ವಾಣಿಜ್ಯ ಬಂದರು ಯೋಜನೆಯ ಅನುಷ್ಠಾನವನ್ನು ವಿರೋಧಿಸಿ ಸ್ಥಳೀಯ ಮೀನುಗಾರರು, ಮೀನುಗಾರ ಸಂಘಟನೆಗಳು ಮತ್ತು ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯು ರಾಷ್ಟ್ರೀಯ ಮೀನುಗಾರರ ಸಂಘಟನೆಯ ಬೆಂಬಲ ಪಡೆದು ಸಂಘಟಿತ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ. ವಾಣಿಜ್ಯ ಬಂದರು ಯೋಜನೆ ಬೇಕೋ ಬೇಡವೋ ಎಂದು ನಿರ್ಧರಿಸುವ ಹಕ್ಕು ಸ್ಥಳೀಯ ಜನರಿಗಿದೆ. ಸಂಸದ ಅನಂತಕುಮಾರ್ ಹೆಗಡೆ ಕಾಸರಕೋಡ ಸಹಿತ ಜಿಲ್ಲೆಯಲ್ಲಿ ವಾಣಿಜ್ಯ ಬಂದರುಗಳನ್ನು ನಿರ್ಮಾಣ ಮಾಡಿಯೇ ತೀರುತ್ತೇನೆ ಎಂದಿದ್ದಾರೆ ಮತ್ತು ಬಂದರು ಯೋಜನೆಯನ್ನು ವಿರೋಧಿಸುವವರಿಗೆ ತನ್ನ ಭಾಷೆಯಲ್ಲಿಯೇ ಉತ್ತರ ನೀಡುವುದಾಗಿ ಜಿಲ್ಲೆಯ ಮೀನುಗಾರರಿಗೆ ಬೆದರಿಕೆ ಹಾಕಿರುವ ಅವರ ಸರ್ವಾಧಿಕಾರಿ ಧೋರಣೆಯನ್ನು ಮೀನುಗಾರರು ತೀವ್ರವಾಗಿ ಖಂಡಿಸುವದಾಗಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ರಾಜೇಶ್ ಗೋವಿಂದ ತಾಂಡೇಲ್ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅವರು ಜನರ ಹೆಣದ ಮೇಲೆ ವಾಣಿಜ್ಯ ಬಂದರು ನಿರ್ಮಾಣ ಮಾಡಲು ಹೊರಟಂತಿದೆ ಉತ್ತಮ ಪರಿಸರ ಹೊಂದಿರುವ, ಅಪರೂಪದ ಜೀವವೈವಿಧ್ಯತೆಗಳ ತಾಣಗಳಲ್ಲಿ ಒಂದಾದ ಸುಂದರ ಕರಾವಳಿ ಮತ್ತು ಸಮ್ರಧ್ಧಪಶ್ಚಿಮ ಘಟ್ಟ ಪ್ರದೇಶದಿಂದ ಕೂಡಿದ ಹೊನ್ನಾವರ ತಾಲೂಕಿನ ಶುದ್ಧ ಪರಿಸರವನ್ನು ಹಾಳುಗೆಡಹುವ, ಪರಿಸರ ಮಾಲಿನ್ಯ ಮತ್ತು ಜಲಮಾಲಿನ್ಯದೊಂದಿಗೆ ತಾಯಿ ಶರಾವತಿಯ ಕಲುಷಿತತೆಗೆ ಕಾರಣವಾಗುವ ಹಾಗೂ ಮೀನುಗಾರರ ಹಿತಕ್ಕೆ ಮಾರಕವಾಗುವ ವಾಣಿಜ್ಯ ಬಂದರು ಯೋಜನೆಯನ್ನು ಏಕಾಏಕಿ ನಮ್ಮ ಜನರ ಮೇಲೆ ಹೇರಲು ಹೊರಟಿರುವದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಯಾರದ್ದೋಲಾಭಕ್ಕಾಗಿ ಅಭಿವೃದ್ಧಿಯ ನೆಪದಲ್ಲಿ ಸಾವಿರಾರು ಸ್ಥಳೀಯರ ಬದುಕಿಗೆ ಕೊಳ್ಳಿ ಇಟ್ಟು ನೂರಾರು ಕುಟುಂಬಗಳನ್ನು ಬೀದಿಗೆ ತಳ್ಳುವ ಮತ್ತು ಮುಂದೆ ಲಕ್ಷಾಂತರ ಜನರ ಕುಡಿಯುವ ನೀರಿಗೂ ಸಂಚಕಾರ ತರುವ ವಾಣಿಜ್ಯ ಬಂದರು ಯೋಜನೆಯನ್ನು ಹೊನ್ನಾವರದ ಕಾಸರಕೋಡಿನಲ್ಲಿ ಅನುಷ್ಠಾನಿಸಿಯೇ ತೀರುವೆನೆಂಬ ಹಠಮಾರಿತನವನ್ನು ಅವರು ಯಾಕೆ ತೋರುತ್ತಿದ್ದಾರೆ? ಇದು ಯಾವ ಸೀಮೆಯ ನ್ಯಾಯ? ಎನ್ನುವುದೇ ಇಲ್ಲಿನ ಜನರಿಗೆ ಒಂದು ಒಗಟಾಗಿದೆ ಎಂದು ಅವರು ಹೇಳಿದ್ದಾರೆ.
ವಾಣಿಜ್ಯ ಬಂದರು ಯೋಜನೆಯನ್ನು ವಿರೋಧಿಸಿದರೆ ತಾನು ಸುಮ್ಮನೆ ಇರುವುದಿಲ್ಲ. ತನ್ನ ಧ್ವನಿ ಬದಲಾಗಬೇಕಾಗುತ್ತದೆ ತನ್ನ ಭಾಷೆಯಲ್ಲಿಯೇ ಉತ್ತರಿಸಬೇಕಾಗುತ್ತದೆ ಎಂದ ಮರುದಿನವೇ ಸಾಂಪ್ರದಾಯಿಕ ಮೀನುಗಾರಿಕೆಗೆ ಪ್ರಶಸ್ತವಾಗಿರುವ ಹಾಗೂ ಕಡಲಾಮೆಗಳು ಈಗಾಗಲೇ ಮೊಟ್ಟೆ ಇಟ್ಟಿರುವ ಹಾಗೂ ಈ ತಿಂಗಳ ಅಂತ್ಯದವರೆಗೂ ಅಪರೂಪದ ರಿಡ್ಲೆ ಜಾತಿಯ ಆಮೆಗಳು ಮೊಟ್ಟೆಇಡುವ ಕಾಸರಕೋಡ ಟೊಂಕದ ಕಡಲತೀರದಲ್ಲಿ ಸಿಆರ್ ಝೆಡ್ ಸಹಿತ ಹಲವು ನಿಯಮಗಳನ್ನು ಉಲ್ಲಂಘಿಸಿ ಪೋಲೀಸ್ ಬಲವನ್ನು ದುರುಪಯೋಗ ಪಡಿಸಿಕೊಂಡು ವಾಣಿಜ್ಯ ಬಂದರು ಯೋಜನೆಗಾಗಿ ಬೇಲಿಯೇ ಎದ್ದು ಹೊಲ ಮೆಂದಂತೆ ಸ್ಥಳೀಯರ ತೀವ್ರ ವಿರೋಧದ ನಡುವೆಯೂ ಜಿಲ್ಲಾ ಆಡಳಿತವೇ ಖುದ್ದಾಗಿ ನಿಂತು ಅಕ್ರಮವಾಗಿ ರಸ್ತೆ ನಿರ್ಮೀಸಿದೆ. ರಾಜಕೀಯ ಒತ್ತಡಕ್ಕೆ ಮಣಿದು ಇಂತಹ ಪ್ರಜಾಪ್ರಭುತ್ವ ವಿರೋಧಿ ಕ್ರಮ ಅನುಸರಿಸಿದ ಜಿಲ್ಲಾ ಆಡಳಿತದ ಸರ್ವಾಧಿಕಾರಿ ನಡೆಯು ಅತ್ಯಂತ ಕಳವಳಕಾರಿ ಸಂಗತಿಯಾಗಿದ್ದು ಅದನ್ನು ಈ ಭಾಗದ ಮೀನುಗಾರರ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತೇವೆ.
