ನೈಸರ್ಗಿಕ ಪರಿಸರ ಮತ್ತು ಎಲ್ಲಾ ಜೀವಿಗಳ ಬದುಕು ಪ್ರಕೃತಿಯ ಲಯದೊಂದಿಗೆ ಬೆಸೆದುಕೊಂಡಿದೆ. ಪ್ರಕೃತಿಯ ಲಯದಲ್ಲಿ ಏರಿಳಿತ ಕಂಡುಬಂದರೆ ಎಲ್ಲಾ ಜೀವಿಗಳ ಬದುಕು ತತ್ತರಿಸುತ್ತದೆ ಎಂಬುದು ಸರ್ವವಿಧಿತ ವಿಚಾರವಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ಭಟ್ಕಳದಿಂದ ಹಿಡಿದು ಕುಮಟಾದವರೆಗಿನ ಸಮುದ್ರ ತೀರಗಳಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಂದು ಬೀಳುತ್ತಿರುವ ಗೊಬ್ರಾ ಮೀನುಗಳೇ ಸಾಕ್ಷಿಯಾಗಿದೆ. ಇದಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದು ಕಡಲಾಳದಲ್ಲಿ ಉತ್ಪನ್ನವಾಗಿರುವ ಹೊಗೆನೀರು. ಎರಡನೆ ಕಾರಣವೆಂದರೆ ಸುಳಿಗಾಳಿ ಅಥವಾ ತೂಫಾನ್. ಮೊದಲನೆಯದಾಗಿ ಎಲ್ಲಾ ಕಡೆಯಿಂದಲೂ ಸಮುದ್ರ ಸೇರುವ ಮಳೆ ನೀರು ತಳಭಾಗದಲ್ಲಿ ಕದಡಿ ರಾಡಿಯಾಗುತ್ತದೆ. ಇದಕ್ಕೆ ಮೀನುಗಾರರ ಪರಿಭಾಷೆಯಲ್ಲಿ ಹೊಗೆನೀರು ಎಂದು ಕರೆಯುತ್ತಾರೆ. ಈ ಹೊಗೆನೀರಿನಿಂದ ತಳಭಾಗದ ಮೀನುಗಳಿಗೆ ತಲೆಸುತ್ತು ಬರುತ್ತದೆ. ಹೀಗಾಗಿ ಅವುಗಳು ಅರೆಪ್ರಜ್ಞಾವಸ್ಥೆಯಲ್ಲಿ ದಡಕ್ಕೆ ಬಂದು ಬೀಳುತ್ತದೆ.
ಎರಡನೆಯದಾಗಿ ಸಮುದ್ರದಲ್ಲಿ ಸುಳಿಗಾಳಿ, ಚಂಡಮಾರುತ ಎದ್ದಾಗ ಕಡಲಲೆಗಳ ಆರ್ಭಟ ಹೆಚ್ಚಾಗುತ್ತದೆ. ಗಾಳಿಯ ವೇಗ ಜಾಸ್ತಿ ಇರುವುದರಿಂದ ಕಡಲಿನ ನೀರು ಅಡಿಮೇಲಾಗುತ್ತದೆ. ಇದರಿಂದ ಮೀನುಗಳ ಚಲನೆಯಲ್ಲಿ ವ್ಯತ್ಯಾಸ ಉಂಟಾಗಿ ಮೀನುಗಳು ಸಮುದ್ರತೀರಕ್ಕೆ ಬರುತ್ತದೆ. ಈ ಪ್ರಕ್ರಿಯೆ ಕಳೆದ ಮೇ ತಿಂಗಳಲ್ಲಿ ಅಸಾನಿ ಚಂಡಮಾರುತ ಬಂದ ಮರುದಿನ ಸಂಭವಿಸಿದೆ. ಆಗ ಮಲ್ಪೆ ಮೀನುಗಾರಿಕಾ ದೋಣಿಗಳಿಗೆ ಬೈಗೆ ಮೀನು ಬಂಪರ್ ರೂಪದಲ್ಲಿ ಸಿಕ್ಕಿತ್ತು. ಈ ಎರಡೂ ಪ್ರಕ್ರಿಯೆಗಳಿಗೆ ಕೊಂಚ ಮಟ್ಟಿನ ವ್ಯತ್ಯಾಸವಿದೆ.
ನಿನ್ನೆಯಿಂದ ಕಡಲತೀರದಲ್ಲಿ ಬಂದು ಬೀಳುತ್ತಿರುವ ಈ ಮೀನುಗಳಿಗೆ ಕನ್ನಡದಲ್ಲಿ ಮುರಿಯ ಎಂದು ಕರೆದರೆ ಕೊಂಕಣಿ ಭಾಷೆಯಲ್ಲಿ ಗೊಬ್ರಾ ಮೀನು ಎಂದು ಕರೆಯುತ್ತಾರೆ. ಸ್ವಾದಿಷ್ಟಕರವಾದ ಈ ಮೀನು ನದಿ ಮತ್ತು ಕಡಲಿನಲ್ಲಿ ವಾಸಿಸುವ ಉಭಯವಾಸಿ. ಇವುಗಳು ಮುಖ್ಯವಾಗಿ ಬಂಡೆಕಲ್ಲುಗಳ ಎಡೆಯಲ್ಲಿ ಮತ್ತು ಸಮುದ್ರದ ತಳಭಾಗದಲ್ಲಿ ವಾಸಿಸುವುದು ಹೆಚ್ಚು. ಈ ಮೀನು ಕಡುಕಂದು ಮತ್ತು ಬೂದಿ ಬಣ್ಣವನ್ನು ಹೊಂದಿದೆ. ಕಡಲಾಳದಲ್ಲಿ ದೈತ್ಯಾಕಾರದ ಗೊಬ್ರಾ ಮೀನುಗಳಿವೆ.
