ಕೊಂಕಣ ಸಾಮ್ರಾಜ್ಯದ ಗೋವಾದಿಂದ ಹಿಡಿದು ದಕ್ಷಿಣದ ಉಳ್ಳಾಲದ ತನಕ ಕರಾವಳಿ ಪ್ರದೇಶದಲ್ಲಿ ಹರಡಿಕೊಂಡಿರುವ ಕೊಂಕಣಿ ಖಾರ್ವಿ ಸಮಾಜ ತಮ್ಮ ಸಂಸ್ಕೃತಿಯಲ್ಲಿ ವೈಭವಪೂರ್ಣವಾಗಿ ಆಚರಿಸುವ ಪವಿತ್ರ ಧಾರ್ಮಿಕ ಸೊಗಡಿನ ಜಾನಪದ ನೆಲೆಗಟ್ಟಿನ ಹಬ್ಬವೇ ಹೋಳಿಹಬ್ಬ. ಮೇಲ್ಕಾಣಿಸಿದ ವಿವಿಧ ಪ್ರಾಂತ್ಯಗಳಲ್ಲಿ ಹೋಳಿಹಬ್ಬ ಭಿನ್ನ ಭಿನ್ನ ಸ್ವರೂಪದಲ್ಲಿ ಆಚರಿಸುತ್ತಿದ್ದರೂ, ಅದರ ಮೂಲ ನೆಲೆಗಟ್ಟು ಮಾತ್ರ ವಿವಿಧತೆಯಲ್ಲಿ ಏಕತೆಯನ್ನು ಅನಾವರಣಗೊಳಿಸುತ್ತದೆ.
ಪ್ರಸ್ತುತ ನಾನಿಲ್ಲಿ ಭಟ್ಕಳ ಕೊಂಕಣಿ ಖಾರ್ವಿ ಸಮಾಜ ಆಚರಿಸುವ ಹೋಳಿಹಬ್ಬದ ವೈಶಿಷ್ಟ್ಯತೆ,ಜನಪದ ಸಂಸ್ಕೃತಿ ಮತ್ತು ಪವಿತ್ರ ಧಾರ್ಮಿಕ ಸಂಭ್ರಮವನ್ನು ಪಡಿಮೂಡಿಸುತ್ತಿದ್ದೇನೆ. ಭಟ್ಕಳ ಕೊಂಕಣಿ ಖಾರ್ವಿ ಸಮಾಜ ಭಾಂಧವರು ಮೂರು ದಿನಗಳ ಕಾಲ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಪ್ರಥಮ ದಿನ ಸಮುದ್ರದ ಅಂಚಿನ ನಿರ್ದಿಷ್ಟ ಪ್ರದೇಶದಲ್ಲಿ ಸಮಾಜದ ಮುಖ್ಯಸ್ಥರ ಸಮ್ಮುಖದಲ್ಲಿ ಮಣ್ಣಿನ ತುಳಸಿಯ ಪೃತಿಕೃತಿಯನ್ನು ನಿರ್ಮಿಸುತ್ತಾರೆ. ಈ ತುಳಸಿಯ ಪೃತಿಕೃತಿಯಲ್ಲಿ ಶ್ರೀ ತುಳಸಿ ಮತ್ತು ಶ್ರೀಹರಿಯನ್ನು ಭಕ್ತಿಪೂರ್ವಕವಾಗಿ ಆಹ್ವಾನಿಸಿ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ.ತುಳಸಿಯ ಸುತ್ತಲೂ ಗುಮ್ಟಿ ವಾದನ ಕಲಾವಿದರು ಮತ್ತು ಸರ್ವಸಮಾಜ ಭಾಂಧವರು ಗೋವಿಂದ ನಾಮಸ್ಮರಣೆ ಮೊಳಗಿಸುತ್ತಾ ಪ್ರದಕ್ಷಿಣೆ ಬರುತ್ತಾರೆ.ಶ್ರೀ ರಾಮ ಜಯಘೋಷ ಮತ್ತು ಅಂಜನೇಯನ ಜಯಘೋಷವೂ ಮೊಳಗುತ್ತದೆ.ತುಳಸಿಗೆ ಸಂಪ್ರದಾಯಬದ್ದವಾಗಿ ಭಕ್ತಿಯಿಂದ ಪೂಜೆ ಸಲ್ಲಿಸಿ ಕಾಯಿ ಒಡೆದು ಹೋಳಿಹಬ್ಬ ಕಾರ್ಯಕ್ರಮಗಳು ಸಾಂಗವಾಗಿ ಜರುಗುವಂತೆ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ.ಹೋಳಿಹಬ್ಬದ ಪ್ರಥಮ ದಿನ ಶ್ರೀ ತುಳಸಿ ಮತ್ತು ಶ್ರೀ ಹರಿಯನ್ನು ಪೂಜಿಸಿ ಆರಾಧಿಸುವ ಈ ಪುಣ್ಯಪ್ರದವಾದ ಧಾರ್ಮಿಕ ಕಾರ್ಯಕ್ರಮವನ್ನು ಕಾಯಿ ಇಡುವುದು ಎಂದು ಕರೆಯಲಾಗುತ್ತದೆ.ತದ ನಂತರ ಮೂರು ದಿನಗಳ ಹೋಳಿಹಬ್ಬಕ್ಕೆ ಅಧಿಕೃತವಾಗಿ ಚಾಲನೆ ದೊರಕುತ್ತದೆ.
