ಪಡುವಣದಲ್ಲಿ ಶರಧಿಯ ನೀಲಿಮೆಯ ಹರವು, ಮೂಡಣದಲ್ಲಿ ಸ್ವರ್ಣಾ ನದಿಯ ಮನಮೋಹಕ ಚೆಲುವು. ಉತ್ತರದಂಚಿನಲ್ಲಿ ಗಡಿರೇಖೆ ರೂಪಿಸಿಕೊಂಡು ತೆಂಗು ಬಾಳೆಗಳ ಹಚ್ಚಹಸಿರಿನ ಚಪ್ಪರದಲ್ಲಿ ಪವಡಿಸಿಕೊಂಡಿರುವ ಸ್ವರ್ಗಸದೃಶ್ಯ ಊರು ಕೋಡಿಬೆಂಗ್ರೆ
ಸಮಾಜದ ಸ್ವಾಸ್ಥ್ಯ ಕಾಪಾಡುವ ಹಲವು ಕ್ರಾಂತಿಕಾರಿ ಪರಿವರ್ತನೆಯಿಂದ ಇಡೀ ರಾಜ್ಯದಲ್ಲಿ ಹೆಸರಾದ ಈ ಊರಿನಿಂದ ಬಂದ ಹೆಣ್ಣು ಮಗಳೊಬ್ಬಳು ತ್ರಾಸಿಯ ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನುಡಿದ ಭಾವಾನಾತ್ಮಕ ಮತ್ತು ಸ್ಪೂರ್ತಿದಾಯಕ ಮಾತುಗಳು, ಪ್ರಸ್ತುತ ಪಡಿಸಿದ ವಿಚಾರಗಳು ಇಲ್ಲಿ ಅನಾವರಣಗೊಂಡಿದೆ
ವಿಶ್ವಕೊಂಕಣಿ ಕೇಂದ್ರ, ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನಾ ಸಭಾ ಮತ್ತು ಖಾರ್ವಿ ಆನ್ಲೈನ್ ಆಶ್ರಯದಲ್ಲಿ ನಿನ್ನೆ ತ್ರಾಸಿ ಸಭಾಭವನದಲ್ಲಿ ಉನ್ನತ ಉದ್ಯೋಗಾಂಕ್ಷಿ ಸಮಾಜದ ವಿದ್ಯಾರ್ಥಿಗಳಿಗಾಗಿ vision 2030 ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಕಡೆಯಿಂದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಭೆಗೆ ಆಗಮಿಸಿದ್ದರು.
ತನ್ನ ಮೊದಲ ಪ್ರಯತ್ನದಲ್ಲೇ ಕಠಿಣ ಪರಿಶ್ರಮದಿಂದ CA ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಕೋಡಿಬೆಂಗ್ರೆಯ ಪ್ರಿಯಾ ಖಾರ್ವಿಯನ್ನು ಸಭೆಯಲ್ಲಿ ಅಭಿನಂಧಿಸಲಾಯಿತು. ಈ ಸಂದರ್ಭದಲ್ಲಿ ಪ್ರಿಯಾ ಖಾರ್ವಿ ತನ್ನ ಪರಿಶ್ರಮದ ಹಾದಿಯನ್ನು ಎಳೆಎಳೆಯಾಗಿ ಪ್ರಸ್ತುತ ಪಡಿಸಿದರು. ಕೋಡಿಬೆಂಗ್ರೆಯ ಪುರಂದರ ಖಾರ್ವಿ ಮತ್ತು ಜಯಶ್ರೀ ಖಾರ್ವಿ ದಂಪತಿಗಳ ಪುತ್ರಿಯಾದ ಪ್ರಿಯಾ ಪ್ರಾಥಮಿಕ ಶಿಕ್ಷಣವನ್ನು ಕೋಡಿಬೆಂಗ್ರೆ ಸರ್ಕಾರಿ ಶಾಲೆಯಲ್ಲಿ ಪಡೆದಿದ್ದು, ಬ್ರಹ್ಮಾವರದ ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನಲ್ಲಿ BCom