ಕೊಂಕಣಿ ಖಾರ್ವಿ ಜನರು ಮತ್ತು ಹೋಳಿ ಜಾನಪದ ಸಂಪ್ರದಾಯ

ಆಧುನೀಕತೆ ಕಾಲಿಡುತ್ತಿದ್ದಂತೆ ಹಬ್ಬಗಳು ಯಾಂತ್ರಿಕವಾಗಿ ಆಚರಿಸಲ್ಪಡುತ್ತಿವೆ. ಹಬ್ಬಗಳೊಡನೆ ಮಿಳಿತವಾಗಿರುವ ಕೆಲವು ಜಾನಪದಗಳು ಇಂದು ಜನರ ಮನಃಪಟಲಗಳಿಂದ ಮರೆಯಾಗುತ್ತಿರುವುದು ಸಾಂಸ್ಕೃತಿಕ ನಷ್ಟ ಎನ್ನಬಹುದು. ಹೋಳಿ ಹಬ್ಬವನ್ನು ಹಲವಾರು ಪ್ರದೇಶಗಳಲ್ಲಿ ಹಲವಾರು ರೀತಿಗಳಲ್ಲಿ ಆಚರಿಸಲಾಗುವುದನ್ನು ನಾವು ಗಮನಿಸುತ್ತೇವೆ. ಹಲವಾರು ಜನಸಮುದಾಯಗಳು ಹೋಳಿಯನ್ನು ಅವರದೇ ಆದ ರೀತಿಯಲ್ಲಿ ಆಚರಿಸುತ್ತಾರೆ. ಕೊಂಕಣಿ ಖಾರ್ವಿ ಜನರು ಇತ್ತೀಚಿನ ವರೆಗೂ ಆಧುನೀಕತೆಯ ಸಾಂಸ್ಕೃತಿಕ ಪ್ರಭಾವವನ್ನು ಸೋಕಲು ಬಿಡದೆ ಬಹಳ ವಿಶಿಷ್ಟತೆಗಳಿಂದ ಕೂಡಿದ ಹೋಳಿ ಹಬ್ಬದ ಜಾನಪದ ಸಂಪ್ರದಾಯಗಳನ್ನು ಆಚರಣೆ ಮಾಡುತ್ತಾ ಬಂದಿರುವುದನ್ನು ಸ್ವತಃ ಅದೇ ಸಮಾಜಕ್ಕೆ ಸೇರಿರುವ ಲೇಖಕರು ಓದುಗರ ಮುಂದಿಡಲು ಪ್ರಯತ್ನಿಸಿರುತ್ತಾರೆ.

