ಕತ್ತಲೆಯ ಲೋಕದಲ್ಲಿ ಹೂತಿಟ್ಟ ನ್ಯಾಯದ ಸೊಲ್ಲು ಮೊಳಗಿತು.

ಕಪ್ಪುದೈತ್ಯರು ಮತ್ತು ಅವರೊಡನೆ ಅಪವಿತ್ರ ಮೈತ್ರಿ ಇಟ್ಟುಕೊಂಡಿರುವ ರಾಜಕಾರಣಿಗಳ ಪಾಪದ ಕೊಡ ತುಂಬಿದೆ. ಸ್ವಾವಲಂಬಿ ಬದುಕಿನ ಕಠಿಣ ಪರಿಶ್ರಮಿಗಳಾದ ಮೀನುಗಾರರ ಹೋರಾಟಕ್ಕೆ ರಾಷ್ಟ್ರೀಯ ಹಸಿರು ಪೀಠ ಮನ್ನಣೆ ನೀಡಿದ್ದು, ಪರಿಸರ ನಿಯಮಗಳನ್ನು ಉಲ್ಲಂಘಿಸಿ ಕಾಸರಕೋಡು ಟೊಂಕ ಸಮುದ್ರತೀರದಲ್ಲಿ ರಸ್ತೆ ನಿರ್ಮಾಣ ಯತ್ನದ ಕಾಮಗಾರಿಗೆ ತಡೆ ನೀಡಿದೆ.

ಪರಿಸರ ಅನುಮತಿ ರದ್ದತಿ ಸಹಿತ ಯೋಜನೆ ಪ್ರವರ್ತಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕರಾವಳಿ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು ಹಸಿರು ಪೀಠದ ಮುಂದೆ ಹೇಳಿರುವುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ. ಕಾಸರಕೋಡು ಟೊಂಕ ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು,ಇದು ಅಭಿವೃದ್ಧಿ ನಿಷೇಧ ಪ್ರದೇಶವಾಗಿರುತ್ತದೆ. ಅತೀ ಮುಖ್ಯ ವಿಷಯವೆಂದರೆ ಈ ಸೂಕ್ಷ್ಮ ಪ್ರದೇಶ ಆಲೀವ್ ರಿಡ್ಲೇ ಜಾತಿಯ ವಿಶಿಷ್ಟ ಪ್ರಭೇದದ ಕಡಲಾಮೆಗಳು ಮೊಟ್ಟೆ ಇಡುವ ತಾಣವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಇದು ಗುರುತಿಸಲ್ಪಟ್ಟಿದೆ.

ಆಡಳಿತ ವ್ಯವಸ್ಥೆ ಇಲ್ಲಿನ ಮೀನುಗಾರರ ಮೇಲೆ ದೌರ್ಜನ್ಯ ನಡೆಸಿ ಆತುರಾತುರವಾಗಿ ಬಂದರು ನಿರ್ಮಾಣ ಯೋಜನಾ ಪ್ರದೇಶ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲು ಚತುಷ್ಪಥ ರಸ್ತೆಯನ್ನು ನಿರ್ಮಾಣ ಮಾಡಲು ಯತ್ನಿಸಿತ್ತು. ಪ್ರಾರಂಭಿಕ ಹಂತದಲ್ಲಿ ಅವರು ನಿರ್ಮಿಸಿದ ರಸ್ತೆ ಕಳೆದ ತಿಂಗಳಲ್ಲಿ ಉಂಟಾದ ಕಡಲಕೊರೆತದಿಂದ ನಾಶವಾಗಿತ್ತು. ಅಧರ್ಮಿಗಳ ವಿರುದ್ಧದ ಮೀನುಗಾರರ ನ್ಯಾಯಯುತವಾದ ಹೋರಾಟದಲ್ಲಿ ಪ್ರಕೃತಿ ಕೂಡಾ ಸಾಥ್ ನೀಡಿತ್ತು.

ಕಾಸರಕೋಡು ಟೊಂಕದ ಮೀನುಗಾರರ ಹೋರಾಟಕ್ಕೆ ರಾಷ್ಟ್ರೀಯ ಮೀನುಗಾರರ ಒಕ್ಕೂಟ, ಮಾನವಹಕ್ಕುಗಳ ಸಂಘಟನೆಗಳು, ಹೈಕೋರ್ಟ್ ನ ಪ್ರಸಿದ್ಧ ನ್ಯಾಯವಾದಿಗಳಾದ ಶ್ರೀಜಾ ಚಕ್ರವರ್ತಿ, ಕಡಲ ವಿಜ್ಞಾನಿ ಪ್ರಕಾಶ ಮೇಸ್ತ ಮುಂತಾದವರು ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ್ದರ ಪ್ರತಿಫಲವಾಗಿ ಮೀನುಗಾರರ ಹೋರಾಟಕ್ಕೆ ಜಯ ಲಭಿಸಿದ್ದು,ಮುಂದೆ ಕ್ರಮಿಸಬೇಕಾಗಿರುವ ದಾರಿ ಕೂಡಾ ಇದೆ.

