ಚುಂಗ್ರಿಯ ಚೆಲ್ಲಾಟ ಮೀನುಗಾರರಿಗೆ ಹೊಟ್ಟೆಪಾಡಿನ ಸಂಕಟ

ಅಸಾನಿ ಚಂಡಮಾರುತದಿಂದಾಗಿ ಅವಧಿಯ ಮುನ್ನವೇ ಮೀನುಗಾರಿಕೆಯನ್ನು ಸ್ಥಬ್ದಗೊಳಿಸಿದ ಮೀನುಗಾರರು ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಿತ್ಯ ಬದುಕಿನ ತುತ್ತು ಕೂಳಿಗಾಗಿ ಮೀನುಗಾರಿಕೆಗೆ ಹೋದ ಮೀನುಗಾರರ ಬಲೆಗಳಿಗೆ ಗ್ರಾಮ್ಯ ಕನ್ನಡ ಮತ್ತು ಕೊಂಕಣಿಯಲ್ಲಿ ಚುಂಗ್ರಿ ಎಂದು ಕರೆಯಲ್ಪಡುವ ಹೊರ ಮೈಯಲ್ಲಿ ಮುಳ್ಳುಗಳನ್ನು ಹೊಂದಿರುವ ಸಮುದ್ರ ಚಲಚರಗಳು ವ್ಯಾಪಕ ಸಂಖ್ಯೆಯಲ್ಲಿ ಬೀಳುತ್ತಿದೆ. ಈ ಚುಂಗ್ರಿಯು ಮುಳ್ಳು ಹಂದಿಗಳಂತೆ ತೀಕ್ಷ್ಣವಾದ ನಂಜು ಮತ್ತು ವಿಷಕಾರಿ ಮುಳ್ಳುಗಳನ್ನು ಹೊಂದಿದ್ದು, ಮೀನು ಬಲೆಯನ್ನು ನಾಶಮಾಡುತ್ತದೆ. ಮೀನುಗಾರರ ಇಡೀ ದಿನದ ದುಡಿಮೆಯನ್ನೇ ಹಾಳು ಮಾಡುತ್ತದೆ. ಗಂಗೊಳ್ಳಿ ಕಡಲಿನಲ್ಲಿ ಮೀನುಗಾರಿಕೆಗೆ ಇಳಿದ ಬಹುತೇಕ ಮೀನುಗಾರರ ಬಲೆಗಳಿಗೆ ಚುಂಗ್ರಿ ಬಿದ್ದಿದ್ದು, ಮತ್ಸಕ್ಷಾಮ ಮತ್ತು ಹವಾಮಾನ ವೈಪರೀತ್ಯಗಳಿಂದಾಗಿ ಸಂಕಷ್ಟಕ್ಕೆ ಈಡಾದ ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಗಂಗೊಳ್ಳಿ ಕಡಲಿನಲ್ಲಿ ಎರಡು ಮೂರು ದಿನಗಳಿಂದ ಮೀನುಗಾರರ ಬಲೆಗಳಿಗೆ ಚುಂಗ್ರಿಯು ಬೀಳುತ್ತಿದ್ದು, ಮೀನುಗಾರರ ಪೈಕಿ ಗಂಗೊಳ್ಳಿಯ ಸುಭಾಶ್ ಖಾರ್ವಿ M Devi ಎಂಬವರ ಬಲೆಗೆ ಚುಂಗ್ರಿ ವ್ಯಾಪಕ ಪ್ರಮಾಣದಲ್ಲಿ ಬಿದ್ದಿದ್ದೆ. ಬಲೆಗೆ ಬಿದ್ದ ಚುಂಗ್ರಿಯನ್ನು ಬಿಡಿಸಲು ಮೀನುಗಾರು ಸಮುದ್ರದಿಂದ ದಡಕ್ಕೆ ಬಂದು ಇಡೀ ದಿನ ವ್ಯಯಿಸಬೇಕಾಗುತ್ತದೆ. ಮೀನುಗಾರರ ಸಂಕಟಮಯದ ಬದುಕಿಗೆ ಮತ್ತಷ್ಟು ಬರೆ. ಸಾಂಪ್ರದಾಯಿಕ ಮೀನುಗಾರಿಕೆಯ ದೋಣಿಯ ಕಂಟ್ಲಿ ಬಲೆ ತುಂಬಾ ಸೂಕ್ಷ್ಮವಾಗಿದ್ದು, ಚುಂಗ್ರಿಯಂಥ ಚಲಚರಗಳು ಬಿದ್ದರೆ ತೀವ್ರ ಹಾನಿಗೊಳಗಾಗುತ್ತದೆ. ಸಾಮಾನ್ಯವಾಗಿ ಫಿಶಿಂಗ್ ಅಥವಾ ಪರ್ಸೀನ್ ಬೋಟಗಳ ಬಲೆಗಳಿಗೆ ಚುಂಗ್ರಿ ಬಿದ್ದರೆ ಅದನ್ನು ಸಮುದ್ರದಲ್ಲೇ ವಿಸರ್ಜಿಸುವ ವ್ಯವಸ್ಥೆ ಇರುತ್ತದೆ. ಆದರೆ ಕಂಟ್ಲಿ ಬಲೆ ಮೀನುಗಾರಿಕೆಯಲ್ಲಿ ಅಂಥಹಾ ವ್ಯವಸ್ಥೆ ಇರುವುದಿಲ್ಲ. ಫಿಶಿಂಗ್ ಅಥವಾ ಫರ್ಸೀನ್ ಬೋಟ್ ಗಳ ಬಲೆಗಳಿಗೆ ಕೆಲವೊಮ್ಮೆ ಇಚ್ಚಿ ಎನ್ನುವ ಕಡಲ ಚಲಚರಗಳ ಜೊತೆಗೆ ಚುಂಗ್ರಿ ಬೀಳುವುದುಂಟು. ಮೀನುಗಾರರು ಇದನ್ನು ಬಿಸಿಲಿನಲ್ಲಿ ಒಣಗಿಸಿದಾಗ ಫೌಡರ್ ರೂಪದಲ್ಲಿ ಪರಿವರ್ತನೆಯಾಗುತ್ತದೆ. ಇದು ಪ್ರೋಟೀನ್ ಯುಕ್ತವಾಗಿದ್ದು, ತೆಂಗಿನಮರಗಳಿಗೆ ಉತ್ತಮ ರಸಗೊಬ್ಬರವಾಗಿಯೂ, ಫಾರ್ಮ್ ಕೋಳಿಗಳಿಗೆ ಒಳ್ಳೆಯ ಆಹಾರವೂ ಆಗುತ್ತದೆ.