ನಮ್ಮ ಸಂಸದರು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯ ಪರಿಸರ ಮತ್ತು ಜನರ ಹಿತದೃಷ್ಟಿಯಿಂದ ಜಿಲ್ಲೆಯ ಕರಾವಳಿಯಲ್ಲಿ ಬಂದರು ಯೋಜನೆ ಯನ್ನು ಮತ್ತು ಪರಿಸರಕ್ಕೆ ಮಾರಕವಾಗಬಲ್ಲ ಕೈಗಾರಿಕೆಗಳನ್ನು ತರುವದು ಬೇಡವೆಂದು ತಿರ್ಮಾನಿಸಿದ್ದೇನೆ. ಅದಕ್ಕಾಗಿ ಜಿಲ್ಲೆಯನ್ನು ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಜಿಲ್ಲೆಯನ್ನಾಗಿ ಅಭಿವೃದ್ಧಿ ಪಡಿಸಲು ಮತ್ತು ಜಿಲ್ಲೆಯಲ್ಲಿ ಪರಿಸರಕ್ಕೆ ಪೂರಕವಾದ ಕೈಗಾರಿಕೆಗಳನ್ನು ಸ್ಥಾಪಿಸಿ ಜಿಲ್ಲೆಯ ಯುವಕರಿಗೆ ಇಲ್ಲಿಯೇ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ ಎಂದಿದ್ದರು. ಆದರೆ ಅಂದು ಬಂದರು ಯೋಜನೆಗಳನ್ನು ವಿರೋಧಿಸಿದ ಅವರು ಇಂದು ಬಂದರು ಯೋಜನೆಯ ಪರವಾಗಿ ಮಾತನಾಡುತಿದ್ದಾರೆ. ಬಂದರುವಿರೋಧಿ ಹೋರಾಟವನ್ನು ಹತ್ತಿಕ್ಕುವ ಮತ್ತು ಬಂದರು ಯೋಜನೆಯನ್ನು ವಿರೋಧಿಸುತ್ತಿರುವ ಜಿಲ್ಲೆಯ ಮೀನುಗಾರರಿಗೆ ತನ್ನ ಭಾಷೆಯಲ್ಲಿಯೇ ಬಿಸಿ ಮುಟ್ಟಿಸುವದಾಗಿ ಬೆದರಿಕೆ ಹಾಕಿದ್ದಾರೆ.ಅಂದು ಮೀನುಗಾರ ಪರೇಶ ಮೇಸ್ತನ ಸಾವನ್ನು ಬಳಸಿಕೊಂಡು ಅವನ ಒಂದೊಂದು ಹನಿ ರಕ್ತಕ್ಕೂ ನ್ಯಾಯಸಿಗುವವರೆಗೂ, ಹೋರಾಟ ಮಾಡುವುದಾಗಿ ವೀರಾವೇಷದ ಮಾತನಾಡಿ, ಜನರಲ್ಲಿ ದ್ವೇಷವನ್ನು ಬಿತ್ತುವ ಮೂಲಕ ಅಂದಿನ ಚುನಾವಣೆಗಳನ್ನು ಗೆದ್ದ ಅವರಿಂದ ಪರೇಶಮೇಸ್ತನ ಕುಟುಂಬಕ್ಕೆ ನ್ಯಾಯ ಕೊಡಿಸುವುದು ಹಾಗಿರಲೀ? ಬಂದರು ಯೋಜನೆಯಿಂದ ತೊಂದರೆಗೀಡಾಗುವ ಜನರ ಸಂಕಷ್ಟಗಳನ್ನು ಅರಿತು ಸಮಸ್ಯೆಗಳನ್ನು ಬಗೆಹರಿಸುವ ಕನಿಷ್ಠ ಸೌಜನ್ಯವನ್ನೂ ನಿರೀಕ್ಷೆ ಮಾಡುವುದು ಸರಿಯಲ್ಲ ಎನ್ನುವ ಅವರ ನಡೆ ಜಿಲ್ಲೆಯ ಜನರಿಗೆ ತಡವಾಗಿ ಅರ್ಥವಾಗಿದೆ ಎಂದು ಅವರು ಸಂಸದರ ನಡೆಯನ್ನು ಟೀಕಿಸಿದ್ದಾರೆ.
