ಸಾಧನೆಯ ವ್ಯಾಪ್ತಿ ಅಗೆದಷ್ಟೂ ಆಳ, ಸಾಧಿಸಿದಷ್ಟೂ ವಿಶಾಲ ಇದನ್ನು ಮೂಲಮಂತ್ರವಾಗಿಸಿಕೊಂಡು ವೃತ್ತಿ ಪ್ರವೃತ್ತಿಗಳೆರಡಲ್ಲೂ ಕಾರ್ಯತತ್ಪರರಾಗಿರುವ ಕೊಂಕಣಿ ಖಾರ್ವಿ ಸಮಾಜದ ಬಹುಮುಖ ಪ್ರತಿಭೆ ಕಾಸರಕೋಡು ಟೊಂಕಾದ ರಮೇಶ ಪುರ್ಸಯ್ಯ ಮೇಸ್ತಾ. ಇವರ ಆಸಕ್ತಿಯ ಕ್ಷೇತ್ರ ಹಲವಾರು ವೃತ್ತಿಯಲ್ಲಿ ಗಣಿತ ಅಧ್ಯಾಪಕರಾಗಿರುವ ಇವರು ನಡೆದ ಸಾಧನೆಯ ಹಾದಿ ಪರಿಪಕ್ವತೆಯಿಂದ ಸಮೃದ್ಧವಾಗಿದೆ.
ಸಾಧನೆಯ ಹಲವಾರು ಶಾಖೆಗಳಲ್ಲಿ ಸಾಗಿದ ಇವರ ಬದುಕು ಪ್ರತಿಯೊಂದು ಕವಲಿನಲ್ಲೂ ಹೊಸ ಹೊಸ ವಿಚಾರಗಳ ಬಗ್ಗೆ ತನ್ನ ಜ್ಞಾನವನ್ನು ಹೆಚ್ಚಿಸಿಕೊಂಡಿದೆ. ಕ್ರೀಡೆ, ಸಾಹಿತ್ಯ, ಸಂಗೀತ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕೈಯಾಡಿಸಿದ ಕ್ರಿಯಾಶೀಲ ವ್ಯಕ್ತಿಯಾದ ರಮೇಶ ಪುರ್ಸಯ್ಯ ಮೇಸ್ತಾ ಪ್ರಸ್ತುತ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ಇದು ಸಮಸ್ತ ಕೊಂಕಣಿ ಖಾರ್ವಿ ಸಮಾಜಕ್ಕೆ ಹೆಮ್ಮೆಯ ವಿಚಾರವಾಗಿದೆ. ಸಮಾಜದ ಪ್ರತಿನಿಧಿಯಾಗಿ ಪ್ರತಿಷ್ಠಿತ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆಗೊಂಡು ರಮೇಶ್ ಪುರ್ಸಯ್ಯ ಮೇಸ್ತಾರವರು ಸಮಾಜಕ್ಕೆ ಕೀರ್ತಿ ತಂದಿದ್ದಾರೆ. ಅವರಿಗೆ ಖಾರ್ವಿ ಆನ್ಲೈನ್ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ರಮೇಶ್ ಪುರ್ಸಯ್ಯ ಮೇಸ್ತಾರ ಊರು ಹೊನ್ನಾವರದ ಕಾಸರಕೋಡು ಟೊಂಕ ತಂದೆ ಪುರ್ಸಯ್ಯ ದೇವಯ್ಯ ಮೇಸ್ತ ತಾಯಿ ಗಂಗಾ ಮೇಸ್ತ, ಪತ್ನಿಯ ಹೆಸರು ಗೀತಾ ಮುದ್ದಾದ ಮಕ್ಕಳು ಶ್ರೀರಾಮ್ ಮತ್ತು ಮಗಳು ಪ್ರಣಮ್ಯ ಮೇಸ್ತ
