ಜಗದ್ವಿಖ್ಯಾತ ಜೋಗ ಜಲಪಾತವನ್ನು ಸೃಷ್ಟಿಸುವ ಶರಾವತಿ ಕನ್ನಡನಾಡ ಭಾಗೀರಥಿ ಎಂದೇ ಖ್ಯಾತವಾಗಿದೆ. ಈ ಪವಿತ್ರ ಪುಣ್ಯ ನದಿ ಹುಟ್ಟುವುದು ತೀರ್ಥಹಳ್ಳಿಗೆ 16 ಕಿಮೀ ದೂರದಲ್ಲಿರುವ ಕವಲೇದುರ್ಗದ ಸಮೀಪದ ಅಂಬುತೀರ್ಥದಲ್ಲಿ
ಪಶ್ಚಿಮಘಟ್ಟ ಶ್ರೇಣಿಗಳ ದಟ್ಟಕಾನನದ ಮಲೆನಾಡಿನ ಅಂಬುತೀರ್ಥದಲ್ಲಿ ಹುಟ್ಟುವ ಶರಾವತಿ ನದಿ ಕೇವಲ ನದಿಯಲ್ಲ ಕೋಟ್ಯಾಂತರ ಜನರ ಬಾಳು ಬೆಳಗಿದ ಭಾಗ್ಯದೇವತೆ ನಾಡಿಗೆ ಬೆಳಕು ನೀಡಿದ ಶಕ್ತಿದೇವತೆ ಲಕ್ಷಾಂತರ ಜೀವವೈವಿಧ್ಯಗಳ ಆಶ್ರಯ ದೇವತೆ. ಅಂಬುತೀರ್ಥದಲ್ಲಿ ಹುಟ್ಟುವ ಪರಮಪಾವನೆ ಶರಾವತಿ ನದಿ ಹೊಸನಗರ, ಸಾಗರ ಮತ್ತು ಹೊನ್ನಾವರ ತಾಲೂಕಿನಲ್ಲಿ ಹರಿಯುತ್ತದೆ. ಅಂಬುತೀರ್ಥದಲ್ಲಿ ಚಿಕ್ಕದಾಗಿ, ಬರುಬರುತ್ತಾ ತೊರೆಯಾಗಿ, ಜಲಪಾತವಾಗಿ, ನೆರೆಯಾಗಿ, ಮಹಾಪ್ರವಾಹವಾಗಿ ಜೀವನದಿ ತಾಯಿ ಶರಾವತಿ ಹರಿಯುತ್ತಾಳೆ. ಆಕೆಯ ಹರವಿನಲ್ಲಿ ಜನತೆಯ ಜೀವನ ಸಂಸ್ಕೃತಿಯ ಎಲ್ಲಾ ಮಗ್ಗುಲುಗಳು ತೆರೆದುಕೊಂಡಿದೆ. ಜನರ ಭಾವಾನಾತ್ಮಕ ಸಂಬಂಧಗಳು ಹಸನಾಗಿ ಬೆಸೆದುಕೊಂಡಿದೆ.
ಜೋಗದಲ್ಲಿ ಜಲಪಾತದ ರೂಪದಲ್ಲಿ ಸುಮಾರು 900 ಅಡಿ ಎತ್ತರದಿಂದ ಧುಮ್ಮಿಕ್ಕುವ ಶರಾವತಿ ವಿದ್ಯುತ್ ರೂಪದಲ್ಲಿ ನಾಡಿಗೆ ಬೆಳಕಾಗಿದ್ದಾಳೆ. ಶರಾವತಿ ಉಗಮದ ಪುಣ್ಯಭೂಮಿ ಅಂಬುತೀರ್ಥ ಪುರಾಣ ಪ್ರಸಿದ್ಧವಾಗಿದ್ದು, ತೇತ್ರಾಯುಗದಲ್ಲಿ ಶ್ರೀ ರಾಮಚಂದ್ರನು ಒಮ್ಮೆ ಸೀತೆ ಮತ್ತು ಲಕ್ಷ್ಮಣನೊಡನೆ ಈ ಪ್ರದೇಶಕ್ಕೆ ಬಂದಾಗ ಸೀತೆಗೆ ಬಾಯಾರಿಕೆ ಉಂಟಾಗುತ್ತದೆ. ಸುತ್ತಮುತ್ತ ಎಲ್ಲಿಯೂ ನೀರು ಸಿಗದಿದ್ದಾಗ ಶ್ರೀ ರಾಮಚಂದ್ರನು ತನ್ನ ಅಂಬುವಿನಿಂದ ಅಂದರೆ ಬಾಣದಿಂದ ನೆಲವನ್ನು ಸೀಳಿದಾಗ ಜಲಧಾರೆ ಉಕ್ಕಿ ಬರುತ್ತದೆ ಅದೇ ಶರಾವತಿ ಬಾಣಕ್ಕೆ ಶರಾ ಎಂಬ ಮತ್ತೊಂದು ಹೆಸರು ಇದೆ. ಶ್ರೀ ರಾಮನ ಶರಾದಿಂದ ಉದ್ಬವಗೊಂಡ ಜಲಧಾರೆ ಶರಾವತಿ ಎಂದು ಪ್ರಸಿದ್ಧವಾಗುತ್ತದೆ. ಹೀಗೆ ಪವಿತ್ರ ಅಂಬುತೀರ್ಥದಿಂದ ಪಶ್ಚಿಮಾಭಿಮುಖವಾಗಿ ಹರಿಯುವ ಶರಾವತಿ ಸುಮಾರು 128 ಕೀ ಮೀ ಹರಿದು ಅಂತಿಮವಾಗಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ತಾನು ಹರಿದ ಕಡೆಯಲ್ಲೆಲ್ಲಾ ಭೂಮಿಯನ್ನು ಫಲವತ್ತುಗೊಳಿಸಿ, ನಿತ್ಯಹರಿದ್ವರ್ಣಗೊಳಿಸಿ ಸಾಗುವ ಶರಾವತಿ ಕನ್ನಡ ನಾಡಿನ ಜೀವನದಿ, ಪುಣ್ಯನದಿ.
ಶರಾವತಿ ನದಿ ಮತ್ಸ್ಯಸಂಕುಲಗಳ ಸಮೃದ್ಧ ಸಾಗರ ಸಹಸ್ರಾರು ಜಾತಿಯ ಮತ್ಸ್ಯಸಂಕುಲಗಳು ಶರಾವತಿ ನದಿಯಲ್ಲಿ ಜನ್ಮ ತಾಳುತ್ತದೆ ಎರಡು ವರ್ಷಗಳ ಹಿಂದೆ ಗೋಲ್ಡನ್ ಬ್ರೌನ್ ಬಣ್ಣದ ಸ್ಯಾಡೇ ಮೀನು ಅಂದರೆ ಕ್ಯಾಟ್ ಫಿಶ್ ಪ್ರಭೇದವೊಂದು ಇಲ್ಲಿ ಪತ್ತೆಯಾಗಿತ್ತು. ಮುಖ್ಯವಾಗಿ ಶರಾವತಿ ನದಿಯಲ್ಲಿ ಮೀನುಗಾರಿಕೆ ಮಾಡಿ ಬದುಕು ಕಟ್ಟಿಕೊಂಡಿರುವ ಕೊಂಕಣಿ ಖಾರ್ವಿ ಸಮಾಜದ ಮೀನುಗಾರರ ಪಾಲಿಗೆ ಶರಾವತಿ ದೈವೀಸ್ವರೂಪಿಯಾದ ಪುಣ್ಯನದಿ, ಜೀವನದಿ. ಒಂದು ಅರ್ಥದಲ್ಲಿ ಹೊನ್ನಾವರ ಕೊಂಕಣಿ ಖಾರ್ವಿ ಸಮಾಜದ ಆರಾಧ್ಯ ದೇವತೆ ಶರಾವತಿ ಎನ್ನಬಹುದು. ಹೇಗೆ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ಹೋಗಿ ಜನರು ತಮಗೆ ಬದುಕು ನೀಡಿದ ಕಾವೇರಿ ಮಾತೆಗೆ ಕೃತಜ್ಞತಾ ಭಾವದಿಂದ ಪೂಜೆ ಸಲ್ಲಿಸಿ ಬರುತ್ತಾರೋ ಅದೇ ರೀತಿ ಕೊಂಕಣಿ ಖಾರ್ವಿ ಸಮಾಜ ಭಾಂಧವರು ವರ್ಷಕೊಮ್ಮೆಯಾದರೂ ಶರಾವತಿ ಉಗಮ ಸ್ಥಳವಾದ ಅಂಬುತೀರ್ಥ ದರ್ಶನ ಮಾಡಿ ಪೂಜೆ ಸಲ್ಲಿಸಿ ಧನ್ಯತೆ ಪಡೆಯಬೇಕಾಗಿದೆ. ಹೊನ್ನಾವರ ಕೊಂಕಣಿ ಖಾರ್ವಿ ಸಮಾಜ ಭಾಂಧವರಿಗೂ, ಶರಾವತಿ ನದಿಗೂ ಅವಿನಾಭಾವ ಮಧುರ ನಂಟು ಇದೆ.
ಪ್ರಸ್ತುತ ಅಂಬುತೀರ್ಥದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು,ತಲಕಾವೇರಿಯ ಮಾದರಿಯಲ್ಲಿ ಸರ್ಕಾರ ಅಂಬುತೀರ್ಥವನ್ನು ಅಭಿವೃದ್ಧಿ ಪಡಿಸುತ್ತಿದೆ. ಸುಮಾರು ಒಂದು ಕೋಟಿ ಎಪ್ಪತ್ತು ಲಕ್ಷ ವೆಚ್ಚದಲ್ಲಿ ಶ್ರೀ ರಾಮೇಶ್ವರ ದೇಗುಲವನ್ನು ಪುನರ್ ನಿರ್ಮಾಣ ಮಾಡುತ್ತಿದ್ದಾರೆ. ಈ ದೇಗುಲದಲ್ಲಿ ಶ್ರೀ ರಾಮನಿಂದ ಪೂಜಿಸಲ್ಪಟ್ಟ ಪವಿತ್ರ ಶಿವಲಿಂಗವಿದೆ. ಹಾಗಾಗಿ ಈ ದೇಗುಲಕ್ಕೆ ರಾಮೇಶ್ವರ ಎಂಬ ಹೆಸರು ಬಂತು. ಇಲ್ಲಿನ ಪುಷ್ಕರಣಿಯ ನವೀಕರಣ, ಭಕ್ತರಿಗೆ ತಂಗಲು ಕಟ್ಟಡ ವ್ಯವಸ್ಥೆ , ಉದ್ಯಾನವನ ಮತ್ತು ಇತರ ಮೂಲಭೂತ ವ್ಯವಸ್ಥೆಗಳು ಇಲ್ಲಿ ನಿರ್ಮಾಣವಾಗಲಿದೆ. ತಲಕಾವೇರಿಯಂತೆ ಅಂಬುತೀರ್ಥ ಪ್ರಸಿದ್ಧ ಯಾತ್ರಾ ಸ್ಥಳವಾಗಲಿದೆ. ಎರಡು ವರ್ಷಗಳ ಹಿಂದೆ ಅಂಬುತೀರ್ಥ ಅಭಿವೃದ್ಧಿ ಯೋಜನೆಯು ಕೊರಾನಾ ಕಾರಣದಿಂದ ಸ್ಥಗಿತಗೊಂಡಿತ್ತು.ಪ್ರಸ್ತುತ ಅಭಿವೃದ್ಧಿ ಕಾಮಗಾರಿ ಚುರುಕು ಪಡೆದುಕೊಂಡಿದೆ.
ಶ್ರೀ ರಾಮೇಶ್ವರ ದೇಗುಲವು ಹೊಯ್ಸಳ ದ್ರಾವಿಡ ಶೈಲಿಯಲ್ಲಿ ಪುನರ್ ನಿರ್ಮಾಣದ ಅಂತಿಮ ಹಂತದಲ್ಲಿದ್ದು,ಆಕರ್ಷಕ ವಾಸ್ತು ವಿನ್ಯಾಸ ಹೊಂದಿದೆ.
ಲಿಂಗನಮಕ್ಕಿ ಅಣೆಕಟ್ಟಿನಲ್ಲಿ ಸಂಗ್ರಹವಾದ ಶರಾವತಿ ನದಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ತೆಗೆದುಕೊಂಡು ಹೋಗುವ ಎರಡು ವರ್ಷಗಳ ಹಿಂದಿನ ಕ್ರಿಯಾ ಯೋಜನೆಯನ್ನು ಸರ್ಕಾರ ಇಂದಿಗೂ ಚಾಲ್ತಿಯಲಿಟ್ಟಿದೆ. ಈ ತೂಗುಕತ್ತಿ ಶರಾವತಿ ನದಿಪಾತ್ರದ ಮೇಲೆ ನೇತಾಡುತ್ತಿದೆ. ಗೇರುಸೊಪ್ಪದ ಟೇಲರೀಸ್ ನಿಂದ ಹೊನ್ನಾವರಕ್ಕೆ ಹರಿಯುವ ನೀರು ಶರಾವತಿ ಬಲದಂಡೆ ಮತ್ತು ಎಡದಂಡೆಯ ರೂಪದಲ್ಲಿ ಕವಲೊಡೆಯುತ್ತದೆ. ಒಂದು ವೇಳೆ ಶರಾವತಿ ನದಿ ನೀರು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆ ಅನುಷ್ಠಾನಗೊಂಡರೆ ಹೊನ್ನಾವರ ಭಾಗದಲ್ಲಿ ಶರಾವತಿ ನೀರಿನ ಹರಿವು ಕಡಿಮೆಯಾಗುತ್ತದೆ. ನದಿಪಾತ್ರದ ಕೃಷಿ ಮತ್ತು ಮೀನುಗಾರಿಕೆಗೆ ಊಹಿಸಿಕೊಳ್ಳಲಾಗದಷ್ಟು ಹೊಡೆತ ಬೀಳುತ್ತದೆ.
ಇದರ ಜ್ವಲಂತ ಉದಾಹರಣೆ ನಮ್ಮ ಕಣ್ಣ ಮುಂದೆ ಇದ್ದು, ಇಡಗುಂಜಿ ಬಳ್ಕೂರಿನ ಶರಾವತಿ ನದಿ ನೀರನ್ನು ಮುರ್ಡೇಶ್ವರಕ್ಕೆ ಒಯ್ಯುವ ಯೋಜನೆಯ ಅನುಷ್ಠಾನದಿಂದ ಬಳ್ಕೂರು , ಅನಿಲಗೋಡ, ಜಲವಳ್ಳಿಗಳಲ್ಲಿ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿದಿದೆ ಎಂದು ಈ ಭಾಗದ ಜನರು ತಮ್ಮ ಆಳಲು ತೋಡಿಕೊಳ್ಳುತ್ತಾರೆ.
ಹಸಿರು ನಿಸರ್ಗದ ಕಂಗಳಲ್ಲಿ ಪವಿತ್ರ ಜಲಧಾರೆಯಾಗಿ ಬೆಳೆದು ಮಲೆನಾಡು, ಕರಾವಳಿಯ ಬೆಂದ ಭೂಮಿಗಳನ್ನು ತಂಪಾಗಿಸುವ ತಾಯಿ ಶರಾವತಿ ತನ್ನೊಂದಿಗೆ ಪ್ರಮುಖ ಉಪನದಿಗಳಾದ ನಂದಿಹೊಳೆ, ಹರಿದ್ರಾವತಿ, ಮಾವಿನಹೊಳೆ, ಹಲ್ಕುಂಜಿ ಯೆನ್ನಹೊಳೆ, ಹರ್ಲಿಹೊಳೆ, ನಾಗೋಡಿ ಹೊಳೆ ಸೇರಿದಂತೆ ಇಪ್ಪತ್ತೆರಡು ನದಿಗಳನ್ನು ತನ್ನೊಡಲಲ್ಲಿ ಇರಿಸಿಕೊಂಡು ಹರಿದು ಅಂತಿಮವಾಗಿ ಅರಬ್ಬೀ ಸಮುದ್ರದಲ್ಲಿ ಸಂಗಮವಾಗುತ್ತದೆ.
