ಸಮಸ್ತ ಸಮಾಜ ಬಾಂಧವರಿಗೆ ಹೋಳಿ ಹಬ್ಬದ ಶುಭಾಶಯಗಳು

ಕೊಂಕಣಿ ಖಾರ್ವಿಯವರಲ್ಲಿ ಹೋಳಿ ಹಬ್ಬ ವರ್ಷದ ವಿಶೇಷ “ಆರಾಧನಾ ಹಬ್ಬ”. ತಮ್ಮಲ್ಲಿರುವ ಕೆಟ್ಟ ಗುಣಗಳು ಸುಟ್ಟು ಹೋಗಬೇಕು ಒಳ್ಳೆ ಗುಣಗಳು ನಮ್ಮದಾಗಬೇಕು ಎನ್ನುವ ಸಂಕೇತವಾಗಿ ಹೋಳಿ ಸುಡುವ ಪ್ರಧಾನ ಆಚರಣೆಯೇ ಹೋಳಿ ಹಬ್ಬ. ಮನ್ಮಥನು ಈಶ್ವರನ ತಪಸ್ಸನ್ನು ಕೆಡಿಸಿದಾಗ ಸಿಟ್ಟುಗೊಂಡ ಈಶ್ವರ ತನ್ನ ಮೂರನೇ ಕಣ್ಣನ್ನು ತೆರೆದು ಮನ್ಮಥನನ್ನು ಸುಟ್ಟು ಹಾಕುತ್ತಾನೆ. ಅದೇ ಹೋಳಿ ಸುಡುವಿಕೆ ಅಂದರೆ ನಮ್ಮಲ್ಲಿರುವ ಕೆಟ್ಟ ಕಾಮನೆಗಳನ್ನು ಸುಡುವುದು. ಹೋಳಿ ಸುಟ್ಟ ಬಳಿಕ ಕೋಪದಿಂದಿರುವ ಶಿವನನ್ನು ಶಾಂತಗೊಳಿಸಲು ನೃತ್ಯ, ಮನರಂಜನೆ, ಹಾಡು, ಎಂಬುವುದು ಇನ್ನೊಂದು ಪೌರಾಣಿಕ ಹಿನ್ನೆಲೆ.ಎಲ್ಲರಿಗೂ ಕುಲದೇವರು ಸಂತೋಷ ನೆಮ್ಮದಿಯನ್ನು ನೀಡಬೇಕು ತಮ್ಮ ಆರಾಧ್ಯ ದೇವತೆ ಮಹಾಕಾಳಿ ಅನುಗ್ರಹಿಸಬೇಕು ಎನ್ನುವುದು ಈ ಹಬ್ಬದ ಆಶಯ.

ಸಾಮೂಹಿಕವಾಗಿ ಹೋಳಿ ಸುಟ್ಟಾದ ಬಳಿಕ ಹೋಳಿ ಮನೆಯವರ ಜವಾಬ್ದಾರಿಯಲ್ಲಿ ಈಶ್ವರನ ಸನ್ನಿಧಿಯಲ್ಲಿ ಬೆಳಗ್ಗಿನ ಜಾವದಲ್ಲಿ ಅಡಿಕೆ ಮರಕ್ಕೆ ಶೃಂಗರಿಸಿ ಹೋಳಿ ಸುಡುತ್ತಾರೆ. ಕೊನೇ ದಿನ ಮಹಾಕಾಳಿಗೆ ಏಳು ಬಣ್ಣಗಳನ್ನಿಟ್ಟು ಪೂಜಿಸಿ ತಮ್ಮ ತಮ್ಮಲ್ಲಿ ಬಣ್ಣ ಹಚ್ಚಿ ಕುಣಿಯತ್ತಾರೆ. ಹಬ್ಬದ ಮುಕ್ತಾಯದಲ್ಲಿ ಓಕುಳಿ ನೀರನ್ನು ದೇವರ ಸನ್ನಿಧಿಯಲ್ಲಿ ತಯಾರಿಸಿ ಪ್ರತಿಯೊಬ್ಬರ ತಲೆ ಮೇಲೆ ಎರೆಚಿಕೊಂಡು ಓಕುಳಿ ಸ್ನಾನ ಮಾಡಿ ಪರಿಶುದ್ಧರಾಗುತ್ತಾರೆ.ಇದರಿಂದ ವರ್ಷದಲ್ಲಿ ಯಾವುದೇ ಪಾಪ ಕರ್ಮಗಳು ಮಾಡಿದ್ದರೆ ಎಲ್ಲವೂ ದೂರವಾಗುತ್ತದೆ ಎಂಬ ನಂಬಿಕೆ.