ಚುಂಗ್ರಿಗೆ ಶಿಷ್ಟ ಕನ್ನಡದಲ್ಲಿ ಸಮುದ್ರ ಚಿಳ್ಳೆಗಳು ಎಂದು ಕರೆದರೆ ಇಂಗ್ಲೀಷ್ ನಲ್ಲಿ SEA URCHIN ಎಂದು ಕರೆಯುತ್ತಾರೆ. ಇದು ನೋಡಲು ಮಾತ್ರ ಸುಂದರ. ಆದರೆ ನಂಜಿನ ಮುಳ್ಳುಗಳ ಕಂಟಕ ಚರ್ಮಿ.ಇದರ ವೈಜ್ಞಾನಿಕ ಹೆಸರು Echinoidea. ಮುಳ್ಳು ಹಂದಿಯ ಶರೀರವನ್ನು ಆವರಿಸಿರುವಂತೆ ಚುಂಗ್ರಿಗಳ ಶರೀರವೂ ತೀಕ್ಷ್ಣವಾದ ಮುಳ್ಳಿನಿಂದ ಆವೃತವಾಗಿರುತ್ತದೆ. ಬ್ಲೀಚಿಂಗ್ ಪುಡಿಯ ದ್ರಾವಣದಲ್ಲಿ ಚುಂಗ್ರಿಯನ್ನು ಮುಳುಗಿಸಿ ಮುಳ್ಳನ್ನು ಸುಲಭವಾಗಿ ಬೇರ್ಪಡಿಸಬಹುದಾಗಿದೆ. ಮೊದಲಿಗೆ ಪುಷ್ಪದ ಆಕೃತಿಯಲ್ಲಿರುವ ಚುಂಗ್ರಿ ಮುಳ್ಳುಗಳನ್ನು ತೆಗೆದ ಮೇಲೆ ಕಿತ್ತಳೆ ಹಣ್ಣಿನ ಆಕೃತಿಯಲ್ಲಿರುವುದು ಗೋಚರವಾಗುತ್ತದೆ. ಇವುಗಳ ಶರೀರವನ್ನು ಆವರಿಸಿಕೊಂಡಿರುವ ಮುಳ್ಳುಗಳಲ್ಲಿ ಎರಡು ವಿಧಗಳಿವೆ. ದೊಡ್ಡ ಮುಳ್ಳುಗಳು ಈ ಜಲಚರದ ಶರೀರವನ್ನು ರಕ್ಷಣೆ ಮಾಡಿದರೆ ಈ ಮುಳ್ಳುಗಳ ತಳಭಾಗದಲ್ಲಿ ಇರುವ ಚಿಕ್ಕದಾದ ಸೂಕ್ಷ್ಮ ಮುಳ್ಳುಗಳ ತಳದಲ್ಲಿ ವಿಷದ ಗ್ರಂಥಿಗಳಿರುತ್ತದೆ.ಅದು ಮುಳ್ಳಿನ ತುದಿಯಲ್ಲಿ ಹೊರಚಾಚಿರುತ್ತದೆ. ಚುಂಗ್ರಿಯ ಶರೀರವು ಗುಂಡಾಗಿದ್ದು,ಅದರ ಒಳಭಾಗದಲ್ಲಿ ಒಂದು ದ್ರವ ತುಂಬಿಕೊಂಡಿರುತ್ತದೆ. ಬಾಯಿಯ ಒಳಭಾಗದಲ್ಲಿ ಆಹಾರವನ್ನು ಅಗಿಯಲು ಉಪಯುಕ್ತವಾಗುವಂಥ ಬಿಳಿಯ ಹಲ್ಲಿನಂತಿರುವ ಅಂಗವಿದ್ದು,ಕಣ್ಣಿಗೆ ಇದು ಪ್ರಾಚೀನ ಕಾಲದಲ್ಲಿ ಗ್ರೀಕರು ಉಪಯೋಗಿಸುತ್ತಿದ್ದ ಲಾಂದ್ರ ದೀಪದಂತೆ ತೋರುತ್ತದೆ.ಅದನ್ನು ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ಗೌರವಾರ್ಥ ಅರಿಸ್ಟಾಟಲ್ ಲಾಂದ್ರ ಎಂದು ಕರೆಯುತ್ತಾರೆ.