ಕಡಲ ವಿಜ್ಞಾನಿಗಳಾಗಿರುವ ಕಾಸರಕೋಡು ಟೊಂಕದ ಪ್ರಕಾಶ ಮೇಸ್ತರು ಈ ಪರಿಸರ ಸೂಕ್ಷ್ಮ ಪ್ರದೇಶದ ಸಮಗ್ರ ವೈಜ್ಞಾನಿಕ ಮಾಹಿತಿಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೀಕರಣ ಮಾಡಿದ್ದರು. ಹೈಕೋರ್ಟ್ ನ್ಯಾಯವಾದಿಗಳಾದ ಶ್ರೀಜಾ ಚಕ್ರವರ್ತಿಯವರು ಹಸಿರು ಪೀಠದ ಮುಂದೆ ಸಮರ್ಥವಾಗಿ ವಾದ ಮಂಡಿಸಿ ಅಕ್ರಮ ರಸ್ತೆ ಕಾಮಗಾರಿಗೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆಗೆ ಹಾಜರಾಗಿ ಎಂದು ಸೂಚನೆ ನೀಡಿದರೂ ಬಂದರು ಯೋಜನೆಯ ಪ್ರವರ್ತಕರು ಹಸಿರು ಪೀಠದ ಮುಂದೆ ಹಾಜರಾಗಿಲ್ಲ.ಮುಖ ಇದ್ದರೆ ತಾನೇ ಹಾಜರಾಗುವುದು?

ಕಳೆದ ಹತ್ತು ವರ್ಷಗಳಿಂದ ವಾಣಿಜ್ಯ ಬಂದರು ಯೋಜನೆಯ ವಿರುದ್ಧ ಇಲ್ಲಿನ ಮೀನುಗಾರರು ಮತ್ತು ಮೀನುಗಾರ ಮಹಿಳೆಯರು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಕಪ್ಪುದೈತ್ಯರು ಮತ್ತು ಅವರ ಗುಲಾಮರು ಅವರ ಮೇಲೆ ದೌರ್ಜನ್ಯ ನಡೆಸಿದರೂ, ಪೋಲೀಸ್ ವ್ಯವಸ್ಥೆ ಸುಳ್ಳು ಕೇಸು ದಾಖಲಿಸಿ ಜೈಲಿಗೆ ತಳ್ಳಿದರೂ ಮೀನುಗಾರರ ಇಚ್ಛಾಶಕ್ತಿಯನ್ನು ದಮನಿಸಲು ಆಗಲಿಲ್ಲ. ದಮನಕಾರಿ ಪ್ರಯತ್ನಗಳು ಹಲವು ವಿಧಗಳಲ್ಲಿ ನಡೆದರೂ ಫಲಕಾರಿಯಾಗಲಿಲ್ಲ. ಬದಲು ಮೀನುಗಾರರ ಹೋರಾಟ ಮತ್ತಷ್ಟೂ ಪ್ರಬಲವಾಯಿತು. ಇದು ನಿಜಕ್ಕೂ ಅಭಿನಂದನೀಯ ಸಂಗತಿ.

ಕಡಲ ಮಕ್ಕಳ ಹೋರಾಟಕ್ಕೆ ಹಸಿರು ಪೀಠದ ರಸ್ತೆ ಕಾಮಗಾರಿ ತಡೆಯಾಜ್ಞೆ ಹೊಸ ಹುರುಪು ನೀಡಿದೆ. ಈ ಹೋರಾಟ ಹೊಸ ತಿರುವು ಪಡೆದುಕೊಂಡಿದೆ. ಅಂತಿಮವಾಗಿ ಈ ಜನವಿರೋಧಿ ಮತ್ತು ಪರಿಸರ ವಿರೋಧಿ ಖಾಸಗಿ ವಾಣಿಜ್ಯ ಬಂದರು ಯೋಜನೆ ರದ್ದುಗೊಳ್ಳುವ ತನಕವೂ ಮೀನುಗಾರರ ಹೋರಾಟ ಅಚಲವಾಗಿ ಮುಂದುವರಿಯುತ್ತದೆ. ಸತ್ಯಮೇವ ಜಯತೇ.

ಉಮಾಕಾಂತ ಖಾರ್ವಿ ಕುಂದಾಪುರ

2 thoughts on “ಕತ್ತಲೆಯ ಲೋಕದಲ್ಲಿ ಹೂತಿಟ್ಟ ನ್ಯಾಯದ ಸೊಲ್ಲು ಮೊಳಗಿತು.

