ಕುಂದಾಪುರದ ಮಹಾರಾಜ ಗಣಪತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದ ಗಣಪತಿಯನ್ನು ನೋಡಿದರೆ ಮೊದಲು ನೆನಪಾಗುವುದು ಮೂರ್ತಿ ರಚನೆಕಾರ ವಸಂತ ಗುಡಿಗಾರ್ ತನ್ನ ಅದ್ಬುತ ಕಲಾಕೌಶ್ಯಲದಿಂದ ವಿಘ್ನನಾಯಕನ ಭವ್ಯ ಮೂರ್ತಿಯಲ್ಲಿ ಅಪೂರ್ವ ಜೀವಕಳೆ ತುಂಬುವ ಈ ಕಲಾವಿದನ ಕಲಾಕೌಶ್ಯಲದ ಕಂಪು ಎಲ್ಲೆಡೆ ಪಸರಿಸಿದೆ. ಕಲಾವಿದ ಶಿಲ್ಪವನ್ನು ನಿರ್ಮಿಸಲು ತಪಸ್ಸಿನ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ತನ್ನ ಆಲೋಚನಾ ಶಕ್ತಿ, ಏಕಾಗ್ರತೆ ಮತ್ತು ಕ್ರಿಯಾಶಕ್ತಿಯನ್ನು ಧಾರೆ ಎರೆಯಬೇಕಾಗುತ್ತದೆ.
ಕಲಾಕೃತಿಗಳು ಶಾಸ್ತ್ರಾಧರಿತವಾಗಿದ್ದರೆ ಮಾತ್ರ ಅದರಲ್ಲಿ ಜೀವಕಳೆ ತುಂಬುತ್ತದೆ. ದೈವತ್ವ ತುಂಬಿ ಬರುತ್ತದೆ ಭಕ್ತರನ್ನು ಸೆಳೆಯುವ ಶಕ್ತಿ ಬರುತ್ತದೆ ಕಲಾವಿದನ ದೈವಭಕ್ತಿ ,ಶ್ರದ್ಧೆ , ಅರ್ಪಣಾಭಾವ ಕಲಾಕೃತಿ ಅಥವಾ ಮೂರ್ತಿಶಿಲ್ಪಕ್ಕೆ ಸ್ಪೂರ್ತಿ ಮತ್ತು ಪ್ರೇರಕ ಶಕ್ತಿಗಳಾಗಿವೆ.
ಈ ಎಲ್ಲಾ ಮಾತುಗಳು ವಸಂತ ಗುಡಿಗಾರರಿಗೆ ಚೆನ್ನಾಗಿ ಅನ್ವಯವಾಗುತ್ತದೆ ಇವರ ಪ್ರಾಮಾಣಿಕತೆ ಮತ್ತು ಸಮಯಪ್ರಜ್ಞೆ ಬಹುಬೇಡಿಕೆಯ ಕಲಾವಿದರನ್ನಾಗಿ ಮಾಡಿದೆ. ಕೆಲವೊಂದು ಸಂದರ್ಭ ಮತ್ತು ಅನಿರೀಕ್ಷಿತ ಘಟನೆಗಳು ಮನುಷ್ಯನ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ ಎಂಬುದಕ್ಕೆ ವಸಂತ ಗುಡಿಗಾರ್ ರವರೇ ನಿದರ್ಶನ.