ಮೀನುಗಾರರ ಸಮಗ್ರ ಹಿತದೃಷ್ಟಿಯಿಂದ ತಾಲ್ಲೂಕನ್ನು ಪರಿಸರ ಮಾಲಿನ್ಯ ಮತ್ತು ಜಲಮಾಲಿನ್ಯದಿಂದ ರಕ್ಷಿಸಿಕೊಳ್ಳಲು ಹಾಗೂ ಜೀವವೈವಿಧ್ಯತೆಗಳ ಸುರಕ್ಷತೆಯ ಹಿತದೃಷ್ಟಿಯಿಂದ ಸ್ಥಳೀಯರು ವಾಣಿಜ್ಯ ಬಂದರು ವಿರೋಧಿ ಹೋರಾಟವನ್ನು ಮುಂದಿನ ದಿನಗಳಲ್ಲಿ ತೀವ್ರಗೊಳಿಸಲು ನಿರ್ಧರಿಸಿದ್ದೇವೆ. ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯ ಅನುಷ್ಠಾನದ ವಿರುದ್ಧ ಈಗಾಗಲೇ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಿದ್ದೇವೆ. ನ್ಯಾಯಾಲಯದ ನಿರ್ದೇಶನದಂತೆ ಈಗ ಪುನಃ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಮತ್ತು ಸರಕಾರಕ್ಕೆ ನಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದೇವೆ. ವಾಣಿಜ್ಯ ಬಂದರು ಯೋಜನೆಯ ಅನುಷ್ಠಾನದಿಂದ ಈಭಾಗದ ಪರಿಸರ ಮತ್ತು ಜೀವವೈವಿಧ್ಯತೆಗೆ, ಮೀನುಗಾರಿಕೆಗೆ ಹಾಗೂ ಜನಸಾಮಾನ್ಯರಿಗೆ ಆಗುವ ತೊಂದರೆಗಳನ್ನು ಸರ್ಕಾರದ ಗಮನ ಸೆಳೆಯಲಾಗಿದ್ದು ವಾಣಿಜ್ಯ ಬಂದರು ಯೋಜನೆಯನ್ನು ಈ ಭಾಗದಲ್ಲಿ ಅನುಷ್ಠಾನಿಸುವದನ್ನು ತಡೆಹಿಡಿಯಬೇಕೆಂದು ಕೋರಿದ್ದೇವೆ. ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸುವ ಸ್ಥಾನದಲ್ಲಿರುವ ನಮ್ಮ ಸಂಸದರಂತವರು ಬಂದರು ನಿರ್ಮಿಸಿಯೇ ಸಿಧ್ಧ ಎನ್ನುವ ಹಠಕ್ಕೆ ಬಿದ್ದಿರುವ ಅವರ ನಡೆ ಅವರಿಗೆ ಶೋಭೆ ತರುವಂತಹದ್ದಲ್ಲ. ಇಲ್ಲಿಯ ಉದ್ದೇಶಿತ ವಾಣಿಜ್ಯ ಬಂದರು ಯೋಜನಾ ಪ್ರದೇಶವು ಅಪರೂಪದ ಕಡಲಾಮೆಗಳು ಮೊಟ್ಟೆ ಇಡುವ ತಾಣವೆಂದು ಗುರುತಿಸಲ್ಪಟ್ಟಿದೆ. ಇಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಇಲ್ಲಿಯ ಕಡಲತೀರದಲ್ಲಿ ಅಕ್ರಮವಾಗಿ ಮಣ್ಣು ಸುರಿದು ಬಲವಂತವಾಗಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.ಜಿಲ್ಲಾ ಆಡಳಿತದ ಇತ್ತೀಚಿನ ಸರ್ವಾಧಿಕಾರಿ ನಡೆಯನ್ನು ಗಮನಿಸಿದರೆ ಮುಂದೆ ಇಲ್ಲಿನ ನೂರಾರು ಮೀನುಗಾರರ ಮನೆಗಳನ್ನು ಸಹ ಇದೇ ರೀತಿ ಬಲವಂತವಾಗಿ ತೆರವುಗೊಳಿಸಿ ಚತುಷ್ಪಥ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣ ಮಾಡುವ ಹುನ್ನಾರ ಇರುವದು ಸ್ಪಷ್ಟವಾಗುತ್ತಿದೆ. ಜನರು ಮತನೀಡಿದಕ್ಕೆ ಪ್ರತಿಯಾಗಿ ಸಂಸದರು-ಜನರಿಗೆ ಅಷ್ಟನ್ನು ಮಾಡದಿದ್ದರೆ ಹೇಗೆ.? ಎಂದಿರುವ ಅವರು ಇಲ್ಲಿನ ಶರಾವತಿ ನದಿಯಿಂದ ಹೊನ್ನಾವರ ತಾಲ್ಲೂಕಿನ ಗ್ರಾಮೀಣ ಭಾಗಗಳಿಗೆ,ಇಡಗುಂಜಿ,ಮತ್ತು ಭಟ್ಕಳ ತಾಲ್ಲೂಕಿನ ಮುರ್ಡೇಶ್ವರ ಯಾತ್ರಾಸ್ಥಳಗಳಿಗೂ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
