ಕಳೆದ ವರ್ಷ ಅಂದರೆ 2020 ರಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಶಾಲೆಯಿಂದ ಕಾಲೇಜು ಮಟ್ಟಕ್ಕೆ ಹಲವಾರು ಬದಲಾವಣೆಗಳನ್ನು ಪರಿಚಯಿಸುವ ಉದ್ದೇಶದಿಂದ, ಕೇಂದ್ರ ಕ್ಯಾಬಿನೆಟ್ 2020 ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP) ಯನ್ನು ಅಂಗೀಕರಿಸಲಾಯಿತು. ಇದು ಸ್ವಾತಂತ್ರ್ಯದ ನಂತರ ಭಾರತದಲ್ಲಿ ಶಿಕ್ಷಣದ ಚೌಕಟ್ಟಿನ ಹಿಂದಿನ ಎರಡು ಶಿಕ್ಷಣ ನೀತಿಗಳು ಅಂದರೆ 1968 ಮತ್ತು 1986 ನಂತರ, ಎನ್ಇಪಿ(NEP) 2020 ಮೂರನೇ ಪ್ರಮುಖ ಪುನರ್ರಚನೆಯಾಗಿದೆ.
ಎನ್ಇಪಿ 2020ಯ ಮುಖ್ಯ ಗುರಿ ” ಭಾರತವನ್ನು ಜಾಗತಿಕ ಜ್ಞಾನ ಆಧಾರಿತ ಸೂಪರ್ ಪವರ್” ನ್ನಾಗಿ ಮಾಡುವುದು. ಇದಕ್ಕಾಗಿ, 2030ರ ವೇಳೆಗೆ “ಎಲ್ಲ ವರ್ಗದವರಿಗೂ ಸಮನಾ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಿಕೊಳ್ಳವ ಜೊತೆಯಲ್ಲಿ ಎಲ್ಲರಿಗೂ ಆಜೀವ ಕಲಿಕೆಯ ಅವಕಾಶಗಳನ್ನು ಉತ್ತೇಜಿಸಲು ಉದ್ದೇಶಿಸಿದೆ. ಇದ್ದಕಾಗಿ ಶಿಕ್ಷಣ ವ್ಯವಸ್ಥೆಯ ರಚನೆಯ ಎಲ್ಲಾ ಅಂಶಗಳನ್ನು ಪರಿಷ್ಕರಿಸಲು ಮತ್ತು ಪುನಃರಚಿಸಲು ಪ್ರಸ್ತಾಪಿಸುತ್ತದೆ. ಆದರೆ ಈ ಎಲ್ಲ ಬದಲಾವಣೆಗಳು ಭಾರತದ ಸಂಪ್ರದಾಯಗಳು ಮತ್ತು ಮೌಲ್ಯ ವ್ಯವಸ್ಥೆಗಳ ಆದರದ ಮೇಲೆ ಇರುತದೆ.
ಮತ್ತೊಂದು ಕುತೂಹಲಕಾರಿ ಬದಲಾವಣೆಯೆಂದರೆ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವನ್ನು ಶಿಕ್ಷಣ ಸಚಿವಾಲಯಕ್ಕೆ ಮರುನಾಮಕರಣ ಮಾಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಈ ಶಿಕ್ಷಣ ನೀತಿ ಬದಲಾವಣೆಯಲ್ಲಿ – ಶಿಕ್ಷಣದ ಮೂಲಭೂತ ಬದಲಾವಣೆಗಳ ಮೇಲೆ ಕೇಂದ್ರೀಕರಿಸುವುದರ ಹೊರತಾಗಿ, ಪ್ರಮುಖ ವ್ಯತ್ಯಾಸವೆಂದರೆ ಮೊದಲನೆಯದಾಗಿ ಸಮಗ್ರ ಶಿಕ್ಷಣದ ಮಹತ್ವ ಮತ್ತು ಅದನ್ನು ಅಳವಡಿಸುವ ಬಗ್ಗೆ ಒತ್ತಿಹೇಳುತ್ತದೆ ಮತ್ತು ಈಗಿರುವ ಸಂಕ್ಷಿಪ್ತ ಮೌಲ್ಯಮಾಪನ(summative) ವಿಧಾನದ ಬದಲು, ವಿದ್ಯಾರ್ಥಿಗಳ ಪರಿಪೂರ್ಣ ಕಲಿಕೆಗಾಗಿ ರಚನಾತ್ಮಕ (formative) ಮೌಲ್ಯಮಾಪನವನ್ನು ಪರಿಚಯಿಸಲು ಪ್ರಸ್ತಾಪಿಸಿದೆ.