ಪ್ರಸ್ತುತ ಶರಾವತಿ ಪ್ರೌಢಶಾಲೆ ಹೊಸಾಡ ಹೊನ್ನಾವರದಲ್ಲಿ ಗಣಿತ ಅಧ್ಯಾಪಕರಾಗಿ ಕಳೆದ ಹದಿನೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೇ ಪ್ರತಿಭಾ ಸಂಪನ್ನರಾದ ರಮೇಶ ಮೇಸ್ತರದು ಪರಿಪೂರ್ಣ ಕಲಾಬದುಕು. ಐದು ವರ್ಷ ಹಿಂದೂಸ್ಥಾನಿ ಸಂಗೀತ ಅಭ್ಯಾಸ, ಸಂಗೀತ ವಾದ್ಯಗಳಾದ ಗಿಟಾರ್ ಮತ್ತು ಹಾರ್ಮೋನಿಯಂ ನುಡಿಸುವುದರಲ್ಲೂ ಪ್ರಾವೀಣ್ಯತೆ ಹೊಂದಿರುತ್ತಾರೆ. ಸವ್ಯಸಾಚಿ ಕಲಾವಿದರಾದ ಇವರು ಕಳೆದ ಹದಿಮೂರು ವರ್ಷಗಳ ಹಿಂದೆ ಹುಟ್ಟುಹಾಕಿದ ಓಶನ್ ಹಾರ್ಟ್ ಬ್ರೇಕರ್ ಎಂಬ ನೃತ್ಯ ಸಂಸ್ಥೆ ರಾಜ್ಯಾದ್ಯಂತ ಜನಪ್ರಿಯವಾಗಿದೆ. ಇಲ್ಲಿ ಕಲಿತ ನೃತ್ಯ ಪ್ರತಿಭೆಗಳು ಈಟಿವಿ ತೆಲುಗು, ಜೀ ಟಿವಿ ಕನ್ನಡ DKD ಮುಂತಾದ ದೊಡ್ಡ ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದಾರೆ.
ಹೊನ್ನಾವರ ತಾಲೂಕು ಆಡಳಿತದಿಂದ ನಡೆಯುವ ಜನವರಿ 26 ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿವಿಧ ಶಾಲೆಯ ವಿದ್ಯಾರ್ಥಿಗಳ ಕಲಾಪ್ರದರ್ಶನಕ್ಕೆ ನೃತ್ಯ ಸಂಯೋಜನೆ ಮಾಡುತ್ತಾ ಬಂದಿರುವ ರಮೇಶ್ ಮೇಸ್ತರು ಈಗಾಗಲೇ 2000 ಕ್ಕೂ ಹೆಚ್ಚು ಕಲಾಪ್ರದರ್ಶನವನ್ನು ನೀಡಿದ್ದಾರೆ. ನಿರಂತರ 26 ವರ್ಷಗಳ ಅವರ ಕಲಾಕ್ಷೇತ್ರದ ಪಯಣ ಬದುಕಿಗೆ ಸಾರ್ಥಕತೆಯ ಹೊಳಪನ್ನು ನೀಡಿದೆ.
ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಜೊತೆಗೆ ವೇದಿಕೆ ಹಂಚಿಕೊಂಡ ಮಧುರ ಕ್ಷಣಗಳು, ಪಾಪ್ ಸಿಂಗರ್ ರಘು ದೀಕ್ಷಿತ್ ರವರನ್ನು ಭೇಟಿಯಾದ ಕ್ಷಣಗಳನ್ನು ಅವರ ಕಲಾಜೀವನದ ಸುಮಧುರ ಗಳಿಗೆಯಾಗಿದೆ. ಮಂತ್ರಾಲಯ ಶ್ರೀಗಳು ಇವರ ತಂಡಕ್ಕೆ ಆಶೀರ್ವಚನ ನೀಡಿದ್ದು ಧನ್ಯತಾ ಪವಿತ್ರ ಕ್ಷಣಗಳು. ಧಾರ್ಮಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿರುವ ರಮೇಶ ಪುರ್ಸಯ್ಯ ಮೇಸ್ತರವರು ಶ್ರೀ ವೀರಮಾರುತಿ ಮಂದಿರ ಕಾಸರಕೋಡು ಇದರ ಕಾರ್ಯದರ್ಶಿಯಾಗಿ 2004 ರಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಸದಸ್ಯರಾಗಿ ಕಳೆದ 4 ವರ್ಷಗಳಿಂದ ಸೇರಿ ಸಲ್ಲಿಸುತ್ತಾ ಬಂದಿರುವ ರಮೇಶ ಮೇಸ್ತರವರು ಕ್ರಿಯಾಶೀಲತೆಗೊಂದು ಉತ್ತಮ ಉದಾಹರಣೆ.
