪು ಏಡಿಗಳಿಗೆ ವಿಶೇಷ ಗೌರವ ಸಲ್ಲಿಸುತ್ತಾರೆ.ಇವುಗಳು ಕ್ರಿಸ್ಮಸ್ ದ್ವೀಪದ ಅದೃಷ್ಟ ದೇವತೆಗಳೆಂದು ಇಲ್ಲಿನ ಜನ ನಂಬುತ್ತಾರೆ.ಇಲ್ಲಿನ ಜನಸಂಖ್ಯೆ 2000 ರ ಗಡಿಯಲ್ಲಿದೆ.
ಕಾಡಿನ ವಾಸಿಗಳಾದ ಕೆಂಪು ಏಡಿಗಳು 5 ನೇ ವರ್ಷಕ್ಕೆ ಲೈಂಗಿಕ ಪ್ರಬುದ್ದತೆ ಪಡೆದುಕೊಳ್ಳುತ್ತದೆ.ಕಾಡಿನಿಂದ ಮೊದಲು ಗಂಡು ಏಡಿಗಳು ಕಡಲತೀರಕ್ಕೆ ಪಯಣ ಬೆಳೆಸುತ್ತದೆ.ಅಲ್ಲಿ ಬಿಲ ತೋಡಿ ಸಂತಾನೋತ್ಪತ್ತಿಯ ಲೈಂಗಿಕ ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತದೆ. ಬಳಿಕ ಹೆಣ್ಣು ಕೆಂಪು ಏಡಿಗಳು ಕಡಲತೀರಕ್ಕೆ ಆಗಮಿಸುತ್ತದೆ.ಅಲ್ಲಿ ಮಿಲಿಯಗಟ್ಟಲೆ ಕೆಂಪು ಗಂಡು ಹೆಣ್ಣು ಏಡಿಗಳ ಮಿಲನ ಪ್ರಕ್ರಿಯೆ ಕೆಲವು ದಿನ ಜರುಗಿದ ಬಳಿಕ ಗಂಡು ಏಡಿಗಳು ಕಾಡಿಗೆ ಮರಳುತ್ತದೆ.ಗರ್ಭ ಧರಿಸಿದ ಹೆಣ್ಣು ಏಡಿಗಳು ಚಂದ್ರನ ಚಲನೆ ಮತ್ತು ಕಡಲಲೆಗಳ ಏರಿಳಿತಗಳನ್ನು ಗಮನಿಸಿ ಸಮುದ್ರದಲ್ಲಿ ಮೊಟ್ಟೆ ಇಡುತ್ತದೆ.ಈ ಮೊಟ್ಟೆಗಳು ಲಾರ್ವಾ ರೂಪದಲ್ಲಿ ಇರುತ್ತದೆ.ಒಂದೊಂದು ಕೆಂಪು ಹೆಣ್ಣು ಏಡಿಗಳು ಲಕ್ಷ ಮೊಟ್ಟೆ ಇಡುತ್ತದೆ.ಈ ಸಂದರ್ಭದಲ್ಲಿ ಸಹಸ್ರಾರು ಲಾರ್ವಾಗಳು ಮೀನು, ತಿಮಿಂಗಿಲಗಳ ಮತ್ತು ಕಡಲಕ್ಕಿಗಳ ಪಾಲಾಗುತ್ತದೆ.ಅಚ್ಚರಿಯೆಂದರೆ ಈ ಕೆಂಪು ಏಡಿಗಳ ಲಾರ್ವಾಗಳನ್ನು ತಿನ್ನಲು ಆಳಸಮುದ್ರದಿಂದ ತಿಮಿಂಗಿಲಗಳು ಕಡಲತೀರಕ್ಕೆ ಬರುತ್ತವೆ.
