ಅವರಲ್ಲಿ ಆತ್ಮ ವಿಶ್ವಾಸವಿತ್ತು, ಸಂಕಷ್ಟಗಳ ನಡುವೆ ಸಾಧಿಸಿ ತೋರಿಸುವ ಛಲವಿತ್ತು, ಸಮಾಜಕ್ಕೆ ತನ್ನಿಂದಾದ ಸಹಾಯ ನೀಡಬೇಕು ಎಂಬ ಉತ್ಕಟ ಹಂಬಲವಿತ್ತು ಅದೇ ಇವತ್ತು ಅವರನ್ನು ಯಶಸ್ವಿ ಉದ್ಯಮಿ ಮತ್ತು ಸಮಾಜ ಸೇವಕರನ್ನಾಗಿಸಿದೆ. ಕುಂದಾಪುರ ಖಾರ್ವಿಕೇರಿಯ ದಿನಕರ ಪಠೇಲ್ ಎನ್ನುವ ಯಂಗ್ ಎಂಡ್ ಎನರ್ಜೆಟಿಕ್ ಯಶಸ್ವಿ ವ್ಯಕ್ತಿತ್ವವೊಂದು ನಮ್ಮ ಮುಂದೆ ತೆರೆದುಕೊಳ್ಳುವುದೇ ಹೀಗೆ.
ತಮ್ಮ ದೃಢ ಮನಸ್ಸು ಮತ್ತು ದೂರದೃಷ್ಟಿಯಿಂದಲೇ ವೃತ್ತಿರಂಗ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಅವರು ಬೆಳೆದು ನಿಂತ ರೀತಿ ಅನನ್ಯ ಮತ್ತು ಅಭೂತಪೂರ್ವ ಕಷ್ಟದ ಕತ್ತಲೆಯಿಂದ ಕಠಿಣ ಪರಿಶ್ರಮದ ದುಡಿಮೆಯ ಮೂಲಕ ಯಶಸ್ಸು ದಕ್ಕಿಸಿಕೊಂಡ ದಿನಕರ ಪಠೇಲ್ ಅವರ ಜೀವನ್ಮುಖಿ ಪಯಣ ಬಲು ರೋಚಕ. ಮೂಲತಃ ಕುಂದಾಪುರ ಖಾರ್ವಿ ಕೆಳಕೇರಿಯವರಾದ ದಿನಕರ ಪಠೇಲ್ ರವರು ಗೋಪಾಲ್ ಪಠೇಲ್ ಮತ್ತು ನೀಲಾ ಪಠೇಲ್ ರವರ ಪುತ್ರರಾಗಿದ್ದಾರೆ. ಬಡತನದಲ್ಲಿಯೇ ಬೆಳೆದ ಅವರು ಶಿಕ್ಷಣ ಪಡೆಯುತ್ತಲೇ ದುಡಿಮೆಯ ನೊಗಕ್ಕೆ ಹೆಗಲು ನೀಡಿದರು.ವಿದ್ಯಾಭ್ಯಾಸದ ಅಗತ್ಯತೆಗಳಿಗಾಗಿ ತಮ್ಮ ಕುಲಕಸುಬಾದ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಪ್ರಾಥಮಿಕ ಶಿಕ್ಷಣ ಕುಂದಾಪುರ ಗರ್ಲ್ಸ್ ಶಾಲೆಯಲ್ಲಿ ನಡೆದರೆ ಹೈಸ್ಕೂಲ್ ಶಿಕ್ಷಣ ಕುಂದಾಪುರ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಮುಂದೆ ಪದವಿ ಶಿಕ್ಷಣ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಪೂರ್ಣಗೊಂಡಿತ್ತು. ಕಾಲೇಜು ಶಿಕ್ಷಣ ಪೂರ್ಣವಾಗುತ್ತಲೇ ಕುಂದಾಪುರ ವೈಶಾಲಿ ಹೋಟೆಲ್ ನಲ್ಲಿ ಉದ್ಯೋಗಕ್ಕೆ ಸೇರಿಕೊಂಡರು.