ಈ “ಹೋಳಿ ಸುಡುವ ಆಚರಣೆ”ಯ ಹಿಂದಿನ ದಿನಗಳು ಮತ್ತು ಕೊನೇ ದಿನದವರೆಗೆ ಹಲವು ಸಂಪ್ರದಾಯಗಳು ಸರಪಳಿಯಂತೆ ಬೆಸೆದುಕೊಂಡಿವೆ. ವರ್ಷದ ಹೋಳಿ ಹಬ್ಬವನ್ನು “ಹೋಳಿ ಮನೆ”ಯವರು ವಹಿಸಿಕೊಂಡಿರುತ್ತಾರೆ. ಕುಂದಾಪುರದ ಮಹಾಕಾಳಿ ದೇವಿಯ ಸನ್ನಿಧಿಯಲ್ಲಿ ಹಿಂದಿನ ಹೋಳಿ ಸಂದರ್ಭದಲ್ಲೇ ಈ ಜವಾಬ್ದಾರಿ ಅವರವರ ಹರಕೆ, ಇಷ್ಟಾರ್ಥ ಸಿದ್ಧಿಗಾಗಿ ನಿರ್ಣಯವಾಗಿರುತ್ತದೆ. ಅವರವರ ಮನೆಯಲ್ಲಿ ಈ ಹಬ್ಬ ಆಚರಿಸುತ್ತಿದ್ದರೂ “ಹೋಳಿ ಮನೆಯಲ್ಲಿ” ಇಡೀ ಜನಸಮುದಾಯ ಪಾಲ್ಗೊಳ್ಳುತ್ತದೆ. ಮಾತ್ರವಲ್ಲ ಹೋಳಿ ಹಬ್ಬ ಆರಂಬಿಸುವಿಕೆ, ಹೋಳಿ ಸುಡುವಿಕೆ, ಮನರಂಜನೆ, ಎಲ್ಲರಿಗೂ ಆತಿಥ್ಯ ನೀಡುವಿಕೆ ಇವೆಲ್ಲದರ ಪ್ರಧಾನ ಜವಾಬ್ದಾರಿ ಇವರೇ ನಿಭಾಯಿಸುತ್ತಾರೆ. ಇದರಿಂದ ಮನೆಯಲ್ಲಿ ಸಂತಾನ, ಮದುವೆ, ಆರೋಗ್ಯ ಇತ್ಯಾದಿ ಮಂಗಳ ಕಾರ್ಯಗಳು ಆಗುತ್ತವೆ ಎಂಬ ನಂಬಿಕೆ ಇದೆ. ವರ್ಷಂಪ್ರತಿ ಹೋಳಿ ಮನೆಯ ಮುಖ್ಯಸ್ಥರು, ದೇವಾಲಯದ ಮೂರು ಮುಕ್ತೇಶ್ವರರು ಮತ್ತು ಅಧ್ಯಕ್ಷರ ನಾಯಕತ್ವದಲ್ಲಿ ಈ ಆಚರಣೆ ನೆರವೇರುತ್ತದೆ. ಇಲ್ಲಿ “ವರೈತುಲೆಗಾರ”ರ, “ಮಾಂಡ್ ಮನೆಯವರ” ಪಾತ್ರವೂ ಅತೀ ವಿಶೇಷ. ಇವರು ಈ ಹಬ್ಬದ ಸಂದರ್ಭದಲ್ಲಿ ಹಾಡು ಹೇಳುತ್ತಾ, ಜಾಗಟೆ ಮತ್ತು ಗುಮ್ಟೆ ಬಾರಿಸುತ್ತಾ, ಸಂಗಡಿಗರೊಂದಿಗೆ ತಾಳದೊಂದಿಗೆ, ಕೋಲಾಟವಾಡುತ್ತಾ ಜನಸಮುದಾಯದ ಎಲ್ಲಾ ಮನೆಗಳಿಗೂ ಹೋಗಿ ದೇವರ ಹಾಡು ಹೇಳಿ ಭಕ್ತಿಪೂರ್ವಕವಾಗಿ ಮನರಂಜಿಸಿ ಆಶೀರ್ವದಿಸಿ ಬರುವುದೇ ಈ ದಿನಗಳಲ್ಲಿ ಇವರ ಕಾಯಕ.

ಗಡ್ಡೆ ಬೀಳುವ ಆಚರಣೆ :.
ಹೋಳಿ ಹಬ್ಬದ ಆಚರಣೆಗಳಲ್ಲಿ ೩ ದಿನವೂ ಬೆಳದಿಂಗಳ ರಾತ್ರಿಯಲ್ಲಿ “ಗಡ್ಡೆ ಬೀಳುವ ಆಚರಣೆ” ಹೆಚ್ಚಿನ ಮಹತ್ವ ಪಡೆಯುತ್ತದೆ. “ತಮ್ಮ ಗ್ರಾಮ ದೇವತೆ, ಕುಲದೇವತೆಗೆ ವಂದಿಸಿ, ಊರಿನ ಪ್ರಮುಖ ದೇಗುಲಗಳ ಸನ್ನಿಧಿಯಲ್ಲಿ, ಕೊನೇಗೆ ಹೋಳಿ ಸುಡುವ ಗದ್ದೆಯಲ್ಲಿ ಈ ಆಚರಣೆ ನಡೆಯುತ್ತದೆ. ಸ್ಮಶಾನವಾಸಿಯಾದ ಈಶ್ವರನ ಪಾತಾಳ ಲೋಕದ ಗಣ “ಗಡ್ಡೆ”ಯನ್ನು ಆಹ್ವಾನಿಸಿ, ಅವರಿಂದ ಆಶೀರ್ವಾದ ಪಡೆದು, ಅವರ ಮೂಲಕ ಸ್ಮಶಾನದಲ್ಲಿರುವ “ಮೂಳೆಯನ್ನು” ತರಿಸಿ ಸಮಾಜದ ಹಿರಿಯರಿಗೆ ತೋರಿಸುವರು. ಬಳಿಕ ಹೋಳಿ ಸುಡುವ ಪಕ್ಕದಲ್ಲಿ ಅದನ್ನು ಹುಗಿದು ಗಡ್ಡೆ ಬರುವ ವ್ಯಕ್ತಿಗಳ ಮೂಲಕವೇ “ತೆಂಗಿನ ಗರಿಯ ಸೂಡಿ” ಮೂಲಕ ಹೋಳಿ ಸುಡುವರು. ಇದಂತೂ ನಡುರಾತ್ರಿಯಲ್ಲಿ ನಡೆಯುವ ಈ ಆಚರಣೆ ನೋಡುಗರಲ್ಲಿ ಭಯ-ಭಕ್ತಿ ಜೊತೆಗೆ ಆಶ್ಚರ್ಯ ಹುಟ್ಟಿಸುತ್ತದೆ. ವಿಶೇಷವೆಂದರೆ ಆಚರಣೆಯ ಪ್ರತೀ ಹಂತದಲ್ಲೂ ವಿಶೇಷ ಪಠ್ಯವಿರುವುದು ಕಂಡುಬರುತ್ತದೆ. ಇವೆಲ್ಲವೂ ಹಂತಹಂತವಾಗಿ ಒಂದೊಂದು ದಿನ ನಡೆಯುವ ಕ್ರಿಯೆಯಾಗಿದೆ.


www.kharvionline.com

Leave a Reply

Your email address will not be published. Required fields are marked *