ತನಗೆ ತಾನು ರಜೆ ಘೋಷಿಸಿಕೊಂಡ ಸಮುದ್ರ

ವಾರವಿಡೀ ಕೆಲಸ ಮಾಡುವ ಮನುಷ್ಯ ವಾರಾಂತ್ಯಕ್ಕೆ ಒಂದು ದಿನ ರಜೆ ಬಯಸುತ್ತಾನೆ. ಒಬ್ಬ ವ್ಯಕ್ತಿ ರಜೆ ಬಯಸುತ್ತಿದ್ದಾನೆಂದರೆ ಒಂದೋ ವಿಶ್ರಾಂತಿ ಪಡೆಯಲು, ಇಲ್ಲಾ ತನ್ನನ್ನು ತಾನು ಬದಲಾವಣೆ ಮಾಡಿಕೊಳ್ಳಲು ಬಯಸುತ್ತಿದ್ದಾನೆಂದು ಅರ್ಥ. ಹಾಗೆ ನೋಡಿದರೆ ಸಮುದ್ರವೂ ಒಮ್ಮೊಮ್ಮೆ ರಜೆ ಬಯಸುತ್ತದೆ. ಸಮುದ್ರ ಬಯಸುವ ರಜೆ ವಿಶ್ರಾಂತಿ ಪಡೆಯುವುದಕ್ಕಲ್ಲ; ಒಂದು ಮಹಾ ಬದಲಾವಣೆಗಾಗಿ. ಅಂತಹ ಒಂದು ದೀರ್ಘ ರಜೆಯನ್ನು ವರ್ಷಕ್ಕೊಂದು ಬಾರಿ ನಮ್ಮ ಪಡುಗಡಲು ಪಡೆಯುತ್ತದೆ. ಜೂನ್ ತಿಂಗಳು ನಮಗೆ ಮಳೆಗಾಲದ ಆರಂಭದ ತಿಂಗಳು. ಮೋಡ ಕಟ್ಟಿ ಮಳೆಯಾಗುವ ಸಮಯವಿದು. ಹಾಗೆ ಬಿದ್ದ ಮಳೆಯ ನೀರು ಸಮುದ್ರವನ್ನು ಸೇರುತ್ತದೆ. ಹೀಗೆ ಸೇರುವ ನೀರು ಸಮುದ್ರದ ಮೇಲೆ ತುಂಬಾ ಬದಲಾವಣೆ ಮಾಡುವುದಿಲ್ಲ. ಆದರೆ ಮೋಡ ಕಟ್ಟುವ ಸಮಯದಲ್ಲಿ ವಾತಾವರಣದಲ್ಲಾಗುವ ಎಲ್ಲಾ ರೀತಿಯ ಬದಲಾವಣೆಗಳು ಒಟ್ಟಾಗಿ ಸಮುದ್ರವನ್ನು ಕನಲಿ ಕೆರಳುವಂತೆ ಮಾಡುತ್ತದೆ. ಆಗ ಪ್ರಾರಂಭವಾಗುವ ಸಮುದ್ರದ ಮಂಥನ ಬರೋಬ್ಬರಿ ಮೂರು ತಿಂಗಳುಗಳ ಕಾಲ ಇರುತ್ತದೆ. ಈ ಸುದೀರ್ಘ ಅವಧಿಯಲ್ಲಿ ಸಮುದ್ರ ತನಗೆ ತಾನು ರಜೆ ಘೋಷಿಸಿಕೊಂಡು ಬಿಡುತ್ತದೆ. ಬೀಸುವ ಗಾಳಿ, ಬೀಳುವ ಮಳೆ, ಸಮುದ್ರದಲ್ಲಿ ನಿರಂತರವಾಗಿ ಏಳುವ ಸರಣಿ ಅಲೆಗಳನ್ನು ನೋಡಿದಾಗ ಪಡುಗಡಲು ಉಬ್ಬರಿಸುತ್ತಿದೆ ಎಂಬ ಸತ್ಯದರಿವು ನಮಗೆ ಆಗಬೇಕು. ಈ ಸಂದರ್ಭದಲ್ಲಿ ಮನುಷ್ಯ ದೂರದಿಂದಲೇ ಸಮುದ್ರವನ್ನು ನೋಡಿ ಸಂತೋಷ ಪಡಬೇಕೇ ವಿನಃ ಮೀನುಗಾರಿಕೆಗೆ ಹೋಗುತ್ತೇನೆಂದು ಮೊಂಡು ಹಿಡಿದರೆ, ಸಮುದ್ರ ಬಿಡುವುದಿಲ್ಲ‌. ಹಟದಿಂದ ಬಂದವರನ್ನು ಅಷ್ಟು ಸುಲಭವಾಗಿ ಹಿಂತಿರುಗಿ ಹೋಗಲು ಬಿಡುವುದಿಲ್ಲ.