ಇದರ ನಡುವೆ ತನ್ನ ಸಣ್ಣಪುಟ್ಟ ಖಾಸಗಿ ಬಿಸಿನೆಸ್ ಗಳಲ್ಲಿ ತೊಡಗಿಸಿಕೊಂಡ ಅವರು ಹೋಟೆಲ್ ನ ಹದಿನಾರು ವರ್ಷಗಳ ಸೇವೆಯ ಬಳಿಕ ತನ್ನದೇ ಆದ ದೀಕ್ಷಾ ಧೀರಜ್ ಫೈನಾನ್ಸ್ ಎಂಬ ಹಣಕಾಸಿನ ವ್ಯವಹಾರ ಆರಂಭಿಸಿದರು. ಈ ಫೈನಾನ್ಸ್ ಮೂಲಕ ಎಲ್ಲಿಯೂ ಹಣಕಾಸಿನ ಸೌಲಭ್ಯ ಸಿಗದೇ ಇರುವ ಬಡ ವ್ಯಕ್ತಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡಿ ಅವರ ಆರ್ಥಿಕ ಚೇತರಿಕೆಗೆ ನೆರವು ನೀಡಿದ್ದಾರೆ. ಇಂದು ಅವರ ದೀಕ್ಷಾ ಧೀರಜ್ ಫೈನಾನ್ಸ್ ಕುಂದಾಪುರದಲ್ಲಿ ಆರ್ಥಿಕ ವ್ಯವಹಾರದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದ್ದು, ಕುಂದಾಪುರದ ದೊಡ್ಡ ದೊಡ್ಡ ಉದ್ಯಮಿಗಳಿಂದ ಹಿಡಿದು ಬಡವರ ತನಕ ಸಾಲ ಸೌಲಭ್ಯ ನೀಡುತ್ತದೆ. ಸಾಲ ಮರುಪಾವತಿ ಮಾಡಲು ಕಷ್ಟ ಪಡುತ್ತಿರುವವರಿಗೆ ಮತ್ತಷ್ಟೂ ಅವಕಾಶ ನೀಡಿ ಅವರು ಮಾನವೀಯತೆ ಮೆರೆಯುತ್ತಾರೆ. ಹಣದ ಅಗತ್ಯತೆಯುಳ್ಳ ಬಡವರ ಪಾಲಿಗೆ ದಿನಕರ ಪಠೇಲ್ ರವರು ಆಪತ್ಭಾಂಧವನ ರೂಪದಲ್ಲಿ ಸಹಾಯ ಮಾಡುತ್ತಾರೆ. ಇತರ ಫೈನಾನ್ಸ್ ಕಂಪನಿಗಳಿಗಿಂತ ತೀರಾ ಭಿನ್ನವಾಗಿ ಗ್ರಾಹಕರ ಪಾಲಿಗೆ ಇವರ ಫೈನಾನ್ಸ್ ಕಂಪನಿ ಆಶಾಕಿರಣದಂತೆ ಕಾರ್ಯನಿರ್ವಹಿಸುತ್ತದೆ
ದಿನಕರ ಪಠೇಲ್ ರವರು ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಗರ್ಲ್ಸ್ ಶಾಲೆಯ ಶತಮಾನೋತ್ಸವದ ಸಂದರ್ಭದಲ್ಲಿ ಐವತ್ತು ಲಕ್ಷ ರೂ.ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡುವ ಯೋಜನೆಯ ರೂಪುರೇಷೆ ಸಿದ್ಧಗೊಂಡಾಗ ದಿನಕರ ಪಠೇಲ್ ರವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು.ಅವಿರತ ಪ್ರಯತ್ನದ ಫಲವಾಗಿ ಈ ಕಾರ್ಯದಲ್ಲಿ ಆರವತ್ತು ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿ ಉಳಿದ ಇಪ್ಪತ್ತು ಲಕ್ಷ ರೂ ನ್ನು ಶಾಲೆಯ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಮತ್ತು ಇನ್ನಿತರ ಚಟುವಟಿಕೆಗಳಿಗೆ ವಿನಿಯೋಗ ಮಾಡಲಾಯಿತು.ಇದು ಅಭೂತಪೂರ್ವ ವಿಷಯವಾಗಿದೆ
