ಪಡುಗಡಲಿನ ವರಪ್ರಸಾದ ಕಂಚುಗೋಡು
ಭೂಮಿಯಲ್ಲಿ ಪ್ರತಿಯೊಂದು ಸ್ಥಳಕ್ಕೂ ಅದರದ್ದೇ ಆದ ಆಕರ್ಷಣಾ ಶಕ್ತಿಯಿರುತ್ತದೆ. ಪ್ರಾಕೃತಿಕ ಸೌಂದರ್ಯ ಹೆಚ್ಚಿದ್ದರೆ ಅಂತಹ ಸ್ಥಳವನ್ನು ಪುನಃ ಪುನಃ ನೋಡಲು ಬಯಸುತ್ತೇವೆ. ಇನ್ನು ಕೆಲವು ಸ್ಥಳಗಳನ್ನು ನಾವು ಅಥವಾ ನಮ್ಮ ಪ್ರೀತಿಪಾತ್ರರು ಹುಟ್ಟಿದ್ದ ನೆಲವೆಂಬ ಕಾರಣಕ್ಕೆ ಪ್ರೀತಿಸುತ್ತೇವೆ. ನಾವು ಹುಟ್ಟಿದ ನೆಲವು ಪ್ರಕೃತಿದತ್ತವಾದ ಸೌಂದರ್ಯ ಹೊಂದಿದ್ದರೆ, ಆ ನೆಲವೇ ಸ್ವರ್ಗವೆಂದೇ ಹೇಳಬಹುದು. ಅಂತಹ ಸೌಂದರ್ಯದ ಗಣಿಯೆಂದೇ ಹೇಳಬಹುದಾಗ ವಿಶೇಷ ಮತ್ತು ವಿಭಿನ್ನವಾದ ಊರೆಂದರೆ ಕಂಚುಗೋಡು. ಕುಂದಾಪುರದಿಂದ ತ್ರಾಸಿ ಮಾರ್ಗವಾಗಿ ಗಂಗೊಳ್ಳಿಗೆ ಹೋಗುವಾಗ ಕೊಡಪಾಡಿ ಸಿಗುತ್ತದೆ. ಅಲ್ಲಿಂದ ಪಶ್ಚಿಮ ದಿಕ್ಕಿಗೆ ಒಂದರ್ಧ ಕಿ.ಮೀ. ನಡೆದುಕೊಂಡು ಹೋದರೆ ಸಿಗುವ ಊರೇ ಕಂಚುಗೋಡು. ಗುಜ್ಜಾಡಿ ಮತ್ತು ಹೊಸಾಡು ಗ್ರಾಮಗಳ ನಡುವೆ ಸಮನಾಗಿ ಹಂಚಿಕೆಯಾದ ಊರಿದು. ಸಮುದ್ರವನ್ನೇ ನಂಬಿಕೊಂಡು, ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸಮುದ್ರದ ಕಸುಬನ್ನೇ ಅವಲಂಬಿಸಿರುವ ಕಂಚುಗೋಡಿನ ಪಶ್ಚಿಮ ಗಡಿಯು ಸಂಪೂರ್ಣ ಸಮುದ್ರದಿದಂದಲೇ ಆವರಿಸಿದೆ. ನಾನಿಂದು ಹೇಳಹೊರಟ ನನ್ನೂರು ಕೇವಲ ಸಾಂಕೇತಿಕ; ಕರ್ನಾಟಕದ ಕರಾವಳಿಯಲ್ಲಿ, ಸಮುದ್ರದಕ್ಕೆ ಅಂಟಿಕೊಂಡಿರುವ ಎಲ್ಲಾ ಊರುಗಳ ಕಥೆಯಿದು. ರಟ್ಟೆ ಮುರಿದು ದುಡಿಯುವುದನ್ನು ಬಿಟ್ಟು, ಬೇರೇನು ತಿಳಿದಿರದ ಕಷ್ಟ ಜೀವಿಗಳ ಊರುಗಳಿವು. ಊರಿನ ಶೇಕಡಾ 95 ರಷ್ಟು ಜನರು ಸದಾಕಾಲ ಕೂತಲ್ಲಿ, ನಿಂತಲ್ಲಿ ಸಮುದ್ರದ ಕುರಿತು ಯೋಚಿಸುತ್ತಿರುತ್ತಾರೆ; ಇಲ್ಲವೇ ಸಮುದ್ರಕ್ಕೆ ಸಂಬಂಧಿಸಿದ ಕೆಲಸ ಮಾಡುತ್ತಾ ಇರುತ್ತಾರೆ. ಊರಿನಲ್ಲಿರುವ ಎಲ್ಲಾ ಜಾತಿಯ ಬಂಧುಗಳಿಗೆ ಸಮುದ್ರದ ಕುರಿತು ಅರಿವಿರುತ್ತದೆ. ಯಾರನ್ನೇ ಕೇಳಿದರೂ ಸಮುದ್ರದ ಕುರಿತು ಗಂಟೆಗಟ್ಟಲೆ ಮಾತನಾಡುತ್ತಾರೆ. ಸಮುದ್ರ ಶಾಂತವಾಗಿ ಮೀನುಗಾರಿಕೆಗೆ ಅವಕಾಶ ಸಿಕ್ಕಷ್ಟು ಸಮಯ, ನಮ್ಮೂರಿನ ಪ್ರತಿಯೊಬ್ಬರು ದೊರೆಯ ಮಕ್ಕಳಂತೆ. ದಾನ ಧರ್ಮಾದಿ ಕಾರ್ಯಗಳಿಗೆ ಎತ್ತಿದ ಕೈ. ದೇಹಿ ಎಂದವರಿಗೆ ಎದೆಯನ್ನು ಬಗೆದು ದಾರಿ ಕೊಡುವಷ್ಟು ಉದಾರಿಗಳು. ಮಳೆಗಾಲ ಪ್ರಾರಂಭವಾಗಿ, ಬೀಸುವ ಗಾಳಿಯ ಆರ್ಭಟ ಹೆಚ್ಚಾಗಿ ಸಮುದ್ರ ಮುನಿಸಿಕೊಂಡರೆ ಸಾಕು, ಊರಿನ ಪ್ರತಿಯೊಬ್ಬರು ಮುದುಡಿ ಗೂಡು ಸೇರುತ್ತಾರೆ. ಒಂದೊಂದು ಕಾಸಿಗೂ ಪಡಬಾರದ ಕಷ್ಟ ಪಡುತ್ತಾರೆ. ಅಚ್ಚುಕಟ್ಟಾದ ಜೀವನ ನಡೆಸುತ್ತಾರೆ. ಬದುಕು ನಡೆಸಲು ದುಸ್ಥರವಾದಾಗ ಸಾಲದ ಮೊರೆ ಹೋಗುತ್ತಾರೆ. ಕಡಿಮೆ ಹಣ ಸಿಗುವ ಮೀನುಗಾರಿಕಾ ಸಂಬಂಧಿ ಕೆಲಸವನ್ನು ಹುಡುಕಿಕೊಂಡು ಹೋಗುತ್ತಾರೆ. ಮಳೆಗಾಲದ ಮೂರು ತಿಂಗಳಂತೂ ನಮ್ಮೂರಿನ ಜನರಿಗೆ ಸಿಂಹಸ್ವಪ್ನದಂತೆ. ಬದುಕು ಬಹಳ ಕಷ್ಟವೆಂಬುದು ಈ ಕಾಲದಲ್ಲಿ ಅರಿಯುತ್ತಾರೆ. ಹಣ ಉಳಿತಾಯದ ಮಹತ್ತ್ವ ಅರಿಯುವ ಕಾಲವದು. ಆದರೆ ಇದು ಕ್ಷಣಿಕ; ಮಳೆಗಾಲ ಮುಗಿದು ಒಳ್ಳೆಯ ಗಳಿಕೆ ಪ್ರಾರಂಭವಾದಾಗ ಕಲಿಯುಗದ ಕರ್ಣರು ನಮ್ಮೂರಿನಲ್ಲಿ ಅಲ್ಲಲ್ಲೇ ಕಾಣಸಿಗುತ್ತಾರೆ. ಆದರೆ ಈಗೀಗ ನಮ್ಮೂರಿನ ಜನರಿಗೆ ಮೂಲ ಕಸುಬಿನ ಬಗ್ಗೆ ಸ್ವಲ್ಪ ಅಸಮಾಧಾನ ಉಂಟಾಗಿದೆ. ಆ ಕಾರಣಕ್ಕಾಗಿಯೇ ಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಕಳುಹಿಸುತ್ತಿದ್ದಾರೆ. ಅನಿರ್ದಿಷ್ಟವಾದ ಕಸುಬು; ದೇಹವೆಲ್ಲಾ ದಂಡಿಸಿದರೂ ಒಮ್ಮೊಮ್ಮೆ ಬಿಡಿಗಾಸೂ ಸಿಗದ ಪರಿಸ್ಥಿತಿ, ಮೀನುಗಾರಿಕೆಗೆಂದು ಹೋದವರು ವಾಪಸ್ಸು ಬರುವರೆಂಬ ಗ್ಯಾರಂಟಿಯಿಲ್ಲದ ಕಾರಣ ಮೀನುಗಾರಿಕೆ ಸಾಕು ಎನ್ನುವಷ್ಟು ಜನರು ರೋಸಿ ಹೋಗಿದ್ದಾರೆ.
ನಾವು ಚಿಕ್ಕವರಿದ್ದಾಗ ನಮ್ಮೂರಿನ ಕಡಲ ದಂಡೆಯಲ್ಲಿ ಆಮೆಗಳು ಮೊಟ್ಟೆ ಇಡಲು ದಡದತ್ತ ಬರುತ್ತಿದ್ದವು. ಆದರೆ ಈಗ ಆಮೆಗಳ ಸಂತತಿ ಕಡಿಮೆಯಾದ ಕಾರಣವೋ, ಜನವಸತಿಯ ಹೆಚ್ಚಳಗೊಂಡ ಕಾರಣವೋ ಕಡಲಾಮೆಗಳು ದಡದತ್ತ ಬರುವುದೇ ಅಪರೂಪವಾಗಿದೆ. ಹಿಂದೆಲ್ಲ ಸ್ವಲ್ಪ ಪ್ರಮಾಣದಲ್ಲಿ ಬೇಸಾಯ ಮಾಡುತ್ತಿದ್ದ ಗದ್ದೆಗಳಲ್ಲಿ ವಸತಿ ಸಮುಚ್ಚಯಗಳು ತಲೆಯೆತ್ತಿವೆ.
ಮಾಟುಬಲೆ ದೋಣಿಗಳು, ಕೈರಂಪಣಿ ದೋಣುಗಳು, ಗಿಲ್‌ನೆಟ್ ದೋಣಿಗಳು, ಪಟ್ಟಬಲೆ ದೋಣಿಗಳು, ಮರ್ಗಿ ದೋಣಿಗಳು ನಮ್ಮೂರಿಗೆ ಶೋಭೆ ತಂದಿವೆ. ಸಮುದ್ರಕ್ಕೆ ಹಾಲನ್ನು ಅರ್ಪಿಸಿ, ಸಮುದ್ರ ಪೂಜೆ ನಡೆಸಿದ ಮೇಲೆಯೆ ಸಮುದ್ರಕ್ಕೆ ಇಳಿಯುವ ದೋಣಿಗಳು ತಮ್ಮ ಸಂಪ್ರದಾಯವನ್ನು ಎಂದೂ ಬಿಟ್ಟು ನಡೆದಿಲ್ಲ. ಮೀನುಗಾರಿಕೆಗೆ ಸಂಬಂಧಿಸಿದ ಗಾದೆಗಳು, ನುಡಿಗಟ್ಟುಗಳು ನಮ್ಮೂರಿನಲ್ಲಿ ಜನಜನಿತ. ವಿಶೇಷವೆಂದರೆ ಮೀನುಗಾರಿಕೆಯಿಂದ ಹೊರಗಿರುವವರಿಗೆ ಇದನ್ನು ಹೇಳಿದರೆ ಅರ್ಥವಾಗದು. ಸಮುದ್ರದಲ್ಲಿ ಬಂದು ಹೋಗುವ ಪ್ರತಿಯೊಂದು ತೆರೆಗಳು ಎಷ್ಟು ರಭಸದಿಂದ ಬರುತ್ತವೆ, ಎಷ್ಟು ದೂರದವರೆಗೆ ಬರುತ್ತವೆ ಎಂಬುದನ್ನು ಕರಾರುವಾಕ್ಕಾಗಿ ಹೇಳುವ ಜಾಣ್ಮೆ ಹೊಂದಿದ್ದಾರೆ. ದೋಣಿಯನ್ನು ಸಮುದ್ರಕ್ಕೆ ಇಳಿಸುವಾಗ ತೆರೆಗಳ ಲೆಕ್ಕಾಚಾರ ಸರಿಯಾಗಿಲ್ಲದಿದ್ದರೆ ಹುಟ್ಟು ಹಾಕಿ ಮುಂದೆ ಹೋಗಲು ಸಾಧ್ಯವೆ?
ಸಮುದ್ರದ ಯಾವುದೇ ಜಾತಿಯ ಮೀನನ್ನು ತಂದು ತೋರಿಸಿದರೂ ಅದರ ಹೆಸರು, ರುಚಿ, ಅದರ ಆವಾಸ ಸ್ಥಾನ, ಎಷ್ಟು ದೂರದಲ್ಲಿ, ಯಾವ ಬಲೆಗೆ ಸಿಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಬಲ್ಲರು. ಊರಿನಲ್ಲಿ ಕೈರಂಪಣಿ ಬಲೆ ಎಳೆಯುವಾಗ ಹೆಂಗಸರು, ಮಕ್ಕಳು ಸೇರಿದಂತೆ ಎಲ್ಲಾರೂ ಜಾತ್ರೆ ಸೇರುತ್ತಾರೆ. ಬಲೆ ಎಳೆಯುವವರಿಗೆ ಯಾವ ಮೀನು, ಎಷ್ಟು ಪ್ರಮಾಣದಲ್ಲಿ ಸಿಗಬಹುದೆಂಬ ಕುತೂಹಲವಿದ್ದರೆ, ಹೆಂಗಸರು ಮತ್ತು ಮಕ್ಕಳಿಗೆ ಬಲೆ ಎಳೆಯುವುದರಿಂದ ಹಿಡಿದು ದೋಣಿ ಮೇಲಕ್ಕೆ ಬರುವವರೆಗಿನ ಎಲ್ಲಾ ಪ್ರಕ್ರಿಯೆಗಳನ್ನು ನೋಡುವ ಉತ್ಸಾಹ. ಸಾಮಾನ್ಯವಾಗಿ ಊರಿನ ಎಲ್ಲರೂ ಉಪ್ಪು ನೀರಿನ ವಾತಾವರಣಕ್ಕೆ ಹೊಂದಿಕೊಂಡಿರುತ್ತಾರೆ. ಚಿಕ್ಕವರಿರುವಾಗಲೇ ಮಕ್ಕಳು ನೀರಿನಲ್ಲಿ ಮುಳುಗುವುದನ್ನು, ಈಜುವುದನ್ನು ಕಲಿಯುತ್ತಾರೆ. ಇದರ ಮುಂದುವರಿದ ಭಾಗವೆಂಬಂತೆ ಸಮುದ್ರದಲ್ಲಿ ಮುಳುಗಿ ಪಚ್ಚಿಲೆ(ಕಡಲ ಮೊರುವಾಯಿ/ ಬ್ಯಾಸ್ಕಿನ್ ಮೋಳಿ) ತೆಗೆಯುವ ಯುವಕರಿದ್ದಾರೆ. ಉಸಿರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ನೂರಾರು ಬಾರಿ ಮುಳುಗಿ, ಮುಳುಗಿರುವ ಬಂಡೆಯ ಮೇಲಿನಿಂದ ಪಚ್ಚಿಲೆ ತೆಗೆಯಲು ಎಂಟೆದೆ ಇರಲೇಬೇಕು. ಆದರೆ ಇತ್ತೀಚಿಗೆ ಬಂಡೆಗಳ ಮೇಲೆ ಪಚ್ಚಿಲೆ ಕಟ್ಟುವುದು ಕಡಿಮೆಯಾಗಿದೆ. ಮೀನುಗಾರಿಕಾ ಋತುವಿನಲ್ಲಿ ಹಗಲಿರುಳೆನ್ನದೆ ದುಡಿಯುವ ಮೀನುಗಾರರಿಗೆ, ಮಳೆಗಾಲದಲ್ಲಿ ತೂಫಾನ್ ಉಂಟಾಗಿ, ಸಮುದ್ರ ರೌದ್ರಾವತಾರ ತಾಳಿದಾಗ ತಕ್ಕಮಟ್ಟಿನ ವಿಶ್ರಾಂತಿ ಪಡೆಯುತ್ತಾರೆ.
ಹೋಳಿ ಹಬ್ಬ ಊರಿನ ಸಾಂಸ್ಕೃತಿಕ ಹಬ್ಬವೆಂಬಂತೆ ಆಚರಿಸುತ್ತಾರೆ. ನಾಲ್ಕೈದು ದಿನಗಳ ಸಂಭ್ರಮದಲ್ಲಿ ಜಾತಿಭೇದವಿಲ್ಲದೆ ಜನರೆಲ್ಲರೂ ಒಂದಾಗುತ್ತಾರೆ. ಊರಿನ ರಾಮ ದೇವಾಲಯ ಸುತ್ತಲಿನ ಐದಾರು ಊರುಗಳಿಗೆ ಶ್ರದ್ಧಾ ಕೇಂದ್ರ. ಈ ದೇವಾಲಯದ ಹೆಸರಲ್ಲಿ ಜನರೆಲ್ಲರೂ ಒಂದಾಗುತ್ತಾರೆ. ಇಡೀ ಊರಿನಲ್ಲಿ ಪ್ರತಿಶತ ತೊಂಬತ್ತರಷ್ಟು ಕೊಂಕಣಿ ಖಾರ್ವಿ ಸಮಾಜದವರರು ಇರುವುದರಿಂದ, ಈ ಜನಾಂಗದ ಜನಪದೀಯ ಪರಂಪರೆಯ ಕುರಿತು ಚರ್ಚಿಸುತ್ತಾರೆ; ಹೋಳಿ ಕುಣಿತ ಇತ್ಯಾದಿ ಜನಪದೀಯ ಕಲೆಯನ್ನು ಉಳಿಸಿ ಬೆಳೆಸುವ ಕುರಿತು ಚಿಂತನೆ ನಡೆಸುತ್ತಾರೆ. ಗುಜ್ಜಾಡಿ ಗ್ರಾಮದಲ್ಲಿರುವ ಜನರಿಗೆ ಸನ್ಯಾಸಿ ಗ್ರಾಮದೇವರಾದರೆ, ಹೊಸಾಡು ಗ್ರಾಮದಲ್ಲಿರುವ ಕಂಚುಗೋಡಿಗೆ ಜಟ್ಟಿಗೇಶ್ವರ ಗ್ರಾಮದೇವರು. ಮಕ್ಕಳಿಂದ ಹಿಡಿದು ಮುದುಕರವರೆಗೆ ಯಾರಿಗೆ, ಯಾವ ತೊಂದರೆ ಬರಲಿ ಮನೆಯ ವರಾಂಡದಲ್ಲಿ ಗ್ರಾಮ ದೇವರ ಕಡೆ ಮುಖ ಮಾಡಿ ಒಂದು ತೆಂಗಿನಕಾಯಿ ಒಡೆದರೆ ಸಾಕು, ಕಷ್ಟಗಳು ಪರಿಹಾರವಾಗುವುದೆಂಬ ಬಲವಾದ ನಂಬುತ್ತಾರೆ. ನಮ್ಮೂರಿನ ಪ್ರಮುಖ ಆಕರ್ಷಣೆ ಉತ್ತರಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಪಾರ್ಥೇಶ್ವರ ದೇವಾಲಯ. ವಿಜಯನಗರ ಸಾಮಂತ ಅರಸರು ಕಟ್ಟಿದ್ದರು ಎನ್ನಲಾದ ಈ ದೇವಾಲಯ ಸಂಪೂರ್ಣ ಶಿಲಾಮಯವಾಗಿದೆ. ಗರ್ಭಗುಡಿಯ ಶಿವಲಿಂಗದ ಎದುರಿನ ನಂದಿ ಎಲ್ಲರ ಗಮನ ಸೆಳೆಯುತ್ತದೆ. ದೇವಾಲಯವನ್ನು ಬಂಡೆಯ ಮೇಲೆ ಕಟ್ಟಲಾಗಿದ್ದು, ಬಂಡೆಯ ಮೇಲೆ ಹಲವಾರು ಕೆತ್ತನೆಗಳಿದ್ದವು ಎಂದು ಊರಿನ ಹಿರಿಯರು ನೆನಪು ಮಾಡಿಕೊಳ್ಳುತ್ತಾರೆ. ಈ ಬಂಡೆಯ ಕೆಲವು ಭಾಗಗಳನ್ನು ಸ್ಫೋಟಿಸಿ ಕುಂದಾಪುರದಲ್ಲಿ ಸೇತುವೆ ನಿರ್ಮಿಸುವ ಕಾಲದಲ್ಲಿ ಒಯ್ದಿದ್ದರು ಎಂದು ಸ್ಥಳೀಯರು ಬೇಸರ ಪಟ್ಟು ಹೇಳುತ್ತಾರೆ. ಬಂಡೆಯ ಕೆಳಗಿದ್ದ ಕೆರೆ ಈಗ ನೆನಪು ಮಾತ್ರ. ಇತಿಹಾಸದ ಆಸಕ್ತಿ ಇರುವವರಿಗೆ ಅಧ್ಯಯನಕ್ಕೆ ಸೂಕ್ತ ಸ್ಥಳವಿದು.