ಹೀಗೆ ಕೆಂಪು ಏಡಿಗಳ ಮರಿಗಳು ನಾಲ್ಕು ವಾರಗಳ ಕಾಲ ಸಮುದ್ರದ ನೀರಿನಲ್ಲಿ ಬೆಳವಣಿಗೆಯಾಗುತ್ತದೆ.ಬಳಿಕ ಹೆಣ್ಣು ಏಡಿಗಳು ತಮ್ಮ ಮರಿಗಳನ್ನು ಕರೆದುಕೊಂಡು ಕಾಡಿಗೆ ಮರಳುತ್ತದೆ. ಈ ಸಂದರ್ಭದಲ್ಲಿ ಕೆಂಪು ಏಡಿ ಮತ್ತು ಮರಿಗಳ ಸುರಕ್ಷತೆಗಾಗಿ ಆಸ್ಟ್ರೇಲಿಯಾ ಸರ್ಕಾರ ಮತ್ತಷ್ಟೂ ಕಾರ್ಯಪ್ರವತೃವಾಗುತ್ತದೆ.ಆ ಸಂದರ್ಭದಲ್ಲಿ ಕೆಂಪು ಏಡಿಗಳ ಮರಿಗಳನ್ನು ಮತ್ತು ಹೆಣ್ಣು ಕೆಂಪು ಏಡಿಗಳನ್ನು ಮರಳಿ ಕಾಡಿಗೆ ತಲುಪಿಸಲು ಸರ್ಕಾರದೊಂದಿಗೆ ಸ್ಥಳೀಯರು ಕೈ ಜೋಡಿಸುತ್ತಾರೆ. ಕೆಂಪು ಏಡಿಗಳ ಜೀವನಚಕ್ರಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ವಿಷಯವೆಂದರೆ ಈ ಕೆಂಪು ಏಡಿಗಳ ಲೈಂಗಿಕ ಮಿಲನಕ್ರಿಯೆ ಕೇವಲ ಕಡಲತೀರದ ಸಂತಾನೋತ್ಪತ್ತಿ ಪ್ರಕ್ರಿಯೆಗೆ ಮಾತ್ರ ಸೀಮಿತವಾಗಿರುತ್ತದೆ.ಆಶ್ಚರ್ಯವೆಂದರೆ ಕಾಡಿನಲ್ಲಿ ವಾಸಿಸುವ ಸಂದರ್ಭದಲ್ಲಿ ಮಿಲನಕ್ರಿಯೆ ನಡೆಸುವುದಿಲ್ಲ.ಗಂಡು ಮತ್ತು ಹೆಣ್ಣು ಕೆಂಪು ಏಡಿಗಳು ಪ್ರತ್ಯೇಕವಾಗಿ ತಮ್ಮ ತಮ್ಮ ಬಿಲಗಳಲ್ಲಿ ಏಕಾಂಗಿಯಾಗಿಯೇ ಜೀವಿಸುತ್ತವೆ.ಅವುಗಳು ಎಂದಿಗೂ ಕಾಡಿನಲ್ಲಿ ಮಿಲನಕ್ರಿಯೆ ನಡೆಸುವುದಿಲ್ಲ.ಇದು ಅವುಗಳ ಜೀವನಚಕ್ರದ ಮಹಾಸೋಜಿಗ. ಸಂತಾನೋತ್ಪತ್ತಿಗಾಗಿ ಕಡಲತೀರಕ್ಕೆ ಮಹಾವಲಸೆ ಆರಂಭಿಸುವ ಮತ್ತು ಮರಳಿ ಕಾಡಿಗೆ ಬರುವ ಕೆಂಪು ಏಡಿಗಳ ಪಯಣ ಸವಾಲಿನಿಂದ ಕೂಡಿರುತ್ತದೆ. ದಾರಿಮಧ್ಯದಲ್ಲಿ ಕ್ರೂರ ಹಳದಿ ಇರುವೆಗಳು ಮತ್ತು ತೆಂಗಿನಮರದ ಏಡಿಗಳು ಈ ಕೆಂಪು ಏಡಿ ಮತ್ತು ಮರಿಗಳ ಮೇಲೆ ದಾಳಿ ಮಾಡುತ್ತದೆ.ಈ ಕ್ರೂರ ಹಳದಿ ಇರುವೆಗಳ ನಿಯಂತ್ರಣಕ್ಕಾಗಿ ಆಸ್ಟ್ರೇಲಿಯಾ ಸರ್ಕಾರ ಮಲೇಷ್ಯಾದಿಂದ ಕಣಜದ ಹುಳುಗಳನ್ನು ತಂದು ಬಿಡುತ್ತದೆ.ಈ ಕಣಜದ ಹುಳುಗಳು ಈ ಹಳದಿ ಇರುವೆಗಳನ್ನು ತಿನ್ನುತ್ತವೆ.