ಹೋಳಿ ಹಬ್ಬವು ಶಿಶಿರ ಮತ್ತು ವಸಂತ ಋತುಗಳ ನಡುವಿನ ಕಾಲಮಾನದ ನಿರ್ದಿಷ್ಟ ಪಡಿಸಿದ ದಿನಗಳಲ್ಲಿ ಆಚರಿಸಲ್ಪಡುತ್ತಿರುವುದು ಗಮನಾರ್ಹ. ಕೊಂಕಣಿ ಖಾರ್ವಿ ಜನರ ಕಡಲತಡಿಯ ಜೀವನ ಮತ್ತು ಜೀವನ ಶೈಲಿಯನ್ನು ಗಮನಿಸಿದ್ದೇ ಆದಲ್ಲಿ ಅವರ ಜೀವನೋತ್ಸಾಹವನ್ನು ಹೆಚ್ಚಿಸಿಕೊಳ್ಳಲು ತೊಡಗಿಸಿಕೊಳ್ಳುವಂತಹ ಚಟುವಟಿಕೆಗಳಿಗೆ ಈ ಕಾಲಮಾನದಷ್ಟು ಪ್ರಶಸ್ತವಾದುದು ಬೇರಾವುದೂ ಇಲ್ಲವೆನ್ನಬಹುದು. ಹೋಳಿಯು ಒಂದೇ ದಿನದ ಆಚರಣೆಯಲ್ಲ; ಹದಿನೈದು ಇಪ್ಪತ್ತು ದಿನಗಳ ಮೊದಲಿನಿಂದಲೂ ಹೋಳಿ ಪೂರ್ವದ ಜಾನಪದ ಹಾಡುಗಳನ್ನು ಹಾಡುವುದು ಕುಣಿಯುವುದು ಮುಂತಾದುವು ನಡೆಯುತ್ತಿರುತ್ತವೆ. ಬೆಳಿಗ್ಗೆ ಮುಂಜಾವಿನಿಂದ ಸಂಜೆ ಮಬ್ಬುಗತ್ತಲಿನ ವರೆಗೆ ಕಡಲ ತೆರೆಗಳ ನಡುವೆ ದುಡಿತ. ಹಲವರು ಹೊಳೆಗಳಲ್ಲಿ ಬೇಸಿಗೆಕಾಲ ಮಳೆಗಾಲವೆನ್ನದೆ ಮೀನುಗಾರಿಕೆಯ ಜೀವನ ನಡೆಸುವರು. ವರ್ಷವಿಡೀ ದಣಿದ ದೇಹಗಳಿಗೆ ಉಲ್ಲಾಸ ನೀಡುವ ಕ್ರಿಯೆಯು ಅವಶ್ಯಕ. ಅಂತೆಯೇ ಹೋಳಿ ಸಂಬಂಧಿತ ಜಾನಪದ ಚಟುವಟಿಕೆ ಇಂತಹ ಅವಶ್ಯಕತೆ ಪೂರೈಸಲು ಪ್ರತಿಸ್ಪಂದಿಯಾದ ಅಂಶವೆನ್ನುವುದನ್ನು ಉಪೇಕ್ಷಿಸಲಾಗದು. ಹಬ್ಬದ ಪೂರ್ವದಲ್ಲಿ ನಿರ್ದಿಷ್ಟ ಪಡಿಸಿದ ದಿನಗಳಲ್ಲಿ ಗಂಡಸರು, ಹೆಂಗಸರು ಮತ್ತು ಮಕ್ಕಳೆನ್ನದೆ ಎಲ್ಲರೂ ಸಂತೋಷದಿಂದ ಹಾಡುತ್ತಾ, ಕುಣಿಯುತ್ತಾ ದೇಹಕ್ಕೂ ಮನಸ್ಸಿಗೂ ಮುದ ಪಡೆಯುತ್ತಾರೆ. ಈ ಹಾಡುಗಳು ಆದಿಮ ಬುಡಕಟ್ಟು ಸಾಮಾಜಿಕ ಹಿನ್ನೆಲೆಯ ಸಾಂಸ್ಕೃತಿಕ ಪರಂಪರೆಯೇ ಆಗಿದ್ದು ಮೂಲಸೆಲೆಯಲ್ಲಿ ಇವುಗಳ ಉಗಮ ಆಯಾ ಕಾಲಧರ್ಮಕ್ಕೆ ಸ್ಪಂದಿಸುವ ಮಾನವನ ಸಹಜ ಪ್ರವೃತ್ತಿಯ ಸಾಂಸ್ಕೃತಿಕ ಅವಶ್ಯಕತೆಯೇ ಆಗಿರುತ್ತದೆ.

ಪ್ರಾಚೀನ ಬುಡಕಟ್ಟು ಸಂಸ್ಕೃತಿಯ ಹೊಳಹನ್ನು ಹೋಳಿ ಆಚರಣೆಯ ಸಂಪ್ರದಾಯಗಳಲ್ಲಿ ನೋಡಬಹುದಾಗಿದೆ. ಬುಡಕಟ್ಟು ಸಂಸ್ಕೃತಿಯು ಕ್ರಮೇಣ ಪ್ರಧಾನ ಸಾಂಸ್ಕೃತಿಕ ಪ್ರಭಾವಕ್ಕೆ ಒಳಗಾಗಿರಬೇಕು ಮತ್ತು ಒಟ್ಟಂದದ ಹೋಳಿ ಆಚರಣೆಯು ಮೂಲ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಧಾನ ಸಂಸ್ಕೃತಿಗಳ ಮಿಶ್ರಣದೊಂದಿಗೆ ಆಚರಿಸುವಲ್ಲಿ ಬದಲಾವಣೆಗೊಂಡಿರುವುದನ್ನು ಸಾಮಾಜಿಕ ವಿಕಾಸದ ತತ್ವದ ಆಧಾರದಲ್ಲಿ ಪರಿಶೀಲಿಸಿದರೆ ಕಂಡುಕೊಳ್ಳಬಹುದು. ಈ ಲೇಖನವು ಕೊಂಕಣಿ ಖಾರ್ವಿ ಸಮುದಾಯದ ಹೋಳಿ ಸಾಂಸ್ಕೃತಿಕ ಆಚರಣೆಯನ್ನು ಅಧ್ಯಯನಶೀಲ ದೃಷ್ಠಿಯಿಂದ ವಿಶ್ಲೇಷಿಸುವ ಉದ್ದೇಶವನ್ನು ಹೊಂದಿದೆ. ಆದುದರಿಂದ ಜನರು ಕಂಠದಿಂದ ಕಂಠಕ್ಕೆ ಹರಿದು ಬಂದ ಹೋಳಿ ಹಾಡುಗಳು, ಕುಣಿತಗಳು, ಸಂಪ್ರದಾಯಗಳನ್ನು ಹೇಗಿದೆಯೋ ಹಾಗೆಯೇ ಪ್ರಸ್ತುತ ಪಡಿಸಲು ಪ್ರಯತ್ನಿಸಲಾಗಿದೆ. ಈ ಮೊದಲು ಮೂಲ ಹಾಡುಗಳನ್ನು ಪ್ರಕ್ಷೇಪಿಸಿದ ಸುಧಾರಿತ ಹಾಡುಗಳಿಂದ ಕೂಡಿದ ಪುಸ್ತಕವನ್ನು ಸನ್ಮಾನ್ಯ ದಿ. ವಾಸುದೇವ ನಾಯ್ಕರವರು ಬರೆದಿರುವುದನ್ನು ನಾನು ಸ್ಮರಣೆಗೆ ತರಲು ಬಯಸುತ್ತೇನೆ. ಆದರೆ ಅಧ್ಯಯನದ ದೃಷ್ಟಿಯಿಂದ ಮೂಲದಲ್ಲಿ ಹೇಗಿದೆಯೋ ಅದನ್ನು ಪ್ರಕ್ಷೇಪಿಸದೆ ಓದುಗರ ಮುಂದಿಡಲು ನಾನು ಬಯಸಿದ್ದೇನೆ. ರಾಗಬದ್ಧವಾಗಿ ಹಾಡಲ್ಪಡುವ ಈ ಹೋಳಿ ಜಾನಪದ ಹಾಡುಗಳು ಇನ್ನೂ ಈ ಜನರಲ್ಲಿ ಜೀವಂತಿಕೆಯಿಂದಿರುವ ಒಂದು ಜೀವನದ ಅಂಗವಾಗಿವೆ. ಮೂಲಸ್ಥಾನವನ್ನು ಬಿಟ್ಟು ಕರ್ನಾಟಕದ ನೆಲದಲ್ಲಿ ಇವರು ಬೀಡು ಬಿಟ್ಟಿರುವ ಕಾರಣ, ಶ್ರೀಮಂತವಾದ ಅದೆಷ್ಟೋ ಜನಪದಗಳು ಇವರ ಸ್ಮೃತಿಯಿಂದ ಕಳೆದುಹೋಗಿ ಸರಳವಾದವುಗಳು ಮಾತ್ರ ಉಳಿದಿರಬೇಕು. ಹಲವಾರು ಕಡೆಗಳಲ್ಲಿ ದೀರ್ಘ ಕಥಾನಕವಿರುವ ತುಂಡು ತುಂಡು ಭಾಗಗಳನ್ನು ಹಾಡಲಾಗುತ್ತದೆ. ಇವುಗಳನ್ನು ಸೈಂವರ ಅಂತ ಕರೆಯುತ್ತಾರೆ. ಆದರೆ ಇವು ಯಾವುವೂ ವಿಸ್ತಾರ ಮಟ್ಟದಲ್ಲಿ ಪ್ರಚಲಿತದಲ್ಲಿಲ್ಲ. ಶ್ರೇಣೀಕೃತ ಸಮಾಜದಲ್ಲಿ ಉನ್ನತ ಶ್ರೇಣಿಯ ಜನರಿಂದ ಬೇರ್ಪಟ್ಟಿರುವ ವಿಶಾಲ ಸಮೂಹಕ್ಕೆ ಸೇರಿದ ಜನರು ತಮ್ಮದೇ ಛಾಪನ್ನು ತಮ್ಮ ಜಾನಪದಗಳಲ್ಲಿ ಉಳಿಸಿಕೊಂಡಿರುತ್ತಾರೆ. ಆದ್ದರಿಂದ ಜನರ ಕವಿಹೃದಯಗಳಲ್ಲಿ ಪ್ರತಿಬಿಂಬಿತವಾದವುಗಳು ಪ್ರಕೃತಿ, ತಮ್ಮ ಪರಿಸರ ಅಥವಾ ಆಸುಪಾಸಿನ ಸಂಗತಿಗಳ ವಾಸ್ತವಿಕ ಚಿತ್ರಣ ಮಾತ್ರ.

