ನೀರು ಸಕಲಜೀವ ಚೈತನ್ಯಗಳ ಬದುಕಿನ ನಿತ್ಯ ಸಂಜೀವಿನಿ.ಭೂಮಿ ಇದ್ದಷ್ಟೇ ಇದೆ.ಹಿಂದೆ ಇದ್ದ ಜನಸಂಖ್ಯೆಗೆ ಇದ್ದ ನೀರು ಸಾಕಾಗುತ್ತಿತ್ತು.ಆದರೆ ಇಂದು ಜನಸಂಖ್ಯೆ ಹೆಚ್ಚಳ,ಕೈಗಾರಿಕೆ ಮತ್ತು ಕೃಷಿ ಉದ್ದೇಶಗಳಿಗಾಗಿ ನೀರಿನ ಬಳಕೆ ಹೆಚ್ಚಾಗಿದೆ.ವೇಗದ ನಗರೀಕರಣ ಪ್ರಕ್ರಿಯೆಯಿಂದ ಅಂತರ್ಜಲವನ್ನು ಉಪಯೋಗಿಸಿ,ನೀರಿನ ಮೌಲ್ಯದ ಕನಿಷ್ಠ ಜ್ಞಾನವೂ ಇಲ್ಲದೇ ನೀರನ್ನು ಮಲಿನಗೊಳಿಸಿ ಅಥವಾ ಅಪವ್ಯಯ ಮಾಡಿ ನೀರಿನ ಸಮಸ್ಯೆ ಇಂದು ಉಲ್ಬಣಗೊಂಡಿದೆ. ಪೃಕೃತಿಯ ನಾಶ,ಮಳೆ ಬರುವಿಕೆಯಲ್ಲಿ ವ್ಯತ್ಯಾಸ,ಭೂಮಿಯ ತಾಪಮಾನ ಹೆಚ್ಚಳ ಮುಂತಾದ ಕಾರಣಗಳಿಂದಾಗಿ ಅಂತರ್ಜಲ ದಿನದಿಂದ ದಿನಕ್ಕೆ ಕುಸಿಯುತ್ತಿದೆ.
ಇದರ ಅನುಭವ ಈಗಾಗಲೇ ನಮ್ಮೆಲ್ಲರ ಗಮನಕ್ಕೆ ಬಂದಿರುತ್ತದೆ.ಅದರಲ್ಲೂ ನಮ್ಮ ಕರಾವಳಿ ಪ್ರದೇಶಗಳಲ್ಲಿ ತಾಪಮಾನ ಋತುಮಾನದ ಗರಿಷ್ಠ ಮಟ್ಟಕ್ಕೆ ತಲುಪುವ ವಿದ್ಯಮಾನಗಳು ಇತ್ತೀಚಿನ ಕೆಲವು ವರ್ಷಗಳಲ್ಲಿ ಸಂಭವಿಸಿದೆ. ಋತುಮಾನದ ಗರಿಷ್ಠ ತಾಪಮಾನ ಹಲವು ಅನಾಹುತಗಳನ್ನು ಸೃಷ್ಟಿಸುತ್ತಿದ್ದು,ಅಕಾಲಿಕ ಮಳೆ ಮತ್ತು ಚಂಡಮಾರುತಗಳು ಮಳೆಗಾಲದ ಪೂರ್ವದಲ್ಲಿ ಮತ್ತು ಚಳಿಗಾಲದಲ್ಲಿಯೂ ಸಂಭವಿಸುವ ಅನಿರೀಕ್ಷಿತ ಘಟನೆಗಳು ನಮ್ಮ ಕಣ್ಣ ಮುಂದೆಯೇ ನಡೆದಿದೆ. ಕಳೆದ ಮೇ ತಿಂಗಳಲ್ಲಿ ಸಂಭವಿಸಿದ ತೌಕ್ತೆ ಚಂಡಮಾರುತ ಮತ್ತು ತುಳಸಿಪೂಜೆ ಸಂದರ್ಭದಲ್ಲಿ ಸಂಭವಿಸಿದ ಅಕಾಲಿಕ ಮಳೆಯ ಅನಾಹುತಗಳು ಇದಕ್ಕೆ ಉತ್ತಮ ಉದಾಹರಣೆ. ಎಲ್ಲಾ ಜೀವಸಂಕುಲಗಳಿಗೆ ನೀರಿನ ಅವಶ್ಯಕತೆ ಇದೆ.ಸಮೃದ್ಧವಾಗಿ ನೀರು ದೊರಕುವ ಸ್ಥಳಗಳಲ್ಲಿ ಪ್ರಾಣಿ ಮತ್ತು ಸಸ್ಯಗಳು ವಿಪುಲವಾಗಿರುವುದು ಕಂಡುಬರುತ್ತದೆ.
