ದಕ್ಷಿಣ ಭಾರತದ ಅಭೂತಪೂರ್ವ ವಿಜೃಂಭಣೆಯ ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ಹೋಳಿಹಬ್ಬ ಸಂಪನ್ನ.

ಕುಂದಾಪುರ ಖಾರ್ವಿ ಸಮಾಜದ ಅತೀ ದೊಡ್ಡ ಹಬ್ಬ ಹೋಳಿ. ಹೋಳಿಹಬ್ಬದ ಪ್ರಥಮ ದಿನ ಮಾಂಡ್ ಇಟ್ಟು ಒಂದು ಗಂಟೆ ಹೊಡೆದು ಹೋಳಿಹಬ್ಬವನ್ನು ಆರಂಭಿಸುತ್ತಾರೆ. ಕುಂದಾಪುರದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ನಡೆಯುತ್ತದೆ. ಹೋಳಿಹಬ್ಬದಲ್ಲಿ ಪ್ರಮುಖ ಪಾತ್ರ ವಹಿಸುವುದು ಹೋಕುಳಿ ಹಬ್ಬ. ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ವೈಭವಪೂರ್ಣ ಹೋಳಿಹಬ್ಬ ನಿರಂತರ ಆರು ದಿನಗಳ ಸಂಭ್ರಮ ಸಡಗರಗಳಿಂದ ಇಂದು ಬಣ್ಣಬಣ್ಣದ ರಂಗುರಂಗಿನ ಓಕುಳಿಯಾಟದೊಂದಿಗೆ ವಿದ್ಯುಕ್ತವಾಗಿ ಸಮಾಪ್ತಿಗೊಂಡಿದೆ. ಓಕುಳಿ ದಿನ ಬೆಳಿಗ್ಗೆ ಶ್ರೀ ಮಹಾಕಾಳಿ ಅಮ್ಮನವರ ಎದುರು ಏಳು ವಿಧದ ಬಣ್ಣಗಳನ್ನು ಇಡಲಾಗುತ್ತದೆ. ಪ್ರಮುಖ ವ್ಯಕ್ತಿಯನ್ನು ಕರೆಸಿ ಶ್ರೀ ಮಹಾಕಾಳಿ ಅಮ್ಮನವರ ಎದುರು ರಂಗಪೂಜೆಯ ಶೈಲಿಯಲ್ಲಿ ಬಣ್ಣವನ್ನು ಪವಿತ್ರ ಧಾರ್ಮಿಕ ಸಂಪ್ರದಾಯದಂತೆ ಶ್ರೀ ಮಹಾಕಾಳಿ ಅಮ್ಮನವರಿಗೆ ಅರಶಿನ ಕುಂಕುಮ ಸಹಿತ ಏಳು ಬಣ್ಣವನ್ನು ಅರ್ಚಕರು ಲೇಪಿಸುತ್ತಾರೆ, ಅದರಲ್ಲಿ ಅರಶಿನ ಗಂಧ ಕುಂಕುಮವು ಅಮ್ಮನಿಗೆ ಹೆಚ್ಚು ಪ್ರೀತಿ. ತದನಂತರ ಓಕುಳಿಯ ಪರಸ್ಪರ ಬಣ್ಣ ಎರಚಿ ಸಂಭ್ರಮಿಸುವ ಕಾರ್ಯಕ್ರಮಕ್ಕೆ ಚಾಲನೆ ದೊರಕುತ್ತದೆ.