ಆತ್ಮೀಯರಾದ ವಸಂತ ಗುಡಿಗಾರರನ್ನು ಸಂದರ್ಶಿಸಲು ಹೋದಾಗ ಅವರು ಎಂಬತ್ತಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ನಿರ್ಮಿಸುವ ಕಾರ್ಯದ ಒತ್ತಡದಲ್ಲಿದ್ದರು.ಈ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ನನ್ನೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹೃದಯಸ್ಪರ್ಶಿಯಾಗಿ ಹಂಚಿಕೊಂಡರು. ಅವರ ಹೃದಯವಂತಿಕೆಗೆ ತುಂಬು ಹೃದಯದ ಧನ್ಯವಾದಗಳು
ವಸಂತ ಗುಡಿಗಾರ್ ರವರು ಐದರ ಹರೆಯದಲ್ಲೇ ತಂದೆಯನ್ನು ಕಳೆದುಕೊಂಡರು ಬಡತನ ಇನ್ನಿಲ್ಲದಂತೆ ಕಾಡುತ್ತಿತ್ತು ಜೀವನ ನಿರ್ವಹಣೆಗಾಗಿ ತಾಯಿ ಎಳೆಯ ಕಂದಮ್ಮನ ಜೊತೆಗೆ ಕುಂದಾಪುರಕ್ಕೆ ಬರಬೇಕಾಯಿತು ಅಲ್ಲಿ ವಸಂತ್ ಗುಡಿಗಾರ್ ರವರ ಭಾವ ಆಶ್ರಯ ನೀಡಿದರು ದೇವರ ರೂಪದಲ್ಲಿ ಬಾಳು ಬೆಳಗಿಸಿದರು ಹೊಟ್ಟೆಗೆ ಅನ್ನ, ವಿದ್ಯಾಭ್ಯಾಸ ಮತ್ತು ಬದುಕು ನಡೆಸಲು ಉದ್ಯೋಗದ ದಾರಿಯನ್ನು ಕಲ್ಪಿಸಿಕೊಟ್ಟರು. ಬದುಕು ಸ್ಥಿರತೆಯನ್ನು ಕಂಡಿತ್ತು ಕಷ್ಟಕರವಾದ ಜೀವನದ ಪಯಣವನ್ನು ನೆನಪಿಸಿಕೊಂಡು ಭಾವಪರವಶರಾಗುವ ವಸಂತ ಗುಡಿಗಾರ್ ರ ಸ್ಮೃತಿಪಟಲದಲ್ಲಿ ಜೀವನ್ಮುಖಿ ಪಯಣದ ಅಪಾರವಾದ ನೆನಪುಗಳಿವೆ. ಕುಂದಾಪುರದಲ್ಲಿ ಶೈಲಾ ಫೈನ್ ಆರ್ಟ್ಸ ನಲ್ಲಿ ವೃತ್ತಿ ಬದುಕು ಪ್ರಾರಂಭಿಸಿದ ವಸಂತ ಗುಡಿಗಾರ್ ರವರಿಗೆ ಮೊತ್ತ ಮೊದಲು ಗಣಪತಿ ವಿಗ್ರಹ ರಚನಾ ಕಾರ್ಯ ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದ ಗಣೇಶೋತ್ಸವ ಸಮಿತಿಯಿಂದ ದೊರಕಿತು. ಕೊಂಕಣಿ ಖಾರ್ವಿ ಸಮಾಜ ತನ್ನ ಕಲಾಪ್ರತಿಭೆಯನ್ನು ಗುರುತಿಸಿ ತನಗೆ ಪ್ರಪ್ರಥಮ ಬಾರಿಗೆ ಅವಕಾಶ ನೀಡಿತು ಎಂದು ವಸಂತ ಗುಡಿಗಾರ್ ರವರು ಬಹಳ ಪ್ರೀತಿಯಿಂದ ಹೇಳುತ್ತಾರೆ. ತದನಂತರ ಶ್ರೀ ಗಣಪತಿ ದೇವರ ಅನುಗ್ರಹ ಮತ್ತು ಶ್ರೀ ಮಹಾಕಾಳಿ ಅಮ್ಮನವರ ಕೃಪೆಯಿಂದ ತನ್ನ ಕಲಾಬದುಕಿಗೆ ಹೊಸ ಚೈತನ್ಯ ಪ್ರಾಪ್ತಿಯಾಯಿತು ಎಂದು ಹೇಳುವ ವಸಂತ ಗುಡಿಗಾರ್ ಆ ಸಮಯದಲ್ಲಿ ಮನೆ ಮನೆಗೆ ತೆರಳಿ ತಾನು ಗಣಪತಿ ಮಾಡಿಕೊಡುತ್ತೇನೆ ವಿನಂತಿಸಿ ಅವರ ಮನೆಗೆ ಗಣಪತಿ ವಿಗ್ರಹವನ್ನು ತಲುಪಿಸುತ್ತಿದ್ದರು. ಆಗ ಕೇವಲ ಐದಾರು ಗಣಪತಿ ವಿಗ್ರಹ ನಿರ್ಮಿಸುವ ಅವಕಾಶವಷ್ಟೇ ದೊರಕಿತ್ತಿತ್ತು.ಈಗ ಇವರಿಗೆ ಗಣಪತಿ ವಿಗ್ರಹ ಮಾಡಲು ತುಂಬಾ ಬೇಡಿಕೆ ಇದೆ. ಆದರೆ ಸಮಾಯಾವಕಾಶ ಮತ್ತು ಸ್ಥಳದ ಅಭಾವದ ಕಾರಣದಿಂದಾಗಿ ಎಂಬತ್ತು ಗಣಪತಿ ವಿಗ್ರಹ ರಚನೆಯ ಪರಿಮಿತಿ ಹಾಕಿಕೊಂಡಿದ್ದಾರೆ.