ಸಮುದ್ರದಿಂದ ದೊರಕುವ ಅತೀ ಪ್ರಮುಖ ವಸ್ತು ಉಪ್ಪು.100 ಗ್ರಾಂ ಸಮುದ್ರದ ನೀರಿನಲ್ಲಿ 3.5 ಗ್ರಾಂ ಉಪ್ಪು ಇರುತ್ತದೆ.
ಸಮುದ್ರದ ನೀರನ್ನು ಸಂಸ್ಕರಿಸಿ ಸಿಹಿನೀರು ಪಡೆಯುವ ವಿಧಾನಕ್ಕೆ ನಿರ್ಲವಣೀಕರ Desalination ಎಂದು ಕರೆಯುತ್ತಾರೆ.ನಿರ್ಲವಣೀಕರದ ಅನೇಕ ವಿಧಾನಗಳನ್ನು ಅನುಸರಿಸಿ ಕುಡಿಯುವ ಶುದ್ಧ ನೀರನ್ನು ಪಡೆಯಬಹುದಾಗಿದೆ. ಉದಾಹರಣೆಗೆ ಆಸವನ ಕುದಿಸುವುದು ಮತ್ತು ದ್ರವೀಕರಿಸುವುದು,ಶೈತೀಕರಣ,ವಿದ್ಯುತ್ ಪೃಥಕ್ಕರಣ Electridialysis ವಿಲೋಮ ಸೂಕ್ಷ್ಮಭಿಕರಣ ಹಾಗೂ ಸೋಲಾರ್ ಸಿಸ್ಟಮ್.ನಿರ್ಲವಣೀಕರಕ್ಕೆ ಅನುಸರಿಸಿರುವ ಪುರಾತನ ವಿಧಾನವೆಂದರೆ ಆಸವನ ವಿಧಾನ.ಜ್ಯೂಲಿಯಸ್ ಸೀಸರ್ ಅಲೆಗ್ಸಾಂಡ್ರಿಯದ ಮೇಲೆ ದಾಳಿ ಮಾಡಿದಾಗ ಆತನ ಸೈನಿಕರಿಗೆ ನೀರು ಪೂರೈಸಲು ಆಸವನ ವಿಧಾನ ಬಳಸಿಕೊಳ್ಳಲಾಗಿತ್ತು.
ಅಂದಿನಿಂದ ಈ ವಿಧಾನದಲ್ಲಿ ಹಲವು ಸುಧಾರಣೆಗಳಾಗಿವೆ.ಆದರೆ ನಿರ್ಲವಣೀಕರದಲ್ಲಿ ಜಗತ್ತಿನಾದ್ಯಂತ ಸೋಲಾರ್ ಸಿಸ್ಟಮ್ ಹೆಚ್ಚು ಪ್ರಚಲಿತದಲ್ಲಿದೆ.