ಹಾಗಾದರೆ ಮೊದಲು ನಾವು ಸಮಗ್ರ ಶಿಕ್ಷಣ ಎಂದರೇನು ಅರ್ಥಮಾಡಿಕೊಳ್ಳೋಣ?
ಸಮಗ್ರ ಶಿಕ್ಷಣವು ಬೋಧನೆಗೆ ಒಂದು ವಿಸ್ತಾರವಾದ ವಿಧಾನವಾಗಿದು ಅಲ್ಲಿ ಸುಸಂಬದ್ಧವಾದ ಕಲಿಕೆಯ ವ್ಯವಸ್ಥೆಯಲ್ಲಿ ಶಿಕ್ಷಣತಜ್ಞರು ವಿದ್ಯಾರ್ಥಿಗಳ ಭಾವನಾತ್ಮಕ, ಸಾಮಾಜಿಕ, ನೈತಿಕ, ಮತ್ತು ಶೈಕ್ಷಣಿಕ ಅಗತ್ಯಗಳ ಅರ್ಥೈಸಿಕೊಂಡು ಅದಕ್ಕೆ ಅನುಗುಣವಾಗಿ ಶಿಕ್ಷಣವನ್ನು ಒದಗಿಸುವ ಪ್ರಯತ್ನ ಮಾಡುತ್ತಾರೆ. ಇಂಥ ವ್ಯವಸ್ಥೆಯಲ್ಲಿ ಸಕಾರಾತ್ಮಕ ಶಾಲಾ ವಾತಾವರಣಕ್ಕೆ ಒತ್ತು ನೀಡಲಾಗುತ್ತದೆ ಮತ್ತು ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಅವಶ್ಯಕತೆಗಳನ್ನು ಪೂರ್ಣಗೊಳಿಸಲು ಬೆಂಬಲಿಸುತ್ತದೆ.
ವಿದ್ಯಾರ್ಥಿಗಳಿಗೆ ಅವರ ಚಟುವಟಿಕೆಗಳನ್ನು ಪ್ರತಿಬಿಂಬಿಸಲು ಕಲಿಸಲಾಗುತ್ತದೆ ಮತ್ತು ಅವು ಜಾಗತಿಕ ಮತ್ತು ಸ್ಥಳೀಯ ಸಮುದಾಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ, ಹಾಗೆಯೇ ಅವರ ಸುತ್ತಲಿನ ಸಮುದಾಯದಿಂದ ಕಲಿಯುವುದಕೂ ಅನುಕೂಲ ಮಾಡಿ ಕೊಡುತದೆ. ಶಿಕ್ಷಕರು ಹೆಚ್ಚಾಗಿ ವಿದ್ಯಾರ್ಥಿಗಳನ್ನು ಯೋಜನೆಗಳಲ್ಲಿ(projects) ತೊಡಗಿಸಿಕೊಳ್ಳುತ್ತಾರೆ. ಇದು ಮಕ್ಕಳಿಗೆ ನೈಜ-ಪ್ರಪಂಚದ(real life) ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಮರ್ಶಾತ್ಮಕ-ಚಿಂತನೆಯ ಕೌಶಲ್ಯಗಳನ್ನು ಅನ್ವಯಿಸಲು ಅವರ ಮನಸ್ಸಿಗೆ ಬೌದ್ಧಿಕ ತರಬೇತಿ ನೀಡುತ್ತದೆ.
ಕಲಿಕೆಯಲ್ಲಿ ಈ ವಿಧಾನದೊಂದಿಗೆ, ಮೌಲ್ಯಮಾಪನವು ಸಹ ಹಳೆಯದಾಗಿರಬಾರದು,ಅಲ್ವ?… ಅಂದರೆ ಸಂಕ್ಷಿಪ್ತ ಮೌಲ್ಯಮಾಪನ (Summative Evaluation) ಬದಲಿಗೆ ಅದು ರಚನಾತ್ಮಕ ಮೌಲ್ಯಮಾಪನವಾಗಿರಬೇಕು (Formative Evaluation).
ಈ ಎರಡು ಮೌಲ್ಯಮಾಪನಗಳ ನಡುವಿನ ವ್ಯತ್ಯಾಸವನ್ನು ಈಗ ಹೋಲಿಸಿ ಅರ್ಥಮಾಡಿಕೊಳ್ಳೋಣ.