ಎರಡನೇ ದಿನದ ಕಾರ್ಯಕ್ರಮವಾಗಿ ಹೋಲಿಕಾ ದಹನ್ ಆಚರಿಸಲಾಗುತ್ತದೆ.ಹಿರಣ್ಯಕಶಿಪು ರಾಕ್ಷಸನ ಸಹೋದರಿ ಹೋಲಿಕಾ ತನ್ನ ಅಣ್ಣನ ಅಣತಿಯಂತೆ ತನ್ನ ಸಹೋದರಳಿಯ ಪ್ರಹ್ಲಾದನನ್ನು ತನ್ನ ಜ್ವಾಲಾಗ್ನಿಯಲ್ಲಿ ಸುಡಲು ಪ್ರಯತ್ನಿಸಿ ಕೊನೆಗೆ ತಾನೇ ಸುಟ್ಟು ಭಸ್ಮವಾಗುತ್ತಾಳೆ.ಶ್ರೀ ಹರಿಯ ಕೃಪೆಯಿಂದ ಭಕ್ತ ಪ್ರಹ್ಲಾದನಿಗೆ ಯಾವ ರೀತಿಯ ಹಾನಿಯೂ ಸಂಭವಿಸುವುದಿಲ್ಲ. ಪ್ರಹ್ಲಾದನ ಕೋರಿಕೆಯಂತೆ ಶ್ರೀ ಹರಿ ಹೋಲಿಕಾಳಿಗೆ ಮೋಕ್ಷ ಕರುಣಿಸುತ್ತಾನೆ ಮತ್ತು ಹೋಲಿಕಾಳಿಗೆ ಹೋಳಿಹಬ್ಬದ ದಿನದಂದು ವಿಶೇಷ ಪೂಜೆ ಸಲ್ಲುವ ವರ ನೀಡುತ್ತಾನೆ. ಪುರಾಣದ ಈ ಕಥೆ ಹೋಲಿಕಾ ದಹನ್ ರೂಪದಲ್ಲಿ ಇಲ್ಲಿ ಪ್ರಸ್ತುತವಾಗುತ್ತಿದ್ದು ಈ ಆಚರಣೆ ಪೃಕೃತಿಯ ಆರಾಧನೆಯೊಂದಿಗೆ ಸಾಕ್ಷಾತ್ಕಾರಗೊಳ್ಳುತ್ತದೆ. ಹೋಲಿಕಾ ಪೂಜೆ ಮತ್ತು ದಹನ ಕಾರ್ಯಕ್ರಮಕ್ಕಾಗಿ ಕೊಂಕಣಿ ಖಾರ್ವಿ ಸಮಾಜ ಭಾಂಧವರು ನಿರ್ದಿಷ್ಟ ಮನೆಯೊಂದರಲ್ಲಿ ಅಡಿಕೆ ಮರವನ್ನು ಆಚರಣೆಗಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.ಸಿಂಗಾರ ಹೂವಿನ ಕೊನೆಯಿಂದ ಫಲಭರಿತವಾಗಿರುವ ಸದೃಢ ಅಡಿಕೆ ಮರ ಇಲ್ಲಿ ಪ್ರಾಧ್ಯಾನ್ಯತೆ ಪಡೆಯುತ್ತದೆ.