ಜೊತೆಗೆ CA ಕೋರ್ಸ್ ಅಭ್ಯಸಿಸುತ್ತಿದ್ದಾಳೆ. ಚಿಕ್ಕಂದಿನಿಂದಲೂ ಪ್ರಿಯಾಳಿಗೆ ಡಾಕ್ಟರ್ ಆಗಬೇಕೆಂಬ ಮಹಾದಾಸೆಯಿತ್ತು. ಕಾರಣಾಂತರಗಳಿಂದ ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲವಾದರೂ ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂಬ ತುಡಿತ ಪ್ರಿಯಾ ಮನದಂಗಳದಲ್ಲಿ ಮಿಡಿಯುತ್ತಿತ್ತು. ಪಿಯುಸಿ ನಂತರ ಯಾವ ಕೋರ್ಸ್ ತೆಗೆದುಕೊಳ್ಳಬೇಕೆಂಬ ಗೊಂದಲವಿತ್ತು. ಪ್ರಿಯಾಳಿಗೆ ಬಹಳಷ್ಟು ಜನ CA ಮಾಡುವಂತೆ ಸಲಹೆ ನೀಡಿದರು. ಮತ್ತೆ ಕೆಲವರು CA ಕಷ್ಟವಾಗುತ್ತದೆ ಎಂದು ಹೇಳಿದರು ಡಾಕ್ಟರ್ ಆಗಬೇಕೆಂಬ ಕನಸು ಕಾಣುತ್ತಿದ್ದ ಪ್ರಿಯಾಳ ಆಸೆ ಕನಸಾಗಿಯೇ ಉಳಿಯಿತ್ತು. ಆ ಆಸೆಯನ್ನು ಅನಿವಾರ್ಯವಾಗಿ ತ್ಯಾಗ ಮಾಡಬೇಕಾಯಿತು. ಈ ನಡುವೆ CA ಯನ್ನು ಎಷ್ಟೇ ಕಷ್ಟವಾದರೂ ಮಾಡಲೇಬೇಕೆಂಬ ದೃಡ ನಿರ್ಧಾರ ತೆಗೆದುಕೊಂಡ ಪ್ರಿಯಾ ಅದನ್ನು ಸಾಧಿಸಲು ಹಠ ತೊಟ್ಟರು. ಮಗಳ ಮಹಾದಾಸೆಗೆ ತಂದೆ ತಾಯಿಗಳು ಪ್ರೋತ್ಸಾಹದ ಧಾರೆಯೆರೆದರು.
ಪ್ರಿಯಾಳ ಅಧ್ಯಯನದ ಪ್ರತಿಯೊಂದು ಹಂತದಲ್ಲೂ ಧೈರ್ಯ ತುಂಬಿದರು. ಏನೇ ಕಷ್ಟ ಬಂದರೂ ದೃತಿಗೆಡಬೇಡ ಮಗಳೇ ಪರೀಕ್ಷೆ ಕಟ್ಟು ಉತ್ತೀರ್ಣವೋ, ಅನುತೀರ್ಣವೋ ಫಲಾಫಲ ಭಗವಂತನಿಗೆ ಬಿಡುವಾ ಎಂಬ ಮಾತೃಹೃದಯದ ಧೈರ್ಯದ ನುಡಿಗಳು ಪ್ರಿಯಾಳಿಗೆ ಸ್ಪೂರ್ತಿಯಾಯಿತು. ಹೆತ್ತವರು ಪ್ರಿಯಾಳ ಆಸೆ ಆಶೋತ್ತರಗಳನ್ನೆಲ್ಲ ಹಚ್ಚಹಸಿರಿನಿಂದ ಹರಸಿ ಕನಸುಗಳನ್ನು ಬಣ್ಣಬಣ್ಣದ ಹೂಗಣ್ಣೊಳಗೆ ಮಧುರವಾಗಿ ಬಿತ್ತರಿಸಿದರು. ಇದರ ಜೊತೆಗೆ ಕುಟುಂಬ ವರ್ಗ, ಸ್ನೇಹಿತರು ತುಂಬಾ ಪ್ರೋತ್ಸಾಹಿಸಿದರು. ಎಲ್ಲರ ಹರಕೆ ಹಾರೈಕೆ, ಭಗವಂತನ ಕೃಪೆ, ನಿರಂತರ ಪರಿಶ್ರಮದ ಫಲವಾಗಿ CA ಫೌಂಡೇಶನ್ ಪರೀಕ್ಷೆಯ ಪ್ರಥಮ ಹಂತದಲ್ಲಿ ಉತ್ತೀರ್ಣಳಾದರು. ರಾಷ್ಟ್ರೀಯ ಮಟ್ಟದಲ್ಲಿ ನಡೆದ CA ಪರೀಕ್ಷೆಯಲ್ಲಿ ಭಾಗವಹಿಸಿದ 90000 