ಪಂಚಗಂಗಾವಳಿಯ ಒಡಲಿಗೆ ತ್ಯಾಜ್ಯ ಈ ದುಷ್ಕ್ರತ್ಯಕ್ಕೆ ಬೀಳಲಿ ಅಂಕುಶ

ಪಶ್ಚಿಮಘಟ್ಟ ಶ್ರೇಣಿಗಳಲ್ಲಿ ಹುಟ್ಟಿ ಕಡಲು ಸೇರುವ ವಾರಾಹಿ, ಚಕ್ರಾ, ಕುಬ್ಜಾ, ಸೌಪರ್ಣಿಕಾ ಮತ್ತು ಖೇಟಕಗಳೆಂಬಂತಹ ಐದು ಪವಿತ್ರ ನದಿಗಳ ಅಪೂರ್ವ ಸಂಗಮವೇ ಪಂಚಗಂಗಾವಳಿ ನದಿ. ಗಂಗೊಳ್ಳಿಗೆ ಈ ಹೆಸರು ಬರಲು ಕಾರಣವೇ ಪಂಚಗಂಗಾವಳಿ ನದಿ ಪಂಚನದಿಗಳ ಸಂಗಮ ಪ್ರದೇಶವಾದ ಕುಂದಾಪುರ ದಕ್ಷಿಣದ ಪಂಜಾಬ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಪಂಚನದಿಗಳ ಬೀಡಾದ ಸಮೃದ್ಧ ಪಂಜಾಬ್ ನಂತೆ ಕುಂದಾಪುರವೂ ಕೂಡಾ ಪಂಚಗಂಗಾವಳಿಯ ಕೃಪೆಯಿಂದ ಸಮೃದ್ಧಗೊಂಡಿದೆ. ಪಶ್ಚಿಮಘಟ್ಟ ಶ್ರೇಣಿಗಳ ಪೂರ್ವೋತ್ತರವಾಗಿ ಹಬ್ಬಿಕೊಂಡಿರುವ ನಿತ್ಯ ಹರಿದ್ವರ್ಣ ಕಾಡಿನ ತಪ್ಪಲಲ್ಲಿ ಹುಟ್ಟುವ ಪಂಚನದಿಗಳು ಕುಂದಾಪುರ ತಾಲೂಕಿನ ಜನತೆಯ ಜೀವಸಂಜೀವಿನಿ ಹಲವು ಭಾಗಗಳಲ್ಲಿ ಕವಲೊಡೆದು ಪಂಚಗಂಗಾವಳಿ ನದಿ ಕುಂದಾಪುರ ತಾಲೂಕಿನಲ್ಲಿ ಹತ್ತುಹಲವು ರಮಣೀಯ ಕುದ್ರುಗಳನ್ನು ನಿರ್ಮಿಸಿದೆ. ಪಂಚಗಂಗಾವಳಿಯ ಒಡಲಲ್ಲಿ ವಿಭಿನ್ನ ಸಂಸ್ಕೃತಿ ಪರಂಪರೆಗಳು ಸಮೃದ್ಧವಾಗಿ ಮೈದಾಳಿಕೊಂಡಿದೆ ಲಕ್ಷೋಪಲಕ್ಷ ಜನರಿಗೆ ಅನ್ನ ಕೊಟ್ಟಿರುವ ಪರಮಪಾವನೆ ಪಂಚಗಂಗಾವಳಿ ನದಿ ಮಲಿನಗೊಳ್ಳುತ್ತಿದೆ ಮುಖ್ಯವಾಗಿ ಕುಂದಾಪುರ ಪ್ರಥಮ ಸೇತುವೆಯ ಬಳಿ ಆಸ್ಪತ್ರೆಗಳ ವೈದ್ಯಕೀಯ ತ್ಯಾಜ್ಯಗಳನ್ನು ಪಂಚಗಂಗಾವಳಿ ನದಿಗೆ ರಾತ್ರಿ ವೇಳೆ ಸುರಿಯಲಾಗುತ್ತಿದೆ.