ಅದ್ಬುತ ಕಲಾಸಾಧನೆಯ ಪ್ರತಿಭಾ ಸಂಪನ್ನರಾದ ಸವ್ಯಸಾಚಿ ರಮೇಶ ಪುರ್ಸಯ್ಯ ಮೇಸ್ತರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆಗೊಂಡಿರುವುದು ಆ ಸ್ಥಾನದ ಘನತೆಯನ್ನು ಹೆಚ್ಚು ಮಾಡಿದೆ. ಸಮೃದ್ಧ ಜನಪದ ಸಂಸ್ಕೃತಿ ಆಚರಣೆ ಮತ್ತು ಅಭೂತಪೂರ್ವ ಪರಂಪರೆಯುಳ್ಳ ನಮ್ಮ ಕೊಂಕಣಿ ಖಾರ್ವಿ ಸಮಾಜದ ಹಿರಿಮೆ ಗರಿಮೆಗಳು ಇವರ ಅಧಿಕಾರಾವಧಿಯಲ್ಲಿ ಪ್ರಜ್ವಲಿಸಲಿ ಎಂದು ಖಾರ್ವಿ ಆನ್ಲೈನ್ ಶುಭ ಹಾರೈಸುತ್ತದೆ. ಅವರ ಪ್ರಯತ್ನಗಳಿಗೆ ಖಾರ್ವಿ ಆನ್ಲೈನ್ ಸದಾಕಾಲವೂ ತುಂಬು ಹೃದಯದ ಸಹಕಾರ ನೀಡುತ್ತದೆ. ಕಲಾಕ್ಷೇತ್ರದ ಹಲವು ಮಾದರಿಗಳಲ್ಲಿ ತನ್ನದೇ ಆದ ವೈಶಿಷ್ಟ್ಯತೆಗಳಿಂದ ಅಭೂತಪೂರ್ವ ಸಾಧನೆಗೈದಿರುವ ರಮೇಶ್ ಪುರ್ಸಯ್ಯ ಮೇಸ್ತರವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ನಿಯುಕ್ತಿಗೊಂಡಿರುವುದು ಸಮಸ್ತ ಕೊಂಕಣಿ ಖಾರ್ವಿ ಸಮಾಜ ಹೆಮ್ಮೆ ಪಡುವ ವಿಷಯವಾಗಿದೆ. ಅವರಿಗೆ ಖಾರ್ವಿ ಆನ್ಲೈನ್ ಕೊಂಕಣಿ ಖಾರ್ವಿ ಸಮಾಜದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಸುಧಾಕರ್ ಖಾರ್ವಿ
Editor
www.kharvionline.com
ಸವ್ಯಸಾಚಿ ಪ್ರತಿಭಾಸಂಪನ್ನರಾದ ತಾವು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ನಿಯುಕ್ತಿಗೊಂಡಿರುವುದು ಶ್ಲಾಘನೀಯ.ಕೊಂಕಣಿ ಖಾರ್ವಿ ಸಮಾಜದ ಸಮೃದ್ಧ ಜನಪದ ಸಂಸ್ಕೃತಿಯ ಉತ್ಕರ್ಷ ತಮ್ಮ ಅಧಿಕಾರಾವಧಿಯಲ್ಲಿ ಪ್ರಜ್ವಲಿಸಲಿ.ಹೃದಯಸ್ಪರ್ಶಿ ಅಭಿನಂದನೆಗಳು ಸರ್ 💐💐💐💐💐💐👏👏👏👏👏🙏🙏🙏