ಕಾಸರಕೋಡು ಟೊಂಕ ಜನ್ಮಭೂಮಿಯಿಂದ ಶರಧಿಯ ಕರ್ಮಭೂಮಿಗೆ ಕಡಲಾಮೆ ಮರಿಗಳ ಪಯಣ

ಮೀನುಗಾರರ ಪಾಲಿಗೆ ದೈವಸ್ವರೂಪಿಗಳಾಗಿರುವ ಕಡಲಾಮೆಗಳಿಗೆ ಕಾಸರಕೋಡು ಟೊಂಕ ಕಡಲತೀರ ಸುರಕ್ಷಿತ ತವರು.ಈ ದಿನ ಕಾಸರಕೋಡು ಟೊಂಕ ಕಡಲತೀರದಲ್ಲಿ ಸಂಭ್ರಮ ಮನೆ ಮಾಡಿತ್ತು.51 ದಿನಗಳ ಬಳಿಕ ಸಮುದ್ರದ ಮರಳಿನ ಬೆಚ್ಚನೆಯ ಗೂಡಿನಲ್ಲಿ,ಅರಣ್ಯ ಇಲಾಖೆಯ ಮತ್ತು ಸ್ಥಳೀಯ ಮೀನುಗಾರರ ಸುಪರ್ದಿಯಲ್ಲಿ ಪವಡಿಸುತ್ತಿದ್ದ ಕಡಲಾಮೆ ಮರಿಗಳು ಮೊಟ್ಟೆಯೊಡೆದು ಬಂದು ತಮ್ಮ ತಾಯಿಯನ್ನು ಸೇರುವ ತವಕದಲ್ಲಿ ಶರಧಿಯತ್ತ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಹೊಸ ಬದುಕಿಗೆ ಕಾಲಿಟ್ಟವು.ಸುಮಾರು 190 ಕ್ಕೂ ಹೆಚ್ಚು ಕಡಲಾಮೆ ಮರಿಗಳು ಕಡಲಂಚಿನಲ್ಲಿ ಮಿರಮಿರನೇ ಸಾಗುತ್ತಾ ನೀಲಿಮೆಯ ಒಡಲೊಳಗೆ ಸೇರಿಕೊಂಡವು.

ದೈವಿಸ್ವರೂಪಿಗಳಾದ ಕಡಲಾಮೆ ಮರಿಗಳಿಗೆ ಹೊಸಬದುಕಿನತ್ತ ಪಯಣಿಸಲು ರೂಪುಗೊಂಡ ಈ ಪವಿತ್ರ ಸಂಭ್ರಮದ ಪುಣ್ಯ ಕ್ಷಣಗಳು ಅವಿಸ್ಮರಣೀಯ.ಈ ಸಂಭ್ರಮದಲ್ಲಿ ಭಾಗಿಯಾದ ನಾನು ಪುಣ್ಯವಂತ.ಇಲ್ಲಿ ಎಲ್ಲರ ಮುಖಭಾವದಲ್ಲಿ ಹರುಷ ಮನೆ ಮಾಡಿತ್ತು.ಮಕ್ಕಳನ್ನು ಎತ್ತಿ ಆಡಿಸಿ ಮುದ್ದಾಡುವ ಪರಿಯಲ್ಲಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಕಡಲಾಮೆ ಮರಿಗಳನ್ನು ಕೈಯಲ್ಲಿ ಎತ್ತಿಕೊಂಡು ಕಡಲಿಗೆ ಬಿಡುವ ದೃಶ್ಯಗಳು ಚೇತೋಹಾರಿಯಾಗಿತ್ತು.

ಕಳೆದ ಕೆಲವು ದಿನಗಳ ಹಿಂದೆ ಇಲ್ಲಿ ಅರಣ್ಯ ಅಧಿಕಾರಿಗಳು ಮತ್ತು ಮೀನುಗಾರರು ಜತನದಿಂದ ಗೂಡಿನಲ್ಲಿ ಪೋಷಿಸಿದ್ದ ಕಡಲಾಮೆ ಮರಿಗಳು ರಾತ್ರೋರಾತ್ರಿ ನಾಪತ್ತೆಯಾಗಿದ್ದವು.ಮೊಟ್ಟೆಯೊಡೆದು ಹೊರ ಬಂದ ಕಡಲಾಮೆ ಮೊಟ್ಟೆಗಳಲ್ಲಿ ಕೇವಲ ಒಂದು ಮರಿ ಮಾತ್ರ ಜೀವಂತವಾಗಿ ಸಿಕ್ಕಿದರೆ ಉಳಿದ 150 ಕ್ಕೂ ಹೆಚ್ಚು ಕಡಲಾಮೆ ಮರಿಗಳು ಕಪ್ಪುದೈತರು ಮತ್ತುಅವರ ಗುಲಾಮರಾದ ಸಮಾಜದ್ರೋಹಿಗಳ ಕ್ರೌರ್ಯಕ್ಕೆ ಬಲಿಯಾಗಿದ್ದವು.ಅದರ ಬಗ್ಗೆ ತನಿಖೆ ಹಳ್ಳ ಹಿಡಿದಿದೆ.