ಅವಧಿ ಮುಗಿದಿರುವ ಔಷಧಿಗಳು, ಮಾತ್ರೆಗಳು, ನಿರುಪಯುಕ್ತ ಇಂಜೆಕ್ಷನ್ ಗಳು, ಗಾಜಿನ ಉಪಕರಣಗಳನ್ನು ರಾಶಿ ರಾಶಿ ಸುರಿದು ವಿಕೃತಿ ಮೆರೆಯುತ್ತಿದ್ದಾರೆ ಇಂಥವರ ಪಾಲಿಗೆ ಪವಿತ್ರ ನದಿ ಪಂಚಗಂಗಾವಳಿ ಡಂಫಿಂಗ್ ಯಾರ್ಡ್ ಆಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ನದಿತೀರದಲ್ಲಿ ಮಲಿನಕಾರಕಗಳನ್ನು ಹಾಕುವುದು ಶಿಕ್ಷಾರ್ಹ ಅಪರಾಧವಾಗಿದೆ ಆದರೂ ಇಂತಹ ಕೃತ್ಯಗಳು ನಿರಂತರವಾಗಿ ನಡೆಯುತ್ತಿದೆ ನದಿಗೆ ಸುರಿಯಲಾಗುತ್ತಿರುವ ವೈದ್ಯಕೀಯ ತ್ಯಾಜ್ಯಗಳು ಜಲಚರಗಳ ಪಾಲಿಗೆ ವಿಷಕಾರಿಯಾಗಿದೆ ಮೀನುಗಾರರ ಬಲೆಗಳಿಗೆ ವೈದ್ಯಕೀಯ ತ್ಯಾಜ್ಯಗಳೇ ರಾಶಿ ರಾಶಿ ಬೀಳುತ್ತದೆ. 2020 ರಲ್ಲಿ ಕುಂದಾಪುರ ಖಾರ್ವಿಕೇರಿ ಪರಿಸರದ ಉತ್ಸಾಹಿ ಯುವಕರು ಯುವ ಬ್ರಿಗೇಡ್ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಪಂಚಗಂಗಾವಳಿ ನದಿತೀರವನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ಕೈಗೊಂಡಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಕುಂದಾಪುರ ತಾಲೂಕಿನ ಹೆಮ್ಮೆಯ ಹೆಗ್ಗುರುತಾದ ಪಂಚಗಂಗಾವಳಿ ನದಿಯ ಪಾವಿತ್ರ್ಯತೆಯನ್ನು ರಕ್ಷಿಸಿಕೊಳ್ಳುವ ಅನಿವಾರ್ಯತೆ ಎಂದಿಗಿಂತಲೂ ಇಂದು ಅವಶ್ಯಕವಾಗಿದೆ. ಪಂಚಗಂಗಾವಳಿ ನದಿ ಮಾಲಿನ್ಯದಿಂದಾಗಿ ಜಲ ಪರಿಸರ ವ್ಯವಸ್ಥೆ ಆಘಾತಗೊಂಡಿದೆ ಇದರಿಂದಾಗಿ ಜಲಜೀವಿಗಳು ಬಹುವಾಗಿ ನಶಿಸಿದೆ ಈ ಹಿಂದೆ ಪಂಚಗಂಗಾವಳಿಯಲ್ಲಿ ಅಪಾರವಾಗಿ ಸಿಗುತ್ತಿದ್ದ ಮಳಿವೆ ಕುಬ್ಬೆಗಳ ಅವನತಿ ಮುಖ್ಯ ಉದಾಹರಣೆಯಾಗಿದೆ. ಮತ್ತು ಅತಿ ಮುಖ್ಯ ಆಹಾರ ವ್ಯವಸ್ಥೆಗೂ ಮೀನುಗಾರರ ಹೊಟ್ಟೆಪಾಡಿನ ಉದ್ಯೋಗಕ್ಕೂ ಸಂಚಕಾರ ಬಂದಿದೆ. ನದಿಮಾಲಿನ್ಯ ಉಂಟು ಮಾಡುವ ವೈದ್ಯಕೀಯ ತ್ಯಾಜ್ಯಗಳಲ್ಲಿ ಆಮ್ಲಗಳು, ವಿಷಕಾರಿ ರಾಸಾಯನಿಕಗಳು, ಜೈವಿಕ ಸಂಯುಕ್ತಗಳು, ರೋಗಜನಕಗಳು ಒಳಗೊಂಡಿವೆ ಇವುಗಳು ಮನುಷ್ಯರ ಮತ್ತು ಜಲಚರಗಳ ಮೇಲೆ ಅಪಾರವಾದ ದುಷ್ಪರಿಣಾಮವನ್ನು ಉಂಟು ಮಾಡುತ್ತದೆ. ಪ್ರತಿಯೊಂದು ಮಲಿನಕಾರಕ ವಸ್ತುವೂ ತನ್ನದೇ ಆದ ಮೂಲ, ನಿರ್ದಿಷ್ಟ ಪಥ ಮತ್ತು ಪರಿಣಾಮಗಳನ್ನು ಹೊಂದಿರುತ್ತದೆ. ಈ ಎಲ್ಲ ಮಲಿನಕಾರಕಗಳು ಗಾಳಿ, ನೆಲ ಮತ್ತು ನೀರಿನ ಮೂಲಕ ಇಡೀ ಜೀವಗೋಳವನ್ನು ವ್ಯಾಪಿಸಬಲ್ಲವು ರಾಸಾಯನಿಕಗಳು ಅವು ಹೊರ ತಳ್ಳಲ್ಪಡುವ ಪ್ರಕ್ರಿಯೆಯ ವೇಗಕ್ಕಿಂತ ಹೆಚ್ಚು ರಭಸದಲ್ಲಿ ನೀರನ್ನು ಪ್ರವೇಶಿಸಿದಾಗ ಜಲಮಾಲಿನ್ಯ ಉಂಟಾಗುತ್ತದೆ. ಚರಂಡಿ ನೀರು, ತೈಲಗಳು, ಹೂಳು ಕಾರ್ಖಾನೆಗಳ ರಾಸಾಯನಿಕ ಮತ್ತು ಲೋಹಗಳು ಅಲ್ಲದೇ ಮಳೆ ನೀರಿನಲ್ಲಿ ಕರಗಿಕೊಂಡ ಗಾಳಿಯಲ್ಲಿನ ರಾಸಾಯನಿಕಗಳು ಭೂಮಿ ಹೀರಿಕೊಂಡ ಕೀಟನಾಶಕಗಳು ಇವೆಲ್ಲಾ ಇಲ್ಲಿ ಸೇರುತ್ತವೆ.

