“ಮೇಘಸ್ಫೋಟ” ಭಟ್ಕಳದಲ್ಲಿ ಶತಮಾನದ ಮಹಾಜಲಪ್ರಳಯ

“ಮೇಘಸ್ಫೋಟ” ಭಟ್ಕಳದಲ್ಲಿ ಶತಮಾನದ ಮಹಾಜಲಪ್ರಳಯ

ನಾಡಿಗೆ ದೊಡ್ಡಹಬ್ಬವಾಗಿರುವ ನಾಗರಪಂಚಮಿಯ ಸಂಭ್ರಮದ ಆಚರಣೆಗಾಗಿ ಭಟ್ಕಳದ ಜನ ಕಾತರದಿಂದ ಕಾಯುತ್ತಿದ್ದರು. ಆದರೆ ಜನರ ಪಾಲಿಗೆ ಮಾತ್ರ ಕರಾಳ ಮಂಗಳವಾರ ಆಯಿತು. ಶತಮಾನದ ಜಲಪ್ರಳಯ ಮೇಘಸ್ಪೋಟದ ರೂಪದಲ್ಲಿ ಕರಾಳಸ್ವರೂಪದಲ್ಲಿ ಸಂಭವಿಸಿತು.

ಎರಡು ವಾರಗಳ ಕಾಲ ನಿರಂತರ ಮಳೆ ಸುರಿದ ಬಳಿಕ ಜನರಿಗೆ ಸ್ವಲ್ಪ ಬಿಡುವು ನೀಡಿತ್ತು. ಕಡಲು ಶಾಂತವಾಗಿ ಸಾಂಪ್ರದಾಯಿಕ ಮೀನುಗಾರಿಕೆಗೆ ಚಾಲನೆ ದೊರಕಿತ್ತು. ಮೀನುಗಾರರು ಖುಷಿಯಲ್ಲಿದ್ದರು ಜುಲೈ 28 ರಂದು ಚಂಡಮಾರುತ ಬೀಸಲಿದೆ ಎಂದು ಹವಾಮಾನ ಇಲಾಖೆ ಮೀನುಗಾರರಿಗೆ ಎಚ್ಚರಿಕೆ ನೀಡಿತ್ತು. ಆದರೆ ಏನೂ ಸಂಭವಿಸಲಿಲ್ಲ. ಹವಾಮಾನ ವರದಿ ಸ್ವಲ್ಪ ವ್ಯತ್ಯಾಸವಾಗಿತ್ತು ಚಂಡಮಾರುತದ ಭೀತಿ ದೂರವಾದರೂ ಅದರ ಬೆನ್ನಲ್ಲೇ ಮೇಘಸ್ಪೋಟ ಸಂಭವಿಸಿ ಮೀನುಗಾರರನ್ನು ಕಂಗೆಡಿಸಿದೆ ಗಾಳಿ ಇರದಿದ್ದರೂ ಮಹಾಮಳೆಯಿಂದ ಸೊಕ್ಕಿದ ದೈತ್ಯಕಾರದ ಕಡಲಲೆಗಳು ಭಟ್ಕಳ ಬಂದರು ಮೀನುಗಾರರ ಹದಿನೈದಕ್ಕೂ ಹೆಚ್ಚು ದೋಣಿಗಳನ್ನು ಸೆಳೆದುಕೊಂಡು ಹೋಗಿದೆ ಬದುಕಿನ ಜೀವನಾಡಿಯಾಗಿರುವ ದೋಣಿಗಳನ್ನು ಕಳೆದುಕೊಂಡು ಮೀನುಗಾರರು ಪರಿತಪಿಸುತ್ತಿದ್ದಾರೆ.

ಮೀನುಗಾರಿಕಾ ಋತುವಿನ ಪ್ರಾರಂಭದಲ್ಲೇ ಸಂಭವಿಸಿದ ಈ ಪ್ರಾಕೃತಿಕ ವಿಕೋಪ ಅವರನ್ನು ಕಂಗೆಡಿಸಿದೆ. ಇಡೀ ಭಟ್ಕಳ ತಾಲೂಕಿಗೆ ಜಲದಿಗ್ಬಂದನ ವಿಧಿಸಿದ ಈ ಮೇಘಸ್ಪೋಟದ ಮಹಾದುರಂತ ಪ್ರಾರಂಭವಾದದ್ದು ಮಂಗಳವಾರ ಪ್ರಾತಃಕಾಲ 3 ಗಂಟೆಗೆ ಸೋಮವಾರ ರಾತ್ರಿ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ ಮರುದಿನ ಮಂಗಳವಾರ ಪ್ರಾತಃಕಾಲ ಹತ್ತಿರವಾದಂತೆ ಉಗ್ರ ಸ್ವರೂಪ ಪಡೆದುಕೊಂಡಿತ್ತು. ಕೇವಲ ಎರಡೇ ಗಂಟೆಯ ಅವಧಿಯಲ್ಲಿ ಎಲ್ಲಾ ಅಲ್ಲೋಲ ಕಲ್ಲೋಲ ಪರಿಸ್ಥಿತಿ ಚಿಂತಾಜನಕ ಬ್ರಾಹ್ಮಿಮೂಹೂರ್ತದಲ್ಲಿ ಜನರು ಮನೆಬಿಟ್ಟು ಗಂಜಿಕೇಂದ್ರದಲ್ಲಿದ್ದರು.

