ಪರಿಪಕ್ವ ಸಾಧನೆಯ ಕರಾಟೆ ಪ್ರವೀಣೆ ಸವಿತಾ ಪಿ ಖಾರ್ವಿ

ಮನುಷ್ಯ ಯಾವುದೇ ಕಾರ್ಯ ಆರಂಭಿಸುವ ಮೊದಲು ಮಾನಸಿಕವಾಗಿ ಸದೃಢತೆ ಹೊಂದಬೇಕಾಗುತ್ತದೆ. ಆಯ್ದುಕೊಂಡ ಗುರಿಯೆಡಗೆ ಸಾಗಬೇಕಾದರೆ ಪ್ರಯಾಣದ ಮಧ್ಯದಲ್ಲಿ ಎಷ್ಟೇ ಅಡೆತಡೆಗಳು ಬಂದರೂ ಎದುರಿಸಿ ಸಾಧಿಸಿಯೇ ತೀರುತ್ತೇನೆ ಎಂಬ ಛಲದಿಂದ ಮುನ್ನುಗ್ಗಿದಾಗ ಮಾತ್ರ ಗುರಿ ತಲುಪುತ್ತೇವೆ. ಇದೇ ಉದಾತ್ತ ಅಂಶಗಳ ಬೆಳಕಿನಲ್ಲಿ ಧೇಯ್ಯೋದ್ದೇಶವನ್ನಿಟ್ಟುಕೊಂಡು ಕಠಿಣವಾದ ಪರಿಶ್ರಮದಿಂದ ಕರಾಟೆ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಅಪೂರ್ವ ಸಾಧನೆಗೈದ ನಮ್ಮ ಸಮಾಜದ ಕುಂದಾಪುರ ಖಾರ್ವಿಕೇರಿಯ ಸವಿತಾ ಖಾರ್ವಿ ಸಮಾಜದ ಕೀರ್ತಿಯನ್ನು ಪ್ರಜ್ವಲಿಸಿದ್ದಾರೆ.

2000 ರಲ್ಲಿ ಕುಂದಾಪುರದ ಇಂಟರ್ ನ್ಯಾಶನಲ್ ಬುಡೋಕಾನ್ ಕರಾಟೆ ತರಬೇತಿ ಕೇಂದ್ರಕ್ಕೆ ಸೇರ್ಪಡೆಯಾದ ಸವಿತಾ ಖಾರ್ವಿ ಪ್ರಸಿದ್ಧ ಕರಾಟೆ ಗುರುಗಳಾದ ಕಿರಣ್ ರವರಿಂದ ತರಬೇತಿ ಕರಾಟೆ ಪಟ್ಟುಗಳನ್ನು ಕಲಿತುಕೊಂಡರು. ಕಲಿಕೆಯಲ್ಲಿ ಶ್ರದ್ಧೆ, ನಿರಂತರ ಪರಿಶ್ರಮದಿಂದಾಗಿ ಸವಿತಾರಿಗೆ ಕಡಿಮೆ ಅವಧಿಯಲ್ಲಿ ಸಾಧನೆಯ ಅವಕಾಶಗಳು ಕೂಡಿ ಬಂತು. 2002 ರಲ್ಲಿ ಇಂಡಿಯನ್ ಮಾರ್ಷಲ್ ಆಫ್ ಬುಡೋಕಾನ್ ಇದರ ಜಿಲ್ಲಾ ಮಟ್ಟದ ಸ್ಪೋರ್ಟ್ಸ್ ನಲ್ಲಿ cross country 5 ಕೀಮಿ ಸ್ಪರ್ಧೆಯಲ್ಲಿ ಪ್ರಥಮ ಮತ್ತು 100 ಮೀಟರ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಮಿಂಚಿದರು. ಸವಿತಾರವರ ಮಿಂಚಿನ ಓಟಕ್ಕೆ ಇಲ್ಲಿಂದಲೇ ನಾಂದಿಯಾಯಿತು.

2003 ರಲ್ಲಿ ಮೂಡಬಿದ್ರೆಯಲ್ಲಿ ನಡೆದ ಇನ್ಸ್ಟಿಟ್ಯೂಟ್ ಆಫ್ ಬುಡೋಕಾನ್ ಇಂಟರ್ ನ್ಯಾಷನಲ್ ಕರಾಟೆ ನಡೆಸಿದ ಸ್ಪರ್ಧೆಯ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಮತ್ತು ಪೈಟ್ ನಲ್ಲಿ ತೃತೀಯ ಕಂಚು ಪ್ರಾಪ್ತಿಯಾಯಿತು. ಶೃಂಗೇರಿಯ ವೇ ಆಫ್ ಟ್ರೇಡಿಷನಲ್ ಮಾರ್ಷಲ್ ಆರ್ಟ್ಸ್ ಇವರು ನಡೆಸಿದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಚಿನ್ನದ ಪದಕದ ವಿಜೇತರಾದರು. 2004 05 ರಲ್ಲಿ ಕುಂದಾಪುರ ವಡೇರ ಹೋಬಳಿಯ DYFI ಸಂಘಟಿಸಿದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 3 ಚಿನ್ನ,1 ಬೆಳ್ಳಿ ಮತ್ತು 1 ಕಂಚಿನ ಪದಕ ಪಡೆದುಕೊಂಡು ಅತ್ಲೆಟಿಕ್ ಸ್ಪರ್ಧೆಯಲ್ಲೂ ತಮ್ಮ ಪಾರುಪತ್ಯವನ್ನು ಸ್ಥಾಪಿಸಿದರು.