ಶ್ರೀ ಮಹಾಕಾಳಿ ದೇವಸ್ಥಾನದ ಅಂದಿನ ಅಧ್ಯಕ್ಷರಾದ ಶ್ರೀ ನರಸಿಂಹ ಖಾರ್ವಿಯವರು ವಸಂತ ಗುಡಿಗಾರ್ ರವರಿಗೆ ಗಣಪತಿ ವಿಗ್ರಹ ರಚಿಸಿ ಕೊಡಲು ಮೊದಲು ಅವಕಾಶ ನೀಡಿದ್ದರು. ಅಂದಿನಿಂದ ಇಂದಿನವರೆಗೂ ಕಳೆದ 32 ವರ್ಷಗಳಿಂದ ವಸಂತ ಗುಡಿಗಾರ್ ರವರು ಶ್ರೀ ಮಹಾಕಾಳಿ ದೇವಸ್ಥಾನದ ಗಣೇಶೋತ್ಸವ ಸಮಿತಿಯ ಗಣಪತಿ ವಿಗ್ರಹ ನಿರ್ಮಿಸುತ್ತಾ ಬಂದಿರುತ್ತಾರೆ. ಪ್ರತಿವರ್ಷವೂ ಇವರು ನಿರ್ಮಾಣ ಮಾಡಿದ ಗಣಪತಿ ವಿಗ್ರಹ ಆಕರ್ಷಕವಾಗಿ ಕಳೆಗಟ್ಟುತ್ತಾ ಭಕ್ತಾದಿಗಳ ಮನಸೂರೆಗೊಂಡಿದೆ. ಜನರು ಪ್ರೀತಿಯಿಂದ ಬೆನ್ನು ತಟ್ಟಿದಾಗ ತನಗೆ ತುಂಬಾ ಸಂತೋಷವಾಗುತ್ತದೆ ಎಂದು ಹೇಳುವ ವಸಂತ ಗುಡಿಗಾರ್ ರವರು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಶ್ರೀ ವಿರೇಂದ್ರ ಹೆಗ್ಗಡೆಯವರು ತಾನು ರಚಿಸಿದ ಗಣಪತಿ ವಿಗ್ರಹವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಬಹಳ ಧನ್ಯತಾ ಭಾವದಿಂದ ಹೇಳಿಕೊಳ್ಳುತ್ತಾರೆ. ಇದು ತನ್ನ ವೃತ್ತಿ ಬದುಕಿನ ಕಲಾಸೇವೆಗೆ ದೊರಕಿದ ಅತ್ಯಂತ ದೊಡ್ಡ ಗೌರವ ಎಂದು ಪುಳಕಿತಗೊಳ್ಳುತ್ತಾರೆ
ಕಳೆದ 32 ವರ್ಷಗಳಿಂದ ಗಣಪತಿ ವಿಗ್ರಹ ರಚಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡ ವಸಂತ ಗುಡಿಗಾರ್ ರವರು ಕಾಷ್ಟಶಿಲ್ಪಿಯಾಗಿದ್ದು, ಮರದ ಕೆತ್ತನೆ ಮತ್ತು ದೇವಸ್ಥಾನಗಳ ಕಲ್ಲುಕೆತ್ತನೆ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ನೋಡಿ ತಿಳಿ ಮಾಡಿ ಕಲಿ ಎಂಬಂತೆ ಇವರು ಈ ವಿದ್ಯೆಯನ್ನು ಸತತ ಪರಿಶ್ರಮ ಮತ್ತುಏಕಾಗ್ರತೆಯಿಂದ ಕಲಿತುಕೊಂಡರು. ಗುರುವಿಲ್ಲದೇ ಏಕಾಂಗಿಯಾಗಿಯೇ ಇವರು ಈ ವಿದ್ಯೆಯಲ್ಲಿ ಪ್ರಾವೀಣ್ಯತೆ ಸಾಧಿಸಿದರು. ವಸಂತ ಗುಡಿಗಾರ್ ರವರ ಕೀರ್ತಿ ಕುಂದಾಪುರ ಮಾತ್ರವಲ್ಲ ಹೊರರಾಜ್ಯಗಳಲ್ಲೂ ಹರಡಿದೆ. ಸಂಬಂಧಿಕರೊಬ್ಬರು ಗಣಪತಿ ವಿಗ್ರಹ ರಚಿಸುವುದನ್ನು ನೋಡಿ ಕಲಿತ ವಸಂತ ಗುಡಿಗಾರ್ ರವರದ್ದು ಏಕಲವ್ಯ ವಿದ್ಯೆ. ಹೈದರಾಬಾದ್ ನಲ್ಲಿ ನೆಲೆಸಿರುವ ಕುಂದಾಪುರ ಮೂಲದವರೊಬ್ಬರು ಕಳೆದ ಕೆಲವು ವರ್ಷಗಳಿಂದ ವಸಂತ ಗುಡಿಗಾರ್ ರವರು ನಿರ್ಮಿಸುವ ಗಣಪತಿ ವಿಗ್ರಹವನ್ನು ಹೈದರಾಬಾದ್ ಗೆ ತೆಗೆದುಕೊಂಡು ಹೋಗಿ ಪೂಜಿಸುತ್ತಾರೆ. ಹೈದರಾಬಾದ್ ನಲ್ಲಿ ಭಕ್ತಾದಿಗಳಿಂದ ಪೂಜಿಸಲ್ಪಡುವ ಗಣಪತಿ ವಿಗ್ರಹ ವಸಂತ ಗುಡಿಗಾರ್ ರವರ ಹೆಗ್ಗಳಿಕೆಯ ದ್ಯೋತಕವಾಗಿದೆ.
ಕುಂದಾಪುರ ಖಾರ್ವಿಕೇರಿಯಲ್ಲಿ 32 ವರ್ಷಗಳ ಹಿಂದೆ ಗಣೇಶೋತ್ಸವ ಪ್ರಾರಂಭವಾದಾಗ ಉದ್ಯಮಿಯಾದ ಶ್ರೀ ಹೂವಯ್ಯ ಖಾರ್ವಿ ಬಹೂದ್ದೂರ್ ಷಾ ರಸ್ತೆ ಇವರು ಪ್ರಪ್ರಥಮ ದೇಣಿಗೆಯಾಗಿ ರೂ.1500 ಕೊಟ್ಟು ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದರು. ಈ ಸಂದರ್ಭದಲ್ಲಿ ಅವರು ನೀಡಿದ ತುಂಬು ಹೃದಯದ ಸಹಕಾರ ಮತ್ತು ಪ್ರೋತ್ಸಾಹ ಸ್ಮರಣೀಯವಾಗಿದೆ. ಗಣಪತಿ ವಿಗ್ರಹ ನಿರ್ಮಾಣ ಮಾಡಲು ಭಕ್ತಾದಿಗಳು ಒಂದು ತಿಂಗಳ ಮೊದಲೇ ವಸಂತ ಗುಡಿಗಾರ್ ರವರಲ್ಲಿ ಬೇಡಿಕೆಯಿಡುತ್ತಾರೆ. ನಾಗರ ಪಂಚಮಿಯ ದಿನದಂದು ಶಾಸ್ತ್ರೋಕ್ತವಾಗಿ ಅಕ್ಕಿ,ಕಾಯಿ ಮತ್ತು ಗಣಪತಿ ವಿಗ್ರಹದ ಮಣೆ ನೀಡಿ ಗಣಪತಿ ರಚನೆಗೆ ವೀಳ್ಯ ಕೊಡುತ್ತಾರೆ. ಭಕ್ತಾದಿಗಳಿಂದ ವೀಳ್ಯ ಸ್ವೀಕರಿಸುವ ವಸಂತ ಗುಡಿಗಾರ್ ರವರು ಶ್ರೀ ಆನೆಗುಡ್ಡೆ ಗಣಪತಿ ದೇವರಿಗೆ ಪೂಜೆ ಸಲ್ಲಿಸಿ ಯಾವುದೇ ರೀತಿಯ ವಿಘ್ನಗಳು ಬಾರದಂತೆ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ.ತದನಂತರ ಗಣಪತಿ ವಿಗ್ರಹ ರಚನೆಗೆ ಚಾಲನೆ ನೀಡುತ್ತಾರೆ.ಪ್ರಾರಂಭಿಕವಾಗಿ ಗಣಪತಿ ವಿಗ್ರಹ ನಿರ್ಮಿಸುವ ಸಂದರ್ಭದಲ್ಲಿ ಭಕ್ತಾದಿಗಳು ನೀಡುವ ಪೂಜಾ ಪರಿಕರ ವೀಳ್ಯದಿಂದ ಹಿಡಿದು ಗಣಪತಿ ವಿಗ್ರಹವನ್ನು ಅವರಿಗೆ ಸಮರ್ಪಿಸುವ ತನಕವೂ ಎಲ್ಲಾ ಕಾರ್ಯಗಳನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಶಾಸ್ತ್ರೋಕ್ತವಾಗಿ ನೇರವೇರಿಸುತ್ತಾರೆ.