ಶತಮಾನದಲ್ಲಿಯೇ ಕಂಡು ಕೇಳರಿಯದ ಮೇಘಸ್ಪೋಟ ಪ್ರಾಣಹಾನಿ, ಅಪಾರ ಆಸ್ತಿಪಾಸ್ತಿ ನಷ್ಟ. ಹಿಂದೆಂದೂ ಕಂಡುಬರದಿದ್ದಂತಹ ಈ ಮಹಾಮಳೆ ಹಬ್ಬದ ಸಂಭ್ರಮವನ್ನು ಕಸಿದುಕೊಂಡಿತು. ಈ ಮಹಾಮಳೆಯಲ್ಲಿ ಭಟ್ಕಳದ ಎಲ್ಲ ಚಟುವಟಿಕೆಗಳೂ ಮುಳುಗಿಹೋದವು. ಈ ಮಹಾಮಳೆಗೆ ಸಂಬಂಧಿಸಿದಂತೆ ಮಾಹಿತ ಸಂಗ್ರಹಣೆ, ವಿಶ್ಲೇಷಣೆಗಳಿಂದ ಹಲವಾರು ಅಂಶಗಳು ಬೆಳಕಿಗೆ ಬಂದಿದೆ.

ಪವನ ವಿಜ್ಞಾನದ ಪರಿಭಾಷೆಯಲ್ಲಿ ಅತ್ಯಲ್ಪ ಕಾಲದಲ್ಲಿ ಸೀಮಿತ ಪ್ರದೇಶದಲ್ಲಿ ಬೀಳುವ ಅತ್ಯಧಿಕ ಮಳೆಯನ್ನು ಮೇಘಸ್ಪೋಟವೆಂದು ಕರೆಯಲಾಗುತ್ತದೆ. ಡಿಢೀರ್ ಪ್ರವಾಹಕ್ಕೆ ಎಡೆ ಮಾಡಿಕೊಡುವ ಈ ಮಳೆ ಮೇಲ್ಮುಖವಾಗಿ ಚಲಿಸುವ ವಾಯುಪ್ರವಾಹದಲ್ಲಿ ಅಪಾರ ಪ್ರಮಾಣದಲ್ಲಿ ನೀರಿನಂಶವಿರುತ್ತದೆ. ಅದರಲ್ಲಿನ ನೀರಿನ ಬಾಷ್ಪ ಸಾಂದ್ರೀಕರಣಗೊಂಡು ಅಷ್ಟೂ ನೀರು ಅತ್ಯಂತ ರಭಸವಾಗಿ ಅದೇ ಸೀಮಿತ ಪ್ರದೇಶದಲ್ಲಿ ಸುರಿಯುತ್ತದೆ. ಡಿಢೀರ್ ಪ್ರವಾಹಗಳಿಗೆ ಕಾರಣವಾಗುವ ಇಂತಹ ಮೇಘಸ್ಪೋಟ ಇತ್ತೀಚಿನ ವರ್ಷಗಳಲ್ಲಿ ಅನೇಕ ಕಡೆ ಸಂಭವಿಸಿದರೂ ಭಟ್ಕಳದ ಮಟ್ಟಿಗೆ ಜನರಿಗೆ ಭೀಭತ್ಸ ಅನುಭವ. ನದಿ ಮತ್ತು ಸಮುದ್ರಗಳು ಹತ್ತಿರದಲ್ಲಿದ್ದರೂ ಈ ಪರಿಯ ಮಳೆನೀರಿನ ದಿಗ್ಬಂದನ ಜನರನ್ನು ನಿದ್ರೆಗೆಡಿಸಿದೆ.

ಕಳೆದ ವರ್ಷ ತೌಕ್ತೆ ಚಂಡಮಾರುತ ಸಂಭವಿಸಿ ಮೀನುಗಾರರ ಅನೇಕ ಬೋಟ್ ಗಳು, ದೋಣಿಗಳು ಹಾನಿಗೊಳಗಾಗಿತ್ತು. ಅದರ ಸರಿಯಾದ ಪರಿಹಾರ ಮೀನುಗಾರರಿಗೆ ಇನ್ನೂ ಮರೀಚಿಕೆಯಾಗಿದೆ. ಈಗ ಮೀನುಗಾರಿಕೆ ಋತುವಿನ ಆರಂಭದಲ್ಲೇ ಮೇಘಸ್ಪೋಟದ ದುರಂತ ಸಂಭವಿಸಿ ಕೆಲವು ದೋಣಿಗಳು ಹಾನಿಗೊಳಗಾಗಿದ್ದು ಇನ್ನು ಕೆಲವು ದೋಣಿಗಳು ಸಮುದ್ರದಲ್ಲಿ ಕಣ್ಮರೆಯಾಗಿದೆ. ಭಟ್ಕಳ ಬಂದರಿನ ರಾಮದಾಸ್ ಖಾರ್ವಿ ಮತ್ತು ಉದಯ ಖಾರ್ವಿಯವರ ದೋಣಿಗಳು ಕಣ್ಮರೆಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಮೀನುಗಾರರ ನೆರವಿಗೆ ಬರಬೇಕಾಗಿದೆ. ಹಾನಿಗೊಳಗಾಗಿರುವ ಮತ್ತು ದೋಣಿಯನ್ನು ಕಳೆದುಕೊಂಡಿರುವ ಮೀನುಗಾರರಿಗೆ ಸರ್ಕಾರ ಸಮರ್ಪಕವಾದ ಪರಿಹಾರ ಕಲ್ಪಸಿ ಅವರ ಕಣ್ಣೀರನ್ನು ಒರೆಸಬೇಕಾಗಿದೆ.