ಆಸ್ಟ್ರೇಲಿಯಾ ಸರ್ಕಾರದೊಂದಿಗೆ ಕೆಂಪು ಏಡಿಗಳ ರಕ್ಷಣೆಗೆ IUCN ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ಸ್ ರ್ ವೇಶನ್ ಆಫ್ ನೇಚರ್ ಸಂಸ್ಥೆಯು ಕೈಜೋಡಿಸಿದೆ. ಈ ವಿಶಿಷ್ಟ ಪ್ರಭೇಧದ ಕೆಂಪು ಏಡಿಗಳ ರಕ್ಷಣೆಗೆ ಆಸ್ಟ್ರೇಲಿಯಾ ಸರ್ಕಾರ ಮತ್ತು ಅಂತರಾಷ್ಟ್ರೀಯ ಸಂಸ್ಥೆಯೊಂದು ಕೈಜೋಡಿಸಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ. ಅಪರೂಪದ ಜೀವವೈವಿಧ್ಯತೆಗಳ ರಕ್ಷಣೆಗೆ ಸರ್ಕಾರವೊಂದು ಹೇಗೆ ಟೊಂಕ ಕಟ್ಟಿ ನಿಲ್ಲುತ್ತದೆ ಎಂಬುದಕ್ಕೆ ಇದೊಂದು ಶ್ರೇಷ್ಠ ನಿದರ್ಶನವಾಗಿದೆ.ಆದರೆ ನಮ್ಮ ದೇಶದಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆಗಳು ಸರ್ಕಾರದ ಸುಪರ್ದಿಯಲ್ಲಿ ಹೇಗೆಲ್ಲಾ ನಡೆಯುತ್ತಿದೆ ಎಂಬುದಕ್ಕೆ ಕಾಸರಕೋಡು ಟೊಂಕದಲ್ಲಿ ಸಂಭವಿಸುತ್ತಿರುವ ವಿದ್ಯಮಾನಗಳೇ ಸಾಕ್ಷಿಯಾಗಿದೆ.ಕಾಸರಕೋಡು ಟೊಂಕ ಕಡಲತೀರ ಆಲೀವ್ ರಿಡ್ಲೇ ಪ್ರಭೇಧದ ಕಡಲಾಮೆಗಳ ಪರಂಪಾರಾನುಗತ ತವರು ಮನೆಯಾಗಿದ್ದು,ಅನಾದಿಕಾಲದಿಂದಲೂ ಇಲ್ಲಿ ಕಡಲಾಮೆಗಳು ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಸುತ್ತಾ ಬಂದಿದೆ. ಖಾಸಗಿ ವಾಣಿಜ್ಯ ಬಂದರು ಕಾಮಗಾರಿಗೆ ಇಲ್ಲಿ ಚಾಲನೆ ದೊರಕಿದ ಮೇಲೆ ಪರಿಸ್ಥಿತಿ ಬಿಗಡಾಯಿಸಿತು. ಸರ್ಕಾರ ಪೋಲೀಸ್ ಬಲ ಪ್ರಯೋಗಿಸಿ ಮೀನುಗಾರರ ಮೇಲಿನ ಲಾಠಿ ಜಾರ್ಜ್ ಮಾಡಿ ,ಇಲ್ಲಿನ ಕಡಲತಡೆಗೋಡೆಗಳನ್ನು ತೆರವುಗೊಳಿಸಿ ರಸ್ತೆ ನಿರ್ಮಿಸುತ್ತಿದೆ. ಕಡಲಾಮೆಗಳು ಮೊಟ್ಟೆ ಇಟ್ಟ ಪ್ರದೇಶದಲ್ಲಿ ಲೋಡುಗಟ್ಟಲೆ ಕೆಂಪು ಮಣ್ಣು ಸುರಿದು ಕಡಲಾಮೆ ಮೊಟ್ಟೆಗಳನ್ನು ದ್ವಂಸಗೊಳಿಸಲಾಗಿದೆ. ನಿನ್ನೆ ಇಲ್ಲಿ ಮೊಟ್ಟೆ ಇಡಲು ಬಂದ ಆಲೀವ್ ರಿಡ್ಲೇ ಪ್ರಭೇಧದ ಕಡಲಾಮೆಯೊಂದನ್ನು ಬರ್ಬರವಾಗಿ ಕಪ್ಪುದೈತ್ಯರು ಕೊಂದು ಹಾಕಿದ್ದಾರೆ. ಅದರ ತಲೆಯ ಭಾಗದಲ್ಲಿ ಮತ್ತು ಹೊಟ್ಟೆಯ ಭಾಗದಲ್ಲಿ ಹರಿತವಾದ ಆಯುಧದಿಂದ ಹೊಡೆದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಕಪ್ಪು ದೈತ್ಯರು ಮತ್ತು ಅವರ ಗುಲಾಮರು ಬಂದರು ನಿರ್ಮಾಣ ಕಾಮಗಾರಿಗಾಗಿ ಏನು ಬೇಕಾದರೂ ಮಾಡಬಲ್ಲರು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಮುಂದೆ ಒಂದು ದಿನ ಈ ಕಪ್ಪುದೈತ್ಯರು ಮೀನುಗಾರರ ಮೇಲೆ ಇದೇ ರೀತಿ ದಾಳಿ ಮಾಡಿದರೂ ಮಾಡಬಹುದು.