ಎಲ್ಲದ್ದಕ್ಕೂ ಶಿಖರಪ್ರಾಯವೆಂಬಂತೆ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಸವಿತಾ ಚಿನ್ನದ ಪದಕ ವಿಜೇತರಾಗಿ ಸಮಾಜದ ಕೀರ್ತಿಯನ್ನು ಮೊಳಗಿಸಿದ್ದಾರೆ. ಮುಂಬೈ ಮತ್ತು ಬೆಂಗಳೂರಿನಲ್ಲಿ ಕೂಡಾ ಸವಿತಾರಿಗೆ ಹಲವಾರು ಪ್ರಶಸ್ತಿಗಳು ಒಲಿದು ಬಂದಿದೆ. 2 ನೇ ವರ್ಷದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ 2022 ಇದರ ಸಂಘಟಕರಾದ ಬುಡೋಕಾನ್ ಕರಾಟೆ and ಸ್ಪೋರ್ಟ್ಸ್ ಅಸೋಸಿಯೇಷನ್ ಇವರು ಮೇ 21 2022 ರಂದು ಉಡುಪಿಯಲ್ಲಿ ಆಯೋಜಿಸಿದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಖಾರ್ವಿಕೇರಿಯ ಶ್ರೀ ಮಹಾಕಾಳಿ ಕರಾಟೆ ವಿದ್ಯಾರ್ಥಿಗಳಾದ ಕೃಷಿತಾ, ಮನಸ್ವಿ, ಶ್ರೀಜಿತ್, ತನಿಷ್ಕ್, ಚಿರಾಗ್, ಹೃಥ್ವಿ, ಪ್ರಿನ್ಸ್, ನಿಶಾಂತ್ ಇವರು 4 ಚಿನ್ನ,1 ಬೆಳ್ಳಿ,ಮತ್ತು 5 ಕಂಚಿನ ಪದಕ ಪಡೆದುಕೊಂಡಿರುತ್ತಾರೆ. ಇವರೆಲ್ಲರೂ ಪ್ರಸ್ತುತ ಕಿರಣ್ ಡ್ರ್ಯಾಗನ್ ಫಿಸ್ಟ್ ಮಾರ್ಷಲ್ ಆರ್ಟ್ ನ ಶಿಕ್ಷಕಿಯಾದ ಸವಿತಾ ಬಳಿಯಲ್ಲಿ ತರಬೇತಿ ಪಡೆದಿದ್ದಾರೆ.

ನಿರಂತರ ಶ್ರಮ ಛಲ ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿರುವ ಸವಿತಾ ಖಾರ್ವಿಯವರು ಕರಾಟೆ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅನನ್ಯವಾದುದು. ಅವರನ್ನು ಅರಸಿ ಬಂದ ಪ್ರಶಸ್ತಿಗಳು ಕೊರಳಿಗೆ ಅಲಂಕಾರವಾದ ಪದಕಗಳು ಸವಿತಾರ ಯಶೋಗಾಥೆಗೆ ಸಾಕ್ಷಿಯಾಗಿದೆ. ಕರಾಟೆ ಆತ್ಮರಕ್ಷಣೆಯ ಕಲೆ ಮುಖ್ಯವಾಗಿ ಹೆಣ್ಣುಮಕ್ಕಳು ಪ್ರಸ್ತುತ ಇಂದಿನ ಕಾಲಮಾನದಲ್ಲಿ ಕಲಿಯಬೇಕಾದ ಅನಿವಾರ್ಯತೆ ತುಂಬಾ ಇದೆ. ಮಾನಸಿಕ ದೃಡತೆಗೆ ಮತ್ತು ದೈಹಿಕ ಸ್ಥಿರತೆಗೆ ಕರಾಟೆ ಅತ್ಯುತ್ತಮ ಸಾಧನ.

2000 ಇಸ್ವಿಯಿಂದ 2022 ರವರೆಗೆ ಕರಾಟೆ ಪ್ರವೀಣೆ ಸವಿತಾರನ್ನು ಹತ್ತು ಹಲವು ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದಿದೆ. ಪರಿಪಕ್ವ ಸಾಧನೆಯ ಪ್ರತೀಕವಾಗಿರುವ ಸವಿತಾರ ಅಪೂರ್ವ ಸಾಧನೆ ಇತರರಿಗೆ ಸ್ಪೂರ್ತಿದಾಯಕವಾಗಿದೆ. ಅವರಿಗೆ ಖಾರ್ವಿ ಆನ್ಲೈನ್ ತುಂಬು ಹೃದಯದ ಅಭಿನಂದನೆಗಳನ್ನು ಈ ಸಂದರ್ಭದಲ್ಲಿ ಸಲ್ಲಿಸುತ್ತದೆ.

ಸುಧಾಕರ್ ಖಾರ್ವಿ
Editor
www.kharvionline.com

3 thoughts on “ಪರಿಪಕ್ವ ಸಾಧನೆಯ ಕರಾಟೆ ಪ್ರವೀಣೆ ಸವಿತಾ ಪಿ ಖಾರ್ವಿ

  1. Amazing achievements, yet so humble… Congratulations to Savitha Kharvi. Wishing her All the best gor her future endeavours.

  2. ಸವಿತಾ ಖಾರ್ವಿಯವರ ಇಷ್ಟೊಂದು ಸಾಧನೆಗಳು, ಎಲೆಯ ಮರೆಯ ಕಾಯಿಯಂತೆ … ಅವರಿಗೆ ಅಭಿನಂದನೆಗಳು… ಮಾನಸಿಕ ಶಿಸ್ತು, ದೈಹಿಕ ಶಕ್ತಿ ಮತ್ತು ಚುರುಕುತನದ ಅಗತ್ಯವಿರುವ ಈ ಕ್ರೀಡೆಯಲ್ಲಿ ಆಕೆಯ ಸಾಧನೆ ಶ್ಲಾಘನೀಯ . ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ.

Leave a Reply

Your email address will not be published. Required fields are marked *