ಅಭ್ಯರ್ಥಿಗಳಲ್ಲಿ ಸುಮಾರು 23000 ಜನ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾಳೆ. ಅಖಿಲ ಭಾರತ ಮಟ್ಟದಲ್ಲಿ ಪ್ರಿಯಾ CA ಪರೀಕ್ಷೆಯಲ್ಲಿ 221 ನೇ RANK ನಲ್ಲಿ ಉತ್ತೀರ್ಣಳಾಗಿ ವಿದ್ಯಾಸಂಸ್ಥೆಗೆ, ಮನೆಮಂದಿಗೆ ಮತ್ತು ಕೊಂಕಣಿ ಖಾರ್ವಿ ಸಮಾಜಕ್ಕೆ ಕೀರ್ತಿ ತಂದಿದ್ದಾಳೆ. ತನ್ನ ಸಾಧನೆಗೆ ಕಾರಣರಾದ ಪ್ರತಿಯೊಬ್ಬರಿಗೂ ಪ್ರಿಯಾ ಧನ್ಯವಾದ ಸಲ್ಲಿಸಿದ್ದಾರೆ. ಈ ಸಾಧನೆಯ ತಾಯಿ ನೀಡಿದ ವಾತ್ಸಲ್ಯಭರಿತ ಪ್ರೋತ್ಸಾಹವನ್ನು ನೆನೆಸಿಕೊಂಡು ಪ್ರಿಯಾ ವೇದಿಕೆಯಲ್ಲಿ ಕ್ಷಣಕಾಲ ಗದ್ಗದಿತರಾದಳು. ಅವಳ ಕಣ್ಣಂಚಿನಲ್ಲಿ ಜಿನುಗುತ್ತಿದ್ದ ಅಶ್ರುಧಾರೆ ಎಲ್ಲವನ್ನು ಹೇಳುತ್ತಿತ್ತು. ಅಲ್ಲಿ ಭಾವಾನಾತ್ಮಕವಾದ ಪರಿಸರ ಸೃಷ್ಟಿಯಾಗಿತ್ತು. ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು, ಸಭಿಕರು ಇದಕ್ಕೆ ಸಾಕ್ಷಿಯಾಗಿದ್ದರು.
ಕೋಡಿಬೆಂಗ್ರೆಯ ಜನರು ಕಠಿಣ ಪರಿಶ್ರಮಿಗಳು ನದಿ ಕಡಲಿನೊಂದಿಗೆ ಬದುಕು ಕಟ್ಟಿಕೊಂಡ ಅವರ ಬದುಕು ಜೀವಜೀವನದ ಉತ್ಥಾನಗತಿಯಲ್ಲಿ ನಿತ್ಯ ನೂತನವಾಗಿ ನಿರಂತರವಾಗಿ ಮಿಡಿಯುತ್ತದೆ. ಇಲ್ಲಿ ಮಹಿಳೆಯರು ಕೇವಲ ಗೃಹಿಣಿಯರಷ್ಟೇ ಅಲ್ಲ. ಮೀನುಗಾರಿಕೆಗೆ ತೆರಳುವ ಗಂಡನೊಡನೆ ತಾವೂ ಹೋಗುತ್ತಾರೆ ದೋಣಿಯ ಹುಟ್ಟು ಹಾಕುವುದರಿಂದ ಹಿಡಿದು ಬಲೆ ಬೀಸುವ, ಹಿಡಿದು ತಂದ ಮೀನುಗಳನ್ನು ಮಾರಾಟ ಮಾಡುವ ತನಕದ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಸಂಸಾರದ ನೊಗ ಹೊತ್ತಲು ಪ್ರತಿಯೊಂದು ಕ್ಷಣವನ್ನು ವಿನಿಯೋಗಿಸುತ್ತಾರೆ. ಇವರೆಲ್ಲರ ಕಠಿಣ ಪರಿಶ್ರಮ, ತ್ಯಾಗ ಮಕ್ಕಳನ್ನು ಉನ್ನತ ವಿದ್ಯಾಭ್ಯಾಸ, ಒಳ್ಳೆಯ ಉದ್ಯೋಗದ ಗುರಿಯತ್ತ ಕರೆದುಕೊಂಡು ಹೋಗುತ್ತದೆ. ಪ್ರಿಯಾಳ ತಂದೆ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದು ಸಹೋದರ ಕಾಲೇಜು ಕಲಿಯುತ್ತಿದ್ದಾನೆ.