ಹೊನ್ನಾವರ ಪಟ್ಟಣ ಸೇರಿದಂತೆ ತಾಲ್ಲೂಕಿನ 9 ಗ್ರಾಮ ಪಂಚಾಯಿತಿಗಳ ಜನರಿಗೆ ಶರಾವತಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಕೊಟ್ಯಂತರ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.ಒಂದುವೇಳೆ ಈಭಾಗದಲ್ಲಿ ವಾಣಿಜ್ಯ ಬಂದರು ನಿರ್ಮಾಣವಾದರೆ ಮುಂದೆ ಅದರ ಕಾರ್ಯ ಚಟುವಟಿಕೆಗಳಿಂದ ಧೂಳು,ಮತ್ತು ತೈಲ ಮಿಶ್ರಿತ ವಿವಿಧ ರಾಸಾಯನಿಕಗಳ ತ್ಯಾಜ್ಯವು ನದಿ ನೀರಿಗೆ ಸೇರಿ ಕಲುಷಿತಗೊಂಡರೆ ಈ ಭಾಗದ ಜನರ ಪಾಡೇನು? ಈ ಎಲ್ಲ ಅಂಶಗಳನ್ನುವೈಜ್ಞಾನಿಕವಾಗಿ ಪರಿಶೀಲಿಸದೆಯೇ ಈ ಭಾಗದಲ್ಲಿ ವಾಣಿಜ್ಯ ಬಂದರು ನಿರ್ಮಿಸಲು ಹೊರಟಿರುವದು ಯಾವ ಪುರುಷಾರ್ಥಕ್ಕೆ ಎಂದು ಅವರು ಪ್ರಶ್ನಿಸಿದ್ದಾರೆ. ಇನ್ನು ಕಾರವಾರ ಮತ್ತು ಬೇಲೇಕೇರಿಯಲ್ಲಿ ಎರಡು ವಾಣಿಜ್ಯ ಬಂದರುಗಳು ಹಲವು ವರ್ಷಗಳಿಂದ ಈ ಜಿಲ್ಲೆಯಲ್ಲಿ ಕಾರ್ಯಚರಣೆ ಮಾಡುತ್ತಿವೆ. ಸ್ಥಳೀಯರಿಗೆ ಚರ್ಮರೋಗ ಮತ್ತು ಶ್ವಾಸಕೋಶ ಸಂಬಂಧಿ ಖಾಯಿಲೆಯ ಬಳುವಳಿ ನೀಡಿರುವ ಹೊರತಾಗಿ, ವಾಣಿಜ್ಯ ಬಂದರು ನಿರ್ಮಾಣದಿಂದ ಈಭಾಗದಲ್ಲಿ ಯಾವಅಭಿವೃದ್ಧಿಯೂ ಆಗಿಲ್ಲ, ಆರ್ಥಿಕ ಕ್ರಾಂತಿಯೂ ಸಾಧ್ಯವಾಗಿಲ್ಲ ಎನ್ನುವ ಸತ್ಯ ನಮ್ಮ ಕಣ್ಣ ಮುಂದೆಯೇ ಇರುವಾಗ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಮಾಲಿನ್ಯದೊಂದಿಗೆ ಮೀನುಗಾರರ ಬದುಕಿಗೆ ಕೊಳ್ಳಿ ಇಡುವ ಇಂತಹ ಅನಗತ್ಯ ಯೋಜನೆಗಳನ್ನು ಜಿಲ್ಲೆಯ ಜನರ ಮೇಲೆ ಹೇರುವುದನ್ನು ಸರ್ಕಾರ ಇನ್ನಾದರೂ ನಿಲ್ಲಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
ರಾಜೇಶ್ ತಾಂಡೇಲ್ ರವರ ಲೇಖನದಲ್ಲಿ ಪ್ರಸ್ತಾಪಿಸಿದ ಅಂಶಗಳು ಸರ್ವವಿಧಿತ ವಿಚಾರವಾಗಿದೆ.ಪರೇಶ್ ಮೇಸ್ತಾ ಸಾವಿನ ಬೆಂಕಿಯಲ್ಲಿ ಚಳಿ ಕಾಯಿಸಿಕೊಂಡು ಗದ್ದುಗೆ ಏರಿ ಮೀನುಗಾರರ ಸಮಾಧಿ ಕಟ್ಟಲೊರಟವರಿಗೆ ಸರಿಯಾದ ಪಾಠ ಕಲಿಸುವ ಕಾಲ ಹತ್ತಿರ ಬಂದಿದೆ.ಉತ್ತಮ ಲೇಖನ👌👍👌🙏🙏🙏