ಆಳುವ ಪ್ರಭುಗಳೇ ದುರುಳರ ರಕ್ಷಣೆಗೆ ನಿಂತರೇ ಜನಸಾಮಾನ್ಯರ ಪಾಡೇನು? ನ್ಯಾಯ ಕೇಳುವುದಾದರೂ ಯಾರ ಬಳಿ? ಕಾಸರಕೋಡು ಟೊಂಕ ಕಡಲತೀರದಲ್ಲಿ ಕಪ್ಪುದೈತ್ಯರು ನಿರಂತರವಾಗಿ ಕಡಲಾಮೆಗಳ ಹತ್ಯೆ ಮಾಡುತ್ತಿದ್ದಾರೆ.ಅರಣ್ಯ ಅಧಿಕಾರಿಗಳಿಗೆ ಇಲ್ಲಿಗೆ ಬಂದು ಕಡಲಾಮೆಗಳ ರಕ್ಷಣೆ ಮಾಡದಂತೆ ಒತ್ತಡ ಹೇರಲಾಗಿದೆ. ನಿನ್ನೆ ಮೃತಪಟ್ಟ ಕಡಲಾಮೆಯ ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಹೊರಬರುವುದು ಕಷ್ಟ.ಮರಣೋತ್ತರ ಪರೀಕ್ಷೆಯ ವರದಿಯು ಆಳುವ ಪ್ರಭುಗಳ ಒತ್ತಡದಂತೆ ಸುಳ್ಳಿನ ಕಂತೆಯಾದರೆ ಆಶ್ಚರ್ಯವಿಲ್ಲ.
ಮನುಷ್ಯತ್ವ ಇಲ್ಲದವರು ಆಳುವ ಪ್ರಭುಗಳಾದರೆ ಸರ್ವನಾಶ ಖಂಡಿತಾ. ಆಧುನಿಕ ಜಗತ್ತಿನ ಭೋಗ ರಾಷ್ಟ್ರವಾದ ಆಸ್ಟ್ರೇಲಿಯಾ ಅಪೂರ್ವ ಜೀವವೈವಿಧ್ಯತೆಯಾಗಿರುವ ಕೆಂಪು ಏಡಿಗಳ ರಕ್ಷಣೆಗೆ ಕೋಟಿಗಟ್ಟಲೆ ಖರ್ಚು ಮಾಡುತ್ತದೆ. ಭವ್ಯ ಧಾರ್ಮಿಕ ಮತ್ತು ಯೋಗ ಪರಂಪರೆಯ ಪುಣ್ಯಭೂಮಿ ಭಾರತದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಸಕಲ ಜೀವಜಂತುಗಳನ್ನು ಸರ್ವನಾಶ ಮಾಡುವ ಕಪ್ಪುದೈತ್ಯರು ಹುಟ್ಟಿಕೊಂಡಿದ್ದಾರೆ. ಈ ಕಪ್ಪುದೈತರು ಕಾಸರಕೋಡು ಟೊಂಕದಲ್ಲಿ ಶ್ರೀ ಹರಿಯ ಅವತಾರವಾದ ಕಡಲಾಮೆಗಳನ್ನು ಕಂಡ ಕಂಡಲ್ಲಿ ಅಮಾನವೀಯವಾಗಿ ಬರ್ಬರವಾಗಿ ಹತ್ಯೆಗೈಯುತ್ತಿದ್ದಾರೆ.
ಮೀನುಗಾರರ ಮತದಿಂದಲೇ ಗೆದ್ದು ಬಂದು ಮೀನುಗಾರರಿಗೆ ಧಮ್ಕಿ ಹಾಕಿ ಮೀನುಗಾರರ ಆತ್ಮಸಾಕ್ಷಿ ಕೆಣಕುತ್ತಿದ್ದವರಿಗೆ ಸರಿಯಾದ ಪುರಸ್ಕಾರ ಮಾಡಲು ಮೀನುಗಾರರು ತಯಾರಾಗಿದ್ದಾರೆ. ಸಹಸ್ರಾರು ಮೈಲು ದೂರದಿಂದ ತನ್ನ ತವರಿಗೆ ಮೊಟ್ಟೆ ಇಡಲು ಬರುವ ಕಡಲಾಮೆಗಳು ಕಾಸರಕೋಡು ಟೊಂಕ ಕಡಲತೀರದ ಆಸ್ಮಿತೆಯ ಸಂಕೇತ.
ಉಮಾಕಾಂತ ಖಾರ್ವಿ
ಕುಂದಾಪುರ