ಹೋಳಿ ಸುಡುವ ಆಚರಣೆಯ ಪೂರ್ವದಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳೆಲ್ಲ ಬೆಳದಿಂಗಳ ರಾತ್ರಿಗಳಲ್ಲಿ; ರಂಗಸಜ್ಜಿಕೆ ಊರಿನ ಖಾಲಿ ಬಿದ್ದಿರುವ ಜಾಗ. ಹೋಳಿ ಪೂರ್ಣಿಮೆಯತ್ತ ದಾಂಗುಡಿಯಿಡುತ್ತಿರುವ ಚಂದ್ರಮನ ಬೆಳಕೇ ನೆರಳು ಬೆಳಕಿನ ಸಂಯೋಜನೆ. ಊರ ಪ್ರಮುಖರ ಮನೆಯ ಹುಡುಗರು ತರುವ ಗುಮ್ಮಟೆ ಹಿನ್ನೆಲೆ ವಾದನ. ಇಲ್ಲೆಲ್ಲವೂ ಅಭಿಕವ್ಯಕ್ತಗೊಳ್ಳುತ್ತಿರುವ ಹಾಡು, ಕುಣಿತ, ಮುಂತಾದುವುಗಳಿಗೆ ತನ್ನದೆ ಸ್ವಾತಂತ್ರ್ಯವಿದೆ. ಯಾರೂ ನಿರ್ದೇಶಕರೆನ್ನುವವರು ಇಲ್ಲಿ ಕಂಡು ಬರುವುದಿಲ್ಲ. ಕೆಲವೊಮ್ಮೆ ಪ್ರತಿಯೊಂದು ಅಭಿವ್ಯಕ್ತಿಗಳ ಸಾಂಗತ್ಯದಲ್ಲಿ ತಪ್ಪು ನಡೆಯಾದಾಗ ಅವರಲ್ಲೆ ತಿಳುವಳಿಕೆ ಇದ್ದವರು ಅದನ್ನು ಸರಿಪಡಿಸುವ ಮಾತನಾಡುತ್ತಾರಷ್ಟೆ. ಮತ್ತೆ ಅವುಗಳೆ ನಿರ್ಭಿಡೆಯಾಗಿ ಮುಂದೆ ಸಾಗುತ್ತಿರುತ್ತವೆ. ಉಲ್ಲಸಿತಗೊಂಡ ಮನಸುಗಳು ಬೆಳದಿಂಗಳಿನಿಂದ ಉಂಟಾದ ನೆರಳು ಬೆಳಕಿನ ಮೇಳೈಕೆಯಿಂದ ಪ್ರಭಾವಿತಗೊಂಡು ಹಾಡುತ್ತಾರೆ.