ಜೂನ್ ಮೊದಲ ವಾರದಿಂದ ನಮ್ಮ ಪಡುಗಡಲಿನ ಎಲ್ಲಾ ಜಲಚರಗಳು ಸಮುದ್ರ ಪಡೆದ ರಜೆಯನ್ನು ಸದುಪಯೋಗ ಮಾಡಿಕೊಳ್ಳಲು ಪ್ರಾರಂಭಿಸುತ್ತವೆ. ಒಂದು ಪರಿಸರದ ಎಲ್ಲಾ ಜೀವಗಳು ಆಯಾಯ ಪರಿಸರದಲ್ಲಾಗುವ ಬದಲಾವಣೆಗೆ ಅನುಗುಣವಾಗಿ ತಮ್ಮ ದೇಹದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಲಕ್ಷಾಂತರ ವರ್ಷಗಳಿಂದ ಬಂದಿರುವ ಜೀವಲಕ್ಷಣ ಎಂದೇ ಹೇಳಬಹುದು. ಅದರಂತೆ ಮೀನುಗಳು ಮಳೆಗಾಲ ಪ್ರಾರಂಭವಾಗುವ ಮೊದಲೇ ಗರ್ಭ ಧರಿಸುತ್ತವೆ; ಸಮುದ್ರಕ್ಕೆ ಹೊರಗಿನವರು ಪ್ರವೇಶ ಮಾಡಲು ಸಾಧ್ಯವಿಲ್ಲದಿರುವಾಗ ಮೊಟ್ಟೆ ಇಡುತ್ತವೆ; ಮೂರು ತಿಂಗಳ ಅವಧಿಯಲ್ಲಿ ಅದು ಒಡೆದು ಮರಿಗಳು ಹೊರ ಬಂದು ಹೊಸ ತಲೆಮಾರು ಸೃಷ್ಟಿಯಾಗುತ್ತದೆ. ಅದು ತಕ್ಕಮಟ್ಟಿಗೆ ಬೆಳವಣಿಗೆಯಾಗುವವರೆಗೆ ಮೀನುಗಾರಿಕೆ ನಿಷಿದ್ಧ ಎಂದು ಸರ್ಕಾರ ಹೇಳಿದೆ. ಮಾನವನೋ ಇದ್ಯಾವುದರ ಪರಿವೇ ಇಲ್ಲದೆ, ಅದರ ಅರಿವಿದ್ದರೂ ತನಗೇನೂ ತಿಳಿದಿಲ್ಲವೆಂಬಂತೆ ಮೀನುಗಳನ್ನು ಬೇಟೆಯಾಡಲು ತೊಡಗುತ್ತಾನೆ. ಮರ ಕಡಿಯುವಾಗ ಒಂದು ನಿಯಮ ಪಾಲಿಸಬೇಕು. ಯಾವ ಮರ ತನ್ನ ಪೂರ್ಣಾಯುಷ್ಯ ಕಳೆದುಕೊಂಡು ಬೀಳಲು ಸಿದ್ಧವಾಗಿದೆಯೋ ಅದನ್ನು ಕಡಿಯಬೇಕು ಎಂದು ಹೇಳುತ್ತಾರೆ. ಆದರೆ ಮನುಷ್ಯ ಈ ನಿಯಮಕ್ಕೆ ಬದ್ಧನೆ? ಒಂದು ವೇಳೆ ಈ ನಿಯಮ ಪಾಲಿಸಿದ್ದರೆ ಭೂಮಂಡಲ ಇಂದು ಈ ರೀತಿಯಲ್ಲಿ ಬರಡಾಗುತ್ತಿತ್ತೇ? ಅಂತೆಯೇ ಸಮುದ್ರದಲ್ಲೂ ಮನುಷ್ಯ ಎಲ್ಲಾ ರೀತಿಯ ಮೀನುಗಳನ್ನು ಬೇಟೆಯಾಡುತ್ತಾನೆ. ಗರ್ಭ ಧರಿಸಿದ ಮೀನು, ಆಗ ತಾನೆ ಮರಿಗಳಿಗೆ ಜನ್ಮಕೊಟ್ಟ ಮೀನು, ಆಗತಾನೆ ಜನಿಸಿದ ಚಿಕ್ಕ ಚಿಕ್ಕ ಮರಿಗಳು ಎಲ್ಲವೂ ಆತನ ಬಲೆಗೆ ಬೀಳುತ್ತವೆ. ಅವುಗಳನ್ನು ಗುರುತಿಸುವಷ್ಟು ವ್ಯವಧಾನವೂ ಇಲ್ಲ; ಆಸಕ್ತಿಯೂ ಇಲ್ಲ. ಇದರ ಪರಿಣಾಮವೇ ಇಂದಿನ ಮತ್ಸ್ಯಕ್ಷಾಮ. ಬದುಕಿಗಾಗಿ ಮೀನುಗಾರಿಕೆ ಎಂಬ ಸಾಂಪ್ರದಾಯಿಕ ಮೀನುಗಾರಿಕೆಯ ಪರಿಕಲ್ಪನೆ ಎಂದೋ ಸತ್ತು ಹೋಯಿತು. ಎಲ್ಲವನ್ನೂ ತಾನೊಬ್ಬನೇ ಪಡೆಯಬೇಕೆಂಬ ಹಪಾಹಪಿಸುವ ಬಂಡವಾಳಶಾಹಿಗಳ ಸಂಖ್ಯೆ ಹೆಚ್ಚಾಗಿದೆ. ತಾನು ಬೆಳೆಸುತ್ತಿರುವುದು ಬಂಡವಾಳಶಾಹಿಯನ್ನು ಎಂದು ತಿಳಿಯದ ಕಾರ್ಮಿಕ ದುಡಿಯುತ್ತಲೇ ಇದ್ದಾನೆ. ಆತನ ಖಜಾನೆ ತುಂಬಿದಾಗ ಮತ್ಸ್ಯ ಸಂಪತ್ತು ಖಾಲಿಯಾಗುತ್ತದೆ. ಆಗ ಅವನು ಅದೇ ಹಣವನ್ನು ಬೇರೆ ಯಾವುದಾದರು ಉದ್ಯಮದ ಮೇಲೆ ಹೂಡಿಕೆ ಮಾಡುತ್ತಾನೆ. ಪ್ರತಿನಿತ್ಯ ದುಡಿದು ತಿನ್ನುತ್ತಿದ್ದ ಕಾರ್ಮಿಕ ಮಾತ್ರ ಕಡಿಮೆಯಾದ ಮತ್ಸ್ಯಸಂಪತ್ತಿಗೆ ಗಂಗಾಮಾತೆಯೇ ಕಾರಣವೆಂದು ಹಳಹಳಿಯುತ್ತಾನೆ; ಪೂಜಿಸುತ್ತಾನೆ.