ಇಲ್ಲಿ ಹಿರಿಯರು ಕಿರಿಯರು ಭೇದವಿಲ್ಲದೆ ಬಡವ ಬಲ್ಲಿದ ತಾರತಮ್ಯವಿಲ್ಲದೇ ಸರ್ವರೂ ಪರಸ್ಪರ ಬಣ್ಣ ಎರಚಿಕೊಳ್ಳುತ್ತಾ ಬಣ್ಣದ ಓಕುಳಿಯಾಟದಲ್ಲಿ ನಿರತರಾಗುತ್ತಾರೆ. ಶ್ರೀ ಮಹಾಕಾಳಿ ದೇವಸ್ಥಾನ ಮತ್ತು ಪ್ರಮುಖ ಪ್ರದೇಶಗಳಲ್ಲಿ ದೋಣಿ ಮತ್ತಿತರ ಪರಿಕರಗಳಲ್ಲಿ ಶ್ರೀ ಅಮ್ಮನವರಿಗೆ ಸಮರ್ಪಿಸಿದ ಬಣ್ಣಗಳನ್ನು ಪ್ರಸಾದ ರೂಪದಲ್ಲಿ ಓಕುಳಿ ನೀರು ಮಾಡಿ ಮೆರವಣಿಗೆಯಲ್ಲಿ ಬರುವ ಸಮಾಜ ಭಾಂಧವರ ಮೇಲೆ ಎರಚಲಾಗುತ್ತದೆ. ಮದ್ಯಾಹ್ನ 3 ಗಂಟೆಗೆ ಹೋಳಿ ಮೆರವಣಿಗೆಯ ಪೂರ್ವಭಾವಿ ಸಂಪ್ರದಾಯದಂತೆ ತಾಲೂಕು ತಹಶೀಲ್ದಾರ್, ಪೋಲೀಸ್ ಇಲಾಖೆ ಮತ್ತು ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಗೌರವಪೂರ್ವಕ ವೀಳ್ಯವನ್ನು ಸಮರ್ಪಿಸಲಾಗುತ್ತದೆ ಮಾಂಡ್ ಎಂದು ಕರೆಯಲ್ಪಡುವ ಸಮಾಜದ ಹತ್ತು ಸಮಸ್ತರಿಂದ ನೀಯೋಜಿತಗೊಂಡ ಕೋಲಾಟ ತಂಡ ಮದ್ದುಗುಡ್ಡೆಯಿಂದ ಸಮಾಜ ಭಾಂಧವರನ್ನು ಕರೆತರುತ್ತಾರೆ. ಬರುವಾಗ ಕೆಳಕೇರಿ, ಮಧ್ಯಕೇರಿ ಮೇಲ್ಕೇರಿಗೆ ಹೋಗಿ ಅಲ್ಲಿಂದ ವಾಪಾಸು ಬಂದು ದೇವಸ್ಥಾನದ ಮಾರ್ಗವಾಗಿ ಮೆರವಣಿಗೆ ಶಾಸ್ತ್ರಿ ಸರ್ಕಲ್ ವರೆಗೆ ಹೋಗಿ ವಾಪಾಸು ದೇವಸ್ಥಾನಕ್ಕೆ ಬಂದು ಮುಕ್ತಾಯವಾಗುತ್ತದೆ. ತದ ನಂತರ ಅದೇ ಗಂಟೆಯನ್ನು ಹೊಡೆದು ಹೋಳಿಹಬ್ಬಕ್ಕೆ ಮುಕ್ತಾಯ ಹಾಡುತ್ತಾರೆ.

ಸರಿಯಾದ ಸಮಯಕ್ಕೆ ಪ್ರತಿಯೊಂದು ಪ್ರದೇಶದಿಂದ ಸಮಾಜ ಭಾಂಧವರು ಒಟ್ಟುಗೂಡಿ ಮೆರವಣಿಗೆ ಹೊರಡುತ್ತದೆ. ಮೆರವಣಿಗೆ ಕುಂದಾಪುರ ಶಾಸ್ತ್ರಿ ಸರ್ಕಲ್ ಮೂಲಕ ಹಾದುಹೋಗಿ ಕೊನೆಗೆ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಸಮಾಪ್ತಿಗೊಳ್ಳುತ್ತದೆ. ದಾರಿಯೂದ್ದಕ್ಕೂ ಸಮಾಜದ ಸಂಸ್ಕೃತಿ ಪರಂಪರೆ ಬಿಂಬಿಸುವ ವಿವಿಧ ವೇಷಧಾರಿಗಳು ಮೆರವಣಿಗೆಗೆ ಮೆರಗು ನೀಡುತ್ತದೆ. ಹಾಡು ಕುಣಿತ ಪ್ರದರ್ಶನದಿಂದ ಇಡೀ ಓಕುಳಿ ಮೆರವಣಿಗೆ ಕಳೆಗಟ್ಟುತ್ತಾ ಹೋಗುತ್ತದೆ.