ಸಾಗರದ ನೀರಿನಾಳದಲ್ಲಿ ಕಾರ್ಯ ನಿರ್ವಹಿಸುವ ಸಬ್ ಮೆರೈನ್ ಗಳಲ್ಲಿ Destilation ಆಪರೇಟ್ಸ್ ನ ಮೂಲಕ ಸಮುದ್ರದಲ್ಲಿ ದೊರೆಯುವ ಉಪ್ಪು ನೀರನ್ನು ಶುದ್ಧ ನೀರನ್ನಾಗಿ ಪರಿವರ್ತಿಸುತ್ತಾರೆ.ನೌಕೆಯಲ್ಲಿರುವ ಈ ಆಪರೇಟ್ಸ್ ನ ಸಾಮರ್ಥ್ಯ ದಿನಕ್ಕೆ 38000 ರಿಂದ 150000 ಲೀಟರ್ ಶುದ್ಧ ನೀರನ್ನು ಉತ್ಪಾದಿಸುವಷ್ಟು ಇರುತ್ತದೆ. ಈ ಶುದ್ಧ ನೀರನ್ನು ಕುಡಿಯಲು,ಅಡುಗೆ ಮಾಡಲು ಮತ್ತು ನೈಸರ್ಗಿಕ ಕರೆಗಳಿಗೆ ಉಪಯೋಗಿಸುತ್ತಾರೆ. ದಕ್ಷಿಣ ಅಮೆರಿಕಾದ ಪಶ್ಚಿಮ ಕರಾವಳಿಯ ಉದ್ದಕ್ಕೂ ಹರಡಿಕೊಂಡಿರುವ ಅಂಡಿಸ್ ಪರ್ವತ ಶ್ರೇಣಿ ಅಜೇಯ ನದಿ ಅಮೆಜಾನ್ ನದಿ ಸೇರಿದಂತೆ ಹಲವು ನದಿಗಳಲ್ಲದೇ ಜಗತ್ತಿನ ಅತಿ ಎತ್ತರದ ಟಿಟಿಕಾಕಾ ಸರೋವರದ ಜನ್ಮಭೂಮಿ.
ಸುಮಾರು 8772 ಚದರ ಕೀ.ಮೀ 923 ಅಡಿ ಗರಿಷ್ಠ ಆಳದ ಈ ಸರೋವರ ನೌಕಾಯಾನಕ್ಕೂ ಯೋಗ್ಯವಾಗಿದೆ.ದಕ್ಷಿಣ ಅಮೆರಿಕ ಖಂಡದ ಅತ್ಯಂತ ವಿಶಾಲವಾದ ಸಿಹಿ ನೀರಿನ ಮಹಾಸರೋವರವೂ ಇದೇ ಆಗಿದೆ.
ಸಮುದ್ರ ಮಟ್ಟದಿಂದ 11910 ಅಡಿ ಎತ್ತರದಲ್ಲಿರುವ ಧರೆಯ ಎತ್ತರದ ನಗರ ಲಾಪಾಜ್ ಗೆ ಟಿಟಿಕಾಕಾ ಸರೋವರದಿಂದ ಸಿಹಿನೀರು ಪೂರೈಕೆಯಾಗುತ್ತದೆ.ಇದು ಮಹಾ ವಿಸ್ಮಯವಾಗಿರುತ್ತದೆ.
ಪಂಚಭೂತಗಳಿಂದಾದ ಈ ಸೃಷ್ಟಿಯ ಜೀವಿಗಳ ಬದುಕಿಗೆ ಉಸಿರು ಎಷ್ಟು ಮುಖ್ಯವೋ ಬದುಕುಳಿಯಲು ನೀರು ಕೂಡಾ ಅಷ್ಟೇ ಮುಖ್ಯ.ಜಗತ್ತಿನ ಸೃಷ್ಟಿಗೆ ನೀರು ಮೂಲ.ನೀರು ಪಂಚಭೂತಗಳಲ್ಲಿ ಒಂದಾಗಿದೆ.
ಭೂಮಿಯ ಎರಡಂಶ ನೀರಿನಿಂದ ಮತ್ತು ಒಂದಂಶ ನೆಲದಿಂದ ಆವೃತ್ತವಾಗಿದೆ.ನೀರು ಮೂರು ಲೀಟರ್ ಎಂದಾದರೆ ಕುಡಿಯಲು ಯೋಗ್ಯವಾದ ನೀರಿನ ಲಭ್ಯತೆ ಅರ್ಧ ಚಮಚದಷ್ಟು ಮಾತ್ರ.