ಸಾಗರಗಳ ಬಗ್ಗೆ ತತ್ವಜ್ಞಾನಿ ಅರಿಸ್ಟಾಟಲ್ ಅಪಾರ ಜ್ಞಾನವುಳ್ಳವನಾಗಿದ್ದು, ಇಂದಿಗೂ ಪ್ರಚಲಿತವಿರುವ ಸಾಗರಗಳು ಹಾಗೂ ವಾಯುಗೋಳಗಳ ನಡುವಿನ ಜಲ ವಿನಿಮಯ ಸೂತ್ರದ ಮೂಲ ರೂಪುರೇಷೆಗಳನ್ನು ಪ್ರಸ್ತುತಪಡಿಸಿದನು. ಚುಂಗ್ರಿಯ ಶರೀರದ ಹೊರಮೈಗಳನ್ನು ಕಾಲ್ಸಿಯಂ ಕಾರ್ಬೋನೇಟ್ ನಿಂದಾದ ತಟ್ಟೆಗಳು ಆವರಿಸಿಕೊಂಡಿದೆ. ಸಮುದ್ರ ಸಸ್ಯಗಳು ,ಸಮುದ್ರ ಹುಳುಗಳು,ಸಂಧಿಪದಿಗಳು,ಪುಟ್ಟ ಮೀನುಗಳು ಇವುಗಳ ಆಹಾರ.ಕೆಲವೆಡೆಗಳಲ್ಲಿ ಮನುಷ್ಯರು ಕೂಡಾ ಇದನ್ನು ತಿನ್ನುತ್ತಾರೆ.ಅದರ ಮುಳ್ಳುಗಳನ್ನು ತೆಗೆದ ಬಳಿಕ ತಟ್ಟೆಗಳಲ್ಲಿ ಅಡಕವಾಗಿರುವ ಮಾಂಸವನ್ನು ತಿನ್ನುತ್ತಾರೆ. ಇದರ ಮಾಂಸ ಅಧಿಕ ಪ್ರೋಟೀನ್ ಮತ್ತು ಕಾಲ್ಸಿಯಂ ಗಳನ್ನೊಳಗೊಂಡಿದೆ. ಸಾಮಾನ್ಯವಾಗಿ ಅಮವಾಸ್ಯೆ ಹತ್ತಿರವಾದಂತೆ ಈ ಚುಂಗ್ರಿಗಳು ಕಡಲತೀರಕ್ಕೆ ಹರಿದು ಬರುತ್ತದೆ.ಕೆಲವೊಮ್ಮೆ ಕಡಲತೀರದ ಪಾದ ಮುಳುಗುವಷ್ಟು ನೀರಿನಲ್ಲಿ ಗೋಚರವಾಗುವ ಚುಂಗ್ರಿಯನ್ನು ಹಿಡಿಯಲು ಉತ್ತರ ಕನ್ನಡದ ನಿರ್ದಿಷ್ಟ ಸಮುದಾಯವೊಂದು ಅಮವಾಸ್ಯೆಯ ರಾತ್ರಿ ಬೆಂಕಿಯ ಸೂಡಿ ಮತ್ತು ವಿಶೇಷವಾಗಿ ತಯಾರಿಸಲಾದ ಭರ್ಜಿಯನ್ನು ಹಿಡಿದುಕೊಂಡು ಬರುವುದುಂಟು.