ಈ ವರ್ಷದ ಹೋಳಿಹಬ್ಬದ ಎಲ್ಲಾ ಆಚರಣೆಗಳು ಅತ್ಯಂತ ಶಿಸ್ತಿನಿಂದ ವೈಭವಪೂರ್ಣವಾಗಿ ಜರುಗಿದ್ದು ಈ ಅಭೂತಪೂರ್ವ ಮಹಾಉತ್ಸವ ಸಾಂಗವಾಗಿ ನೇರವೇರಲು ಕಾರಣೀಕರ್ತರಾದ ಎಲ್ಲರಿಗೂ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಜಯಾನಂದ ಖಾರ್ವಿಯವರು ಹೃದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಖಾರ್ವಿ ಸಮಾಜದವರು ವಾಸ್ತವ್ಯವಿರುವ ವಿವಿಧ ಪ್ರದೇಶಗಳಾದ ಖಾರ್ವಿಕೇರಿ, ಮದ್ದುಗುಡ್ಡೆ, ಮೇಲ್ಕೇರಿ, ಕೆಳಕೇರಿ, ಮಧ್ಯಕೇರಿ, ಬಹುದ್ದೂರ್ ಷಾ ರಸ್ತೆಯ ಸಮಾಜ ಭಾಂದವರಿಗೆ ವಿವಿಧ ರೀತಿಯ ಜವಾಬ್ದಾರಿಯನ್ನು ಕೊಡಲಾಗಿತ್ತು.ಆಯಾ ಪ್ರದೇಶದ ಸಂಘ ಸಂಸ್ಥೆಗಳು ಕೂಡಾ ಸಮಾಜದ ಈ ಪವಿತ್ರ ಧಾರ್ಮಿಕ ಸಂಭ್ರಮದಲ್ಲಿ ಅಪಾರವಾಗಿ ಶ್ರಮಿಸಿ ಹೋಳಿಹಬ್ಬವನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿದ್ದಾರೆ.

ಹೋಳಿ ಮನೆಯವರು ಒಳ್ಳೆಯ ರೀತಿಯಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ., ಸರ್ವಸಮಾಜ ಬಾಂಧವರು ಸ್ವಯಂಪ್ರೇರಿತರಾಗಿ ಕೆಲಸವನ್ನು ಅತ್ಯಂತ ಅಚ್ಚುಕಟ್ಟಾಗಿ ಜವಾಬ್ದಾರಿಯಿಂದ ನಿರ್ವಹಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕೇವಲ ಉತ್ತರ ಭಾರತದಲ್ಲಿ ಮಾತ್ರವಲ್ಲಇಡೀ ದಕ್ಷಿಣ ಭಾರತದಲ್ಲಿ ಅಭೂತಪೂರ್ವ ಮತ್ತು ವೈಭವಯುತವಾಗಿ ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ಹೋಳಿಹಬ್ಬ ಓಕುಳಿ ಆಚರಣೆಯು ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ಅಮ್ಮನ ದಯೆಯಿಂದ ಎಲ್ಲಾ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ನಡೆದಿದೆ. ಸಮಾಜದ ಧಾರ್ಮಿಕ ಸಂಭ್ರಮ ಮತ್ತು ಜಾನಪದ ಕಲಾವಂತಿಕೆ ಎಲ್ಲೆಡೆ ಹರಡಿ ಸಮಾಜದ ಕೀರ್ತಿ ಪ್ರಜ್ವಲಿಸಿದೆ.

ಸುಧಾಕರ್ ಖಾರ್ವಿ
Editor
www.kharvionline.com

Leave a Reply

Your email address will not be published. Required fields are marked *