ಸಮುದ್ರದಲ್ಲಿ ದೋಣಿಗಳು ತೇಲಿ ಹೋಗಿ ದೋಣಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಬಲೆಗಳು ನಷ್ಟವಾಗಿದೆ. ಇನ್ನೊಂದು ಕರುಣಾಜನಕ ಸಂಗತಿಯೆಂದರೆ ಬಂದರಿನ ಉದಯ ಖಾರ್ವಿ ಎಂಬ ಮೀನುಗಾರ ಕಳೆದ ಕೆಲವು ದಿನಗಳ ಹಿಂದಷ್ಟೇ ಅನಾರೋಗ್ಯದಿಂದ ಸಾವಿಗೀಡಾಗಿದ್ದರು. ಅವರು ಮೀನುಗಾರಿಕೆಗೆ ಬಳಸುತ್ತಿದ್ದ ದೋಣಿಯೂ ಕೂಡಾ ಮೇಘಸ್ಪೋಟದ ಈ ಪ್ರವಾಹದಲ್ಲಿ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದೆ. ಮೃತ ಉದಯ ಖಾರ್ವಿ ಕುಟುಂಬಕ್ಕೆ ಮತ್ತಷ್ಟೂ ಆಘಾತ ಉಂಟಾಗಿದ್ದು, ಈ ಕುಟುಂಬ ಈಗ ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕವಾಗಿದೆ. ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಮೀನುಗಾರರ ಸಂಕಷ್ಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಿ ಕಾರ್ಯಪ್ರವೃತ್ತರಾಗಬೇಕು. ಪ್ರಾಕೃತಿಕ ವಿಕೋಪಗಳಿಂದ ಅತೀವವಾಗಿ ಸಂತ್ರಸ್ತರಾಗುವ ಕಡಲಮಕ್ಕಳ ಬದುಕಿನಲ್ಲಿ ಆಶಾಕಿರಣ ಮೂಡಿಸುವ ಉತ್ತರದಾಯಿತ್ವ ಸರ್ಕಾರದ ಮೇಲಿದೆ.

ಈ ಲೇಖನಕ್ಕೆ ಪೂರಕವಾಗಿ ಪೋಟೊಗಳನ್ನು ಒದಗಿಸಿಕೊಟ್ಟು ಸಹಕರಿಸಿದ ಖಾರ್ವಿ ಆನ್ಲೈನ್ ಭಟ್ಕಳದ ಪ್ರತಿನಿಧಿಯಾಗಿರುವ ಈಶ್ವರ ಮಂಜುನಾಥ ಖಾರ್ವಿ ಮತ್ತು ರಾಘವೇಂದ್ರ ವೆಂಕಟರಮಣ ಖಾರ್ವಿಯವರಿಗೆ ತುಂಬು ಹೃದಯದ ಕೃತಜ್ಞತೆಗಳು.

ಉಮಾಕಾಂತ ಖಾರ್ವಿ ಕುಂದಾಪುರ

ಭಟ್ಕಳದಲ್ಲಿ ಸಂಭವಿಸಿದ ಮೇಘಸ್ಪೋಟಕ್ಕೆ ಬಂದರು ಪ್ರದೇಶದ 15 ಕ್ಕೂ ಹೆಚ್ಚು ದೋಣಿಗಳು ಹಾನಿಗೊಂಡಿವೆ.ಬಲೆ ಮತ್ತು ಯಂತ್ರಗಳಿಗೆ ಹಾನಿಯಾಗಿದ್ದು 20 ಕ್ಕೂ ಅಧಿಕ ದೋಣಿಗಳು,ಸಣ್ಣ ಪಾತಿದೋಣಿಗಳು ಸಂಪೂರ್ಣ ನಾಶಗೊಂಡಿವೆ.ಸುಮಾರು 20 ಲಕ್ಷದಷ್ಟು ನಷ್ಟವಾಗಿದೆ.ಮೀನುಗಾರಿಕಾ ಋತು ಆರಂಭಗೊಳ್ಳುವುದರಿಂದ ಸರ್ಕಾರವು ಕೂಡಲೇ ಮೀನುಗಾರರಿಗೆ ಸೂಕ್ತ ಪರಿಹಾರ ನೀಡಬೇಕಾಗಿದೆ. ಖಾರ್ವಿ ಆನ್ಲೈನ್ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *