ಪಂಚಗಂಗಾವಳಿಯ ದಿಬ್ಬಣಗಲ್ಲುಗಳು… ಮದುವೆ ದಿಬ್ಬಣದ ದೋಣಿ ಮಗುಚಿ ಜನರು ಕಲ್ಲಾದ ಕಥೆ

ಪಂಚಗಂಗಾವಳಿಯ ದಿಬ್ಬಣಗಲ್ಲು ಈ ಕಲ್ಲುಗಳು ಹೇಳುತ್ತವೆ ದುರಂತ ಕಥನದ ಸೊಲ್ಲು ಕುಂದಾಪುರದ ಪುಣ್ಯನದಿ ಪಂಚಗಂಗಾವಳಿಯ ಬಲದಂಡೆಯ ಪಶ್ಚಿಮ ಮತ್ತು ಉತ್ತರ ಭಾಗ ಗಂಗೊಳ್ಳಿ ಮತ್ತು ಕನ್ನಡಕುದ್ರು ಪರಿಸರದ ನದಿಯ ಹರವಿನಲ್ಲಿ ಹರಡಿಕೊಂಡಿರುವ ಬಂಡೆಗಲ್ಲುಗಳ ಸಮೂಹ ಗತಕಾಲದಲ್ಲಿ ಮದುವೆ ದಿಬ್ಬಣದ ದೋಣಿ ಮುಳುಗಿದ ಪರಿಣಾಮವಾಗಿ ಜನರು ನೀರು ಪಾಲಾಗಿ ಜಲಸಮಾಧಿಯಾದ ದುರಂತ ಕಥನಕ್ಕೆ ಸಾಕ್ಷಿಯಾಗಿದೆ ಹೀಗೆ ಜಲಸಮಾಧಿಯಾದ ಮದುವೆ ದಿಬ್ಬಣದ ಜನರು ಇಲ್ಲಿ ನದಿಯ ಮಧ್ಯೆ ಬಂಡೆಗಲ್ಲುಗಳ ರೂಪ ತಾಳಿದ್ದಾರೆ ಎಂಬ ಜನಜನಿತ ಕಥೆಯೊಂದು ಕುಂದಗನ್ನಡದ ಜನಪದ ಕಥೆಯಲ್ಲಿ ಅಡಕವಾಗಿದೆ.

ಶತಶತಮಾನಗಳ ಹಿಂದೆ ಕುಂದಾಪುರದ ಪಂಚಗಂಗಾವಳಿ ನದಿ ತುಂಬಾ ವಿಸ್ತಾರವಾಗಿ ಮತ್ತು ಆಳವಾಗಿ ಹರಡಿಕೊಂಡಿತ್ತು ದೊಡ್ಡ ದೊಡ್ಡ ಹಡಗುಗಳು ಗಂಗೊಳ್ಳಿಯಿಂದ ಬಸ್ರೂರಿಗೆ ಯಾವುದೇ ಅಡೆತಡೆಗಳಿಲ್ಲದೇ ನಿರಾಯಾಸವಾಗಿ ಬರುತಿತ್ತು ರಸ್ತೆಸಂಪರ್ಕವಿರಲಿಲ್ಲವಾದ್ದರಿಂದ ಜನರು ಪಂಚಗಂಗಾವಳಿಯ ಜಲಸಾರಿಗೆಯನ್ನೇ ಅವಲಂಬಿಸಿದ್ದರು ಒಮ್ಮೆ ಗಂಗೊಳ್ಳಿಯಲ್ಲಿ ಮದುವೆ ಕಾರ್ಯ ಮುಗಿಸಿದ ಮದುವೆ ದಿಬ್ಬಣವೊಂದು ಗಂಗೊಳ್ಳಿ ದಾಕುಹಿತ್ಲು ಮೂಲಕ ಕುಂದಾಪುರದ ವರನ ಮನೆಗೆ ದೋಣಿಯಲ್ಲಿ ಹೊರಟಿತ್ತು ನದಿಯಲ್ಲಿ ತುಸು ದೂರ ಸಾಗುತ್ತಲೇ ಜನರ ಭಾರ ತಾಳಲಾರದೆ ಮತ್ತು ಬಲವಾದ ಗಾಳಿ ಬೀಸಿದ ಪರಿಣಾಮವಾಗಿ ದೋಣಿ ನದಿಯಲ್ಲಿ ಮುಗುಚಿ ಬೀಳುತ್ತದೆ. ದೋಣಿಯಲ್ಲಿದ್ದ ಮದುವೆ ಪುರೋಹಿತರು, ವಧುವರರು ಸಹಿತ ದಿಬ್ಬಣದ ಅಷ್ಟೂ ಜನರು ಜಲಸಮಾಧಿಯಾಗುತ್ತಾರೆ ದೋಣಿ ನಡೆಸುವ ಅಂಬಿಗನೂ ಕೂಡಾ ಜನರನ್ನು ರಕ್ಷಣೆ ಮಾಡುವ ಪ್ರಯತ್ನದಲ್ಲಿ ಪ್ರಾಣ ಕಳೆದುಕೊಳ್ಳುತ್ತಾನೆ.

ಹೀಗೆ ನದಿಯಲ್ಲಿ ದೋಣಿ ಮುಗುಚಿ ಪ್ರಾಣ ಕಳೆದುಕೊಂಡ ಜನರ ಮೃತ ದೇಹಗಳು ವಿವಿಧ ಭಾಗಗಳಲ್ಲಿ ಹರಡಿಕೊಂಡು ಬಂಡೆಗಲ್ಲುಗಳ ರೂಪದಲ್ಲಿ ಸೃಷ್ಟಿಯಾಯಿತು ಎಂದು ಜನಜನಿತ ಜನಪದ ಕಥೆಯಲ್ಲಿ ಪ್ರಸ್ತಾಪಿಸಲ್ಪಡುತ್ತದೆ ಮೊದಲನೆಯದಾಗಿ ದಾಕುಹಿತ್ಲುವಿನ ನೇರವಾಗಿ ಈಗಿನ ಕಾಂಡ್ಲಗಿಡಗಳ ಸಮೂಹದ ಬಳಿ ಇರುವ ಸಣ್ಣಪುಟ್ಟ ಬಂಡೆಗಲ್ಲುಗಳು ಮದುವೆ ದಿಬ್ಬಣದ ಜನರು ಎಂದು ಗುರುತಿಸಲ್ಪಟ್ಟರೆ, ಎರಡನೆಯದಾಗಿ ದಾಕುಹಿತ್ಲು ನದಿದಂಡೆಯ ಸಮೀಪದಲ್ಲಿ ಇರುವ ಬೃಹತ್ ಗಾತ್ರದ ಗುಂಡುಕಲ್ಲು ಮದುವೆ ಪುರೋಹಿತರು ಎಂದು ಗುರುತಿಸಿಲ್ಪಡುತ್ತದೆ. ಮೂರನೆಯದಾಗಿ ಕನ್ನಡ ಕುದ್ರು ಸಮೀಪದಲ್ಲಿರುವ ಬೃಹತ್ ಗಾತ್ರದ ಕಲ್ಲಿಗೆ ವರನ ಕಲ್ಲು ಎಂದು ಕರೆಯುತ್ತಾರೆ. ಅದರ ನೇರಕ್ಕೆ ಕನ್ನಡಕುದ್ರು ನದಿದಂಡೆಗೆ ಹೊಂದಿಕೊಂಡು ಮೂರ್ನಾಲ್ಕು ಕಲ್ಲುಗಳಿವೆ. ಈ ಮೂರ್ನಾಲ್ಕು ಕಲ್ಲುಗಳು ವಧು ಮತ್ತು ಮದುವೆ ಸಂದರ್ಭದಲ್ಲಿ ಅವಳೊಂದಿಗೆ ಇರುವ ತೆತಿಗಾರ್ತಿಯರು ಎಂದು ಗುರುತಿಸಲ್ಪಡುತ್ತಾರೆ.