ರಚನಾತ್ಮಕ ಮೌಲ್ಯಮಾಪನವು ಒಂದು ವಿದ್ಯಾರ್ಥಿಯ ಕಲಿಕೆಯ ಸಂಪೂರ್ಣ ಪ್ರಕ್ರಿಯೆಯಲ್ಲಿ ನಡೆಯುವ ನಿರಂತರ ಮೌಲ್ಯಮಾಪನ ಚಟುವಟಿಕೆ. ಇದರರ್ಥ ವಿದ್ಯಾರ್ಥಿಯ ತಿಳುವಳಿಕೆಯನ್ನು ಕೇವಲ ಒಂದು ಬಾರಿ ಮಾತ್ರವಲ್ಲ, ಶೈಕ್ಷಣಿಕ ವರ್ಷ ಅಥವಾ ಸೆಮಿಸ್ಟರ್ನ ಕಲಿಕೆಯ ಪ್ರಕ್ರಿಯೆಯಲ್ಲಿ ಹಲವಾರು ಬಾರಿ ಮೌಲ್ಯಮಾಪನ ಮಾಡಲಾಗುತ್ತದೆ. ಈ ವಿಧಾನದಿಂದ, ಶಿಕ್ಷಕರು ಒಬ್ಬ ವಿದ್ಯಾರ್ಥಿ ವಿಷಯ ವಸ್ತುವನ್ನು ಉತ್ತಮವಾಗಿ ಗ್ರಹಿಸುತಿದನೆಯೋ ಅಥವಾ ವಿದ್ಯಾರ್ಥಿಗೆ ಸಹಾಯದ ಅಗತ್ಯವಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಇದರಿಂದ ಒಬ್ಬ ಶಿಕ್ಷಕ ವಿದ್ಯಾರ್ಥಿಯ ಒಂದು ವಿಷಯದ ತಿಳುವಳಿಕೆ ಬಗ್ಗೆ ಉತ್ತಮ ರೀತಿಯಲ್ಲಿ ನಿರ್ದೇಶಿಸಬಹುದು. ಕಲಿಕೆಯ ಪ್ರಕ್ರಿಯೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಮತ್ತು ಅರ್ಥಪೂರ್ಣ ಪ್ರತಿಕ್ರಿಯೆಯನ್ನು ನೀಡುವ ಮೂಲಕ ಇದನ್ನು ಮಾಡಬಹುದು.
ಸಂಕ್ಷಿಪ್ತ ಮೌಲ್ಯಮಾಪನವು ಕಲಿಕೆಯ ಪ್ರಕ್ರಿಯೆಯಲ್ಲಿ ನಡೆಯುವುದಿಲ್ಲ, ಆದರೆ ಅದರ ನಂತರ, ಅಂದರೆ ಶೈಕ್ಷಣಿಕ ವರ್ಷದ ಅಥವಾ ಸೆಮಿಸ್ಟರ್ ನಂತರ ನಡೆಯುತ್ತದೆ. ಸಂಕ್ಷಿಪ್ತ ಮೌಲ್ಯಮಾಪನದ ಪ್ರಕ್ರಿಯೆಯಲ್ಲಿ, ವಿದ್ಯಾರ್ಥಿಗೆ ಶ್ರೇಣಿಗಳನ್ನು ನಿಗದಿಪಡಿಸಲಾಗುತ್ತದೆ ಮತ್ತು ವಿದ್ಯಾರ್ಥಿಯು ಕಲಿಕೆಯ ಗುರಿಯನ್ನು ಸಾಧಿಸಿದ್ದಾರೋ ಇಲ್ಲವೋ ಎಂದು ಶ್ರೇಣಿಗಳ ಮೂಲಕ ತಿಳಿಸುತ್ತದೆ.