ಭಟ್ಕಳ,ಮುರುಡೇಶ್ವರ,ಹೊನ್ನಾವರ ಅಪ್ಸರಕೊಂಡ ಮತ್ತು ಕುಮಟಾದ ಕೆಲವು ಸಮುದ್ರ ತೀರಗಳಲ್ಲಿ ಗೊಬ್ರಾ ಮೀನುಗಳು ರಾಶಿರಾಶಿಯಾಗಿ ಬಂದು ಬೀಳುವ ಪ್ರಕ್ರಿಯೆ ಜರುಗಿದೆ. ಮೀನುಪ್ರಿಯರಿಗೆ ಹಬ್ಬ ಮೀನುಗಾರರಿಗೆ ಬಯಸದೇ ಬಂದ ಭಾಗ್ಯ ಮೀನುಗಾರರ ಪ್ರಕಾರ ಮೀನುಗಳು ಹೊಗೆನೀರಿನಿಂದಾಗಿ ದಡಕ್ಕೆ ಬಂದು ಬೀಳುವುದು ಮತ್ತು ಚಂಡಮಾರುತದಿಂದ ಹಾದಿತಪ್ಪಿ ಕಡಲತೀರಕ್ಕೆ ಬರುವ ವಿದ್ಯಮಾನ ಹೊಸತಲ್ಲ. ಆಗಾಗ್ಗೆ ಭೂವೈಜ್ಞಾನಿಕ ಕಾರಣದಿಂದ ಮತ್ತು ಪ್ರಕೃತಿಯಲ್ಲಿ ಉಂಟಾದ ಬದಲಾವಣೆಯಿಂದ ಇಂತಹ ಪ್ರಕ್ರಿಯೆಗಳು ಜರುಗುವುದು ಸಾಮಾನ್ಯ.
ಪ್ರಾಕೃತಿಕ ವಿಕೋಪದ ಭೂವೈಜ್ಞಾನಿಕ ಘಟನೆಗಳಿಗೆ ಜೀವಿ ಪರಿಸರ ಪ್ರಕ್ರಿಯೆಗಳು ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸಿ ಸಮತೋಲನವನ್ನು ಸಾಧಿಸುವುದು ಪ್ರಕೃತಿಯಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿರುವ ಕ್ರಿಯೆ.ಪ್ರಕೃತಿಯ ಪುನಶ್ಚೇತನ ಸಾಮರ್ಥ್ಯ ಹಲವಾರು ಸಂದರ್ಭದಲ್ಲಿ ಸ್ಪಷ್ಟವಾಗಿ ನಿರೂಪಿತಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.
ರಾಡಿಯಾದ ಹೊಗೆನೀರು ಮತ್ತು ತಂಪು ನೀರು ಸಮುದ್ರದಲ್ಲಿ ಬಂದಾಗ ಇತರ ಮೀನುಗಳು ತಪ್ಪಿಸಿಕೊಳ್ಳುತ್ತದೆ. ಆದರೆ ಗೊಬ್ರಾ ಮೀನುಗಳು ಕಲ್ಲುಬಂಡೆಗಳ ಎಡೆಯಲ್ಲಿ ವಾಸಿಸುವುದರಿಂದ ಅದಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೊಗೆನೀರಿನಿಂದಾಗಿ ಅವುಗಳು ಅರೆಪ್ರಜ್ಞಾವಸ್ಥೆ ಸ್ಥಿತಿ ತಲುಪಿ ಅಲೆಗಳ ರಭಸಕ್ಕೆ ದಡಕ್ಕೆ ಬಂದು ಬೀಳುತ್ತದೆ. ಈ ಪರಿಯಲ್ಲಿ ರಾಶಿರಾಶಿಯಾಗಿ ಗೊಬ್ರಾ ಮೀನುಗಳು ಕಡಲದಂಡೆಗೆ ಬಂದು ಬೀಳಲು ಇದೇ ಕಾರಣ. ಇದು ಆಳಸಮುದ್ರದಲ್ಲಿ ನಡೆದ ಪ್ರಕ್ರಿಯೆಯಾಗಿದೆ.
ಉಮಾಕಾಂತ ಖಾರ್ವಿ ಕುಂದಾಪುರ
ಪ್ರಕೃತಿಯ ಲಯದಲ್ಲಿ ಏರಿಳಿತವಾದಾಗ ಏನೆಲ್ಲಾ ವಿಚಿತ್ರಗಳು ಸಂಭವಿಸುತ್ತದೆ ಎಂಬುದರ ಬಗ್ಗೆ ಒಳ್ಳೆಯ ವಿವರಣೆ. ಕರಾವಳಿ ಕರ್ನಾಟಕದಲ್ಲಿ ಕಳೆದ ಎರಡು ವಾರಗಳಿಂದ ಪ್ರಕೃತಿಯ ಅನಿರೀಕ್ಷಿತ ಈ ವರ್ತನೆಗೆ ಸಾಕ್ಷಿಯಾಗಿದೆ. ಇದು ಪ್ರಕೃತಿ ಮಾತೆಯ ಎಚ್ಚರಿಕೆಯೋ ಅಥವಾ ವಿಶ್ವದ ಹವಾಮನದಲ್ಲಿನ ಬದಲಾವಣೆಯ ಕಾರಣವೋ … ಭವಿಷ್ಯದ ದಿನಗಳು ಮಾತ್ರ ಹೇಳಬಲ್ಲವು.