ಶರಾವತಿ ನದಿಯ ನೈಸರ್ಗಿಕ ಹರಿವಿನ ವ್ಯವಸ್ಥೆಗೆ ಧಕ್ಕೆಯಾದರೆ ಏನಾಗಬಹುದು ಎಂಬುದಕ್ಕೆ ಶರಾವತಿ ಸಂಗಮ ಪ್ರದೇಶದಲ್ಲಿ ಕೆಲವೊಂದು ಆರಂಭಿಕ ಸ್ಯಾಂಪಲ್ಲುಗಳು ನಮ್ಮ ಕಣ್ಣ ಮುಂದೆ ಕಳೆದ ಮೀನುಗಾರಿಕಾ ಋತುವಿನಲ್ಲಿ ನಡೆದಿದೆ. ಕಾಸರಕೋಡು ಟೊಂಕದಲ್ಲಿ ಸದ್ಯ ನಿರ್ಮಾಣವಾಗುತ್ತಿರುವ ಖಾಸಗಿ ವಾಣಿಜ್ಯ ಬಂದರು ಕಾಮಗಾರಿಯಲ್ಲಿ ಸಮುದ್ರದ ಹೂಳು ಮತ್ತು ಮಣ್ಣನ್ನು ದೊಡ್ಡ ದೊಡ್ಡ ಯಂತ್ರಗಳ ಮೂಲಕ ಶರಾವತಿ ಅಳಿವೆಗೆ ಸುರಿಯಲಾಗುತ್ತಿದೆ.
ಪರಿಣಾಮವಾಗಿ ಅಳಿವೆಯಲ್ಲಿ ಮರಳಿನ ದಿಬ್ಬಗಳು ರಚನೆಯಾಗಿ ಮೀನುಗಾರಿಕೆ ಬೋಟ್ ಗಳ ಸಂಚಾರಕ್ಕೆ ಧಕ್ಕೆಯಾಗಿದೆ. ಮೀನುಗಾರಿಕಾ ಋತುವಿನಲ್ಲಿ ಕೆಲವು ಬೋಟ್ ಗಳು ಮರಳಿನ ದಿಬ್ಬಕ್ಕೆ ಬಡಿದು ಅಪಘಾತಗಳು ಸಂಭವಿಸಿದೆ.
ಅಳಿವೆಯಲ್ಲಿ ಮರಳಿನ ದಿಬ್ಬಗಳು ರೂಪುಗೊಂಡ ಪರಿಣಾಮವಾಗಿ ಶರಾವತಿ ತನ್ನ ಹರಿವಿನ ಪಥವನ್ನು ದಿನಕ್ಕೊಂದು ರೀತಿಯಲ್ಲಿ ಬದಲಾಯಿಸಿಕೊಳ್ಳುತ್ತಿದೆ.
ಶರಾವತಿ ನದಿಯ ಸಹಜ ಹರಿವಿನ ಪ್ರಕ್ರಿಯೆಗೆ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿ ಅಪಾಯಕಾರಿ ತಡೆಯನ್ನುಂಟು ಮಾಡಿದೆ. ಮುಂದಿನ ಭಯಾನಕ ದುಷ್ಪರಿಣಾಮವಾಗಿ ಶರಾವತಿ ನದಿ ತನ್ನ ಹರವಿನ ಪಥವನ್ನು ಮತ್ತಷ್ಟೂ ಬದಲಾಯಿಸಿ, ಬಲದಂಡೆಯ ಹೊನ್ನಾವರದ ಬಂದರು ಪ್ರದೇಶ ಸೇರಿದಂತೆ, ನದಿಪಾತ್ರದ ಜನವಸತಿ ಪ್ರದೇಶಗಳಿಗೆ ನುಗ್ಗುವ ಸಾಧ್ಯತೆ ಇರುತ್ತದೆ ಎಂದು ಪರಿಸರ ತಜ್ಞರು ಅಭಿಪ್ರಾಯ ಪಡುತ್ತಾರೆ. ಉತ್ತರ ಭಾರತದ ಪ್ರಮುಖ ನದಿಗಳ ಸಹಜ ಹರಿವಿನ ಪ್ರಕ್ರಿಯೆಗಳನ್ನು ದ್ವಂಸಗೊಳಿಸಿದ ಪರಿಣಾಮವಾಗಿ 2013 ರಲ್ಲಿ ಸಂಭವಿಸಿದ ಮಹಾ ಜಲಪ್ರಳಯ ಸಂಭವಿಸಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ನಾಡಿನ ಜೀವನದಿ ಶರಾವತಿಯ ಉಗಮ ಸ್ಥಾನವಾದ ಅಂಬುತೀರ್ಥವನ್ನು ಕಣ್ಣಾರೆ ಕಂಡು ಧನ್ಯವಾಗುವ ಪರಮ ಸೌಭಾಗ್ಯ ನಮಗೆ ಪ್ರಾಪ್ತಿಯಾಯಿತು. ಖಾರ್ವಿ ಆನ್ಲೈನ್ ಸಂಪಾದಕರಾದ ಸುಧಾಕರ ಖಾರ್ವಿಯವರ ಕುಟುಂಬಸ್ಥರೊಂದಿಗೆ ನನಗೆ ಈ ಅವಕಾಶ ಲಭ್ಯವಾಯಿತು. ತಲಕಾವೇರಿಯ ಮಾದರಿಯಲ್ಲಿ ಶರಾವತಿಯ ಉಗಮ ಸ್ಥಾನವನ್ನು ಅಭೂತಪೂರ್ವವಾಗಿ ಅಭಿವೃದ್ಧಿಪಡಿಸುವ ಸರ್ಕಾರದ ಯೋಜನೆಗೆ ವೇಗ ಸಿಕ್ಕಿದೆ. ಇನ್ನು ಕೆಲವೇ ತಿಂಗಳಲ್ಲಿ ಇದರ ಸ್ಪಷ್ಟ ಚಿತ್ರಣ ಲಭಿಸುತ್ತದೆ. ನಾಡಿನ ಪುಣ್ಯ ನದಿ, ಜೀವನದಿ ಶರಾವತಿಯ ಉಗಮಸ್ಥಾನ ಪ್ರಸಿದ್ಧ ಯಾತ್ರಾ ಸ್ಥಳವಾಗಿ ಸದ್ಯದಲ್ಲೇ ಕಂಗೊಳಿಸಲಿದೆ. ಶ್ರೀ ರಾಮನ ಬಾಣದಿಂದ ಜನ್ಮ ತಳೆದು ಕೋಟ್ಯಾಂತರ ಜನರ ಬದುಕಿನ ಆರಾಧ್ಯ ದೇವತೆಯಾಗಿರುವ ತಾಯಿ ಶರಾವತಿಗೆ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ.
ಉಮಾಕಾಂತ ಖಾರ್ವಿ ಕುಂದಾಪುರ
ಶ್ರೀ ರಾಮನ ಶರಾದಿಂದ ಉದ್ಬವಗೊಂಡ ಜಲಧಾರೆ ಶರಾವತಿಯನ್ನು ಮಾನವ ತನ್ನ ಎಂದಿಗೂ ಮುಗಿಯದ ಆಸೆಗಳನ್ನು ಮತ್ತು ದುರಾಸೆಗಳನ್ನು ಪೂರೈಸಲು, ಪಾಶ್ಚಾತ್ಯ ದೇಶಗಳನ್ನು ಅನುಸರಿಸಿಲು ಕೆಲವೊಂದು ಅರ್ಥ ಹೀನ ಅಭಿವೃದ್ಧಿಯ ಪ್ರೊಜೆಕ್ಟ್ ಹೆಸರಿನಲ್ಲಿ ಪ್ರಕೃತಿಯನ್ನು ಮಾತೆಯನ್ನು ಕಿತ್ತು ತಿನ್ನುತ್ತಿದಾನೆ. ಮೊದಲೇ hi-ket city ಆಗುತ್ತಿರುವ 450 km ದೂರದ ಬೆಂಗಳೂರಿಗೆ ಓಯುವ ಹುಚ್ಚು ಯೋಜನೆ ಯಾಕೆ?
ಇದು ತುಂಬಾ ಚೆನ್ನಾಗಿ ಬರೆಯಲ್ಪಟ್ಟ ಲೇಖನ ಖಂಡಿತಾ ಓದಲೇಬೇಕು.