ಗಂಗೊಳ್ಳಿ ದಾಕುಹಿತ್ಲುವಿನಿಂದ ಕನ್ನಡಕುದ್ರು ತನಕ ಮೂರು ಕೀಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಬಂಡೆಗಲ್ಲುಗಳ ಸಮೂಹವನ್ನು ಸಂಕ್ಷಿಪ್ತವಾಗಿ ದಿಬ್ಬಣಗಲ್ಲು ಎಂದು ಕರೆಯುತ್ತಾರೆ. ಸಮೃದ್ಧ ಕುಂದಾಪುರ ಕನ್ನಡದ ಸಮೃದ್ಧ ಜನಪದ ಕಥೆಗಳಲ್ಲಿ ಪಂಚಗಂಗಾವಳಿಯ ಈ ದಿಬ್ಬಣಗಲ್ಲುಗಳ ಸ್ವಾರಸ್ಯಕರ ಕಥನವು ಬಹಳ ಥ್ರಿಲ್ಲಿಂಗ್ ರೂಪದಲ್ಲಿ ಅನಾವರಣಗೊಳ್ಳುತ್ತದೆ. ಕುಂದಾಪುರ ಆರಾಟೆ ರಾಷ್ಟ್ರೀಯ ಹೆದ್ದಾರಿಯ ಸೇತುವೆಯಿಂದ ವರನಕಲ್ಲು ನಮ್ಮ ಕಣ್ಣಿಗೆ ಗೋಚರವಾದರೆ ಉಳಿದಂತೆ ಜನರ ದಿಬ್ಬಣದ ಕಲ್ಲು ಮತ್ತು ಪುರೋಹಿತರ ಗುಂಡುಕಲ್ಲು ಗಂಗೊಳ್ಳಿ ದಾಕುಹಿತ್ಲು ನದಿದಂಡೆಯ ಸಮೀಪದಿಂದ ಕಾಣಬಹುದಾಗಿದೆ. ವರನಕಲ್ಲಿನ ಮೇಲೆ ಸುಂದರ ಕಲಾಕೃತಿಯನ್ನು ಕೆತ್ತನೆ ಮಾಡಲಾಗಿದ್ದು ಇದರಲ್ಲಿ ಶಿವಲಿಂಗ ಮತ್ತು ಸೂರ್ಯಚಂದ್ರರ ಚಿತ್ರವನ್ನು ಕೆತ್ತಲಾಗಿದೆ. ಚಿತ್ರ ಸೂಕ್ಷ್ಮವಾಗಿದ್ದು,ಹತ್ತಿರದಿಂದ ನೋಡಿದರೆ ಸ್ಪಷ್ಟವಾಗಿ ಗೋಚರಿಸುತ್ತದೆ.