ಚುಂಗ್ರಿಗಳಲ್ಲಿ 500 ಕ್ಕೂ ಹೆಚ್ಚು ಪ್ರಭೇಧಗಳಿದ್ದು,ಜಗತಿನಾದಂತ್ಯ ಸಾಗರಗಳಲ್ಲಿ ಹರಡಿಕೊಂಡಿವೆ. ವಿದೇಶಗಳಲ್ಲಿ ಚುಂಗ್ರಿಯ ಮುಳ್ಳನ್ನು ತೆಗೆದು ಚೊಕ್ಕಟಗೊಳಿಸಿ ಸಿಗರೇಟ್ ಬೂದಿ ತಟ್ಟೆಗಳಂತೆ ಉಪಯೋಗಿಸುತ್ತಾರೆ. ಎಷ್ಟೇ ವರ್ಷಗಳೂ ಕಳೆದರೂ ಚುಂಗ್ರಿಯ ತಟ್ಟೆಗಳು ಕೆಡದೇ ಇರುವುದರಿಂದ ಕೆಲವೆಡೆಗಳಲ್ಲಿ ಶೋಕೇಸಿನಲ್ಲಿ ಅಲಂಕಾರಿಕ ವಸ್ತುವಿನಂತೆ ಇಡುತ್ತಾರೆ.

ಪ್ರಸ್ತುತ ಗಂಗೊಳ್ಳಿಯ ಕಡಲಿನಲ್ಲಿ ಮೀನುಗಾರಿಕೆಗೆ ಹೋದ ಮೀನುಗಾರರ ಬಲೆಗಳಿಗೆ ಚುಂಗ್ರಿಗಳು ಅತ್ಯಧಿಕ ಸಂಖ್ಯೆಯಲ್ಲಿ ಬಿದ್ದಿದ್ದೆ.ಮೀನುಗಾರರು ಹೈರಾಣಾಗಿದ್ದಾರೆ.ಈ ಸಮಸ್ಯೆ ನೀಗಿ ಸಾಂಪ್ರದಾಯಿಕ ಕಂಟ್ಲಿಬಲೆ ಮೀನುಗಾರರ ಬಲೆಗಳಿಗೆ ಸಮೃದ್ಧ ಮತ್ಸ್ಯ ಸಂಪತ್ತು ದೊರಕಲಿ ಎಂದು ಆಶಿಸುತ್ತೇನೆ.

ಸುಧಾಕರ್ ಖಾರ್ವಿ
Editor
www.kharvionline.com

One thought on “ಚುಂಗ್ರಿಯ ಚೆಲ್ಲಾಟ ಮೀನುಗಾರರಿಗೆ ಹೊಟ್ಟೆಪಾಡಿನ ಸಂಕಟ

Leave a Reply

Your email address will not be published. Required fields are marked *