ಕಡಲಾಮೆ ಮರಿಗಳನ್ನು ಕಡಲಿಗೆ ಬಿಡುವ ಪುಣ್ಯ ಕಾರ್ಯದ ಉಸ್ತುವಾರಿಯನ್ನು ಕಡಲವಿಜ್ಞಾನಿ ಶ್ರೀ ಪ್ರಕಾಶ ಮೇಸ್ತಾ,ಉಡುಪಿಯ ಕಡಲವಿಜ್ಞಾನಿ ಶ್ರೀ ಸೂರ್ಯ ಅಡ್ಡೂರು ಮತ್ತು ಅರಣ್ಯ ಇಲಾಖೆಯ RFO ಶ್ರೀ ವಿಕ್ರಂ ವಹಿಸಿಕೊಂಡಿದ್ದರು.ಇದೇ ಸಂದರ್ಭದಲ್ಲಿ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಮತ್ತು ಕಡಲ ವಿಜ್ಞಾನಿಗಳು ಕಡಲಾಮೆಗಳ ದಾಖಲೀಕರಣ ವ್ಯವಸ್ಥೆ ಮಾಡಿದ್ದರು.ಸರ್ವಧರ್ಮ ಭಾವೈಕ್ಯತೆಯ ಪ್ರಾರ್ಥನೆ ಅಂಗವಾಗಿ ರೆವರೆಂಟ್ ಫಾದರ್ ಶ್ರೀ ಸ್ಯಾಂಸನ್ ಪಿಂಟೋ ,ಮುಸ್ಲಿಂ ಭಾಂಧವರು ಧಾರ್ಮಿಕ ಸಂದೇಶ ವಾಚಿಸಿದರು.ಶ್ರೀ ರಾಜೇಶ್ ತಾಂಡೇಲ್ ಪೂಜೆ ಪುರಸ್ಕಾರ ನಿರ್ವಹಿಸಿದರು. ಒಟ್ಟಿನಲ್ಲಿ ಈ ಕಾರ್ಯಕ್ರಮ ಕಾಸರಕೋಡು ಟೊಂಕದಲ್ಲಿ ಸಂಚಲನ ಸೃಷ್ಟಿಸಿದ್ದು ಅಭೂತಪೂರ್ವವಾಗಿ ಅನಾವರಣಗೊಂಡಿತ್ತು.

ಪರಿಸರವನ್ನು ಕಾಪಾಡುವ ಮತ್ತು ಅಂತಹ ಪ್ರಕ್ರಿಯೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ತಮ್ಮ ಜವಾಬ್ದಾರಿಯನ್ನು ಜನ ಅರಿತುಕೊಳ್ಳಬೇಕಾಗಿರುವುದು ಪರಿಸರ ಸಂರಕ್ಷಣೆಯಲ್ಲಿ ಅವಶ್ಯಕವಾಗಿದೆ. ಭೂಮಿ ಮತ್ತು ಅದರ ಮೇಲಿನ ಎಲ್ಲ ಜೀವಿಗಳೆಡೆಗೂ ಗೌರವ ಹೊಂದಿದಂತಹ ಬದುಕು ಪ್ರತಿಯೊಬ್ಬರದೂ ಆಗಬೇಕು.ಈಗ ನಾವು ಕಾಸರಕೋಡು ಟೊಂಕ ಕಡಲಿನಲ್ಲಿ ಬಿಟ್ಟ ಕಡಲಾಮೆಗಳು ಪ್ರೌಢಾವಸ್ಥೆ ಬಂದ ಮೇಲೆ ಸಹಸ್ರಾರು ಕೀಮೀ ದೂರದ ಸಾಗರದಲ್ಲಿದ್ದರೂ ನಿಖರವಾಗಿ ತಮ್ಮ ತವರಾದ ಕಾಸರಕೋಡು ಟೊಂಕ ಕಡಲತೀರಕ್ಕೆ ಮೊಟ್ಟೆ ಇಡಲು ಬರುತ್ತವೆ ಎಂಬುದು ಸರ್ವವಿಧಿತ ವಿಚಾರವಾಗಿದೆ.ಇದು ಈ ಕಡಲತೀರದಲ್ಲಿ ನಡೆದ ಹಲವಾರು ಉದಾಹರಣೆಗಳಿಂದ ನಿರೂಪಿತವಾಗಿರುವುದು ಸಾರ್ವಕಾಲಿಕ ಸತ್ಯವಾಗಿದೆ.

ಉಮಾಕಾಂತ ಖಾರ್ವಿ ಕುಂದಾಪುರ

One thought on “ಕಾಸರಕೋಡು ಟೊಂಕ ಜನ್ಮಭೂಮಿಯಿಂದ ಶರಧಿಯ ಕರ್ಮಭೂಮಿಗೆ ಕಡಲಾಮೆ ಮರಿಗಳ ಪಯಣ

  1. ಪ್ರಕೃತಿಯು ಪ್ರತಿಯೊಬ್ಬರ ತಾಯಿ ಎಂಬುದಕ್ಕೆ ಅತ್ಯುತ್ತಮ ನಿದರ್ಶನ…ಅವಳನ್ನು ಉಳಿಸಲು ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಕೈಜೋಡಿಸುವುದು ಮುಖ್ಯ.. ಕಾಸರಗೋಡು ಟೊಂಕದಲ್ಲಿ ನಿಸರ್ಗ ಆರಾಧನೆ ಮಾಡುವ ಈ ಅದ್ಭುತ ಮತ್ತು ಸುಂದರವಾದ ಸಂಸ್ಕೃತಿ ಇರುವ ಅಲ್ಲಿನ ನಿವಾಸಿಗಳಿಗೆ ಹೃತ್ಪೂರ್ವಕ ನಮನಗಳು.

Leave a Reply

Your email address will not be published. Required fields are marked *