ತಂಪು ನೀರಿನೊಳಕ್ಕೆ ಬಿಡಲ್ಪಟ್ಟು ನಿಸರ್ಗಕ್ಕೆ ಚೆಲ್ಲಿದ ಕೈಗಾರಿಕೆಗಳ ಅನುಪಯುಕ್ತ ಶಾಖ ಕೂಡಾ ಮಲಿನಕಾರಕವಾಗಬಲ್ಲುದು. ಜಲಮಾಲಿನ್ಯವು ಜೈವಿಕ ಮತ್ತು ಅಜೈವಿಕ ಮಲಿನಕಾರಕಗಳಿಂದ ಉಂಟಾಗುತ್ತದೆ ಮಾನವ ಮತ್ತು ಕೈಗಾರಿಕೆಗಳಿಂದ ಉಂಟಾಗುವ ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿನಿಯೋಗಿಸುವುದರ ಜತೆಗೆ ವೈಯಕ್ತಿಕವಾದ ಮತ್ತು ಸಾಮುದಾಯಕವಾದ ಶುಚಿತ್ವ, ಶೌಚ ವ್ಯವಸ್ಥೆ ಹೊಂದುವುದು ಜಲಮಾಲಿನ್ಯ ತಡೆಗಟ್ಟಲು ಬಹಳ ಅವಶ್ಯಕ. ಈ ಹಿಂದೆ ಕುಂದಾಪುರ ಪುರಸಭೆ ಪಂಚಗಂಗಾವಳಿ ನದಿ ಮಾಲಿನ್ಯವನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಂಡಿತ್ತು. ಆ ಸಂದರ್ಭದಲ್ಲೂ ಕೂಡಾ ಆಸ್ಪತ್ರೆಗಳ ತ್ಯಾಜ್ಯಗಳು ರಾಶಿ ರಾಶಿಯಾಗಿ ಪಂಚಗಂಗಾವಳಿ ನದಿಗೆ ಸುರಿಯಲ್ಪಟ್ಟು ಮೀನುಗಾರರಿಗೆ ತುಂಬಾ ತೊಂದರೆಯಾಗಿತ್ತು. ಈ ಬಗ್ಗೆ ವರದಿಗಳು ಪತ್ರಿಕೆಯಲ್ಲೂ ಪ್ರಕಟಗೊಂಡು ತೀವ್ರ ಸಂಚಲನ ಸೃಷ್ಟಿಯಾಗಿತ್ತು.