ಈ ದಿಬ್ಬಣಗಲ್ಲುಗಳ ಪೈಕಿ ವರನ ಕಲ್ಲು ಮತ್ತು ಗುಂಡುಕಲ್ಲುಗಳು ನದಿಭರತದ ಸಂದರ್ಭದಲ್ಲಿ ಅರ್ಧಭಾಗ ಮಾತ್ರ ಮುಳುಗುತ್ತದೆ. ನದಿ ಇಳಿತದ ಸಂದರ್ಭದಲ್ಲಿ ಬಹುತೇಕ ಭಾಗವು ಗೋಚರಿಸುತ್ತದೆ. ಈ ದಿಬ್ಬಣಗಲ್ಲುಗಳು ಸ್ವಾತಂತ್ರ್ಯಪೂರ್ವ 1923 ರಲ್ಲಿ ಮತ್ತು 1982 ರಲ್ಲಿ ಪಂಚಗಂಗಾವಳಿಯಲ್ಲಿ ಭೀಕರ ನೆರೆ ಬಂದಾಗ ಸಂಪೂರ್ಣವಾಗಿ ಮುಳುಗಿದ್ದು ಬಿಟ್ಟರೆ ಮತ್ತೆ ಎಂದಿಗೂ ಮುಳುಗಿದ ಉದಾಹರಣೆಗಳು ಇಲ್ಲ. ತಮ್ಮ ಅಳತೆಗೆ ದಕ್ಕಲಾರದ ಘಟನೆಗಳಿಗೆ ಅತಿಮಾನುಷತೆಯನ್ನು ಸೃಷ್ಟಿಸಿ ಚಿರಸ್ಥಾಯಿಯಾಗಿಸುವುದು ಜನಪದರ ವಿಶಿಷ್ಟ ಗುಣ ದಿಬ್ಬಣಗಲ್ಲುಗಳ ವಿಷಯದಲ್ಲಿ ನಮ್ಮ ಪ್ರಾಚೀನರು ತಮ್ಮ ಜನಪದ ಕಥನಗಳಲ್ಲಿ ಮದುವೆ ದಿಬ್ಬಣದ ದೋಣಿ ಮುಳುಗಿದ ಘಟನೆಗೆ ಸುಸಾಂಗತ್ಯವನ್ನು ಕಲ್ಪಿಸಿ ಜಲಸಮಾಧಿಯಾದ ಮಂದಿಯ ನೆನಪನ್ನು ಅಜರಾಮರವನ್ನಾಗಿಸಿ ದಿಬ್ಬಣಗಲ್ಲುಗಳ ಕಥೆಯನ್ನು ಹೆಣೆದಿದ್ದಾರೆ. ಇದು ಗತಕಾಲದಿಂದಲೂ ಪ್ರಚಲಿತವಾಗುತ್ತಾ ಬಂತು. ಸತ್ತವನು ಎಲ್ಲಿಗೆ ಹೋಗದೆ ತನ್ನ ಕುಟುಂಬದವರೊಂದಿಗೆ ಇರುತ್ತಾನೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಅದರಲ್ಲೂ ಅಪಮೃತ್ಯುವಿನಿಂದ ಮೃತಪಟ್ಟ ವ್ಯಕ್ತಿಗಳಿಗೂ ಜೀವಂತ ಇದ್ದಾಗಿನ ಆಸೆ ಆಕಾಂಕ್ಷೆಗಳು ಅಗತ್ಯವೆಂದು ಬಗೆದಾಗ ಅವರಿಗೆ ಆಸೆ ಆಕಾಂಕ್ಷೆಗಳನ್ನೆಲ್ಲಾ ಒದಗಿಸುವ ಪ್ರಯತ್ನ ಮತ್ತು ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡವು ಜನಪದ ನಂಬಿಕೆಯ ನೆಲೆಗಟ್ಟಿನಲ್ಲಿ ಪ್ರಾರಂಭಗೊಂಡ ಈ ವಿಧಿವಿಧಾನಗಳಲ್ಲಿ ಅದಕ್ಕೊಂದು ನಿಶ್ಚಿತ ನೆಲೆಯನ್ನು ಒದಗಿಸಲಾಯಿತು

ಪಂಚಗಂಗಾವಳಿಯ ಈ ದಿಬ್ಬಣಗಲ್ಲುಗಳು ನಮ್ಮ ಜನಪದರು ದೋಣಿ ಮುಳುಗಿ ಅಪಮೃತ್ಯು ಪಟ್ಟವರ ಮಧುರ ಸ್ಮೃತಿಗಾಗಿ ಸುಸಾಂಗತ್ಯ ಕಲ್ಪಿಸುವ ಪ್ರದೇಶವಾಗಿ ಗುರುತಿಸಲ್ಪಟ್ಟು ಕುಂದಗನ್ನಡದ ಜನಪದ ಕಥೆಗಳಲ್ಲಿ ಅಜರಾಮರವಾಯಿತು. ಕೋಟ್ಯಾಂತರ ವರ್ಷಗಳ ಹಿಂದೆ ನಡೆದ ಭೂಗರ್ಭದ ಶಿಲಾರಸ ಒತ್ತುವಿಕೆ ಮತ್ತು ವಾತಾವರಣದ ಜಲದ ತಂಪಿನಿಂದ ಉಂಟಾದ ಉಂಡುಂಡೆಗಳೇ ಇಂದು ನಾವು ಕಾಣುವ ಕಲ್ಲುಬಂಡೆಗಳು ಭೂಗರ್ಭದ ಪ್ರಕ್ರಿಯೆಗಳಲ್ಲಿ ಸೃಷ್ಟಿಯಾದ ಬಂಡೆಗಲ್ಲುಗಳ ಸರಣಿಯಲ್ಲಿ ಪಂಚಗಂಗಾವಳಿಯ ದಿಬ್ಬಣಗಲ್ಲುಗಳು ಕೂಡಾ ಒಂದು.

ಪಂಚಗಂಗಾವಳಿ ನದಿಯಲ್ಲಿ ಮದುವೆ ದಿಬ್ಬಣದ ದೋಣಿ ಮುಗುಚಿ ಜನರು ಜಲಸಮಾಧಿಯಾದ ಘೋರ ದುರಂತದ ಘಟನೆಗೆ ಶುದ್ಧ ಜನಪದ ಕಲ್ಪನೆಗಳು ಹೆಣೆದುಕೊಂಡು ಮೃತರಿಗೆಲ್ಲಾ ಅತಿಮಾನುಷ ಪರಿವೇಷ ಸೃಷ್ಟಿಯಾಯಿತು ರೋಮಾಂಚನಕಾರಿ ಹೊಸ ಹೊಳಹುಗಳನ್ನು ಒಳಗೊಂಡ ಕಥನ ಮೈದಾಳಿತು ಜನ ಅವುಗಳನ್ನು ಮರೆಯುವುದು ಸುಲಭವಾಗಲಿಲ್ಲ ಹೀಗಾಗಿ ಅವುಗಳನ್ನು ಮೊದಲು ಕೇಳಿದ ಜನ ಮತ್ತೊಬ್ಬರಿಗೆ, ಮಗದೊಬ್ಬರಿಗೆ,ಇಡೀ ಸಮುದಾಯಕ್ಕೆ ತಮ್ಮ ಕಂಠ ಮತ್ತು ನಾಲಿಗೆಗಳ ಮೂಲಕ ದಾಟಿಸುತ್ತಾ ಬಂದರು. ಹೀಗಾಗಿ ದಿಬ್ಬಣಗಲ್ಲಿನ ಕಥೆ ಜನಪ್ರಿಯವಾಯಿತು ಭಾವತೀವ್ರತೆಯಿಂದ ಕೂಡಿದ ಈ ಕಥನ ಜಾನಪದ ಸಂವೇದನೆಯನ್ನು ಗರ್ಭೀಕರಿಸಿಕೊಂಡು ಕುಂದಗನ್ನಡದ ಜನಪದ ಸಾಹಿತ್ಯದಲ್ಲಿ ಮನೋಲಹರಿಯಾಗಿ ಹರಿದಿದೆ.

ದಿಬ್ಬಣಗಲ್ಲು ಘಟನಾವಳಿಗಳ ನಡೆದ ಪಂಚಗಂಗಾವಳಿಯಲ್ಲಿ ವಿಹಾರ ನಡೆಸುವುದೆಂದರೆ ಅದೊಂದು ಅವಿಸ್ಮರಣೀಯ ಅನುಭವ. ಈ ಕೌತುಕದ ಬಂಡೆಗಲ್ಲುಗಳು ಮನುಷ್ಯರ ಪರಿವೇಷದಲ್ಲಿ ಭಾವತೀವ್ರತೆಯ ದಿಬ್ಬಣಗಲ್ಲಿನ ಕಥೆಯನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತವೆ.

ರಾಮಾಯಣದಲ್ಲಿ ಅಹಲ್ಯೆ ಪತಿಯ ಶಾಪದಿಂದ ಕಲ್ಲಾಗಿ ನಂತರ ಕಾರುಣ್ಯಮೂರ್ತಿ ಪ್ರಭು ಶ್ರೀ ರಾಮಚಂದ್ರನ ಪಾದಸ್ಪರ್ಶದಿಂದ ಶಾಪ ವಿಮೋಚನೆಯಾಗಿ ಮನುಷ್ಯ ರೂಪ ತಳೆದ ಕಥೆಯನ್ನು ನಾವೆಲ್ಲರೂ ಓದಿದ್ದೇವೆ, ಕೇಳಿ ತಿಳಿದುಕೊಂಡಿದ್ದೇವೆ ತೇತ್ರಾಯುಗದ ಅಹಲ್ಯೆ ಕಲ್ಲಾದ ರಾಮಾಯಣದ ಕಥೆಯಂತೆ ಮದುವೆ ದಿಬ್ಬಣದ ದೋಣಿ ಮುಳುಗಿ ಜನರು ಮೃತಪಟ್ಟು ಬಂಡೆಕಲ್ಲಾದರು ಎಂಬ ಪಂಚಗಂಗಾವಳಿಯ ಈ ದಿಬ್ಬಣಗಲ್ಲಿನ ಜನಪದ ಕಥೆ ಬಹಳ ಸ್ವಾರಸ್ಯಕರವಾಗಿದೆ ಆದರೆ ಭೂಗರ್ಭದಿಂದ ಎದ್ದು ಬಂದ ಈ ಬಂಡೆಕಲ್ಲುಗಳ ಶಾಪ ವಿಮೋಚನೆ ಮಾತ್ರ ಸಾಧ್ಯವಿಲ್ಲ.

ಪಂಚಗಂಗಾವಳಿಯ ಈ ದಿಬ್ಬಣಗಲ್ಲಿನ ಅಧ್ಯಯನ ಮಾಡಲೊರಟ ನನಗೆ ಸಾಥ್ ನೀಡಿದವರು ನಿಶು short video ಯೂಟ್ಯೂಬ್ ರ್ ರಾಘವೇಂದ್ರ ಖಾರ್ವಿ ಬೀಡಾ ಅಂಗಡಿಮನೆ ದಾಕುಹಿತ್ಲು ಗಂಗೊಳ್ಳಿ.ಇವರಿಗೆ ಧನ್ಯವಾದಗಳು ನಮ್ಮನ್ನು ಪಂಚಗಂಗಾವಳಿ ದಿಬ್ಬಣಗಲ್ಲು ಪ್ರದೇಶದಲ್ಲಿ ದೋಣಿಯಲ್ಲಿ ಪ್ರೀತಿಯಿಂದ ಕರೆದುಕೊಂಡು ಹೋಗಿ ಸುತ್ತಾಡಿಸಿದ ಗಂಗೊಳ್ಳಿ ದಾಕುಹಿತ್ಲು ನಿವಾಸಿ ಜೂನಿಯರ್ ಕಾಫಿನಾಡು ಚಂದು ಖ್ಯಾತಿಯ ಸಂತೋಷ್ ಖಾರ್ವಿಯವರಿಗೆ ತುಂಬು ಹೃದಯದ ಧನ್ಯವಾದಗಳು ಅವರ ಪರಿಶ್ರಮ ನಿಜಕ್ಕೂ ಶ್ಲಾಘನೀಯ.

ಉಮಾಕಾಂತ ಖಾರ್ವಿ ಕುಂದಾಪುರ

One thought on “ಪಂಚಗಂಗಾವಳಿಯ ದಿಬ್ಬಣಗಲ್ಲುಗಳು… ಮದುವೆ ದಿಬ್ಬಣದ ದೋಣಿ ಮಗುಚಿ ಜನರು ಕಲ್ಲಾದ ಕಥೆ

Leave a Reply

Your email address will not be published. Required fields are marked *