ಪ್ರಿಯಾ ಈಗ CA ಪರೀಕ್ಷೆಯ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಮುಂದೆ ಇಂಟರ್ ಮಿಡಿಯಮ್ ಹಾಗೂ ಫೈನಲ್ ಪರೀಕ್ಷೆ ನಡೆಯಲಿದೆ. ಇದರಲ್ಲೂ ಕೂಡಾ ಉನ್ನತ ದರ್ಜೆಯಲ್ಲಿ ಉತ್ತೀರ್ಣಳಾಗುತ್ತೇನೆ ಎಂಬ ದೃಡ ವಿಶ್ವಾಸದಿಂದ ನುಡಿಯುವ ಪ್ರಿಯಾ ಇದಕ್ಕೆ ಎಲ್ಲರ ಹರಕೆ ಹಾರೈಕೆ ಇರಲಿ ಎಂದು ಆಶಿಸುತ್ತಾಳೆ. ಕಠಿಣ ಪರಿಶ್ರಮದಿಂದ ಸಾಧನೆಗೈದ ಪ್ರಿಯಾ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಅವರ ಮುಂದಿನ ಸಾಧನೆಯ ಪಯಣಕ್ಕೆ ಖಾರ್ವಿ ಆನ್ಲೈನ್ ತುಂಬು ಹೃದಯದ ಸಹಕಾರ, ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತದೆ. ಶುಭವಾಗಲಿ
ಪ್ರಿಯಾಳ ಸುಂದರ ಭವಿಷ್ಯಕ್ಕೆ ಹೃತ್ಪೂರ್ವಕವಾಗಿ ಶುಭ ಹಾರೈಸುತ್ತೇನೆ.
ಸುಧಾಕರ್ ಖಾರ್ವಿ
Editor
www.kharvionline.com
ಚಿಕ್ಕ ಹುಡುಗಿಯಾಗಿ ವೇದಿಕೆಯಲ್ಲಿ ಆಡಿದ ಮಾತುಗಳು ಮತ್ತು ತಾಯಿಯ ಬಗ್ಗೆ ಗದ್ಗರಿತದಿಂದ ಹೇಳಿದ ಭಾವನಾತ್ಮಕ ಮಾತುಗಳಲ್ಲಿ ನೋವು, ಶ್ರಮ, ಬುದ್ಧಿವಂತಿಕೆ, ಆತ್ಮವಿಶ್ವಾಸ ಕಂಡೆ…ಖಂಡಿತವಾಗಿ ಈ ಹುಡುಗಿ CA ಆಗುತ್ತಾಳೆ ಒಳ್ಳೆದಾಗ್ಲಿ 👍
ಪ್ರಿಯಾ ಖಾರ್ವಿಯವರ ಸಾಧನೆಯ ಕಥನ ಹೃದಯಸ್ಪರ್ಶಿಯಾಗಿದೆ.ಅವರ ತಂದೆ ತಾಯಿಗಳಿಗೆ ಸಾವಿರದ ನಮನಗಳು.ಕೋಡಿಬೆಂಗ್ರೆ ಶ್ರೀ ದುರ್ಗಾಪರಮೇಶ್ವರಿಯ ಪರಮ ಕೃಪೆ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಸಿಕೊಳ್ಳುತ್ತೇನೆ👍👌💐💐💐💐🙏