ಹೋಳಿ ಹರಕೆ ಹೇಳಿಕೊಂಡ ಮನೆಯವರು ಈ ಅಡಿಕೆ ಮರಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ.ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷರು ಅಡಿಕೆಮರಕ್ಕೆ ಪೂಜೆ ಸಲ್ಲಿಸುವ ಕೈಂಕರ್ಯ ಕೈಗೊಳ್ಳುತ್ತಾರೆ.ಈ ಸಂದರ್ಭದಲ್ಲಿ ಅಡಿಕೆ ಮರವನ್ನು ಮುತೈದೆಯಂತೆ ಅರಶಿನ ಕುಂಕುಮದಿಂದ ಶೋಭಿತಗೊಳಿಸಿ ಸಿಂಗಾರ ಹೂವು ಮತ್ತು ಇತರ ಹೂವುಗಳಿಂದ ಅಲಂಕೃತಗೊಳಿಸುತ್ತಾರೆ.ಅಡಿಕೆ ಮರಕ್ಕೆ ಸಿಪ್ಪೆ ಸುಲಿಯದ ತೆಂಗಿನಕಾಯಿಯನ್ನು ಕೂಡಾ ಕಟ್ಟುವ ಪದ್ಧತಿ ಇದೆ. ಸಂಪ್ರದಾಯ ಬದ್ಧವಾಗಿ ಶ್ರದ್ಧೆ ಭಕ್ತಿಯಿಂದ ಈ ಅಡಿಕೆ ಮರವನ್ನು ಪೂಜೆ ಮಾಡಿ ಅಡಿಕೆ ಮರ ನೀಡಿದ ಮನೆಯವರಿಗೆ ಗೌರವಪೂರ್ವಕ ಸಂಭಾವನೆಯನ್ನು ನೀಡಲಾಗುತ್ತದೆ.
ಕೊಂಕಣಿ ಜನಪದ ಹಾಡುಗಳನ್ನು ಹಾಡುತ್ತಾ ಅಡಿಕೆ ಮರಕ್ಕೆ ಸುತ್ತು ಬಂದ ಬಳಿಕ ಮರವನ್ನು ಕಡಿಯಲು ಆರಂಭಿಸುತ್ತಾರೆ.ಅಡಿಕೆ ಮರವನ್ನು ಬೆಳೆಸಿದ ಮನೆಯವರು ಅಡಿಕೆ ಮರದ ಬುಡಕ್ಕೆ ಪ್ರಾರಂಭದ ಕಚ್ಚನ್ನು ಹಾಕಿದ ಬಳಿಕ ಉಳಿದವರು ಕಡಿಯಲು ಆರಂಭಿಸುತ್ತಾರೆ.
ಹೀಗೆ ಅಡಿಕೆ ಮರವನ್ನು ಕಡಿದು ಇಲ್ಲಿಂದ ಕಡಲತೀರದಲ್ಲಿ ಮುಂದಿನ ಆಚರಣೆಗಾಗಿ ತೆಗೆದುಕೊಂಡು ಹೋಗಲಾಗುತ್ತದೆ.ಈ ಸಂದರ್ಭದಲ್ಲಿ ಜನ ನೂರಾರು ಸಂಖ್ಯೆಯಲ್ಲಿ ನೆರೆದು ಕಡಿದ ಅಡಿಕೆ ಮರವನ್ನು ಶ್ರೀ ರಾಮ ಮತ್ತು ಭಜರಂಗ ಬಲಿ ಅಂಜನೇಯನ ಜಯಘೋಷದೊಂದಿಗೆ ಕೊಂಡೊಯ್ಯುತ್ತಾರೆ.