ಇತ್ತೀಚಿಗಂತೂ ಕಡಲಕೊರೆತ, ಮತ್ಸ್ಯಕ್ಷಾಮದಿಂದಾಗಿ ಊರಿನ ಜನರು ಕಂಗೆಟ್ಟು ಹೋಗಿದ್ದಾರೆ. ಊರಿಗೊಂದು ಸರ್ಕಾರಿ ಶಾಲೆಯಿದ್ದು ಅದನ್ನು ಉಳಿಸಿಕೊಳ್ಳಲು ಶಾಲೆಯ ಹಿರಿಯ ವಿದ್ಯಾರ್ಥಿಗಳು ಹೆಣಗಾಡುತ್ತಿದ್ದಾರೆ. ಸ್ಮಶಾನ, ಅಂಚೆ ಕಛೇರಿ, ಸಾರಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರ ಊರಿನ ಪ್ರಮುಖ ಬೇಡಿಕೆಗಳು. ಸದಾ ಚಟುವಟಿಕೆಯಲ್ಲಿಯೇ ಇರುವ ನಮ್ಮೂರು, ಕುಂದಾಪುರ ತಾಲೂಕಿನಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಂಡ ಸುಂದರ ಊರು. ಕರ್ನಾಟಕ ಕರಾವಳಿಯ ಎಲ್ಲಾ ಊರುಗಳಂತೆ ನಮ್ಮೂರು ಸಹ ಪಡುಗಡಲಿನ ವರಪ್ರಸಾದವೆಂದರೆ ತಪ್ಪಾಗಲಾರದು.
ನಾಗರಾಜ ಖಾರ್ವಿ ಕಂಚುಗೋಡು
ಕಂಚಗೋಡು ಸಾಹಿತ್ಯ ಕಲೆಗಳ ಸಮೃದ್ಧ ನೆಲ.ಯಕ್ಷಗಾನ ಕಲಾವಿದರ,ಅಪ್ರತಿಮ ಗಾಯಕರ,ಸಾಹಿತ್ಯ ಪ್ರತಿಭೆಗಳ ಪುಣ್ಯಭೂಮಿ.ಹೃದಯಸ್ಪರ್ಶಿ ಲೇಖನ.ಮನೋಜ್ಞ ನಿರೂಪಣೆ.ಅದ್ಬುತ ಪದಲಾಲಿತ್ಯದ ಅಪೂರ್ವ ಲೇಖನ👏👏👏👏👌👌👌👌👍👍👍👍💐💐💐💐💐💐🙏🙏🙏
ಪ್ರೀತಿಪೂರ್ವಕ ಧನ್ಯವಾದಗಳು ಸರ್
ನಮ್ಮೂರು ನಮ್ಮ ಹೆಮ್ಮೆ…. ಬಹಳ ಚೆನ್ನಾಗಿ ವರ್ಣಿಸಿದ್ದೀರಿ 👌
ನಮ್ಮೂರು ನಮ್ಮ ಹೆಮ್ಮೆ…. ಬಹಳ ಚೆನ್ನಾಗಿ ವರ್ಣಿಸಿದ್ದೀರಿ 👌
👌