ಕುಂದಾಪುರ ಪರಿಸರದ ಕೆಲವು ಹೋಟೆಲ್ ಗಳಿಂದಲೂ ಮಧ್ಯರಾತ್ರಿಯ ಹೊತ್ತಿಗೆ ತ್ಯಾಜ್ಯ ವಸ್ತುಗಳನ್ನು ಪಂಚಗಂಗಾವಳಿಗೆ ಎಸೆಯಲಾಗುತ್ತದೆ. ಕುಂದಾಪುರ ಪುರಸಭೆ ಕನಿಷ್ಠ ಎಚ್ಚರಿಕೆಯ ಬೋರ್ಡ್ ನ್ನು ಕೂಡಾ ಹಾಕಿಲ್ಲ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಪ್ರಸ್ತುತ ಆಸ್ಪತ್ರೆಗಳ ವೈದ್ಯಕೀಯ ತ್ಯಾಜ್ಯಗಳಿಂದ ಪಂಚಗಂಗಾವಳಿ ನದಿ ಮಾಲಿನ್ಯದ ಪ್ರಕರಣಗಳು ನಡೆಯುತ್ತಿದೆ. ಕುಂದಾಪುರ ಪುರಸಭೆ ಈ ನಿಟ್ಟಿನಲ್ಲಿ ನದಿಗೆ ತ್ಯಾಜ್ಯ ಚೆಲ್ಲುವ ಇಂಥವರನ್ನು ಮಟ್ಟಹಾಕಲು ತ್ವರಿತ ಕ್ರಮ ಕೈಗೊಳ್ಳಬೇಕು. ಪಂಚಗಂಗಾವಳಿ ನಮ್ಮೆಲ್ಲರನ್ನೂ ಮಕ್ಕಳಂತೆ ಪೊರೆಯುತ್ತಾಳೆ ಆಕೆಯ ದಿವ್ಯವಾದ ಆಸ್ಮಿತೆ ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿದೆ ಪಂಚಗಂಗಾವಳಿಯ ಪಾವಿತ್ರ್ಯತೆ ಕಾಪಾಡಲು ನಾವೆಲ್ಲರೂ ಕಟಿಬದ್ದರಾಗೋಣ.

ವರದಿ : ಸುಧಾಕರ್ ಖಾರ್ವಿ
Editor
www.kharvionline.com

PLEASE SPREAD THE WORD ” STOP POLLUTION SAVE PANCHAGANGA ” by sending ALL your WhatsApp group and friends…kharviOnline.com

Leave a Reply

Your email address will not be published. Required fields are marked *