ಆಶ್ಚರ್ಯವೆಂಬಂತೆ ಬರುಬರುತ್ತಾ ಕಡಿದ ಈ ಅಡಿಕೆಮರ ಹೊತ್ತುಕೊಂಡ ಜನರನ್ನು ಅತ್ತಿಂದಿತ್ತ ಆಟವಾಡಿಸುತ್ತಾ ಮತ್ತಷ್ಟು ಭಾರವಾಗುತ್ತಾ ಹೋಗುತ್ತದೆ. ಈ ಪ್ರಕ್ರಿಯೆಗಳು ಹೆಚ್ಚಾಗುತ್ತಿದ್ದಂತೆ ಶ್ರೀರಾಮನ ಮತ್ತು ಅಂಜನೇಯನ ಜಯಘೋಷಗಳು ಮಾರ್ಧನಿಸುತ್ತದೆ. ಮುಂದಿನ ಹಂತದಲ್ಲಿ ಈ ಕಾರ್ಯಕ್ರಮ ಮತ್ತಷ್ಟು ಬಿರುಸು ಪಡೆಯುತ್ತದೆ.ಕಡಲತಡಿಯ ಮರಳಿನ ರಾಶಿಯಲ್ಲಿ ಹೊಂಡ ತೋಡಿ ಅಡಿಕೆ ಮರವನ್ನು ಬಲುದೂರದಿಂದ ಅತಿ ವೇಗವಾಗಿ ಹೊತ್ತು ತಂದು ನೆಡಲಾಗುತ್ತದೆ.ಈ ದೃಶ್ಯಗಳು ನಿಜಕ್ಕೂ ರೋಮಾಂಚಕಾರಿಯಾಗಿದ್ದು ಕಾಲು ಕುಸಿಯುವ ಕಡಲತಡಿಯ ಉಸುಕಿನ ರಾಶಿಯಲ್ಲಿ ಅತ್ಯಂತ ವೇಗವಾಗಿ ಓಟ ಕಿತ್ತು ಅಡಿಕೆ ಮರವನ್ನು ಹೊಂಡದೊಳಗೆ ಇಳಿಸುವ ಪರಿ ಅಚ್ಚರಿ ಮೂಡಿಸುತ್ತದೆ.ಇದೆಲ್ಲವೂ ದೇವರ ಅನುಗ್ರಹದಿಂದಲೇ ನಡೆಯುತ್ತದೆ ಎಂಬ ದೃಡವಾದ ನಂಬಿಕೆ ಜನರ ಅಭಿಮತ.
ಇಲ್ಲಿ ಮತ್ತೆ ನೆಡಲಾಗಿರುವ ಅಡಿಕೆ ಮರಕ್ಕೆ ಪೂಜೆ ಪುರಸ್ಕಾರಗಳು ನಡೆಯುತ್ತದೆ.ಮೊದಲೇ ಸಿದ್ಧಪಡಿಸಿ ಇಡಲಾದ ತೆಂಗಿನ ಮಡಲನ್ನು ಸುತ್ತಲೂ ಕಟ್ಟಿ ಅಂತಿಮವಾಗಿ ಅಗ್ನಿಸ್ಪರ್ಶ ಮಾಡುತ್ತಾರೆ.
ತಾಮಸ ಗುಣಗಳು ಸುಟ್ಟು ಭಸ್ಮವಾಗಿ ಎಲ್ಲರಲ್ಲೂ ಒಳ್ಳೆಯ ಗುಣಗಳು ಮೂಡಿಬರಲಿ ಎಂಬ ಉದ್ದಾತ ಸಂದೇಶದ ಈ ಹೋಲಿಕಾ ದಹನ ಕಾರ್ಯಕ್ರಮ ಧನ್ಯತಾ ಭಾವದಿಂದ ಮೂಡಿ ಬರುತ್ತದೆ.
ಇಲ್ಲಿ ಗಮನಿಸಬೇಕಾದ ಗಮನಾರ್ಹ ಸಂಗತಿಯೆಂದರೆ ಈ ಹೋಲಿಕಾ ದಹನ ಕಾರ್ಯಕ್ರಮಕ್ಕಾಗಿ ಅಡಿಕೆ ಮರವನ್ನು ಕಡಿಯಲು ಶುಭಮೂಹೂರ್ತ ನಿಶ್ಚಯಿಸಲಾಗುತ್ತದೆ ಮತ್ತು ದೈವಸಂಪ್ರೀತಿಯ ಸಿಂಗಾರ ಹೂವಿನ ಮರವಾದ ಅಡಿಕೆ ಮರದ ಪೂಜೆ ಮಾಡುವ ಸಂದರ್ಭದಲ್ಲಿ ಶುಚಿರ್ಭೂತರಾಗಿರಬೇಕು ಎಂಬ ಅಚಲ ನಂಬಿಕೆ ಇದೆ.