ತನ್ನ ವೈಯಕ್ತಿಕ ಬದುಕಿನಲ್ಲಿ ನೆಲೆ ಕಂಡುಕೊಳ್ಳುತ್ತಲೇ ದಿನಕರ ಪಠೇಲ್ ರವರು ಸಮಾಜಮುಖಿ ಕೈಂಕರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡರು. ಕೊಂಕಣಿ ಖಾರ್ವಿ ಸಮಾಜದ ಧಾರ್ಮಿಕ ಕೇಂದ್ರ ಬಿಂದುವಾದ ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನ ಮತ್ತು ಶೈಕ್ಷಣಿಕ ಕೇಂದ್ರವಾದ ವಿದ್ಯಾರಂಗ ಮಿತ್ರ ಮಂಡಳಿಯ ಮೂಲಕ ಸಮಾಜ ಸೇವೆಗೆ ತನ್ನನ್ನು ಸಮರ್ಪಿಸಿಕೊಂಡರು. ವಿದ್ಯಾರಂಗ ಮಿತ್ರ ಮಂಡಳಿಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸ್ವಂತದಾದ ಕಟ್ಟಡ ಹೊಂದಲು ಕಾರಣೀಕರ್ತರಾದರು ತಾನು ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ S S L C, PUC ಮತ್ತು ಪದವಿ ತರಗತಿಯ ಪರೀಕ್ಷೆಯ ಓದಿಗಾಗಿ ವಿದ್ಯಾರಂಗ ಮಿತ್ರ ಮಂಡಳಿಯ ಹಳೆಯ ಕಟ್ಟಡದಲ್ಲಿ ಹಗಲು ರಾತ್ರಿ ವಾಸ್ತ್ಯವ ಮಾಡುತ್ತಿದ್ದದ್ದನ್ನು ಅವರು ಈ ಸಂದರ್ಭದಲ್ಲಿ ನೆನೆದು ಭಾವಪರವಶರಾಗುತ್ತಾರೆ.
ನಮ್ಮ ಸಮಾಜದ ಪ್ರಮುಖ ಧಾರ್ಮಿಕ ಕೇಂದ್ರವಾದ ಶ್ರೀ ಮಹಾಕಾಳಿ ದೇವರ ಪರಮ ಭಕ್ತರಾಗಿರುವ ದಿನಕರ ಪಠೇಲ್ ಖಾರ್ವಿಕೇರಿಯಲ್ಲಿ ಮನೆ ಇದ್ದ ಸಂದರ್ಭದಲ್ಲಿ ಅಮ್ಮನಿಗೆ ನಮಿಸಿ ತನ್ನ ಕಾಯಕ ಮುಂದುವರಿಸುತ್ತಿದ್ದರು. ಇದೀಗ ಕೋಡಿ ರಸ್ತೆಯಲ್ಲಿ ಮನೆ ಕಟ್ಟಿದ್ದರೂ ಮಹಾಕಾಳಿ ದೇಗುಲಕ್ಕೆ ಭೇಟಿ ನೀಡುವುದನ್ನು ತಪ್ಪಿಸಿಲ್ಲ. ಮಹಾಕಾಳಿ ದೇವಸ್ಥಾನದ ಶ್ರೀ ಗಣೇಶೋತ್ಸವ ಸಮಿತಿಯ 25 ನೇ ವರ್ಷದ ಸಂಭ್ರಮದಲ್ಲಿ ಸದಸ್ಯರಾಗಿ ಆಯ್ಕೆಗೊಂಡು ಗಣಪತಿ ದೇವರಿಗೆ ಬೆಳ್ಳಿಯ ಪ್ರಭಾವಳಿಯನ್ನು ಸಮರ್ಪಣೆಯ ಕಾರ್ಯದಲ್ಲಿ ಮೂಂಚೂಣಿಯಲ್ಲಿ ನಿಂತು ಸೇವೆಗೈದರು. ಇದು ತನ್ನ ಪಾಲಿನ ಪರಮ ಸೌಭಾಗ್ಯವೆಂದು ದಿನಕರ ಪಠೇಲ್ ಭಕ್ತಿಯಿಂದ ನುಡಿಯುತ್ತಾರೆ.