ಉಡುಡ್ಯೋ ದೆವ್ಳೊಪ ಚಂದ್ರಮುದ್ಯಾಲಾವೊ
ಉಡುಡ್ಯೋ ದೆವ್ಳೊಪ ಚಂದ್ರಮುದ್ಯಾಲಾ|
ಅರೆ ಚಂದ್ರಮುದ್ಯಾಲೇಲ್ ಸಾವ್ಳೇಕು ಬೆಬ್ಬುದ್ಯಾಲಾವೊ
ಚಂದ್ರಮುದ್ಯಾಲೇಲ್ ಸಾವ್ಳೇಕು ಬೆಬ್ಬುದ್ಯಾಲಾ|
(ಬೆಳಕಿನ ಲೋಕವೆ ಹಬ್ಬಿರುವಲ್ಲಿ ಚಂದ್ರನುದಿಸಿದ್ದಾನೆ
ಚಂದ್ರನುದಿಸಿದ್ದಾನೆ ಬೆಳಕಿನ ಲೋಕದಲ್ಲಿ|
ಅರೆ, ಚಂದ್ರನುದಯದ ನೆರಳಿಗೆ ಕಪ್ಪೆ ಉದಿಸಿದೆ
ಕಪ್ಪೆ ಉದಿಸಿದೆ ಚಂದ್ರನುದಯದ ನೆರಳಿಗೆ|)

ಜನರ ರಸಿಕತೆ ಮತ್ತು ಹಾಸ್ಯ ಸ್ವಭಾವ ಈ ಹಾಡಿನಲ್ಲಿ ಪ್ರತಿಬಿಂಬಿತವಾಗುತ್ತದೆ.

ಜಾಡು ಜೋಂಪು ಸುಣೇಲೇ ಶಾಂಪೂ ನಳಿಯೇತು ಬೋರೀಲಾ ರೆ

ಹೊಯ್ ಹೊಯ್ ನಳಿಯೇತು ಬೋರೀಲಾ | ಅರೆ ಸಪೂರು ನಳಿ ಚೆಪೂನು ಬೋರೀಲಾ ರೆ
ಹೊಯ್ ಹೊಯ್ ಚೆಪೂನು ಬೋರೀಲಾ||
(ಗಿಡ ಪೊದೆ ನಾಯಿ ಬಾಲ ನಳ್ಳಿಯಲ್ಲಿ ತುಂಬಿಸಿದೆ
ಹೋಯ್ ಹೋಯ್ ನಳ್ಳಿಯಲ್ಲಿ ತುಂಬಿಸಿದೆ
ಅರೆ ಸಪೂರ ನಳ್ಳಿಯಲ್ಲಿ ತಳ್ಳಿ ತಳ್ಳಿ ತುಂಬಿಸಿದೆ
ಹೋಯ್ ಹೋಯ್ ತಳ್ಳಿ ತಳ್ಳಿ ತುಂಬಿಸಿದೆ ಸಪೂರ ನಳ್ಳಿಯಲ್ಲಿ)