ಭಾರತದಲ್ಲಿ ನೀರಿನ ಸಮಸ್ಯೆ ಉದ್ಬವಿಸುವುದಿಲ್ಲ .ಈ ಸಮಸ್ಯೆಯನ್ನು ಸೃಷ್ಟಿ ಮಾಡುವವರು ಜನರು ಎಂದು ಮಾಜಿ ಪ್ರಧಾನಿ ಲಾಲ್ ಬಹೂದ್ದೂರ್ ಶಾಸ್ತ್ರಿ ಹೇಳಿದ್ದರು.ಇದು ನಮ್ಮ ದೇಶದಲ್ಲಿ ಪ್ರಸ್ತುತ ಉದ್ಬವಿಸಿರುವ ನೀರಿನ ಸಮಸ್ಯೆಗೆ ಕೈಗನ್ನಡಿಯಾಗಿದೆ.
ಭಾರತದಲ್ಲಿ ಅನೇಕ ಭಾಗಗಳಲ್ಲಿ ತೀವ್ರ ನೀರಿನ ಕೊರತೆ ಇದೆ.ಆದರೂ ದೇಶದ ಜನರು ಉಪಯೋಗಿಸುವುದು ಇಡೀ ವರ್ಷದ ಮಳೆ ನೀರಿನ ಹತ್ತನೇ ಒಂದು ಭಾಗ ಮಾತ್ರ ಎಂದು ಒಂದು ಅಧ್ಯಯನ ತಿಳಿಸಿದೆ.
ಅಂದರೆ ದೇಶದಲ್ಲಿ ಮಳೆ ನೀರು ಇಂಗಿಸುವ ಅಭಿಯಾನದ ಬಗ್ಗೆ ಜನರಲ್ಲಿ ಇನ್ನೂ ಜಾಗೃತಿ ಮೂಡಿಲ್ಲ.
ಭಾರತದಲ್ಲಿನ ಭೂಜಲದ ಪ್ರಮಾಣವು ವರ್ಷದ ಮಳೆ ನೀರಿನ ಹತ್ತರಷ್ಟು ಇದೆ.ಆದರೆ ಲಕ್ಷಗಟ್ಟಲೆ ಕೊಳವೆ ಬಾವಿಗಳು ಕೊರೆಯಲ್ಪಟ್ಟು ಪ್ರತಿವರ್ಷ ಅನೇಕ ಪ್ರದೇಶಗಳಲ್ಲಿ ಭೂಜಲ ಪ್ರಮಾಣ ಕುಸಿಯುತ್ತಿದೆ.ಜಲಾಧಾರವು Aquiter ಒಂದು ಭೂಗರ್ಭ ರಚನೆಯಾಗಿದ್ದು,ಬಾವಿ ಇಲ್ಲವೇ ಚಿಲುಮೆಗಳಿಂದ ಪಡೆಯಬಹುದಾದ ಉಪಯೋಗಯುಕ್ತ ಭೂಜಲವನ್ನು ಹೊಂದಿರುತ್ತದೆ.
ಭಾರತದಲ್ಲಿ ನೀರಿನ ಕೊರತೆ ನೀಗಿಸಲು ಹಲವಾರು ಮಾರ್ಗೋಪಾಯಗಳು ಇದ್ದು ಮಳೆ ನೀರಿನ ಇಂಗಿಸುವಿಕೆ ಮತ್ತು ಶೇಖರಣೆ,ಜಲಾಶಯದ ಪ್ರದೇಶಗಳ ಅರಣ್ಯೀಕರಣವೇ ಮುಂತಾದ ನೀರು ನಿರ್ವಹಣಾ ಕ್ರಮಗಳಿಂದ ನೀರಿನ ಕೊರತೆ ನೀಗಿಸಲು ಸಾಧ್ಯವಿದೆ.ಇದರೊಂದಿಗೆ ಸಮುದ್ರ ನೀರು ಸಂಸ್ಕರಣಾ ಯೋಜನೆ ಎಲ್ಲಾ ಕಡೆ ಕಾರ್ಯಗತಗೊಂಡರೆ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಹಿಂದೆ ರಾಜ್ಯಕ್ಕಾಗಿ ,ಸಂಪತ್ತಿಗಾಗಿ ಯುದ್ಧಗಳು ನಡೆಯುತ್ತಿತ್ತು.ಮುಂದೆ ಪ್ರಪಂಚದಲ್ಲಿ ಕುಡಿಯುವ ನೀರಿಗಾಗಿ ಯುದ್ಧಗಳು ನಡೆಯಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಬೆಳೆಯುತ್ತಿರುವ ಜನಸಂಖ್ಯೆ ಕೃಷಿ ಮತ್ತು ಕೈಗಾರಿಕೆಗಳಿಂದ ನೀರಿನ ಬೇಡಿಕೆಯನ್ನು ತುಂಬಿಕೊಡದಿದ್ದಾಗ ಸಂಘರ್ಷಕ್ಕೆ ಎಡೆಮಾಡಿಕೊಡಬಹುದು.ಸಂಪನ್ಮೂಲಗಳ ಬಳಕೆ,ಉಪಯೋಗಿಸುವ ಕ್ರಮ,ತಾಂತ್ರಿಕತೆಯ ಬೆಳವಣಿಗೆ ರೀತಿಗಳು ಮತ್ತು ಸಾಂಸ್ಥಿಕ ಬದಲಾವಣೆ ಇವೆಲ್ಲ ಅಂಶಗಳು ಭವಿಷ್ಯತ್ತಿನ ಮತ್ತು ವರ್ತಮಾನದ ಸಾಮಾಜಿಕ ಮತ್ತು ಆರ್ಥಿಕ ಅವಶ್ಯಕತೆಗಳೊಂದಿಗೆ ಸುಸಂಬಂದ್ದವಾಗಿ ಬೆಸೆದುಕೊಂಡಿರುವ ಒಂದು ಬದಲಾವಣೆಯ ಪ್ರಕ್ರಿಯೆ ನಿರಂತರ ಅಭಿವೃದ್ಧಿ ಎನಿಸಿಕೊಳ್ಳುತ್ತದೆ.ಸಂಪನ್ಮೂಲಖಳ ಸಂರಕ್ಷಣೆ ಮತ್ತು ನ್ಯಾಯೋಚಿತವಾದ ಹಂಚಿಕೆಯಾದಲ್ಲಿ ಪ್ರತಿಯೊಬ್ಬ ಮನುಷ್ಯರಿಗೂ ಸಹ್ಯವಾಗುವಂತಹ ಬದುಕನ್ನು ಒದಗಿಸುವ ಸಾಮರ್ಥ್ಯ ಈ ಭೂಮಿಗಿದೆ.ಆದ್ದರಿಂದ ಪೃಕೃತಿಯ ಪರಮ ಕೃಪೆಯಾದ ಜೀವಜಲವನ್ನು ಎಲ್ಲರೂ ಮಿತವಾಗಿ ಬಳಸಿ ,ಉಳಿಸಿಕೊಳ್ಳಬೇ಼ಕಾಗಿದೆ.ಈ ಸಂದರ್ಭದಲ್ಲಿ ಮತ್ತೊಂದು ಕಳಕಳಿಯ ವಿಜ್ಞಾಪನೆಯೆಂದರೆ ಪ್ರಖರ ಬೇಸಿಗೆಯ ಈ ಸಮಯದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ಅವಶ್ಯಕತೆ ಇರುತ್ತದೆ.ಈ ಮೂಕ ಪ್ರಾಣಿಗಳ ದಾಹ ತಣಿಸುವ ಮಾನವೀಯ ಕಾರ್ಯವಾಗಬೇಕಾಗಿದೆ.ಈ ಭೂಮಿಯ ಮೇಲಿನ ಜೀವವೈವಿಧ್ಯತೆಗಳ ಭಾಗವಾಗಿ ನಾವುಗಳು ಈ ಪುಣ್ಯ ಕಾರ್ಯವನ್ನು ಮಾಡಬೇಕಾಗಿದೆ.ಜೀವಜಲವನ್ನು ಜತನದಿಂದ ಕಾಪಾಡುವ ಹೊಣೆಗಾರಿಕೆ ನಮ್ಮದಾಗಲಿ.
ಉಮಾಕಾಂತ ಖಾರ್ವಿ
ಕುಂದಾಪುರ