ಅಷ್ಟೇ ಅಲ್ಲದೇ ಶ್ರೀ ಮಹಾಕಾಳಿ ದೇವಸ್ಥಾನದ ಕಾರ್ಯಕಾರಿ ಸದಸ್ಯನಲ್ಲದಿದ್ದರೂ ಶ್ರೀ ದೇವರ ಮೇಲಿನ ಅಪಾರ ಅಭಿಮಾನದಿಂದ ದೇಗುಲದ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಯಾವುದಾದರೂ ಒಳ್ಳೆಯ ಕೆಲಸ ಮಾಡುವ ಸಂದರ್ಭದಲ್ಲಿ ತೊಂದರೆ, ಅಡಚಣೆಗಳು ಬರುವುದು ಸಹಜ. ಅವರು ವಿದ್ಯಾರಂಗ ಮಿತ್ರ ಮಂಡಳಿಯ ಅಧ್ಯಕ್ಷರಾಗಿ 3 ವರ್ಷಗಳ ಕಾಲ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಅನೇಕ ಅಡಚಣೆಗಳು ನಡೆದಿದ್ದವು. ಅವೆಲ್ಲವನ್ನು ದಿನಕರ ಪಠೇಲ್ ಯಶಸ್ವಿಯಾಗಿ ಎದುರಿಸಿದರು.
ಅವರ ಸಮಾಜಮುಖಿ ಕಾರ್ಯಗಳು ನಿರಂತರ ನಡೆಯುತ್ತಿರುವ ಸಂದರ್ಭದಲ್ಲಿ ಕುಂದಾಪುರ ರೋಟರಿ ಕ್ಲಬ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶಗಳು ಒದಗಿ ಬಂತು. ತನ್ನ ಅಧಿಕಾರ ಅವಧಿಯಲ್ಲಿ ಕುಂದಾಪುರ ಗರ್ಲ್ಸ್ ಶಾಲೆ, ಖಾರ್ವಿಕೇರಿ ಶಾಲೆ ಮತ್ತು ಕುಂದಾಪುರ ಪದವಿಪೂರ್ವ ಕಾಲೇಜಿಗೆ ಅಪಾರ ಪ್ರಮಾಣದಲ್ಲಿ ಶೈಕ್ಷಣಿಕ ಸಹಾಯವನ್ನು ರೋಟರಿ ಕ್ಲಬ್ ನಿಂದ ಹರಿದು ಬಂತು. ಸ್ಮಾರ್ಟ್ ಕ್ಲಾಸ್ ,ಕಂಪ್ಯೂಟರ್ ಸಲಕರಣೆಗಳು ಇತ್ಯಾದಿ ಸೌಲಭ್ಯಗಳು ಅವರ ಅಧಿಕಾರಾವಧಿಯಲ್ಲಿ ಕೊಡುಗೆಯಾಗಿ ಬಂತು. ಸಮಾಜ ಸೇವೆ ಮಾಡುವವನು ಮುಖ್ಯವಾಗಿ ಸಹೃದಯಿಯಾಗಿರಬೇಕು. ಅವರು ನಿಸ್ವಾರ್ಥಿಯಾಗಿರಬೇಕು ಮತ್ತು ಆತನಲ್ಲಿ ಸಮಾಜದ ಕಳಕಳಿಯ ಚಿಂತನೆ ಇರಬೇಕು ಎನ್ನುವ ದಿನಕರ ಪಠೇಲರು ಸಂಘ ಸಂಸ್ಥೆಯಲ್ಲಿ ಪದವಿಗಾಗಿ ನಾವು ಆಲೋಚನೆ ಮಾಡಬಾರದು, ಅದರ ಚೌಕಟ್ಟಿನಲ್ಲಿ ಸಮಾಜ ಸೇವೆ ಮಾಡಬೇಕು ನಮ್ಮಿಂದ ಸಮಾಜಕ್ಕೆ ಏನು ಕೊಡುಗೆ ಸಲ್ಲಿಸಬಹುದೆಂಬ ದೂರದೃಷ್ಟಿ ಚಿಂತನೆ ಇರಬೇಕು ಎಂದು ಹೃದಯಸ್ಪರ್ಶಿಯಾಗಿ ನುಡಿಯುತ್ತಾರೆ.