ಭಟ್ಕಳ ಕೊಂಕಣಿ ಖಾರ್ವಿ ಸಮಾಜ ಭಾಂಧವರ ಹೋಳಿಹಬ್ಬದ ಆಚರಣೆಯು ವಿಶಿಷ್ಟ ಸ್ವರೂಪದಾಗಿದ್ದು,ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಜನ ಹೋಳಿ ಹರಕೆ ಹೊತ್ತುಕೊಳ್ಳುವುದು ವಾಡಿಕೆ.ಇದು ತಲೆತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿರುತ್ತದೆ.ಹೋಳಿ ಹರಕೆ ಹೇಳಿಕೊಳ್ಳುವವವರು ವಿಧವಿಧವಾದ ವಿಷಯದಲ್ಲಿ ಹರಕೆ ಹೇಳಿಕೊಂಡರೂ ಇಲ್ಲಿ ಮಕ್ಕಳಿಲ್ಲದವರು ಸಂತಾನಫಲಾಪೇಕ್ಷೆಗಾಗಿ ಹರಕೆ ಹೇಳಿಕೊಳ್ಳುವುದು ಪ್ರಧಾನವಾಗಿ ಗೋಚರವಾಗುತ್ತದೆ.
ಸೋಜಿಗದ ಸಂಗತಿಯೆಂದರೆ ಅಡಿಕೆ ಮರದ ಸಿಂಗಾರ ಹೂವು ಫಲವಂತಿಕೆಯ ಲಕ್ಷಣವಾಗಿದ್ದು,ಸಂತಾನಾಭಿವೃದ್ದಿಯನ್ನು ಸಾಂಕೇತಿಕವಾಗಿ ಸೂಚಿಸುವ ಪರಿಕಲ್ಪನೆ ಇಲ್ಲಿ ರೂಪುಗೊಂಡಿದೆ. ಹಾಗಾಗಿ ಶುಭಪ್ರದ ಸಂಕೇತವಾದ ಅಡಿಕೆ ಮರ ಹೋಳಿಕಾ ದಹನಾ ಕಾರ್ಯಕ್ರಮದಲ್ಲಿ ಪ್ರಧಾನ ಭೂಮಿಕೆ ವಹಿಸುತ್ತದೆ. ಹರಕೆ ಹೇಳಿಕೊಳ್ಳುವವರು ಸಮಾಜದ ಹತ್ತು ಸಮಸ್ತರ ಬಳಿ ಹೇಳಿದ ಬಳಿಕ ಅವರಿಗೆ ಪೂಜೆ ಸಲ್ಲಿಸುವ ಅವಕಾಶ ಪಡೆದುಕೊಳ್ಳುತ್ತಾರೆ. ಎರಡನೇ ದಿನದ ಹೋಲಿಕಾ ದಹನ್ ಕಾರ್ಯಕ್ರಮ ನಡೆದ ಬಳಿಕ ಮರುದಿನ ಬಣ್ಣದ ಓಕುಳಿಯಾಟ ಮತ್ತು ಮೆರವಣಿಗೆಯಲ್ಲಿರಾವಣನ ಪೃತಿಕೃತಿಯನ್ನು ತೆಗೆದುಕೊಂಡು ಹೋಗಿ ಬೆಂಕಿ ಇಡುವುದರೊಂದಿಗೆ ಹೋಳಿಹಬ್ಬವು ಸಮಾಪ್ತಿಗೊಳ್ಳುತ್ತದೆ.
ಕಡಲತಡಿಯಲ್ಲಿ ನಡೆಯುವ ಹೋಳಿಹಬ್ಬದ ಕೊನೆಯ ಚರಣದಲ್ಲಿ ಕೊಂಕಣಿ ಖಾರ್ವಿ ಸಮಾಜದ ಪ್ರತಿಯೊಬ್ಬರೂ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಾರೆ.
ಆಧುನಿಕತೆಯ ನಾಗಾಲೋಟದಲ್ಲಿ ನಮ್ಮ ಹಬ್ಬಹರಿದಿನಗಳು ಸೊರಗುತ್ತಿದೆ.ಇಂತಹ ಕಾಲಘಟ್ಟದಲ್ಲೂ ಹಿರಿಯರಿಂದ ಬಳುವಳಿಯಾಗಿ ಬಂದ ಹೋಳಿಹಬ್ಬದ ಲಾವಣಿ ರೂಪದ ಕೊಂಕಣಿ ಹಾಡುಗಳನ್ನು ಹಲವಾರು ವರ್ಷಗಳಿಂದ ಜತನದಿಂದ ಕಾಪಾಡಿಕೊಂಡು ಉಳಿಸಿ ಬೆಳೆಸುತ್ತಿರುವ ಭಟ್ಕಳ ಬಂದರಿನ ಶ್ರೀ ಶ್ರೀಧರ ಖಾರ್ವಿ ಮತ್ತು ತಂಡದವರಿಗೆ ಅಭಿನಂದನೆಗಳು.ಸಮಾಜದ ಜನಪದ ಕಲೆಯನ್ನು ಪ್ರಜ್ವಲಿಸುತ್ತಿರುವ ಈ ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ.ಈ ತಂಡ ಕಳೆದ ಇಪ್ಪತ್ತು ವರ್ಷಗಳಿಂದಲೂ ರಾಜ್ಯ ಮತ್ತು ಪರರಾಜ್ಯಗಳಲ್ಲಿ ತಮ್ಮ ಗುಮ್ಟಿ ವಾದನ ಪ್ರದರ್ಶನ ನೀಡಿರುವುದು ಉಲ್ಲೇಖನೀಯ ಸಂಗತಿಯಾಗಿದೆ.