ಇಂಥ ಶೈಕ್ಷಣಿಕ ಮೌಲ್ಯಮಾಪನ ವಿಧಾನದಲ್ಲಿ, ವಿಷಯದ ಮಾಹಿತಿಯನ್ನು ಬರೆಯುವ ಮತ್ತು ಓದಿ ಪುನರಾವರ್ತನೆ ಮಾಡಿ ಕಲಿಯುವ ಆದರದ ಮೇಲೆ ವಿದ್ಯಾರ್ಥಿಗಳ ಮೌಲ್ಯಮಾಪನಮಾಡಲಾಗುವುದು. ಅಂದರೆ ಒಂದು ವಿಷ್ಯವಸ್ತುವಿನಲ್ಲಿ ಇರುವ ಮಾಹಿತಿಯನ್ನು ಅರ್ಥ ಮಾಡಿಕೊಳ್ಳುವ ಉದ್ದೇಶಕ್ಕಿಂತ ಹೆಚ್ಚಾಗಿ ಕಂಠಪಾಠ ಮೌಲ್ಯಮಾಪನಕ್ಕೆ ಹೆಚ್ಚು ಪ್ರಾಶಸ್ತ್ಯ
ಸಂಕ್ಷಿಪ್ತ ಮೌಲ್ಯಮಾಪನದೊಂದಿಗೆ, ಶಿಕ್ಷಕನು ವಿದ್ಯಾರ್ಥಿಯನ್ನು ಸರಿಯಾದ ಸಮಯದಲ್ಲಿ ಸರಿಯಾದ ದಿಕ್ಕಿನಲ್ಲಿ ಸಾಗಿಸುವುದು ಕಷ್ಟ, ಏಕೆಂದರೆ ಮೌಲ್ಯಮಾಪನವು ಕೊನೆಯ ಹಂತದಲ್ಲಿ ಆಗುತ್ತದೆ.
ಶಿಕ್ಷಣ ನೀತಿಯಲ್ಲಿ ಈ ಪ್ರಸ್ತಾಪಿತ ಬದಲಾವಣೆಗಳನ್ನು ಗಮನಿಸಿದಾಗ, ನಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಣವು ವೈಯಕ್ತಿಕ ಸಾಮರ್ಥ್ಯ ಅಭಿವೃದ್ಧಿ ಆಧಾರಿತ ಕಲಿಕೆಯಾಗಿರಬೇಕು ಎಂದು ಸರ್ಕಾರ ಅರ್ಥಮಾಡಿಕೊಂಡಿದೆ ಎಂಬುದು ಸ್ಪಷ್ಟವಾಗಿದೆ.
ಈ ರೀತಿಯ ಶಿಕ್ಷಣ ವ್ಯವಸ್ಥೆಯೊಂದಿಗೆ ಉನ್ನತ-ಕ್ರಮಾಂಕದ ಕೌಶಲ್ಯಗಳಾದ(higher order skills) – ವಿಶ್ಲೇಷಣೆ, ವಿಮರ್ಶಾತ್ಮಕ ಚಿಂತನೆ ಮತ್ತು ಪರಿಕಲ್ಪನಾ ಸ್ಪಷ್ಟತೆಯಂತಹ ಸಾಮರ್ಥ್ಯ ವರ್ಧನೆಗಳನ್ನು ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಹೆಚ್ಚಿಸಬಹುದು.
ರಚನಾತ್ಮಕ ಮೌಲ್ಯಮಾಪನ ವಿಧಾನವು ಶಿಕ್ಷಕ ಮತ್ತು ಇಡೀ ಶಾಲಾ ವ್ಯವಸ್ಥೆಯು ವಿದ್ಯಾರ್ಥಿಗಳ ಕಲಿಕೆ ಮತ್ತು ಅಭಿವೃದ್ಧಿಯನ್ನು ಅತ್ಯುತ್ತಮವಾಗಿಸಲು ಮತ್ತು ಬೋಧನೆ-ಕಲಿಕೆಯ ಪ್ರಕ್ರಿಯೆಗಳನ್ನು ನಿರಂತರವಾಗಿ ಪರಿಷ್ಕರಿಸಲು ಸಹಾಯ ಮಾಡುತ್ತದೆ.
ಈ ಮಹಾನ್ ರಾಷ್ಟ್ರವನ್ನು ಇನ್ನಷ್ಟು ಎತ್ತರಕ್ಕೆ ಪುನರ್ನಿರ್ಮಿಸಲು ಸಕಾರಾತ್ಮಕ ಬೌದ್ಧಿಕ ಮನಸ್ಸುಗಳ ಹೊಸ ಪೀಳಿಗೆಯ ಉದಯವಾಗಲಿ – ಜೈ ಹಿಂದ್
ಸದಾ ಸಮುದಾಯ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಕನಸು ಕಾಣುವ ಸನಾತನಿ
ರಾಮ್ ಪ್ರಸನ್ನ ಖಾರ್ವಿ