ದಿನಕರ ಪಠೇಲ್ ರವರ ಪತ್ನಿ ಹೆಸರು ಕಸ್ತೂರಿ ಮತ್ತು ದೀಕ್ಷಾ, ಧೀರಜ್ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದು ಸುಖ ಸಂಸಾರ ನಡೆಸುತ್ತಿದ್ದಾರೆ. ಯಾವುದೇ ಕ್ಷೇತ್ರವಾದರೂ ಸರಿ ಅಲ್ಲಿ ತಮ್ಮ ದೃಢ ಮನಸ್ಸು ಮತ್ತು ಪರಿಶ್ರಮದಿಂದಲೇ ಬೆಳೆದು ನಿಲ್ಲಬಲ್ಲೆ ಎನ್ನುವ ಛಲ ಹೊಂದಿ ಚಿಕ್ಕ ವಯಸ್ಸಿನಲ್ಲೇ ಅಪಾರವಾದದನ್ನು ಸಾಧಿಸಿರುವ ದಿನಕರ ಪಠೇಲ್ ರವರು ಇಂದಿನ ಯುವ ಜನಾಂಗಕ್ಕೆ ನಿಜವಾದ ಆದರ್ಶ ವ್ಯಕ್ತಿತ್ವವಾಗಿ ಕಾಣಿಸುತ್ತಾರೆ. ಅವರ ಸಮಾಜ ಸೇವಾಕೈಂಕರ್ಯಗಳು ಹೀಗೆ ಯಶಸ್ವಿಯಾಗಿ ಮುಂದುವರಿಯಲಿ ಎಂದು ಖಾರ್ವಿ ಆನ್ಲೈನ್ ಶುಭ ಹಾರೈಸುತ್ತದೆ
ಸುಧಾಕರ್ ಖಾರ್ವಿ
Editor
www.kharvionline.com
90 ರ ದಶಕದಲ್ಲಿ ಕುಂದಾಪುರದಂತಹ ಸ್ಥಳದಲ್ಲಿ ಪದವೀಧರರಿಗೆ ಸೀಮಿತ ಅವಕಾಶಗಳಿದ್ದು, ಹೆಚ್ಚಿನ ವಿದ್ಯಾವಂತರು ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದರು. ಆದರೆ ದಿನಕರಣ್ಣ ಪದವಿ ಮುಗಿದ ನಂತರವೂ ಕುಂದಾಪುರದಲ್ಲಿಯೇ ಉಳಿದು ಈ ಮಟ್ಟಕ್ಕೆ ಯಶಸ್ಸನ್ನು ಸಾಧಿಸಿರುವುದು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ನಾವು ಶಾಲೆಯ ಬೇಸಿಗೆ ರಜೆಗಾಗಿ ಕುಂದಾಪುರಕ್ಕೆ ಬಂದ ನಾನು ಅವರನ್ನು ಒಬ್ಬ energetic ಮತ್ತು ಹಸನ್ಮುಖಿ ವ್ಯಕ್ತಿಯಾಗಿ ನೋಡುತ್ತಿದ್ದೆವು. ಅವರು ಶಾಲಾ ರಜೆಯ ಸಮಯದಲ್ಲಿಯೂ ಸಹ ಸಣ್ಣ ಪುಟ್ಟ ಸಹಾಯಕ ಕೆಲಸಗಳನ್ನು ಮಾಡಿ ಶ್ರಮಪಡುವುದನ್ನು ನೋಡಿದೆವು. ಆ ದಿನದಿಂದ ಇಂದಿನವರೆಗೆ ಅವರು ತಮ್ಮ ಸ್ವಂತ ಶ್ರಮ, ಶ್ರಮ ಮತ್ತು ಸಾಮರ್ಥ್ಯದಿಂದ ಬೆಳೆದಿದ್ದಾರೆ. ತಾಯಿ ಮಹಾಕಾಳಿ ಅವರಿಗೆ ಮತಷ್ಟು ಆರೋಗ್ಯ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.🙏
ಅವಿರತ ಶ್ರಮ,ನಿರಂತರ ದುಡಿಮೆ,ಆತ್ಮವಿಶ್ವಾಸ ಮತ್ತು ಸಾಧಿಸುವ ಛಲವಿದ್ದ ಮನುಷ್ಯ ಒಂದಲ್ಲಾ ಒಂದು ದಿನ ಗೆದ್ದೇ ಗೆಲ್ಲುತ್ತಾನೆ ಎಂಬ ಮಾತಿಗೆ ದಿನಕರ ಪಠೇಲ್ ನಿದರ್ಶನವಾಗಿ ನಿಲ್ಲುತ್ತಾರೆ.👏👏👏👌👍💐💐💐