ಪ್ರಸ್ತುತ ಗಣಪತಿ ವಿಗ್ರಹ ರಚಿಸಲು ಬಹಳಷ್ಟು ವೆಚ್ಚ ತಗಲುತ್ತದೆ. ಮುಖ್ಯವಾಗಿ ಆವೆಮಣ್ಣು ಮತ್ತು ಜಲವರ್ಣಕ್ಕೆ ತುಂಬಾ ವೆಚ್ಚವಾಗುತ್ತದೆ. ನಿರ್ಮಾಣ ವೆಚ್ಚ ತುಂಬಾ ಹೆಚ್ಚಾಗಿರುವುದರಿಂದ ಭಕ್ತಾದಿಗಳು ಪ್ರಸ್ತುತ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ತನ್ನ ಶ್ರಮಕ್ಕೆ ಸೂಕ್ತವಾದ ಸಂಭಾವನೆಯನ್ನು ನೀಡಿ ಸಹಕರಿಸಬೇಕೆಂದು ಈ ಸಂದರ್ಭದಲ್ಲಿ ವಸಂತ ಗುಡಿಗಾರ್ ರವರು ವಿನಂತಿಸಿಕೊಂಡಿದ್ದಾರೆ.
ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಉಂಟಾಗುತ್ತಿದ್ದು, ಅನೇಕರು ಪೈಂಟ್ ಬಳಸದೇ ಮಣ್ಣಿನ ಗಣಪತಿ ಮೂರ್ತಿಯನ್ನು ನಿರ್ಮಿಸಿ ಕೊಡಲು ತನಗೆ ಬೇಡಿಕೆಯಿಟ್ಟಿದ್ದು, ಅದರಂತೆ ಮಣ್ಣಿನ ಗಣಪತಿ ನಿರ್ಮಿಸುತ್ತೇನೆ ಎನ್ನುವ ವಸಂತ ಗುಡಿಗಾರ್ ರವರು ಪರಿಸರ ಸ್ನೇಹಿ ಗಣಪತಿಗೆ ತಾನು ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ಹೇಳುತ್ತಾರೆ. ಮುಂಬರುವ ದಿನಗಳಲ್ಲಿ ಜನರಲ್ಲಿ ಪರಿಸರ ಸ್ನೇಹಿ ಗಣಪತಿಯ ರಚನೆ ಬಗ್ಗೆ ಮತ್ತಷ್ಟೂ ಜಾಗೃತಿ ಮೂಡಬಹುದು ಎನ್ನುವ ಅವರು ತಾನು ಪರಿಸರ ಸ್ನೇಹಿ ಗಣಪತಿ ನಿರ್ಮಿಸಲು ಸಿದ್ಧನಿದ್ದೇನೆ ಎನ್ನುತ್ತಾರೆ.
ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಸಾಮಾನ್ಯರಿಗೆ ಅತಿ ಸಾಮಾನ್ಯವಾಗಿ ಕಂಡುಬರುವ ವಿಷಯಗಳಲ್ಲಿ ಅಸಾಮಾನ್ಯ ಸಾಧ್ಯತೆಯನ್ನು ಗುರುತಿಸಿ ಅದಕ್ಕೊಂದು ಮೂರ್ತರೂಪ ನೀಡುವವನೇ ನಿಜವಾದ ಕಲಾವಿದ. ಈ ಅಸಾಮಾನ್ಯ ಸಾಧ್ಯತೆಗಳನ್ನು ಗುರುತಿಸಿಕೊಂಡು ಪರಿಪಕ್ವತೆಯನ್ನು ಪಡೆದುಕೊಂಡಿರುವ ವಸಂತ ಗುಡಿಗಾರ್ ನಿಜಕ್ಕೂ ಅಪ್ರತಿಮ ಕಲಾವಿದ. ಸೃಜನಶೀಲ ಮಸಸ್ಸಿನ ಜೊತೆಗೆ ದೈವಭಕ್ತಿಯ ಸಾಕ್ಷಾತ್ಕಾರ ಸಿದ್ಧಿಸಿದರೆ ವಿಗ್ರಹದಲ್ಲಿ ದೈವ ಸಾನಿಧ್ಯ ನೆಲೆಗೊಳ್ಳುತ್ತದೆ. ಶ್ರೀ ಮಹಾಕಾಳಿ ದೇಗುಲದಲ್ಲಿ ಮಹಾರಾಜನ ಗಾಂಭೀರ್ಯದಲ್ಲಿ ಪಂಚದಿನಗಳ ಕಾಲ ವೈಭವಯುತವಾಗಿ ವಿರಾಜಮಾನನಾಗುವ ಅಧಿದೇವತೆ ವಿಘ್ನನಾಯಕ ಗಣಪತಿಯಲ್ಲಿ ಈ ಎಲ್ಲಾ ಶ್ರೇಷ್ಠ ಗುಣವಿದೆ.
ಸರ್ವರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುವ ಶ್ರೀ ಮಹಾಕಾಳಿ ದೇವಸ್ಥಾನದ ಗಣಪತಿ ಇಂದು ಕುಂದಾಪುರದ ಮಹಾರಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ವಸಂತ ಗುಡಿಗಾರ್ ರವರ ದೈವಸಂಪ್ರೀತಿಯೇ ಮುಖ್ಯ ಕಾರಣವಾಗಿದೆ. ಎಲ್ಲವನ್ನು ಶ್ರೀ ಗಣಪತಿ ಮತ್ತು ಶ್ರೀ ಮಹಾಕಾಳಿ ಅಮ್ಮನವರೇ ಮಾಡಿಸಿಕೊಳ್ಳುತ್ತಾರೆ ಎಂದು ಅವರು ವೀನೀತಾಭಾವದಿಂದ ನುಡಿಯುತ್ತಾರೆ.
ಈ ಅಪ್ರತಿಮ ಕಲಾವಿದನ ಕೀರ್ತಿ ಮತ್ತಷ್ಟೂ ತೇಜೋಮಯವಾಗಿ ಬೆಳಗಲಿ ಎಂದು ಈ ಶುಭ ಸಂದರ್ಭದಲ್ಲಿ ವಿಘ್ನನಾಶಕನ ಶ್ರೀ ಗಣಪತಿಯಲ್ಲಿ ಮತ್ತು ಶ್ರೀ ಮಹಾಕಾಳಿ ಅಮ್ಮನವರಲ್ಲಿ ಪ್ರಾರ್ಥಸಿಕೊಳ್ಳುತ್ತೇನೆ. ಪಂಚದಿನಾತ್ಮಕವಾಗಿ ಶ್ರೀ ಮಹಾಕಾಳಿ ದೇಗುಲದಲ್ಲಿ ಭಕ್ತಾದಿಗಳ ಪೂಜಾದಿ ಕೈಂಕರ್ಯದಿಂದ ವಿರಾಜಮಾನವಾಗುವ ಕುಂದಾಪುರದ ಮಹಾರಾಜ ಖಾರ್ವಿಕೇರಿ ಗಣಪತಿಯನ್ನು ಕಣ್ತುಂಬಿಕೊಳ್ಳಲು ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಎಲ್ಲರಿಗೂ ವಿಘ್ನನಾಶಕನು ಸಕಲ ಸಂಪತ್ತು ಭಾಗ್ಯವನ್ನಿತ್ತು ಹರಸಲಿ ಎಂದು ಖಾರ್ವಿ ಆನ್ಲೈನ್ ಬೇಡಿಕೊಳ್ಳುತ್ತದೆ.
ಸುಧಾಕರ್ ಖಾರ್ವಿ
Editor
www.kharvionline.com