ನೂರಾರು ವರ್ಷಗಳಿಂದ ಬೆಳೆದುಕೊಂಡು ಬಂದಿರುವ ಕೊಂಕಣಿ ಖಾರ್ವಿ ಸಮಾಜದ ಹೋಳಿಹಬ್ಬದ ಆಚರಣೆಗಳು ಜನಪದ ಸಂಸ್ಕೃತಿಗಳು ಹೇಗೆ ಧಾರ್ಮಿಕತೆಯ ಜೊತೆಗೆ ಜಾನಪದ ಸಂವೇದನೆಯನ್ನು ಕಲಾಪೂರ್ಣವಾಗಿ ಪ್ರಕಟಿಸಿದೆ ಎಂಬುದನ್ನು ತೌಲನಿಕವಾಗಿ ಅಧ್ಯಯನ ಮಾಡುವುದು ಅತ್ಯಂತ ಫಲಪ್ರದವೆಂದು ಭಾವಿಸಿ ನಮ್ಮ ಹೋಳಿಹಬ್ಬದ ಜನಪದ ಸೊಗಡನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಯತ್ನವಾಗಬೇಕಾಗಿದೆ.
ವಿಶಿಷ್ಟವೂ ವೈವಿಧ್ಯಮಯವೂ ಆದ ಭಟ್ಕಳ ಕೊಂಕಣಿ ಖಾರ್ವಿ ಸಮಾಜದ ಹೋಳಿಹಬ್ಬದ ಧಾರ್ಮಿಕ ಆಚರಣೆಗಳು ಮತ್ತು ಅದರೊಂದಿಗೆ ಅಭಿವ್ಯಕ್ತಿಗೊಳ್ಳುವ ಜಾನಪದ ಹಾಡು,ನೃತ್ಯ ಪ್ರಕಾರಗಳು ಸೊಗಸುಗಾರಿಕೆಯಿಂದ ಕೂಡಿರುವುದು ತಲಸ್ಪರ್ಶಿ ನೋಟದಿಂದ ತಿಳಿದುಬರುತ್ತದೆ.ಹೋಳಿಹಬ್ಬದ ಧಾರ್ಮಿಕ ಆಚರಣೆಯೊಂದಿಗೆ ಮಿಳಿತಗೊಂಡಿರುವ ಜನಪದ ಆಚರಣೆಯ ಎಲ್ಲಾ ಮುಖಗಳನ್ನು ಗಮನಿಸಿ,ಅದರ ಸಾಮಾಜಿಕ ಸಂದರ್ಭದಲ್ಲಿ ಅದನ್ನು ವಿಶ್ಲೇಷಿಸುವ ಅಗತ್ಯವಿದೆ.ಪುರಾಣ ಮತ್ತು ಧಾರ್ಮಿಕ ನಂಬಿಕೆಗಳು ಹೋಳಿಹಬ್ಬದಲ್ಲಿ ಆರಾಧನೆಗೊಳ್ಳುವ ದೇವತೆಗಳ ಅಧ್ಯಯನದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.ದೇವರಿಗೆ ಸಂಬಂಧಿಸಿದ ಸೈಧಾಂತಿಕ ಭಾಗ ಪುರಾಣವಾದರೆ ,ಅದಕ್ಕೆ ಸಂಬಂಧಿಸಿದ ಕ್ರಿಯಾಭಾಗವೇ ಆಚರಣೆ ಆಗುತ್ತದೆ.
ಉಮಾಕಾಂತ ಖಾರ್ವಿ
ಕುಂದಾಪುರ