ಈ ಮೂರು ತಿಂಗಳ ಅವಧಿಯು ಸಮುದ್ರ ತನ್ನನ್ನು ತಾನು ಶುದ್ಧೀಕರಿಸಿಕೊಳ್ಳುತ್ತದೆ. ಭೂಮಿಯ ಮೇಲಿನ ಎಲ್ಲಾ ಸಮುದ್ರಗಳು ಈ ರೀತಿಯಲ್ಲಿ ಶುದ್ಧೀಕರಿಸಿಕೊಳ್ಳುತ್ತದೆ ಎಂದು ತಪ್ಪು ತಿಳಿಯಬೇಡಿ‌‌. ನಮ್ಮ ಪಡುಗಡಲು ಸೇರಿದಂತೆ ಕೆಲವು ಸಮುದ್ರಗಳು ಮಾತ್ರ ಈ ಪ್ರಕ್ರಿಯೆಯಲ್ಲಿ ತೊಡಗುತ್ತವೆ. ವರ್ಷವಿಡೀ ಮನುಷ್ಯ ಮತ್ತು ಪರಿಸರ ಸಮುದ್ರದ ಒಡಲಿಗೆ ಸೇರಿಸಿದ ಎಲ್ಲಾ ತ್ಯಾಜ್ಯ ವಸ್ತುಗಳು ಸಮುದ್ರದ ಕೆಸರಿನಲ್ಲಿ ಹೂತು ಹೋಗುತ್ತದೆ. ಸಮುದ್ರದ ಜಲಚರಗಳಿಂದಲೇ ಸೃಜಿಸಲ್ಪಟ್ಟ ತ್ಯಾಜ್ಯಗಳೂ ನೆಲದಾಳದಲ್ಲಿ ಹುದುಗಿರುತ್ತದೆ‌. ಈ ಮೂರು ತಿಂಗಳಲ್ಲಿ ಸಮುದ್ರದಲ್ಲಿ ಉಂಟಾಗುವ ವಿಪರೀತವಾದ ಪ್ರವಾಹದಿಂದ ತಳದಲ್ಲಿರುವ ಕೆಸರಿನಿಂದ ಒಂದೊಂದೇ ವಸ್ತುಗಳು ಹೊರಬರಲಾರಂಭಿಸುತ್ತವೆ. ಹಾಗೆ ಹೊರ ಬಂದ ವಸ್ತುಗಳನ್ನು ಅಷ್ಟೇ ವೇಗವಾಗಿ ದಡದತ್ತ ಕೊಂಡ್ಯೊಯ್ಯುವ ಕಾರ್ಯದಲ್ಲಿ ಬೋರ್ಗರೆಯುವ ಅಲೆಗಳು ಮಾಡುತ್ತವೆ. ಮುಳುಗಿದ ಹಡಗುಗಳ ಅವಶೇಷಗಳು, ಸತ್ತ ಮೀನುಗಳ ಮೂಳೆಗಳು, ಚಿಪ್ಪುಗಳು, ಮನುಷ್ಯ ಸೇರಿಸಿದ ಪ್ಲಾಸ್ಟಿಕ್, ಗಾಜು, ಲೋಹದ ತುಣುಕುಗಳು, ನದಿ ಪ್ರವಾಹಗಳಿಂದ ಸೇರಿಕೊಂಡ ಮರಗಿಡಗಳ ಕಾಂಡ, ಹಣ್ಣು, ಬೀಜಗಳು, ಹಡಗುಗಳು ಚೆಲ್ಲಿದ ತೈಲ, ಮನುಷ್ಯ ತನ್ನ ವಿನಾಶಕ್ಕೆ ತಾನೇ ಎಸೆದ ಬಾಂಬುಗಳ ತ್ಯಾಜ್ಯ, ಆಕಾಶದೆತ್ತರಕ್ಕೆ ಚಿಮ್ಮಿಸಿದ ವಿಮಾನ, ವ್ಯೋಮನೌಕೆಗಳ ಅವಶೇಷ ಎಲ್ಲವನ್ನೂ ಈ ಮೂರು ತಿಂಗಳ ಅವಧಿಯಲ್ಲಿ ದಡಕ್ಕೆ ತಂದು ಎಸೆಯುತ್ತದೆ. ಹೀಗೆ ಸಮುದ್ರ ಸ್ವಯಂ ಶುದ್ಧೀಕರಣಗೊಳ್ಳುತ್ತದೆ. ಮನುಷ್ಯ ಹೀಗೆ ಯಾವತ್ತಾದರೂ‌ ಸ್ವಯಂಶುದ್ಧತೆಯನ್ನು ಮಾಡಿಕೊಂಡಿದ್ದಾನೆಯೇ? ಅಷ್ಟು ಬಲಾಢ್ಯ ಮತ್ತು ವಿಶಾಲ ಸಮುದ್ರ ತಾನು ಪಡೆದ ರಜೆಯನ್ನು ಈ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳತ್ತದೆ. ಸಮುದ್ರ ಪ್ರವೇಶ ಮಾಡುವ ಎಲ್ಲಾ ದಿಕ್ಕುಗಳಲ್ಲಿ ಒಂದರ ಮೇಲೊಂದು ಬೃಹತ್ ತೆರೆಗಳು ಏಳುವಂತೆ ಮಾಡಿ ಸ್ವಯಂ ದಿಗ್ಬಂಧನ ವಿಧಿಸಿಕೊಳ್ಳುತ್ತದೆ. ಸಮುದ್ರದೊಳಗೆ ಕಾಲಿಸಿದರೂ ಕ್ಷಣಮಾತ್ರದಲ್ಲಿಯೇ ತನ್ನ ಒಡಲೊಳಗೆ ಸೆಳೆದುಕೊಂಡು ಬಿಡುವಷ್ಟು ಬಲ ಈ ಸಮಯದಲ್ಲಿ ಸಂಚಯಿಸಿಕೊಂಡಿರುತ್ತದೆ. ತಲತಲಾಂತರಗಳಿಂದ ನಡೆದುಕೊಂಡು ಬಂದ ಪರಿಸರದ ಈ ಕೌತುಕವನ್ನು ನೋಡಿಕೊಂಡು ಬಂದ ಮನುಷ್ಯ ಸಮುದ್ರವನ್ನು ಅದರಷ್ಟಕ್ಕೆ ಬಿಡಲಾರ. ತೆರೆಗಳಿಗಿಂತಲೂ ದೊಡ್ಡದಾದ, ಬಲಶಾಲಿಯಾದ, ವೇಗವಾದ ನೌಕೆಯನ್ನು ಸಿದ್ಧಪಡಿಸಿದ‌. ಸಮುದ್ರದ ಕೌತುಕ ಅರಿಯಲು ಸಮುದ್ರದೊಳಗೆ ಹೊಕ್ಕಿಬಿಟ್ಟ; ಅವಧಿಗೆ ಮುನ್ನವೇ ಈ ಕೌತುಕವನ್ನು ಭೇದಿಸಲು ಪ್ರಯತ್ನಿಸಿದ; ಸಮುದ್ರವನ್ನೇ ಜಯಿಸಿದೆನೆಂದು ವಿಜಯ ಧ್ವಜ ನೆಟ್ಟ. ಮುಂದೆ ಭೂಮಿಯಲ್ಲಿ ಹುಟ್ಟುವ ಮಾನವ ಜನಾಂಗಕ್ಕೆ ಖಾಲಿಪಾತ್ರೆ ಸಿದ್ಧ ಮಾಡುತ್ತಿರುವ ಮೂರ್ಖರ ಬಗ್ಗೆ ಸಮುದ್ರ ಎಷ್ಟು ನಗುತ್ತಿದೆಯೋ…!

ಸಮುದ್ರವು ಘೋಷಿಸಿಕೊಂಡ ಮೂರು ತಿಂಗಳ ರಜೆಯ ಅವಧಿಯಲ್ಲಿ ಸಮುದ್ರವನ್ನು ಕೆಣಕದೆ ಅದರಷ್ಟಕ್ಕೆ ಅದನ್ನು ಬಿಡಬೇಕಾದ್ದು ನಮ್ಮ ಕರ್ತವ್ಯ. ಸಮುದ್ರ ಅದರ ಕರ್ತವ್ಯವನ್ನು ಅತ್ಯಂತ ಶ್ರದ್ಧೆಯಿಂದ ಮಾಡಿಕೊಂಡು ಬಂದಿದೆ. ನಾವು ವರ್ಷವಿಡೀ ಸಮುದ್ರದಿಂದ ಬೇಕಾದುದೆಲ್ಲ ಪಡೆದುಕೊಂಡು ಉಪಕೃತರಾಗಿದ್ದೇವೆ. ಪುನಃ ಈ ಮೂರು ತಿಂಗಳ ಅವಧಿಯಲ್ಲೂ ಸಮುದ್ರದ ಮೇಲೆ ದೌರ್ಜನ್ಯ ಎಸಗಬಾರದು. ಈ ಮಹಾಮಂಥನದ ಕಾಲದಲ್ಲಿ ದೂರದಲ್ಲಿಯೇ ನಿಂತು ನೋಡುವ ಪ್ರೇಕ್ಷಕರಾಗಬೇಕೇ ವಿನಃ, ನಾವೇ ಪಾತ್ರಧಾರಿಗಳಾಗಲು ಪ್ರಯತ್ನಿಸಬಾರದು.

ನಾಗರಾಜ ಖಾರ್ವಿ ಕಂಚುಗೋಡು

Leave a Reply

Your email address will not be published. Required fields are marked *