  1. ನಮ್ಮ ಜೀವನ, ಕುಟುಂಬ, ಜೀವನೋಪಾಯ ಮತ್ತು ವಾಸಸ್ಥಳವನ್ನು ಉಳಿಸುವ ವಿಷಯಕ್ಕೆ ಬಂದಾಗ… ಸಾಮಾನ್ಯ ಜನರ ಒಗ್ಗಟ್ಟು, ಶಕ್ತಿ ಮತ್ತು ಪ್ರಯತ್ನದಿಂದ ಮಾತ್ರ ವ್ಯತ್ಯಾಸವಾಗುತ್ತದೆ ಎಂದು ತೋರಿಸಲು ಇದು ಒಂದು ಉತ್ತಮ ಉದಾಹರಣೆ … ಸದಾ ಮತ ಭಿಕ್ಷೆ ಬೇಡಿ ಕಮಿಷನ್ ಹಣ ತಿನ್ನುವ ರಾಜಕಾರಣಿಗಳನ್ನು
    ನಂಬಿ ಹಾಗೂ ವಿನಂತಿ ಮಾಡುವುದರಿಂದ ಏನು ಆಗುವುದಿಲ್ಲ. ಇದ್ದಕ್ಕೆ ಮಾತೊಂದು ಒಳ್ಳೆಯ ಉದಾಹರಣೆ ಉತ್ತರ ಕನ್ನಡದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅಭಿಯಾನ.

  2. ಕಾಸರಕೋಡ ಟೊಂಕಾ 1 ಮತ್ತು 2 ಕೊಂಕಣ ಖಾರ್ವಿ ವಾಡೆಯ ನಿವಾಸಿಗಳ ದೃಡ ಸಂಕಲ್ಪ ಜೀವ – ಜೀವನ ಕಟ್ಟಿಕೊಂಡ ಪಾರಂಪರಿಕ ನೆಲೆ. ತಾಣಗಳನ್ನು ಉಳಿಸಿಕೊಳ್ಳಲು ಮಾಡಿದ ಅವಿರತ ಹೋರಾಟದ ಫಲಶೃತಿ ಇದಾಗಿದೆ…. ದಿನಾಲು ಸಾಗರದ ಅಲೆಗಳೊಂದಿಗೆ ಹೋರಾಡಿ ಬರುವರಿಗೆ ಇದೇನು ಹೆದರಿಕೆ / ಹಿಂಜರಿಕೆಯ ವಿಷಯವಲ್ಲ…. ಕೆಲವು ವರ್ಷಗಳ ಹಿಂದೆ ಟೊಂಕಾ ವಾಡೆ ಬುದುವಂತರ ಹಾಗೂ ಹತ್ತು ಸಮಸ್ತರು ಕರೆಗೆ ಓಗೊಟ್ಟು ಹೊನ್ನಾವರದ ಕೆಳಗಿನ ಪಾಳ್ಯ ವಾಡೆಯವನಾದ ನಾನು ಟೊಂಕಾದ ಯುವ ದಂಡಿನ ಪಾಳ್ಯದಿಂದ ಪ್ರಾಭಾವಿತನಾಗಿದ್ದೆ …. ಟೊಂಕಾ ವಾಡೆ ಬುಧವಂತ ಶ್ರೀ ರಾಜೇಶ ತಾಂಡೆಲ್ ರವರು ನನಗೆ ಅವರ ವಾಡೆ ದಂಡನಾಯಕರಾದ ಗಂಪಾ, ರಾಜೂ ರವರವರನ್ನು ಪರಿಚಯ ಮಾಡಿಕೊಟ್ಟರು…. ಸಾಗರದ ಅಲೆಗಳೊಂದಿಗೆ ಹೋರಾಟದ ಚಾಣಕ್ಯತೆಯನ್ನು ಹೊಂದಿದ ದೊಡ್ಡ ಗುಂಪು ಅವರೊಂದಿಗೆ ಇತ್ತು….. ಅಲ್ಲಿನ ಮೀನುಗಾರ ಮಹಿಳೆಯರು ಮೀನುಗಾರಿಕೆಯ ಹಾಗೂ ಕಡಲತೀರದಿಂದ ಬರುವ ಜೀವನಾಂಶದ ಸೇವೆಗಳ ಬಗ್ಗೆ ಅಲ್ಲಿನ ಜೀವವೈವಿಧ್ಯತೆಯ ಸಂರಕ್ಷಣೆಯ ಅಗತ್ಯತೆ ಬಗ್ಗೆ ಕಾಳಜಿ ಹೊಂದಿದವರಾಗಿದ್ದರು ಜೊತೆಗೆ ಪ್ರಮುಖವಾಗಿ ಗ್ರಾಮದೇವಿ ಶ್ರೀ ಮಾರಮ್ಮ ಯಾನೆ ದಂಡಿನ ದುರ್ಗಾದೇವಿ ಅವರ ಜೊತೆಗಿದ್ದಳು…. ನ್ಯಾಯಕ್ಕಾಗಿ ಹೋರಾಟ ತಡೆ ಇಲ್ಲದೆ ಸಾಗಿತ್ತು….

Leave a Reply

Your email address will not be published. Required fields are marked *