ಪ್ರತಿಯೊಂದು ಭಾಷೆಗೂ ಅದರದೇ ಸಾಂಸ್ಕೃತಿಕ ಸೊಗಡಿನ ಬಂಧವಿದೆ. ಕೋಂಕಣಿ ಭಾಷೆಯಲ್ಲಿ ಸಪೂರು ನಳಿ ಅಂದರೆ ಕೂಡಲೆ ಅರ್ಥವಾಗುವಂತದು ಎಷ್ಟು ಬೇಕಾದರೂ ತುಂಬಿಸಬಹುದಾದ ಸಪೂರ ಹೊಟ್ಟೆ ಎಂದು. ಗುಮ್ಮಟೆ ಮತ್ತು ಜಾಗಟೆಗಳ ಜೊತೆಯಲ್ಲಿ ಹಾಡುಗಳು ಲಯಬದ್ಧವಾಗಿ ಗಂಟೆಗಟ್ಟಲೆ ಹಾಡಲ್ಪಡುತ್ತವೆ. ಈ ಕ್ರಿಯೆಗಳಲ್ಲಿ ಎಲ್ಲರೂ ಭಾಗವಹಿಸುತ್ತಾರೆ. ಹೆಂಗಸರು ಗುಂಪಾಗಿ ಇಂಪಾಗಿ ಹಾಡುತ್ತಾರೆ. ಸಮಾಜದಲ್ಲಿ ದಿನದ ದುಡಿಮೆಯಲ್ಲಿ ಗಂಡಸಿನಷ್ಟೇ ಪ್ರಮುಖ ಪಾತ್ರವನ್ನು ಹೆಂಗಸು ವಹಿಸುತ್ತಾಳೆ. ಜತೆಯಲ್ಲಿ ಮಕ್ಕಳ ಆರೈಕೆ ಆಕೆಯದೆ. ಅಳುವ ತೊಟ್ಟಿಲ ಶಿಶುವನ್ನು ತೂಗುವಾಗ ಸಂತೈಸುತ್ತಾ ಹಾಡುವ ಹಾಡು ಇದು. ಮರಾಠಿ ಭಾಷೆಯ ಝಲಕು ಈ ಹಾಡಿನಲ್ಲಿ ಇರುವುದನ್ನು ಗಮನಿಸಿ.

ನಾ ಕುಟು ನಾ ಕುಟು ಪಾಣೀ ಗೆಲಾ
ಜೋಜೋ ಬಾಳಾ
ರಾಯ್ ಬಾಳಾ ಗೆ ಜೋಜೋ ಬಾಳಾ||
(ಅಳಬೇಡ ಕಂದ ಅಳಬೇಡ ಅಮ್ಮ ನೀರಿಗೆ ಹೋಗಿದ್ದಾಳೆ ರಾಯ ಕಂದನೆ ಜೋಜೋ ಕಂದನೆ ಜೋಜೋ)

ಹಾಡೊಂದರಿಂದಲೆ ಸಂಪೂರ್ಣ ತೃಪ್ತಿ ಸಿಗಲಾರದು. ದೇಹ ಮನಸ್ಸುಗಳೆರಡಕ್ಕೂ ಉಲ್ಲಾಸ ಹರ್ಷ ಉಂಟಾಗಬೇಕು. ಹಾಡಿನೊಂದಿಗೆ ಕುಣಿತ ಇಲ್ಲಿಯೇ ಪ್ರಾರಂಭವಾಗುವುದು. ಹದಿಹರೆಯದ, ಮಧ್ಯವಯಸ್ಕ, ವಯಸ್ಸಾದ ಮಹಿಳೆಯರೂ ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಕೂಡಿ ಎದುರು ಬದುರಾದ ಎರಡು ತಂಡಗಳಾಗಿ ಸಜ್ಜುಗೊಳ್ಳುತ್ತಾರೆ. ಸಾಲಾಗಿ ನಿಂತ ಎರಡೂ ತಂಡದವರು ತಮ್ಮ ಎರಡೂ ಕೈಗಳನ್ನು ಪಕ್ಕದಲ್ಲಿದ್ದವರ ಭುಜಗಳಿಗೆ ಸೇರಿಸಿಕೊಂಡು ಸರಪಳಿ ತಂಡಗಳಾಗುತ್ತಾರೆ. ಅವುಗಳಲ್ಲಿ ಒಂದು ಇನ್ನೊಂದು ತಂಡಕ್ಕೆ ಎದುರಾಗಿ ಹತ್ತಿರ ಸಾಗುತ್ತಾ ಸವಾಲು ಹಾಕುವ ಧಾಟಿಯ ಹಾಡು ಹೇಳುತ್ತಾ, ಹಾಡು ಮುಂದುವರಿಸುತ್ತಲೆ ಹಾಗೆಯೇ ಹಿಂದಕ್ಕೆ ಸಾಗುತ್ತಾ ಸ್ವಸ್ಥಾನ ಸೇರಿದರೆ, ಇನ್ನೊಂದು ತಂಡ ಅದೇ ಧಾಟಿಯಲ್ಲಿ ಸವಾಲಿಗೆ ಸವಾಲೆನಿಸುವಂತೆ ಹಾಡುತ್ತಾ ಎದುರು ತಂಡಕ್ಕೆ ಎದುರಾಗಿ ಸಾಗಿ ಹತ್ತಿರಾಗುತ್ತಾ ಹಾಡು ಮುಂದುವರಿಸುತ್ತಲೆ ಹಿಂದಕ್ಕೆ ಬಂದು ಸ್ವಸ್ಥಾನ ಸೇರುತ್ತದೆ.
ಈ ಸವಾಲು ಪಾಟೀಸವಾಲು ದೀರ್ಘ ಸಮಯದ ವರೆಗೂ ಮುಂದುವರಿಯುತ್ತಲೆ ಇರುತ್ತದೆ. ಈ ತರದ ಪ್ರಕ್ರಿಯೆಗೆ ಹೆಂಗಸರು ದಲೋರು ಹಾಕುವುದು ಎನ್ನುವರು. ಈ ದಲೋರು ಹಾಡು ಹೀಗಿರುತ್ತದೆ:

ಅಂಬೋ ಫಳಾರೊ, ಕಾsಯ್ ಕsರೊ

ಆಯ್ಲೆ ಸೋಮಾರ ಬಾಯೆ ದಲೋರೊ| – ಒಂದು ತಂಡ ಸಿಲ್ ದಲೋರ್ಯೊ ಮೊಗ್ಗೆ ಪಳಾರು
ದಾಂಬ್ಲೆ ದಲೋರು ಮೊಗ್ಗೆ ಪಳಾರು| – ಎದುರು ತಂಡ
(ಮಾವಿನ ಫಳಾರ, ಏನು ಮಾಡಲಿ

ಅಯ್ಲೆ ಸೋಮಾರದ ಬಾಯಿ ದಲೋರೊ| -ಒಂದು ತಂಡ ಸಿಲ್ ದಲೋರ್ಯೊ ಸೌತೆಕಾಯಿ ಫಲಾರ
ದಾಂಬ್ಲೆ ದಲೋರ್ ಸೌತೆಕಾಯಿ ಫಲಾರ |) -ಇನ್ನೊಂದು ತಂಡ

ಇನ್ನೊಮ್ಮೆ ಭಾಷಾ ಸಂಸ್ಕೃತಿಯ ಬಂಧದ ಬಗ್ಗೆ ಹೇಳಬೇಕಾಗುತ್ತದೆ. ಕನ್ನಡದ ಭಾಷಾಂತರಕ್ಕೆ ದಲೋರೊ, ಅಂಬೊ, ಸಿಲ್ ದಲೋರ್ಯೋ ಸೇರ್ಪಡೆಗೆ ಒಗ್ಗುವುದಿಲ್ಲ. ದಲೋರೊ ಎನ್ನುವುದು ಈಗಿನ ಕೊಂಕಣಿ ಭಾಷೆಗೂ ಒಗ್ಗುವುದಿಲ್ಲ; ಈ ಸಮುದಾಯದ ಪ್ರಾಚೀನ ಸಾಂಸ್ಕೃತಿಕ ವಾತಾವರಣದ ತಿಳಿವು ಅದಕ್ಕೆ ಅಗತ್ಯವಾಗುತ್ತದೆ. ಆದರೆ ಈ ಹಾಡು ಅವರ ಆಹಾರ ಸಂಸ್ಕೃತಿಯನ್ನು ನಮಗೆ ಪರಿಚಯಿಸುವಲ್ಲಿ ಸಹಕರಿಸುತ್ತದೆ. ದಿನಾಲೂ ಮೀನಿನ ಪದಾರ್ಥಗಳನ್ನೇ ತಿನ್ನುತ್ತಾ ಇರುವ ಈ ಜನರ ಮಧ್ಯೆ ವಾರದಲ್ಲಿ ಸೋಮವಾರ ದಿನ ತರಕಾರಿ ತಿನ್ನುವ ವೃತ ಇಟ್ಟುಕೊಂಡ ಕೆಲವು ಮಹಿಳೆಯರು ಈ ರೀತಿಯಾಗಿ ಗೇಲಿಗೆ ಒಳಗಾಗುತ್ತಿರಬಹುದು. ಎಲ್ಲಾ ತರಕಾರಿ ಬಿಟ್ಟು ಮಾವಿನ ಹಣ್ಣು ಯಾಕೆ ಈ ಹಾಡಿನಲ್ಲಿ ಬಂದಿದೆ ಎನ್ನುವುದನ್ನು ಹುಡುಕಲು ಇನ್ನೊಮ್ಮೆ ಹೇಳಬೇಕೆಂದರೆ ಆ ಪ್ರಾಚೀನ ಕಾಲಕ್ಕೆ ಹೋಗಬೇಕು. ಅದನ್ನು ಹಾಗೆಯೇ ಸಂರಕ್ಷಿಸಿ ಈ ಜನರು ಕಂಠಸಿರಿಯಲ್ಲಿರಿಸಿ ಮುಂದಕ್ಕೊಯ್ಯುತ್ತಿರುವುದು ಆಶ್ಚರ್ಯಕರವಾದುದು. ಅವರು ಎಗ್ಗಿಲ್ಲದೆ ಹಾಡುವಾಗ ಈ ಅಪರಿಚಿತ ಪದಗಳು ಅತಿ ಸಹಜವೆನ್ನುವಂತೆ ಭಾಸವಾಗುತ್ತದೆ ಮತ್ತು ದಲೋರು ಹಾಡಿನ ಧ್ವನಿಮಾ ಅವರನ್ನು ದೀರ್ಘಕಾಲದ ವರೆಗೂ ಹಾಡುವಂತೆ ಪ್ರೇರೇಪಿಸುವುದಂತೂ ನಿಜ. ಈ ಹಾಡಿನ ಪದಗಳೂ ಮರಾಠಿ ಪದಗಳೇ ಆಗಿವೆ.

ಲೇಖಕರು: ಶ್ರೀಶಂಖಾ
shrishankha@gmail.com

ಲೇಖನ ಮುಂದುವರೆಯುವುದು…..

One thought on “ಕೊಂಕಣಿ ಖಾರ್ವಿ ಜನರು ಮತ್ತು ಹೋಳಿ ಜಾನಪದ ಸಂಪ್ರದಾಯ

  1. ಪರಿಪಕ್ವ ಶ್ರೇಷ್ಠ ಲೇಖನ.ಕೊಂಕಣಿ ಖಾರ್ವಿ ಸಮಾಜದ ಸಾಂಸ್ಕೃತಿಕ ಹೋಳಿಹಬ್ಬದ ಅದ್ಬುತ ವಿಶ್ಲೇಷಣೆ.ಪ್ರತಿಯೊಂದು ಪದಪದಗಳು ಸವಿ ಸೊಬಗಿನ ರಸಾಯನ.ಕೊಂಕಣಿ ಖಾರ್ವಿ ಸಮಾಜದ ಜಾನಪದ ಲೋಕದ ಹೃದಯಸ್ಪರ್ಶಿ ಅನಾವರಣ.ಮೈನವಿರೇಳಿಸುವ ತೌಲನಿಕ ಅಧ್ಯಯನದ ಅನಾವರಣ🙏🙏🙏🙏🙏👍👌🙏🙏🙏🙏🙏🙏🙏

Leave a Reply

Your email address will not be published. Required fields are marked *